ರಾಜೀವ್ ಗಾಂಧಿ ಹತ್ಯೆ ಪ್ರಕರಣದ ದೋಷಿ ನಳಿನಿ ಶ್ರೀಹರನ್ , ಇತರ ಐವರನ್ನು ಬಿಡುಗಡೆ ಮಾಡಲು ಸುಪ್ರೀಂ ಆದೇಶ

Update: 2022-11-11 16:09 GMT

ಹೊಸದಿಲ್ಲಿ, ನ. 11: ನಳಿನಿ ಶ್ರೀಹರನ್ ಸೇರಿದಂತೆ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಆರು ಆರೋಪಿಗಳ ಅವಧಿಪೂರ್ವ ಬಿಡುಗಡೆಗೆ ಸುಪ್ರೀಂ ಕೋರ್ಟ್ ಶುಕ್ರವಾರ ಆದೇಶ ನೀಡಿದೆ.

ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯ್ ಮತ್ತು ಬಿ.ವಿ. ನಾಗರತ್ನ ಅವರನ್ನೊಳಗೊಂಡ ನ್ಯಾಯಪೀಠವೊಂದು, ಆರೋಪಿಗಳಾದ ನಳಿನಿ ಶ್ರೀಹರನ್, ರಾಬರ್ಟ್ ಪಾಯಸ್, ರವಿಚಂದ್ರನ್, ಸಂತಾನ್ ರಾಜ, ಶ್ರೀಹರನ್ ಯಾನೆ ಮುರುಗನ್ ಮತ್ತು ಜಯಕುಮಾರ್ರನ್ನು ಅವಧಿಗೆ ಮುಂಚಿತವಾಗಿಯೇ ಬಿಡುಗಡೆಗೊಳಿಸುವಂತೆ ಆದೇಶ ನೀಡಿತು. ಎಲ್ಲಾ ಆರೋಪಿಗಳು ಜೀವಿತಾವಧಿ ಜೈಲು ಶಿಕ್ಷೆಗೆ ಗುರಿಯಾಗಿದ್ದರು.

ಪ್ರಕರಣದ ಇನ್ನೋರ್ವ ಆರೋಪಿ ಎ.ಜಿ. ಪೆರಾರಿವಾಳನ್ನನ್ನು ಅವಧಿಗೆ ಮುಂಚಿತವಾಗಿ ಬಿಡುಗಡೆಗೊಳಿಸುವಂತೆ ನ್ಯಾಯಾಧೀಶರು ಮೇ ತಿಂಗಳಲ್ಲಿ ಆದೇಶಿಸಿದ್ದರು. ಪೆರಾರಿವಾಳನ್ನನ್ನು ಬಿಡುಗಡೆಗೊಳಿಸಿ ನೀಡಿದ ಆದೇಶವು ಪ್ರಕರಣದ ಇತರ ಆರು ಆರೋಪಿಗಳಿಗೂ ಅನ್ವಯಿಸುತ್ತದೆ ಎಂದು ನ್ಯಾಯಾಧೀಶರು ಶುಕ್ರವಾರ ಹೇಳಿದರು.

ಆರೋಪಿಗಳನ್ನು ಬಿಡುಗಡೆಗೊಳಿಸುವಂತೆ ತಮಿಳುನಾಡು ಸರಕಾರವು ಶಿಫಾರಸು ಮಾಡಿತ್ತು, ಆದರೆ ರಾಜ್ಯಪಾಲರು ಶಿಫಾರಸಿನಂತೆ ಕ್ರಮ ತೆಗೆದುಕೊಳ್ಳಲಿಲ್ಲ ಎನ್ನುವುದನ್ನು ನ್ಯಾಯಾಲಯ ಗಣನೆಗೆ ತೆಗೆದುಕೊಂಡಿತು. ಆರೋಪಿಗಳು 30 ವರ್ಷಗಳಿಗಿಂತಲೂ ಹೆಚ್ಚು ಸಮಯ ಜೈಲಿನಲ್ಲಿದ್ದಾರೆ ಹಾಗೂ ಜೈಲಿನಲ್ಲಿ ಅವರ ವರ್ತನೆ ತೃಪ್ತಿಕರವಾಗಿದೆ ಎಂದು ನ್ಯಾಯಾಧೀಶರು ಹೇಳಿದರು.

ಆರು ಅಪರಾಧಿಗಳ ಪೈಕಿ ಐವರು ಜೈಲಿನಲ್ಲಿ ಅಧ್ಯಯನನಿರತರಾಗಿದ್ದರು ಎಂದು ನ್ಯಾಯಾಲಯ ಹೇಳಿದೆ. ರಾಜಾ ಹಲವಾರು ಲೇಖನಗಳನ್ನು ಬರೆದಿದ್ದಾರೆ ಹಾಗೂ ಅದಕ್ಕಾಗಿ ಅವರಿಗೆ ವಿವಿಧ ಪ್ರಶಸ್ತಿಗಳು ಬಂದಿವೆ ಎಂದು ಅದು ಹೇಳಿತು.

ತನ್ನನ್ನು ಅವಧಿಪೂರ್ವವಾಗಿ ಬಿಡುಗಡೆ ಮಾಡುವಂತೆ ಕೋರಿ ನಳಿನಿ ಶ್ರೀಹರನ್ ಸಲ್ಲಿಸಿದ್ದ ಅರ್ಜಿಯನ್ನು ಜೂನ್ 17ರಂದು ಮದರಾಸು ಹೈಕೋರ್ಟ್ ತಿರಸ್ಕರಿಸಿತ್ತು. ಆ ಆದೇಶವನ್ನು ಪ್ರಶ್ನಿಸಿ ನಳಿನಿ ಆಗಸ್ಟ್ನಲ್ಲಿ ಸುಪ್ರೀಂ ಕೋರ್ಟ್ಗೆ ಹೋಗಿದ್ದರು.

ಶ್ರೀಲಂಕಾದ ಎಲ್ಟಿಟಿಇಗೆ ಸೇರಿದ ಓರ್ವ ಮಹಿಳಾ ಆತ್ಮಹತ್ಯಾ ಬಾಂಬರ್ ತಮಿಳುನಾಡಿನ ಶ್ರೀಪೆರುಂಬುದೂರ್ನಲ್ಲಿ 1991 ಮೇ 21ರಂದು ರಾಜೀವ್ ಗಾಂಧಿಯನ್ನು ಹತ್ಯೆಗೈದಿದ್ದರು.

ಘಟನಾವಳಿಗಳು

* ಎಲ್ಟಿಟಿಇಗೆ ಸೇರಿದ ಮಹಿಳಾ ಆತ್ಮಹತ್ಯಾ ಬಾಂಬರ್ನಿಂದ ತಮಿಳುನಾಡಿನ ಶ್ರೀಪೆರುಂಬುದೂರ್ನಲ್ಲಿ 1991 ಮೇ 21ರಂದು ರಾಜೀವ್ ಗಾಂಧಿ ಹತ್ಯೆ.

*ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಎಲ್ಲಾ ಏಳು ಆರೋಪಿಗಳಿಗೆ ನ್ಯಾಯಾಲಯದಿಂದ ಮರಣ ದಂಡನೆ.

*2000ದಲ್ಲಿ, ರಾಜೀವ್ ಗಾಂಧಿಯ ಪತ್ನಿ ಹಾಗೂ ಕಾಂಗ್ರೆಸ್ನ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿಯ ಮಧ್ಯ ಪ್ರವೇಶದಿಂದಾಗಿ ನಳಿನಿ ಶ್ರೀಹರಿಯ ಮರಣ ದಂಡನೆಯನ್ನು ಜೀವಿತಾವಧಿ ಜೈಲು ಶಿಕ್ಷೆಗೆ ಇಳಿಸಿದ ನ್ಯಾಯಾಲಯ.

*2008ರಲ್ಲಿ, ರಾಜೀವ್ ಗಾಂಧಿಯ ಪುತ್ರಿ ಪ್ರಿಯಾಂಕಾ ಗಾಂಧಿ ವಾದ್ರಾರಿಂದ ವೆಲ್ಲೋರ್ ಜೈಲಿನಲ್ಲಿ ನಳಿನಿ ಭೇಟಿ.

*2014ರಲ್ಲಿ ಇತರ ಆರು ಆರೋಪಿಗಳ ಮರಣ ದಂಡನೆಯೂ ಜೀವಿತಾವಧಿ ಜೈಲು ವಾಸಕ್ಕೆ ಇಳಿಕೆ.

Similar News