‘ಹಿಂದೂ’ ಅನ್ನುವುದು ಈ ಭೂಭಾಗದ ಸಂಸ್ಕೃತಿಗಳ ಮೊತ್ತಕ್ಕೆ ಇಟ್ಟ ಹೆಸರು

Update: 2022-11-13 07:52 GMT

ಹಿಂದೂ ಅನ್ನುವುದು ಒಂದು ಭೌಗೋಳಿಕ ಗುರುತು. ಕೇವಲ ಕೆಲವು ಪರ್ಷಿಯನ್ನರ ಅಸಹನೆಗೆ ಒಳಗಾಗಿ ಅಪಾರ್ಥ ಪಡೆದ ಪದ. ಅದು ನಮ್ಮ ನೆಲದ, ನದಿಯ, ಅಸ್ತಿತ್ವದ ಗುರುತು. ಹಾಗೆಯೇ ಅದು ಧರ್ಮದ ಗುರುತು ಖಂಡಿತ ಅಲ್ಲ. ಹಿಂದೂ ಅನ್ನುವುದು ಈ ಭೂಭಾಗದ ಸಂಸ್ಕೃತಿಗಳ ಮೊತ್ತಕ್ಕೆ ಇಟ್ಟ ಹೆಸರು. ಎಲ್ಲಕ್ಕಿಂತ ಮೊದಲನೆಯದಾಗಿ ಮತ್ತು ಸ್ಪಷ್ಟವಾಗಿ ‘ಹಿಂದೂ’ ಪದಕ್ಕೆ ಅಶ್ಲೀಲ ಅರ್ಥವಿಲ್ಲ. ಪರ್ಷಿಯನ್ನರು ‘ಹಿಂದೂ’ ಪದವನ್ನು ಹಲವು ಅರ್ಥದಲ್ಲಿ ಬಳಸಿದ್ದಾರೆ ಮತ್ತು ಅವುಗಳಲ್ಲಿ ‘ಗುಲಾಮ’ ಅನ್ನುವ ಅರ್ಥವೂ ಒಂದು. ‘ಕಳ್ಳರು, ವಂಚಕರು’ ಅನ್ನುವ ಅರ್ಥಗಳಲ್ಲೂ ‘ಹಿಂದೂ’ ಪದ ಬಳಸುತ್ತಿದ್ದರು. ಆದರೆ ಆ ಪದಕ್ಕೆ ಅದೊಂದೇ ಅರ್ಥವಲ್ಲ, ಮತ್ತು ಅದು ಪರ್ಷಿಯನ್ ಭಾಷೆಯ ಧಾತುಗಳಿಂದ ಉತ್ಪತ್ತಿಯಾದ ಪದವೂ ಅಲ್ಲ.

ಎರಡನೆಯದಾಗಿ ‘ಹಿಂದೂ’ ಪದ ಮೊದಲ ಬಾರಿಗೆ ಉಲ್ಲೇಖವಾಗಿದ್ದು ಭೌಗೋಳಿಕ ಗುರುತಿನಿಂದಲೇ ಹೊರತು ಸಮುದಾಯದ ಗುರುತಿನಿಂದಲ್ಲ. ಪರ್ಷಿಯನ್ನರು ಮಾತ್ರವಲ್ಲ, ಗ್ರೀಕರೂ ಸಿಂಧೂ ಕಣಿವೆಯ ಭೂಭಾಗವನ್ನು ಇಂಡಸ್ ವ್ಯಾಲಿ ಎಂದು ಕರೆದಿದ್ದರು. ಉಚ್ಚಾರಣಾ ಭಿನ್ನತೆಯಿಂದ ಇದು ‘ಹಿಂದೂ’ ಆಯಿತು.
ಸಂಸ್ಕೃತದಲ್ಲಿ ಸೇಧತಿ ಇತಿ ಸಿಂಧುಃ ಚಲನೆಯಲ್ಲಿರುವುದು - ಸಿಂಧು ಎಂದು. ಬಹುಶ ಪರ್ಷಿಯನ್ನ್ನರಿಗಿಂತ ಮೊದಲು ಸಂಸ್ಕೃತ ಭಾಷಿಕರು ಇತ್ತ ಬಂದಿರಬೇಕು. ಆದ್ದರಿಂದ ಮೊದಲು ಅವರು ಸಿಂಧು ಅನ್ನುವ ಪದ ಬಳಸಿರಬೇಕು. ನಂತರ ಬಂದ ಪರ್ಷಿಯನ್ನರು ಅದನ್ನು ಹಿಂದು ಎಂದು ಕರೆದಿರಬೇಕು!
ನಂತರದ ಕಾಲದಲ್ಲಿ ಪಶ್ಚಿಮದ ದೇಶಗಳೆಲ್ಲವೂ ಸಿಂಧೂನದಿಯ ಪೂರ್ವಕ್ಕೆ ಇದ್ದ ಉಪಖಂಡವನ್ನು ಆ ನದಿಯ ಹೆಸರಿಂದಲೇ ಗುರುತಿಸಿದರು ಮತ್ತು ಜನರನ್ನೂ. ಆ ಮಂದಿ ‘ಸ’ಕಾರಕ್ಕೆ ‘ಹ’ಕಾರ ಬಳಸುವ ಕಾರಣದಿಂದ ಸಿಂಧೂ ಪದ ಹಿಂದೂ ಆಯಿತು (ಇದು ನಮಗೆಲ್ಲ ಗೊತ್ತು).
ಭಾರತ - ಪರ್ಷಿಯಾ ಸಂಬಂಧವೇ ಬಹಳ ಸ್ವಾರಸ್ಯಕರವಾಗಿದೆ. ಕ್ರಿ.ಪೂ. 5ನೇ ಶತಮಾನದಲ್ಲಿ ಜೀವಿಸಿದ್ದ ಪರ್ಷಿಯಾದ ದೊರೆ ಡೇರಿಯಸ್ ನ ಶಿಲಾ ಶಾಸನದಲ್ಲಿ ಮೊದಲ ಬಾರಿಗೆ ಲಿಖಿತ ರೂಪದಲ್ಲಿ ‘ಹಿಂದೂ’ ಪದದ ಉಲ್ಲೇಖವಿದೆ. ಸಿಂಧೂ ನದಿಯ ಭೂಭಾಗದವರೆಗೂ ರಾಜ್ಯ ವಿಸ್ತರಿಸಿದ್ದ ಡೇರಿಯಸ್, ತಾನು ತನ್ನದಾಗಿಸಿಕೊಂಡಿದ್ದ ನೆಲವನ್ನು ‘ಹಿಂದೂಶ್’ ಎಂದು ಕರೆದಿದ್ದನಂತೆ. ಅಲ್ಲಿಯ ಜನರನ್ನು ‘ಹಿಂದೂ’ಗಳೆಂದು ಕರೆದಿರುವುದು ಸಹಜ.
ಆನಂತರ ಭಾರತ ಹಡಗಿನ ಮೂಲಕ, ಕಣಿವೆಯ ಮೂಲಕ ಪಶ್ಚಿಮಕ್ಕೆ ತೆರಳಿ ವ್ಯಾಪಾರ ಮಾಡುವ ಕಾಲಕ್ಕೆ ಹೆಚ್ಚು ಆಪ್ತವಾಗಿದ್ದು ಪರ್ಷಿಯನ್ನರಿಗೆ. ಸಹಜವಾಗಿಯೇ ‘ಪರದೇಶಿ ವ್ಯಾಪಾರಿ’ಗಳು ಪರ್ಷಿಯನ್ನರಿಗೆ ವಂಚಕರಂತೆ ಕಂಡಿರುತ್ತಾರೆ. ಆದ್ದರಿಂದ ಹಿಂದೂ ಪದವನ್ನು ಕೆಲವರು ವಂಚನೆಗೆ ಪರ್ಯಾಯ ಪದವಾಗಿ ಬಳಸಲು ಆರಂಭಿಸಿರುತ್ತಾರೆ.
ಇದೇ ಪರ್ಷಿಯನ್ನರು ಭಾರತಕ್ಕೆ ಬಂದಾಗ ಇಲ್ಲಿಯ ಜನರನ್ನು ಕೆಲಸಕ್ಕೆ/ಜೀತಕ್ಕೆ ಖರೀದಿಸಿ ಗುಲಾಮರನ್ನಾಗಿ ಮಾಡಿಕೊಂಡು ತಮ್ಮ ದೇಶಕ್ಕೆ ಕರೆದೊಯ್ದಿರುತ್ತಾರೆ ಮತ್ತು ಅವರನ್ನು ‘ಹಿಂದೂ’ ಎಂದೇ ಗುರುತಿಸುತ್ತಾ ಗುಲಾಮರಿಗೆ ಹಿಂದೂ ಅನ್ನುವ ಪದವನ್ನೂ ಪರ್ಯಾಯ ಮಾಡುತ್ತಾರೆ.
ವಿಷಯ ಇಷ್ಟೇ. ಹಿಂದೂ ಅನ್ನುವುದು ಒಂದು ಭೌಗೋಳಿಕ ಗುರುತು. ಪರ್ಷಿಯನ್ನರ (ಕೇವಲ ಕೆಲವು ಪರ್ಷಿಯನ್ನರ) ಅಸಹನೆಗೆ ಒಳಗಾಗಿ ಗುಲಾಮ, ಕಳ್ಳ, ವಂಚಕ ಎಂಬ ಅಪಾರ್ಥ ಪಡೆದ ಪದ. ಆದ್ದರಿಂದ ಹಿಂದೂ ಅನ್ನುವ ಪದ ಮೂಲತಃ ನಾಚಿಕೆಗೇಡಿನದ್ದಲ್ಲ. ಅದು ನಮ್ಮ ನೆಲದ, ನದಿಯ, ಅಸ್ತಿತ್ವದ ಗುರುತು.
ಹಾಗೆಯೇ ಅದು ಧರ್ಮದ ಗುರುತು ಖಂಡಿತ ಅಲ್ಲ. ಹಿಂದೂ ಅನ್ನುವುದು ಈ ಭೂಭಾಗದ ಸಂಸ್ಕೃತಿಗಳ ಮೊತ್ತಕ್ಕೆ ಇಟ್ಟ ಹೆಸರು.
ಒಂದು ಕಡೆ ಹಿಂದೂ ಪದವನ್ನು ಧಾರ್ಮಿಕವಾಗಿ ಬಳಸಿ ಜನರ ದಾರಿ ತಪ್ಪಿಸಿ ಆ ಪದದ ಬಗ್ಗೆ ಜಿಗುಪ್ಸೆ ಹುಟ್ಟುವಂತೆ ಮಾಡುವ ಹುಂಬ ಜನರು; ಮತ್ತೊಂದು ಕಡೆ, ಹಿಂದೂ ಪದವನ್ನು ಸಾಧ್ಯವಾದಷ್ಟು ಕೀಳು ಮಟ್ಟಕ್ಕೆ ಇಳಿಸಿ, ಆ ಪದದ ಬಗ್ಗೆ ನಾಚಿಕೆಯಾಗುವಂತೆ ಮಾಡಲು ಯತ್ನಿಸುವ ಬುದ್ಧಿವಂತರು; ಎರಡೂ ಅತಿರೇಕಗಳೇ.

(ಈ ಚಿತ್ರಗಳಲ್ಲಿ ಮೊದಲಿಗೆ, ಪ್ರಾರ್ಥನೆ ಮಾಡುವಂತೆ ಒಬ್ಬ ಕೂತಿದ್ದಾನಲ್ಲ, ಆ ಚಿತ್ರದ ಮೇಲೆ ಹಳೇ ಪರ್ಷಿಯನ್ ಭಾಷೇಲಿ ಹಿಂದ್ವಿ - ಹಿಂದುಶ್ ಅಂತ ಬರೆದಿರೋದಂತೆ. ಇನ್ನೊಂದು, ವಿಶ್ವಾಮಿತ್ರನ ಥರ ಇರೋ ಮನುಷ್ಯ ಹಿಂದುಶ್ ಸೈನಿಕನಂತೆ).

Similar News