ಕಟ್ಟುವ ಗುಣದ ನೆಹರೂ ದೃಷ್ಟಿ: ಚರಿತ್ರೆಯು ಘಟನೆಯಲ್ಲ, ಗ್ರಹಿಕೆ
ಸಾಂಸ್ಕೃತಿಕ ಮುಖಾಮುಖಿಗಳ ಸಾಮರಸ್ಯದ ಕಾರಣದಿಂದಾಗಿ ಭಾರತವು ಜಾತಿ ಮತ್ತು ಪ್ರತ್ಯೇಕತೆಯ ಹೊರತಾಗಿಯೂ ಅಚ್ಚರಿದಾಯಕ ಅಂತರ್ಗತ ಸಾಮರ್ಥ್ಯವನ್ನು ಉಳಿಸಿಕೊಂಡಿದೆ ಎಂದು ನೆಹರೂ ನಂಬಿದ್ದರು. ಅಂಥ ನಂಬಿಕೆಯಲ್ಲಿ ಅವರು ಭಾರತದ ಚೈತನ್ಯವನ್ನು ಕಾಯಬಲ್ಲ ಘನತೆಯ ರಾಜಕಾರಣವನ್ನು ಮಾಡಿದರು. ದಿನಮಾನಗಳು ಬದಲಾಗಿರುವ ಹೊತ್ತಿನಲ್ಲಿ ನೆಹರೂ ನೋಟಗಳ ಬಗ್ಗೆ 'ನೆಹರೂ ಆ್ಯಂಡ್ ದಿ ಸ್ಪಿರಿಟ್ ಆಫ್ ಇಂಡಿಯಾ' ಎಂಬ ಕೃತಿ ಬರೆದಿರುವ ಲೇಖಕ, ರಾಜಕೀಯ ವಿಶ್ಲೇಷಕ ಮಾನಷ್ ಫಿರಾಕ್ ಭಟ್ಟಾಚಾರ್ಜಿ ಗ್ರಹಿಕೆಗಳು ಇಲ್ಲಿವೆ.
ಭಾರತದ ಆತ್ಮದ ಭಾಗವೆಂದು ಪರಿಗಣಿಸಲ್ಪಡುವ ಕೆಲವು ವಿಷಯಗಳಿವೆ. ಒಬ್ಬರ ಸ್ವಂತ ಆಲೋಚನೆಗಳು ಮತ್ತು ನಂಬಿಕೆಗಳು ಸೇರಿದಂತೆ ಎಲ್ಲವನ್ನೂ ಪ್ರಶ್ನಿಸುವ ಆಧುನಿಕತೆಯ ಮನೋಭಾವ, ನಿರಾಶ್ರಿತರನ್ನು ಸ್ವೀಕರಿಸುವ ಮತ್ತು ಅಲ್ಪಸಂಖ್ಯಾತರನ್ನು ಪರಿಗಣಿಸುವ ಜಾತ್ಯತೀತ ಮನೋಭಾವ. ತಾರತಮ್ಯವಿಲ್ಲದೆ, ಇತಿಹಾಸದುದ್ದಕ್ಕೂ ಇತರ ಧರ್ಮಗಳೊಂದಿಗೆ ಸಾಂಸ್ಕೃತಿಕ ಮುಖಾಮುಖಿಗಳಿಂದ ರೂಪುಗೊಂಡ ಜನರ ಚೈತನ್ಯ ಮತ್ತು ಹಿಂದಿನ ಕೆಲವು ಅಂಶಗಳನ್ನು ತಿರಸ್ಕರಿಸುವ ಮತ್ತು ಉಳಿಸಿಕೊಳ್ಳುವ ಅಗತ್ಯವನ್ನು ಕಂಡುಕೊಳ್ಳಬಲ್ಲ ನಿಲುವು. ನೆಹರೂ ಅವರ ವಿಚಾರಗಳು ಭಾರತದ ಈ ಮನೋಭಾವಕ್ಕೆ ಹೊಂದಿಕೊಂಡವುಗಳಾಗಿದ್ದವು. ಈ ಮನೋಭಾವವನ್ನು ನೆಹರೂ ಗೌರವಿಸಿದರು ಮತ್ತು ಈ ಗೌರವದ ಮೂಲಕ ಭಾರತವನ್ನು ನೆಹರೂ ಅರ್ಥಮಾಡಿದ್ದರು.
ನೆಹರೂ ವೈಜ್ಞಾನಿಕ ಪ್ರಗತಿಯ ಪ್ರತಿಪಾದಕರಾಗಿದ್ದರು ಮತ್ತು ಆ ಅರ್ಥದಲ್ಲಿ ಅವರು ಆಧುನಿಕತಾವಾದಿಯಾಗಿದ್ದರು. ಮೆಕ್ಸಿಕನ್ ಕವಿ ಮತ್ತು ರಾಜತಾಂತ್ರಿಕ ಆಕ್ಟೇವಿಯೊ ಪಾಜ್, ನೆಹರೂ ಅವರನ್ನು ಎರಡು ವಿರೋಧಿ ಸಂಪ್ರದಾಯಕ್ಕೆ ಸೇರಿದ ವ್ಯಕ್ತಿ ಎಂದು ಬಣ್ಣಿಸಿದ್ದರು. ಅಂತಹ ನೆಹರೂವನ್ನು ದುಪ್ಪಟ್ಟು ಆಧುನಿಕತೆಯ ವ್ಯಕ್ತಿ ಎಂದು ಮಾನಷ್ ಫಿರಾಕ್ ಭಟ್ಟಾಚಾರ್ಜಿ ಕಾಣುತ್ತಾರೆ. ಆವತ್ತಿನ ಕಾಲಘಟ್ಟದಲ್ಲಿ ನಿಂತು ಆಧುನಿಕತೆಯ ಆಕೃತಿಯನ್ನು ಅರ್ಥಮಾಡಿಕೊಳ್ಳುವ ಹೊತ್ತಲ್ಲಿ ಕಾಣಿಸುವುದು, ಆಧುನಿಕತೆಯು ವಿರೋಧಾಭಾಸಗಳನ್ನು ಸೃಷ್ಟಿಸುತ್ತದೆ ಎಂಬುದು. ಆಧುನಿಕ ಪಶ್ಚಿಮ ಮತ್ತು ಜ್ಞಾನೋದಯವನ್ನು ಉಂಟುಮಾಡಿದ ಕಲ್ಪನೆಗಳು ನಿರ್ದಿಷ್ಟ ಸಂಸ್ಕೃತಿಗೆ ಸೇರಿದ ಕಲ್ಪನೆಯು ಹೊಸ ರೂಪವನ್ನು ಪಡೆಯಲು ಕಾರಣವಾಗುತ್ತವೆ. ನಾವು ನಮ್ಮದೇ ಆದ ಸಾಂಸ್ಕೃತಿಕ ಸಂಪ್ರದಾಯದೊಂದಿಗೆ ವಿಮರ್ಶಾತ್ಮಕವಾಗಿ ಮಾತುಕತೆ ನಡೆಸಲು ಪ್ರಾರಂಭಿಸುತ್ತೇವೆ. ವಸಾಹತೋತ್ತರ ಜಗತ್ತಿನಲ್ಲಿ ಸಾಕಷ್ಟು ಬೌದ್ಧಿಕ ಚರ್ಚೆಗಳು ನಡೆಯುವುದು ಈ ನೆಲೆಯಲ್ಲಿಯೇ. ಪಾಶ್ಚಿಮಾತ್ಯವಾಗಿರುವುದು ಅಥವಾ ಇಲ್ಲದಿರುವುದು ರಾಜಕೀಯ ಸಂಕಟವಾಗತೊಡಗಿದ್ದ ದಿನಗಳು ಅವು.
ಸಂಪ್ರದಾಯದ ಕಡೆಗೆ ನೈತಿಕವಾಗಿ ಅಗತ್ಯ ವಿಮರ್ಶಾತ್ಮಕ ನೋಟವು ಸಾಮಾನ್ಯವಾಗಿ ಪಾಶ್ಚಿಮಾತ್ಯ ಪಕ್ಷಪಾತವನ್ನು ಹೊಂದಿದೆ ಎಂದೇ ಆರೋಪಿಸಲಾಗುತ್ತದೆ. ಪಾಶ್ಚಿಮಾತ್ಯ ವಿಚಾರಗಳು ಮತ್ತು ರೂಢಿಗಳನ್ನು ಬಳಸಿಕೊಂಡು ಸಂಸ್ಕೃತಿಗೆ ಸವಾಲು ಹಾಕುವವರಲ್ಲಿ ಮತ್ತು ಸಾಂಸ್ಕೃತಿಕ ಪ್ರತ್ಯೇಕತೆ ಮತ್ತು ಶ್ರೇಷ್ಠತೆಯ ಪರವಾಗಿ ವಾದಿಸುವವರಲ್ಲಿ ಸಾಂಸ್ಕೃತಿಕ ರಾಜಕೀಯವು ವಿಭಜನೆಯಾಗುತ್ತದೆ. ವಸಾಹತುಶಾಹಿಯು ಆಧುನಿಕತೆಯೊಂದಿಗೆ ಈ ಚರ್ಚೆಯನ್ನು ಸಂಕೀರ್ಣಗೊಳಿಸುತ್ತದೆ. ನೆಹರೂ ಅವರಿಗೆ ತಮ್ಮ ಆಯ್ಕೆಯ ಅವಕಾಶವಿತ್ತು ಮತ್ತು ಅವರು ಪಾಶ್ಚಿಮಾತ್ಯ ಆಧುನಿಕತೆಯ ಪರವಹಿಸಿದರು. ಆದರೆ ಅದೇ ವೇಳೆ ಅವರು ಭಾರತದ ಸಾಂಸ್ಕೃತಿಕ ಇತಿಹಾಸದ ಶ್ರೀಮಂತಿಕೆ ಮತ್ತು ಮುಕ್ತತೆಯನ್ನು ಗೌರವಿಸಿದರು.
ಸೆಕ್ಯುಲರಿಸಂ ಎಂದರೆ ಕಾನೂನಿನ ಮುಂದೆ ಸಮಾನತೆ ಮತ್ತು ರಾಜಕೀಯದಲ್ಲಿ ಧರ್ಮವನ್ನು ಬಳಸಿಕೊಳ್ಳುವುದನ್ನು ಒಪ್ಪದಿರುವುದು. ಆದರೆ ಸಮಾನತೆಯು ಸಮಾಜದಲ್ಲಿ ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆಯೊಂದಿಗೆ ವ್ಯವಹರಿಸಬೇಕು, ಅಲ್ಲಿ ಹಿಂದುಳಿದ ಸಮುದಾಯಗಳಿಗೆ ವಿಶೇಷ ಹಕ್ಕುಗಳು ಬೇಕಾಗಬಹುದು. ಸಮಾನತೆ ಎನ್ನುವುದು ಒಬ್ಬ ವ್ಯಕ್ತಿಗೆ ಮಾತ್ರ ಮೀಸಲಾದ ತತ್ವವಲ್ಲ. ರಾಷ್ಟ್ರ-ರಾಜ್ಯದ ವಿಶಾಲ ಜಾತ್ಯತೀತ ಗುರುತಿನಲ್ಲಿ ಅದು ಅರ್ಥ ಪಡೆಯುತ್ತದೆ. ನೆಹರೂ ಪ್ರಕಾರ, ಸಂಪ್ರದಾಯವು ಸ್ಥಿರವಾದ ಕಲ್ಪನೆಯಲ್ಲ, ಆದರೆ ಅದು ಕಾಲಾನಂತರದಲ್ಲಿ ಬದಲಾಗುತ್ತಲೇ ಇರುತ್ತದೆ. ಈ ಬದಲಾವಣೆಯು ಬದಲಾಗುತ್ತಿರುವ ಸಂವೇದನೆಗಳಿಗೆ ಸಂಬಂಧಿಸಿದೆ. ಆದ್ದರಿಂದ ಸಾಂಪ್ರದಾಯಿಕ ಎಂದು ಪರಿಗಣಿಸಲ್ಪಟ್ಟಿರುವುದು ಇತಿಹಾಸದಲ್ಲಿ ಅದು ಕಂಡಿದ್ದ ಬದಲಾವಣೆಗಳೊಂದಿಗೆ ಹೊಂದಿಕೆಯಾಗುವುದಿಲ್ಲ. ಅನೇಕ ಆಚರಣೆಗಳು ಮತ್ತು ನಂಬಿಕೆಗಳ ವಿಚಾರದಲ್ಲಿ ನಿಜವಾಗಿರದ ಸಂಪ್ರದಾಯವು ಈ ಕಾರಣದಿಂದಾಗಿಯೇ ಆಗಾಗ ಚರ್ಚೆಗೆ ಒಳಗಾಗುತ್ತಲೇ ಇರುತ್ತದೆ. ಇತಿಹಾಸವು ಕೇವಲ ಹಿಂದಿನದರ ನೆನಪು ಅಲ್ಲ. ಬದಲಾಗಿ ಅದೊಂದು ಗ್ರಹಿಕೆ ಅಥವಾ ದೃಷ್ಟಿಕೋನ. ಆದ್ದರಿಂದಲೇ ನೆಹರೂ ಅವರು ಸಾಂಪ್ರದಾಯಿಕವೆಂದು ಪರಿಗಣಿತವಾಗಿರುವುದನ್ನು ಇತಿಹಾಸದ ಮೂಲಕ ಪರಿಶೀಲನೆಗೆ ಒಳಪಡಿಸಬಹುದು ಎಂದು ಅರ್ಥಮಾಡಿಕೊಳ್ಳುತ್ತಾರೆ. ಅರ್ಥವಿಷ್ಟೆ: ಸಂಪ್ರದಾಯ ಮತ್ತು ಇತಿಹಾಸ ಎರಡೂ ನಮ್ಮ ಹಿಂದಿನ ಮತ್ತು ವರ್ತಮಾನದ ಭಾಗವಾಗಿವೆ. ಆದಾಗ್ಯೂ, ಅವುಗಳ ಸಂಬಂಧವು ನಿಕಟವಾಗಿಲ್ಲ, ಆದರೆ ಕ್ರಿಯಾತ್ಮಕವಾಗಿದೆ.
ಸಾಂಸ್ಕೃತಿಕ ಮುಖಾಮುಖಿಗಳ ಸಾಮರಸ್ಯದ ಕಾರಣದಿಂದಾಗಿ ಭಾರತವು ಜಾತಿ ಮತ್ತು ಪ್ರತ್ಯೇಕತೆಯ ಹೊರತಾಗಿಯೂ ಅಚ್ಚರಿದಾಯಕ ಅಂತರ್ಗತ ಸಾಮರ್ಥ್ಯವನ್ನು ಉಳಿಸಿಕೊಂಡಿದೆ ಎಂದು ನೆಹರೂ ನಂಬಿದ್ದರು. ಭಾರತವು ದೀರ್ಘಕಾಲದವರೆಗೆ ಕಾಯ್ದುಕೊಂಡು ಬಂದಿದ್ದ ಈ ಅಂತರ್ಗತ ಸಾಮರ್ಥ್ಯವು ಈಗ ಒಡೆಯುವ ಶಕ್ತಿಗಳಿಂದ ಛಿದ್ರಗೊಳ್ಳುತ್ತಿದೆ. ಹಾಗೆ ನೋಡಿದರೆ, ಭಾರತದ ಈ ಅಂತರ್ಗತ ಶಕ್ತಿಯು ಒತ್ತಡಕ್ಕೆ ಒಳಗಾಗುತ್ತಿರುವುದು ಇದೇ ಮೊದಲಲ್ಲ. ವಸಾಹತುಶಾಹಿ ವಿರೋಧಿ ಅವಧಿಯಲ್ಲಿ ಹಿಂದೂ-ಮುಸ್ಲಿಮ್ ಗಲಭೆ ಗಳನ್ನು ಕಂಡೆವು. ಅಂತಿಮವಾಗಿ ದೇಶ ವಿಭಜನೆಯ ನೆತ್ತರ ಇತಿಹಾಸವೊಂದು ಸೃಷ್ಟಿಯಾಯಿತು. ಈ ಅವಘಡದಲ್ಲಿ ಹಿಂದೂಗಳು ಮತ್ತು ಮುಸ್ಲಿಮರು ಅನುಭವಿಸಿದ ಹೇಳಲಾಗದ ಭೀಕರತೆ ಕೂಡ ಇತಿಹಾಸದ ನರಳಿಕೆಯಂತೆ ಉಳಿದುಕೊಂಡಿದೆ. ಭಾರತದ ಯಾವುದೇ ಮುಖ್ಯವಾಹಿನಿಯ ಪಕ್ಷವು ವಿಭಜನೆಯ ಆಘಾತವನ್ನು ಗುಣಪಡಿಸಲು ಕೆಲಸ ಮಾಡಲಿಲ್ಲ. ನಿಜವಾದ ಸೌಹಾರ್ದಕ್ಕಾಗಿ ಶ್ರಮಿಸಿದ ಕೊನೆಯ ವ್ಯಕ್ತಿ ಗಾಂಧಿ. ಅವರ ಅಕಾಲಿಕ ಮರಣವು ಆ ಇಂಗಿತವನ್ನು ರಾಜಕೀಯವಾಗಿ ಕೊನೆಗೊಳಿಸಲು ಉದ್ದೇಶಿಸಿತ್ತು. ಇಂತಹ ಹೊತ್ತಿನಲ್ಲಿ ದೇಶದ ಚುಕ್ಕಾಣಿ ಹಿಡಿದಿದ್ದ ನೆಹರೂ ಹಲವು ಸವಾಲುಗಳನ್ನು ಎದುರಿಸಬೇಕಾಗಿತ್ತು.
ಇಂದಿನ ಸನ್ನಿವೇಶ ಇನ್ನೂ ಅಯೋಮಯ. ಕೋಮು ಸಂಬಂಧಗಳನ್ನು ವ್ಯವಸ್ಥಿತವಾಗಿ ಹಾಳುಗೆಡವಲಾಗುತ್ತಿರುವ ಈ ಕಾಲದ ದೈಹಿಕ ಮತ್ತು ಮಾನಸಿಕ ಹಿಂಸೆಗಳೂ ಅಂಥವೇ. ಸ್ನೇಹ ಮತ್ತು ವಿಶ್ವಾಸದ ಬೆಸುಗೆಯ ರಾಜಕಾರಣವು ಸಾಕಾರಗೊಳ್ಳದೆ, ಎಲ್ಲರನ್ನೂ ಒಳಗೊಳ್ಳುವ ಮನೋಭಾವದ ಮೇಲೆ ಭಾಷಣ ಮಾಡುವುದರಲ್ಲಿ ಅರ್ಥವಿಲ್ಲ. ಅಂಬೇಡ್ಕರ್ ಹೇಳಿದಂತೆ, ಇತಿಹಾಸದಲ್ಲಿ ಕೇವಲ ಉಳಿದೆವು ಎಂದು ಹೇಳಿಕೊಳ್ಳುವುದು ಸಾಲದು, ಆದರೆ ಬದುಕಲು ಯೋಗ್ಯವಾದ ಸನ್ನಿವೇಶವನ್ನು ನೆಲೆಗೊಳಿಸಿದ್ದೇವೆ ಎಂದು ಕೇಳಿಕೊಳ್ಳುವುದು ಮುಖ್ಯ. ಇದು ಆಳವಾದ ಮತ್ತು ಕಷ್ಟಕರವಾದ ಪ್ರಶ್ನೆ. ಇಂತಹ ಹೊತ್ತಿನಲ್ಲಿ ನೆಹರೂ ವಿಚಾರಗಳು ಹಲವು ಆಯಾಮಗಳೊಡನೆ ಒಂದು ಅರ್ಥಪೂರ್ಣ ವಿವೇಚನೆಗೆ ತವಕಿಸಬಲ್ಲಂಥವಾಗಿ ಪ್ರಸ್ತುತವಾಗುತ್ತವೆ