ಬಿಜೆಪಿ ರಾಜಕಾರಣ ಬಳಸಿಕೊಂಡ ರಾಮಾಯಣ!

Update: 2022-11-16 05:49 GMT

1987ರ ರಾಮಾಯಣದ ಪ್ರಸಾರವು ರಾಮಾಯಣವೆಂದರೆ ಅದೊಂದೇ ಎಂಬ ಕಲ್ಪನೆಯನ್ನು ದೇಶದ ಪ್ರತಿಯೊಬ್ಬರಲ್ಲೂ ಮೂಡಿಸಿತು. ರಾಜಕೀಯ ನಾಯಕರ ಕೈಯಲ್ಲಿ ಧರ್ಮವು ಹೆಚ್ಚು ಸ್ಪಷ್ಟವಾದ ಸಾಧನವಾಗುವ ವಿಲಕ್ಷಣವೊಂದು ಇದ್ದಕ್ಕಿದ್ದಂತೆ ತಲೆದೋರಿತು. ಗಾಂಧೀಜಿಯವರ ಆದರ್ಶಗಳೊಂದಿಗೆ ವಿಕಸನಗೊಂಡಿದ್ದ ತಲೆಮಾರುಗಳು ಅಪ್ರಸಕ್ತವಾಗತೊಡಗಿದ್ದವು.

ಅದಿನ್ನೂ 1987. ಚುನಾವಣೆ ಇನ್ನೂ ಎರಡು ವರ್ಷಗಳಷ್ಟು ದೂರವಿತ್ತು. ಹಾಗೆ ಚುನಾವಣೆ ದೂರವಿದ್ದುದರಿಂದಲೇ, ಆಗ ದೊಡ್ಡ ಬಿರುಗಾಳಿಯನ್ನೇ ಎಬ್ಬಿಸಿದ್ದ ಶಾಬಾನು ಪ್ರಕರಣವಾಗಲೀ ಅಥವಾ ರಾಮಮಂದಿರ ವಿಚಾರವಾಗಲೀ ಚುನಾವಣಾ ವಿಷಯವಾಗುವ ಸಾಧ್ಯತೆ ಇರಲಿಲ್ಲ. ಬೋಫೋರ್ಸ್ ಹಗರಣವು ಕೂಡ ಚುನಾವಣೆಗೆ ಎರಡು ವರ್ಷಗಳ ಮೊದಲಿನದ್ದಾಗಿ, ಅದು ಕೂಡ ಜನರಿಗೆ ಮರೆತುಹೋಗುವ ಸಂಭವವೇ ಹೆಚ್ಚಿತ್ತು. ಬೋಫೋರ್ಸ್ ಹಗರಣವು ರಾಜೀವ್ ಗಾಂಧಿಯವರ ಜನಪ್ರಿಯತೆಯನ್ನು ಕಡಿಮೆ ಮಾಡಿತ್ತು ಎಂಬುದು ನಿಜವಾದರೂ, ಅದು ಬಿಜೆಪಿಯ ಜನಪ್ರಿಯತೆಯನ್ನು ಹೆಚ್ಚಿಸಲು ನೆರವಾಗಬಹುದಾದಷ್ಟು ದೊಡ್ಡ ವಿಚಾರವೇನೂ ಆಗಿರಲಿಲ್ಲ.

1987-88ರ ಅವಧಿಯಲ್ಲಿ ಭಾರತದಲ್ಲಿ ಇದೆಲ್ಲದರ ಹೊರತಾದ ಮತ್ತೇನೂ ಸಂಬಂಧವಿಲ್ಲವೆನ್ನುವ ಹಾಗೆ ನಡೆಯುತ್ತಿತ್ತು. ಗಮನಾರ್ಹ ಮಟ್ಟದಲ್ಲಿ ಬಿಜೆಪಿಯ ಜನಪ್ರಿಯತೆ ಕುದುರುವುದಕ್ಕೆ ಕಾರಣವಾದ ಆ ಸಂಗತಿ ಯಾವ ಪರಿಣಿತರ ಗಣನೆಗೂ ಸಿಕ್ಕದೆ ಹೋಗಿತ್ತು ಎಂಬುದೂ ಅಷ್ಟೇ ನಿಜ. ಆ ಸಂಗತಿ ಬೇರಾವುದೂ ಅಲ್ಲ; ಮೊತ್ತ ಮೊದಲ ಬಾರಿಗೆ ಟಿವಿಯಲ್ಲಿ ಪ್ರಸಾರವಾದ ರಾಮಾಯಣ ಧಾರಾವಾಹಿ.

1987ರ ಜನವರಿಯಿಂದ 1988ರ ಜುಲೈವರೆಗೆ ಪ್ರಸಾರವಾದ ಈ ಸರಣಿಯು ಊಹಿಸಲಾಗದ ರೀತಿಯಲ್ಲಿ ದೇಶದೊಳಗಿನ ವಾತಾವರಣವನ್ನೇ ಬದಲಿಸಿಬಿಟ್ಟಿತು. ಪ್ರತೀ ರವಿವಾರ ಬೆಳಗ್ಗೆ ಪ್ರಸಾರವಾದ 45 ನಿಮಿಷ ಅವಧಿಯ ಒಟ್ಟು 78 ಸಂಚಿಕೆಗಳು ದೇಶದಲ್ಲಿ ಸಾಪ್ತಾಹಿಕ ಆಚರಣೆಯಂತಾಗಿಬಿಟ್ಟಿದ್ದವು, ಲಕ್ಷಗಟ್ಟಲೆ ಭಾರತೀಯರು ಮನೆಗಳಲ್ಲಿ ಬಹಳ ಭಕ್ತಿ ಮತ್ತು ವಿಸ್ಮಯದಿಂದ ಈ ಧಾರಾವಾಹಿಯನ್ನು ನೋಡತೊಡಗಿದ್ದರು. ಧಾರಾವಾಹಿ ಪ್ರಸಾರದ ವೇಳೆ ಬೀದಿಗಳು ನಿರ್ಜನವಾಗುತ್ತಿದ್ದವು, ಬಸ್‌ಗಳು ಮತ್ತು ರೈಲುಗಳನ್ನೂ ನಿಲ್ಲಿಸಲಾಗುತ್ತಿತ್ತು ಎನ್ನಲಾಗುತ್ತದೆ. ಪ್ರಯಾಣಿಕರೆಲ್ಲ ರಸ್ತೆ ಬದಿಯ ಅಂಗಡಿಯಲ್ಲಿ ಟಿವಿಯಲ್ಲಿ ಧಾರಾವಾಹಿ ವೀಕ್ಷಿಸಲು ಹೆಜ್ಜೆ ಹಾಕುತ್ತಿದ್ದರು. ಮನೆಗಳಲ್ಲಿ ಜನರು ಸ್ನಾನ ಮಾಡಿ, ಟಿವಿಗೆ ಹಾರ ಹಾಕಿ, ಧೂಪ ಹಚ್ಚಿ, ಧಾರಾವಾಹಿ ಪ್ರಾರಂಭವಾಗುತ್ತಿದ್ದಂತೆಯೇ ಟಿವಿಯೆದುರು ಮಂಡಿಯೂರಿ ಕುಳಿತುಬಿಡುತ್ತಿದ್ದುದಿತ್ತು. ಯಾರೂ ಊಹಿಸದಂತಹ ಬಗೆಯಿದು. ಕುಟುಂಬದವರು ಮತ್ತು ನೆರೆಹೊರೆಯವರೆಲ್ಲ ಒಂದೇ ಕೋಣೆಯಲ್ಲಿ ಸೇರಿ ಧಾರಾವಾಹಿಯನ್ನು ಅಪ್ರತಿಮ ಗೌರವದಿಂದ ವೀಕ್ಷಿಸುತ್ತಿದ್ದುದಿತ್ತು. ಧಾರಾವಾಹಿಯಲ್ಲಿ ಪಾತ್ರಗಳನ್ನು ನಿರ್ವಹಿಸಿದ ನಟರು ಜನರಿಗೆ ನಿಜ ಜೀವನದ ದೇವರುಗಳಾಗಿಬಿಟ್ಟಿದ್ದರು.

ಅಂದಾಜಿನ ಪ್ರಕಾರ ಸುಮಾರು 65 ಕೋಟಿ ಜನರು ರಾಮಾಯಣ ಧಾರಾವಾಹಿಯನ್ನು ವೀಕ್ಷಿಸಿದ್ದಾರೆ. ಭಾರತದಲ್ಲಿ ದೂರದರ್ಶನ ಕ್ರಾಂತಿಯು ಶುರುವಾದದ್ದೇ 1980ರ ದಶಕದಲ್ಲಿ. ಅಂದರೆ, ಈ ಧಾರಾವಾಹಿ ಪ್ರಸಾರವಾದ ಕಾಲ ಅಷ್ಟೇನೂ ಉತ್ತಮವಾಗಿರಲಿಲ್ಲ ಎಂಬುದನ್ನು ಊಹಿಸಬಹುದು. 1983ರಲ್ಲಿ ಭಾರತವು 8 ಲಕ್ಷ ಟಿವಿ ಸೆಟ್‌ಗಳನ್ನು ಉತ್ಪಾದಿಸಿತು. 1986ರಲ್ಲಿ ಈ ಸಂಖ್ಯೆ 30 ಲಕ್ಷಕ್ಕೆ ಏರಿತ್ತು. ರಾಮಾಯಣ ಪ್ರಸಾರದ ಹಿಂದಿನ ಎಂಟು ವರ್ಷಗಳಲ್ಲಿ ಟಿವಿ ಸೆಟ್‌ಗಳ ಸಂಖ್ಯೆ ಹತ್ತು ಪಟ್ಟು ಮತ್ತು ಪ್ರೇಕ್ಷಕರ ಸಂಖ್ಯೆ ಆರು ಪಟ್ಟು ಹೆಚ್ಚಾಗಿತ್ತು. ಇದು ಬೃಹತ್ ಮತ್ತು ದೀರ್ಘಕಾಲೀನ ಪ್ರಭಾವಕ್ಕೆ ಕಾರಣವಾದ ಕ್ರಾಂತಿಯೆನ್ನಿಸಿತ್ತು. ಮೊದಲ ಬಾರಿಗೆ ಜನರು ಸಹ ಭಾರತೀಯರ ಜೀವನ ಮತ್ತು ಆಸೆಗಳನ್ನು ಟಿವಿಯಲ್ಲಿ ವೀಕ್ಷಿಸಲು ಸಾಧ್ಯವಾಗಿತ್ತು. ಹೀಗೆ ಭಾರತದಲ್ಲಿ ದೂರದರ್ಶನದ ಆರಂಭವು ಒಂದು ರೀತಿಯ ಚಿಂತನೆಯನ್ನು ಪ್ರಚೋದಿಸಿತ್ತು.

ರಾಮಾಯಣವನ್ನು ವೀಕ್ಷಿಸಲು ಒಂದು ಟಿವಿಯ ಸುತ್ತಲೂ ಸೇರಿಕೊಳ್ಳುತ್ತಿದ್ದ ಅವರೆಲ್ಲರೂ ಭಾರತವನ್ನು ಕಲ್ಪಿಸಿಕೊಳ್ಳುವ ರೀತಿ ವಿಸ್ತರಿಸಿಕೊಳ್ಳತೊಡಗಿತ್ತು. ಮತ್ತು ಆ ಕಲ್ಪನೆಯು ಮಧ್ಯಮ ವರ್ಗದ ನಗರ ಪ್ರದೇಶದ ಹಿಂದೂ ಕಲ್ಪನೆಯಾಗಿತ್ತು. ಅದೇ ಅವಧಿಯಲ್ಲಿ ದಿಲ್ಲಿ, ಪುಣೆ ಮತ್ತು ಆಗಿನ ಮದ್ರಾಸ್‌ನಲ್ಲಿ 1,170 ಜನರನ್ನು ಒಳಪಡಿಸಿ ನಡೆಸಲಾಗಿದ್ದ ಸಮೀಕ್ಷೆಯೊಂದರಲ್ಲಿ, ಇಂಥದೊಂದು ಕೇಂದ್ರೀಕೃತ ಕಲ್ಪನೆಯ ವಿಚಾರ ಗಮನಕ್ಕೆ ಬಂತು. ಶೇ. 85ರಷ್ಟು ಕೆಳಜಾತಿಯ ಟಿವಿ ವೀಕ್ಷಕರು ತಮ್ಮ ಅಗತ್ಯಗಳು ಮತ್ತು ಆಕಾಂಕ್ಷೆಗಳ ಬಗ್ಗೆ ಟಿವಿ ಧಾರಾವಾಹಿಗಳಲ್ಲಿ ಏನೂ ಇಲ್ಲವೆಂಬ ಭಾವನೆ ವ್ಯಕ್ತಪಡಿಸಿದ್ದರು. ಶೇ.90ರಷ್ಟು ಮುಸ್ಲಿಂ ಮತ್ತು ಸಿಖ್ ಸಮುದಾಯದ ಟಿವಿ ವೀಕ್ಷಕರು ಕೂಡ ತಮ್ಮ ಧಾರ್ಮಿಕ ಪದ್ಧತಿಗಳು ಮತ್ತು ಆಚರಣೆಗಳನ್ನು ಸಮರ್ಪಕವಾಗಿ ಚಿತ್ರಿಸಿಲ್ಲ ಎಂದು ಹೇಳಿಕೊಂಡಿದ್ದರು ಮತ್ತು ಶೇ.90ಕ್ಕೂ ಹೆಚ್ಚು ಕಾರ್ಮಿಕರು ಮತ್ತು ಕುಶಲಕರ್ಮಿಗಳು ತಮ್ಮ ಕೌಶಲ್ಯ ಮತ್ತು ಜ್ಞಾನದ ಬಗ್ಗೆ ಸರಿಯಾದ ಚಿತ್ರಣವಿಲ್ಲ ಎಂದು ಭಾವಿಸಿದ್ದರು.

ಕುತೂಹಲಕಾರಿಯೆಂಬಂತೆ, ಹಿಂದಿಯೇತರ ಜನಸಂಖ್ಯೆಯ ಶೇ.60ರಷ್ಟು ಜನರು ತಮ್ಮ ಸಮಸ್ಯೆಗಳು ಮತ್ತು ತೊಂದರೆಗಳನ್ನು ಭಾರತೀಯ ದೂರದರ್ಶನದಲ್ಲಿ ತೋರಿಸುತ್ತಿಲ್ಲ ಎಂಬ ಭಾವನೆ ವ್ಯಕ್ತಪಡಿಸಿದ್ದರು. ಟಿವಿಯಲ್ಲಿ ಕಾಣಿಸಿಕೊಳ್ಳುವ ಮೌಲ್ಯ ತೀರ್ಪುಗಳು, ಸಂಪ್ರದಾಯಗಳು ಮತ್ತು ಪದ್ಧತಿಗಳು ನಿಧಾನವಾಗಿ ಏಕರೂಪತೆಯ ಸ್ಥಿತಿಯನ್ನು ಪಡೆದುಕೊಳ್ಳುತ್ತಿದ್ದವು..

ಈ ಎಲ್ಲಾ ಅಂಶಗಳನ್ನು ಸೇರಿಸಿಕೊಂಡು ನೋಡಿದರೆ, ಒಂದು ವಿಚಾರ ಸ್ಪಷ್ಟವಾಗುತ್ತದೆ. ದೂರದರ್ಶನದ ಹೆಚ್ಚಿದ ವೀಕ್ಷಣೆಯು, ಭಾರತೀಯರು ಯಾರು ಮತ್ತು ಅವರು ಭಾರತವಾಗಿದ್ದ ಎಲ್ಲವನ್ನೂ ಹೇಗೆ ಎದುರಿಸಿದ್ದರು ಎಂಬ ಏಕರೂಪಿ ಕಲ್ಪನೆಯೊಂದು ಪ್ರಖರವಾಗುವಂತೆ ಮಾಡಿತು. ರಾಮಾಯಣವನ್ನು ಪ್ರಸಾರ ಮಾಡಲು ಆರಂಭಿಸಿದ್ದು ಇಂಥ ಕಲ್ಪನೆಯು ಬೆಳೆದುಕೊಳ್ಳತೊಡಗಿದ್ದ ಹೊತ್ತಿನಲ್ಲಿಯೇ. ಹಾಗಾಗಿ ಅದು ಭಾರತೀಯರನ್ನು ಗಾಢವಾಗಿ ಪ್ರಭಾವಿಸದೇ ಇರುವುದು ಸಾಧ್ಯವೇ ಇರಲಿಲ್ಲ.

ಇದರ ದೊಡ್ಡ ಲಾಭವಾದದ್ದೇ ಬಿಜೆಪಿಗೆ. ಇದರರ್ಥ ರಾಮಾಯಣ ಬಿಜೆಪಿಯವರದ್ದಾಗಿತ್ತು ಎಂದಲ್ಲ. ಹೇಗೋ ಬಿಜೆಪಿಯು ಪ್ರಾಬಲ್ಯ ಸಾಧಿಸಿದಾಗ, ಜನರು ಪ್ರತೀ ವಾರ 1987-88ರಲ್ಲಿ ರಾಮಾಯಣದ ರೂಪದಲ್ಲಿ ಮತ್ತು 1988-90ರ ನಡುವೆ ದೊಡ್ಡ ಸಂಖ್ಯೆಯ ವೀಕ್ಷಕರನ್ನು ಸೆಳೆದ (ರಾಮಾಯಣದ ನಂತರದ ಸ್ಥಾನ) ಮಹಾಭಾರತದ ಮೂಲಕ ಒಂದು ಭಾವನಾತ್ಮಕ ಧಾರ್ಮಿಕ ನೆಲೆಯಿಂದ ಪ್ರಭಾವಿತರಾದರು. ಇಂಥದೊಂದು ರಾಜಕೀಯ ವಾಸ್ತವ ಮತ್ತು ಧಾರ್ಮಿಕ ಕಲ್ಪನೆ ಪರಸ್ಪರ ಬೆಸೆದುಕೊಳ್ಳುತ್ತ 1987-90ರ ಅವಧಿಯಲ್ಲಿ, ಭಾರತದ ಭಾವನೆಗಳನ್ನು ಹೊತ್ತಿರುವ ಪಕ್ಷವಾಗಿ ಬಿಜೆಪಿಯತ್ತ ನೋಡುವಂತೆ ಮತದಾರರ ಮನಸ್ಸನ್ನು ಒಂದಾಗಿಸಿಬಿಟ್ಟಿತ್ತು.

ರಾಮಾಯಣ ಪ್ರಸಾರವಾದ ಅದೇ ವರ್ಷವೇ ಎ.ಕೆ. ರಾಮಾನುಜಂ ಅವರು 1987ರ ಸಮ್ಮೇಳನಕ್ಕಾಗಿ 'ಮುನ್ನೂರು ರಾಮಾಯಣಗಳು' ಎಂಬ ಪ್ರಬಂಧ ಬರೆದರು. 2,500 ವರ್ಷಗಳಿಂದ ಏಶ್ಯದ ಸಮಾಜಗಳಾದ್ಯಂತ ರಾಮಾಯಣದ ವಿವಿಧ ನಿರೂಪಣೆಗಳ ಮೌಲ್ಯಯುತ ಪ್ರಯಾಣದಂತಿರುವ ಈ ಪ್ರಬಂಧವು, ರಾಮಾಯಣಕ್ಕೆ ಒಂದೇ ಆವೃತ್ತಿಯಿಲ್ಲ ಎಂಬುದನ್ನು ಮನದಟ್ಟು ಮಾಡುತ್ತದೆ.

1987ರ ರಾಮಾಯಣದ ಪ್ರಸಾರವು ರಾಮಾಯಣವೆಂದರೆ ಅದೊಂದೇ ಎಂಬ ಕಲ್ಪನೆಯನ್ನು ದೇಶದ ಪ್ರತಿಯೊಬ್ಬರಲ್ಲೂ ಮೂಡಿಸಿತು. ರಾಜಕೀಯ ನಾಯಕರ ಕೈಯಲ್ಲಿ ಧರ್ಮವು ಹೆಚ್ಚು ಸ್ಪಷ್ಟವಾದ ಸಾಧನವಾಗುವ ವಿಲಕ್ಷಣವೊಂದು ಇದ್ದಕ್ಕಿದ್ದಂತೆ ತಲೆದೋರಿತು. ಗಾಂಧೀಜಿಯವರ ಆದರ್ಶಗಳೊಂದಿಗೆ ವಿಕಸನಗೊಂಡಿದ್ದ ತಲೆಮಾರುಗಳು ಅಪ್ರಸಕ್ತವಾಗತೊಡಗಿದ್ದವು. ಉತ್ತಮ ಆರ್ಥಿಕತೆಯನ್ನು ಒದಗಿಸಲು ಕಾಂಗ್ರೆಸ್ ವಿಫಲವಾಗಿತ್ತು. ರಾಷ್ಟ್ರೀಯ ಭದ್ರತೆಯಂತಹ ಪ್ರಮುಖ ವಿಷಯಗಳಲ್ಲಿಯೂ ಅದು ಭ್ರಷ್ಟಾಚಾರದಿಂದ ತನ್ನ ಕೈಗಳನ್ನು ಕೊಳೆ ಮಾಡಿಕೊಂಡಿತ್ತು. ಧಾರ್ಮಿಕ ಅಲ್ಪಸಂಖ್ಯಾತರ ಹಿತಾಸಕ್ತಿಗಳನ್ನು ಕಾಯುವಲ್ಲೂ ಸೋಲತೊಡಗಿತ್ತು.

ಇಂಥ ಹೊತ್ತಿನ ಭಾರತ ಬಿಜೆಪಿಯ ಎದುರಿಗೆ ಬಂದಾಗ ಆಯ್ಕೆಗಳಿಗಾಗಿ ಪರದಾಡುತ್ತಿತ್ತು. ಬಿಜೆಪಿ, ಟಿವಿ ಸೆಟ್‌ಗಳು, ರಾಮಾಯಣ ಹೀಗೆ ಸಂಬಂಧವೊಂದು ರೂಪುಗೊಂಡು, ಟಿವಿ ರಾಮಾಯಣದಿಂದ ಸ್ಫೂರ್ತವಾದ ಗುರುತಿನೊಂದಿಗೆ ತನ್ನನ್ನು ತಾನು ಕಂಡುಕೊಳ್ಳಲಾರಂಭಿಸಿತು ಎಂದು ವಿವರಿಸುತ್ತಾರೆ, 'Who Moved My Vote' ಪುಸ್ತಕದಲ್ಲಿ ಯಾಗ್ನಿಕ್ ಗೋಯಲ್ ಮತ್ತು ಅರುಣ್ ಕುಮಾರ್ ಕೌಶಿಕ್.

1989ರ ನವೆಂಬರ್‌ನಲ್ಲಿ ಮಹಾಭಾರತದ ಏಳನೇ ಮತ್ತು ಎಂಟನೇ ಕಂತುಗಳು ಪ್ರಸಾರವಾಗುತ್ತಿರುವಾಗ ಭಾರತವು ಮತ್ತೊಮ್ಮೆ ಮತ ಚಲಾಯಿಸುತ್ತಿತ್ತು. ಆಗ ರಾಮ ಮತ್ತು ಅಯೋಧ್ಯೆ ಪ್ರಭಾವಿ ಅಂಶಗಳಾಗಿದ್ದವು.

1989ರ ಸಾರ್ವತ್ರಿಕ ಚುನಾವಣೆಯಲ್ಲಿ ಜನತಾ ದಳ (ಜೆಡಿ) ಮತ್ತು ಬಿಜೆಪಿ ನಡುವೆ ಚುನಾವಣಾ ಪೂರ್ವ ಮೈತ್ರಿ ಇತ್ತು ಮತ್ತು ಬಿಜೆಪಿಯ ಬೆಳವಣಿಗೆಗೆ ಅದೂ ಕಾರಣವಾಗಿರಬಹುದು ಎಂದು ಕೆಲವರು ಹೇಳಲೂಬಹುದು. ಬಹುಶಃ ಜನತಾ ದಳ ಜನಪ್ರಿಯತೆಯ ಮೇಲೆ ಬಿಜೆಪಿ ಸವಾರಿ ಸಾಗಿತ್ತು.

ದೊಡ್ಡ ಆಡಳಿತ ವಿರೋಧಿ ಅಲೆ ಇತ್ತು. 1989ರಲ್ಲಿ ಈ ಎರಡೂ ಪಕ್ಷಗಳು ಸೀಟು ಹೊಂದಾಣಿಕೆ ಒಪ್ಪಂದ ಮಾಡಿಕೊಂಡಿದ್ದವು. ಆ ಮೂಲಕ ಪರಸ್ಪರ ವಿರುದ್ಧ ಸ್ಪರ್ಧಿಸದಂತೆ ಸಾಮಾನ್ಯ ಅಭ್ಯರ್ಥಿಯನ್ನು ಹಾಕಿದ್ದವು. ಹಲವು ಕ್ಷೇತ್ರಗಳಲ್ಲಿ ಈ ಸೂತ್ರ ಅನುಸರಿಸಲಾಗಿತ್ತು. ಎರಡೂ ಪಕ್ಷಗಳ ಪರವಾಗಿ ಒಬ್ಬನೇ ಒಬ್ಬ ಸಾಮಾನ್ಯ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದರಿಂದ, ನಿಜವಾಗಿಯೂ ಮತ ಯಾವ ಪಕ್ಷಕ್ಕೆ ಹೋಯಿತು ಎಂದು ತಿಳಿಯುವುದು ಆಗಲಿಲ್ಲ. ಒಂದು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಿಲ್ಲದಿದ್ದರೆ ಮತ್ತು ಜೆಡಿ ಅಭ್ಯರ್ಥಿಯನ್ನು ಇಳಿಸಿದ್ದರೆ, ಈ ಅಭ್ಯರ್ಥಿಗೆ ಬಂದ ಮತಗಳು ನಿಜವಾಗಿ ಬಿಜೆಪಿ ಅಭ್ಯರ್ಥಿಗೆ ಹೋಗಬೇಕಿದ್ದ ಮತಗಳಾಗಿದ್ದಿರಲೂಬಹುದು ಎನ್ನುವಂಥ ಊಹೆಗಳ ಮಟ್ಟದಲ್ಲಿಯೇ ಎಲ್ಲವೂ ಉಳಿದುಹೋಯಿತು. ಕಂಡುಹಿಡಿಯುವ ಯಾವುದೇ ಮಾರ್ಗವಿಲ್ಲ. ಯುಪಿಯಂತಹ ಸ್ಥಳಗಳನ್ನು ತನ್ನ ಭದ್ರಕೋಟೆಯಾಗಿಸಿಕೊಳ್ಳಲು ಬಿಜೆಪಿಯು ಸೀಟು ಹೊಂದಾಣಿಕೆಯ ಮೇಲೆಯೇ ಹೆಚ್ಚು ಅವಲಂಬಿತವಾಗಿತ್ತು ಎನ್ನಲಾಗುತ್ತದೆ.

Similar News