ಜನರು ಪ್ರಜ್ಞಾವಂತರಾಗುವುದೊಂದೇ ಪರಿಹಾರ

Update: 2022-11-16 18:21 GMT

ಮಾನ್ಯರೇ,

ಬಲವಂತದ ಮತಾಂತರ, 'ತುಂಬಾ ಗಂಭೀರ ವಿಚಾರ' ಎಂದು ವ್ಯಾಖ್ಯಾನಿಸಿರುವ ಸುಪ್ರೀಂ ಕೋರ್ಟ್, ಈ ಬಗ್ಗೆ ಕ್ರಮಕೈಗೊಳ್ಳುವಂತೆ ಹಾಗೂ ಬಲವಂತದ ಮತಾಂತರ ತಡೆಯಲು ಪ್ರಾಮಾಣಿಕವಾಗಿ ಪ್ರಯತ್ನಿಸುವಂತೆ ಕೇಂದ್ರ ಸರಕಾರಕ್ಕೆ ಸೋಮವಾರ ಸೂಚಿಸಿದೆ (ವಾ.ಭಾ.,ನ.15) ಎಂಬುದು ತಾತ್ವಿಕವಾಗಿ ಸರಿಯೆನಿಸಿದರೂ ಆಂತರ್ಯದಲ್ಲಿ, 'ರೋಗಿ ಬಯಸಿದ್ದೂ ಹಾಲು ಅನ್ನ ; ವೈದ್ಯ ಹೇಳಿದ್ದೂ ಹಾಲು ಅನ್ನ' ಎಂಬಂತಾಗಿದೆ ಎಂದನಿಸುತ್ತೆ.
 
ಸ್ವಾಮಿ ವಿವೇಕಾನಂದರು ಒಮ್ಮೆ ಹೀಗೆ ಹೇಳಿದ್ದಾರೆ: ''ಬಲಪ್ರಯೋಗದಿಂದ ಅವರನ್ನು (ಹಿಂದೂ ಜನರನ್ನು) ಮುಸಲ್ಮಾನ್ ಮತಕ್ಕೆ ಸೇರಿಸಿದರು ಎನ್ನುವುದು ಶುದ್ಧ ತಪ್ಪು. ಜಮೀನುದಾರರ ಉಪಟಳದಿಂದ, ಪುರೋಹಿತರ ಹಿಂಸೆಯಿಂದ ತಪ್ಪಿಸಿಕೊಳ್ಳಬೇಕೆಂದು ಮುಸಲ್ಮಾನರಾದರು.....'' - ಈ ಮಾತಿನ ಹಿನ್ನೆಲೆಯಲ್ಲಿ ಯೋಚಿಸಿದರೆ ಮತಾಂತರವನ್ನು ತಡೆಯುವ ಅಸ್ತ್ರ ಹಿಂದೂ ಧರ್ಮದ ಆಚರಣೆಯಲ್ಲಿಯೇ ಅಡಗಿದೆ ಎಂದು ಅನಿಸುತ್ತದೆ. ರೋಗದ ಮೂಲಕ್ಕೆ ಮದ್ದು ಮಾಡಬೇಕೇ ಹೊರತು ರೋಗದ ಬಾಹ್ಯ ಲಕ್ಷಣಗಳಿಗಲ್ಲ. ಮೇಲಾಗಿ ಭಾರತದ ಸಂವಿಧಾನದ 25ನೆಯ ಪರಿಚ್ಛೇದದಲ್ಲಿ '' .... ಎಲ್ಲಾ ವ್ಯಕ್ತಿಗಳು ಸಮಾನ ರೀತಿಯಲ್ಲಿ ಅಂತಃಕರಣ ಸ್ವಾತಂತ್ರ್ಯಕ್ಕೆ ಹಕ್ಕುಳ್ಳವರಾಗಿರುತ್ತಾರೆ ಹಾಗೂ ಅಬಾಧಿತವಾಗಿ ಧರ್ಮವನ್ನು ಅವಲಂಬಿಸುವ, ಆಚರಿಸುವ ಮತ್ತು ಪ್ರಚಾರ ಮಾಡುವ ಹಕ್ಕನ್ನುಳ್ಳವರಾಗಿರುತ್ತಾರೆ'' ಎಂದು ಹೇಳಲಾಗಿದೆ. ಸಂವಿಧಾನ ದಯಪಾಲಿಸಿರುವ ಈ ವ್ಯಕ್ತಿ ಸ್ವಾತಂತ್ರ್ಯವೆಂಬ ಮಾನವೀಯ ಮೌಲ್ಯವನ್ನು ಕಾಪಾಡಿಕೊಳ್ಳುವುದು ನಮ್ಮೆಲ್ಲರ ಹೊಣೆ.
ವಾಸ್ತವದಲ್ಲಿ ಇಂದು ನಮ್ಮ ಪ್ರಜಾಸತ್ತಾತ್ಮಕ ಮೌಲ್ಯವನ್ನೇ ಅಪ್ರಸಕ್ತಗೊಳಿಸುತ್ತಿರುವುದು ಬಲವಂತದ ಹಾಗೂ ಆಮಿಷದ ಪಕ್ಷಾಂತರ ಪಿಡುಗು! ಮತಾಂತರವಲ್ಲ. ಜನಮತ ಪಡೆದ ಸರಕಾರಗಳನ್ನೇ ಹಣದ, ಅಧಿಕಾರದ ಆಮಿಷಗಳನ್ನು ಒಡ್ಡಿ ಉರುಳಿಸಲಾಗುತ್ತಿರುವುದು ಸರ್ವವೇದ್ಯವಾದ ಸಂಗತಿ. ಒಕ್ಕೂಟ ಸರಕಾರದ ಹಿಡಿತದಲ್ಲಿರುವ ಸಿ.ಬಿ.ಐ, ಜಾರಿ ನಿರ್ದೇಶನಾಲಯ, ಆದಾಯ ತೆರಿಗೆ ಇಲಾಖೆ, ರಾಷ್ಟ್ರೀಯ ತನಿಖಾ ಆಯೋಗಗಳಂತಹ ಸಂಸ್ಥೆಗಳನ್ನು ಪಕ್ಷಾಂತರಕ್ಕೆ ಪೂರಕವಾಗಿ ಬಳಸಿಕೊಳ್ಳುತ್ತಿರುವುದು ಸಹ ದಿನನಿತ್ಯ ಪತ್ರಿಕೆಗಳ ಮೂಲಕ ತಿಳಿದು ಬರುತ್ತಿರುವ ಸಂಗತಿ. ''ನೀವು ಕಾನೂನಿನ ಕೆಳಗೆ ತೂರಿದರೆ ನಾವು ರಂಗೋಲಿ ಕೆಳಗೆ ತೂರಿಕೊಳ್ಳುತ್ತೇವೆ'' ಎನ್ನುವ ಈ ಸನ್ನಿವೇಶಗಳನ್ನು ನಿಯಂತ್ರಿಸುವುದಾದರೂ ಹೇಗೆ? ಹೀಗಾಗಿ ಇಂತಹ ಸೂಕ್ಷ್ಮಗಳನ್ನು ನಿರ್ವಹಿಸುವಲ್ಲಿ ಶಾಸಕಾಂಗ, ನ್ಯಾಯಾಂಗಗಳಿಗಿಂತ ಜನರು ಪ್ರಜ್ಞಾವಂತರಾಗುವುದೊಂದೇ ಪರಿಹಾರ. ಅಲ್ಲಿಯವರೆಗೆ ಈ ಆಟಗಳೆಲ್ಲ ನಡೆಯುತ್ತಲೆ ಇರುತ್ತವೆ!

Similar News