ಸರಕಾರಿ ಶಾಲೆಗಳ ಉಳಿವು ಇಂದಿನ ಅಗತ್ಯ

Update: 2022-11-18 03:10 GMT

ಇಂದು ಪ್ರಾಥಮಿಕ ಶಾಲಾ ಶಿಕ್ಷಣ ಎತ್ತ ಸಾಗಿದೆ? ಪ್ರಾಥಮಿಕ ಶಿಕ್ಷಣದ ಕುರಿತು ಏನೆಲ್ಲಾ ಚರ್ಚೆಗಳು ಇಂದು ಅನಿವಾರ್ಯವಾಗಿವೆ? ನಿಜವಾಗಿಯೂ ಪ್ರಾಥಮಿಕ ಶಿಕ್ಷಣದ ಪ್ರಗತಿಗೆ ಇಂದಿನ ಅವಶ್ಯಕತೆ ಏನು? ಎಂದು ಸ್ವಲ್ಪಯೋಚಿಸಿದರೆ, ಇಂದು ನಡೆಯುತ್ತಿರುವ ಅಸಂಗತ ವಿವಾದಗಳು ಗೌಣವಾಗುತ್ತವೆ. ಇಂದು ಸರಕಾರಿ ಶಾಲೆಗಳ ಪ್ರಗತಿ ಮತ್ತು ಮಕ್ಕಳ ವಿದ್ಯಾಭ್ಯಾಸದ ಕುರಿತು ಆರೋಗ್ಯಕರವಾದ ಚರ್ಚೆಗಳ ಅನಿವಾರ್ಯತೆ ಇದೆ. ಕರ್ನಾಟಕದಲ್ಲಿ ಪ್ರಾಥಮಿಕ ಶಿಕ್ಷಣ ಇಂದು ಹಲವಾರು ಸಮಸ್ಯೆಗಳ ಆಗರವಾಗಿದೆ. ಮುಖ್ಯವಾಗಿ ಕಳೆದ ಒಂದು ದಶಕದಲ್ಲಿ ಕರ್ನಾಟಕದಲ್ಲಿ ಎಷ್ಟೋ ಸರಕಾರಿ ಶಾಲೆಗಳನ್ನು ಮುಚ್ಚಲಾಗಿದೆ ಅಥವಾ ಬೇರೆ ಶಾಲೆಗಳೊಂದಿಗೆ ವಿಲೀನ ಮಾಡಲಾಗಿದೆ. ಇಂದು ಸರಕಾರಿ ಶಾಲೆಗಳಲ್ಲಿ ಪ್ರವೇಶಾತಿಯೇ ಕಡಿಮೆಯಾಗಿದೆ. ಇದರ ಪರಿಣಾಮವಾಗಿ ಸರಕಾರಿ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಮೊದಲಿಗಿಂತ ಇಂದು ತುಂಬಾ ಕಡಿಮೆ ಆಗಿದೆ. ಶಾಲೆಗಳಿಗೆ ಬಣ್ಣ ಬಳಿಯುವುದಿರಲಿ ಹಲವು ಕೊಠಡಿಗಳಿರುವ ದೊಡ್ಡ ದೊಡ್ಡ ಶಾಲೆಗಳ ಶಾಲಾ ಕೊಠಡಿಗಳೇ ಇಂದು ಹಾಳು ಬಿದ್ದಿವೆ. ನೂರಾರು ಶಾಲೆಗಳ ಮಕ್ಕಳಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯೇ ಇಲ್ಲ, ಎಷ್ಟೋ ಶಾಲೆಗಳಿಗೆ ಆಟದ ಮೈದಾನವೇ ಇಲ್ಲ. ಇಂದು ಬೇಕಾಗಿರುವುದು ಸರಕಾರಿ ಶಾಲೆಗಳ ಪುನರ್ಜೀವವೇ ಹೊರತು ಕೆಲಸಕ್ಕೆ ಬಾರದ ಒಣ ವಿವಾದಗಳಲ್ಲ. ಅವಶ್ಯಕತೆ ಇರುವ ಕಡೆ ಹೊಸ ಶಾಲಾ ಕೊಠಡಿಗಳ ನಿರ್ಮಾಣ, ಮುಖ್ಯವಾಗಿ ಹಾಳು ಬಿದ್ದಿರುವ ಶಾಲಾ ಕೊಠಡಿಗಳ ರಿಪೇರಿ. ಒಳ್ಳೆಯ ಸಮವಸ್ತ್ರ, ಶೂಗಳನ್ನು ನೀಡುವುದು, ಸಮಯಕ್ಕೆ ಸರಿಯಾಗಿ ಪಠ್ಯಪುಸ್ತಕಗಳನ್ನು ಸರಬರಾಜು ಮಾಡುವುದು, ಮೊದಲು ಸರಕಾರಿ ಶಾಲೆಗಳತ್ತ ಮಕ್ಕಳು ಮುಖ ಮಾಡುವಂತೆ ಮಾಡಬೇಕಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಸರಕಾರಿ ಶಾಲೆಗೂ ಮಕ್ಕಳು ವಾಹನದಲ್ಲಿ ಬರುವಂತಾಗಬೇಕು.

ಇಂದು ಎಲ್ಲಾ ಕಡೆ ಖಾಸಗಿ ಶಾಲೆಗಳು ಎದ್ದು ನಿಂತಿವೆ. ಗ್ರಾಮಪಂಚಾಯತ್ ಕೇಂದ್ರದಂತಹ ಹಳ್ಳಿಗಳಿಂದಿಡಿದು ತಾಲೂಕು ಮಟ್ಟದವರೆಗೂ ಎಲ್ಲಾ ಕಡೆ ಇಂದು ಖಾಸಗಿ ಶಾಲೆಗಳು ಅವ್ಯಾಹತವಾಗಿ ಬೆಳೆದು ನಿಂತಿವೆ. ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲಾ ಶಿಕ್ಷಣದ ಬಗ್ಗೆ ನಿಜವಾಗಿಯೂ ಕಾಳಜಿ ಇರುವವರು ಇಂದು ಸರಕಾರಿ ಶಾಲೆಗಳನ್ನು ಹೇಗೆ ಖಾಸಗಿ ಶಾಲೆಗಳಿಗೆ ಸ್ಪರ್ಧೆ ನೀಡುವಂತೆ ಮಾಡಬಹುದು? ಹೇಗೆ ಸರಕಾರಿ ಶಾಲೆಗಳಲ್ಲಿ ದಾಖಲಾತಿಯನ್ನು ವೃದ್ಧಿಸಬಹುದು? ಹೇಗೆ ಪೋಷಕರನ್ನು ಸರಕಾರಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಸೇರಿಸಲು ಪ್ರೇರೇಪಿಸಬಹುದು? ಮುಂತಾದ ಧನಾತ್ಮಕ ಚರ್ಚೆಗಳು ಇಂದು ನಡೆಯಬೇಕಾಗಿದೆ, ಆ ಮೂಲಕ ಮೊದಲು ಸರಕಾರಿ ಶಾಲೆಗಳನ್ನು ಉಳಿಸಿಕೊಳ್ಳುವ ಕೆಲಸ ಆಗಬೇಕಾಗಿದೆ.

ಸಂವಿಧಾನದ ಆಶಯದಂತೆ ನೋಡುವುದಾದರೆ ಹದಿನಾಲ್ಕು ವರ್ಷದೊಳಗಿನ ಎಲ್ಲಾ ಮಕ್ಕಳಿಗೂ ಶಿಕ್ಷಣವನ್ನು ಕಡ್ಡಾಯವಾಗಿ ಕಲ್ಪಿಸಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಪ್ರಾಥಮಿಕ ಶಿಕ್ಷಣವನ್ನು ಪಡೆಯುವುದು ಮಾನವ ಹಕ್ಕು ಎಂಬ ನಿಯಮವನ್ನು ಅಂಗೀಕರಿಸಿ ಸುಮಾರು 75 ವರ್ಷಗಳೇ ಆಗಿ ಹೋಗಿವೆ. ಈಗಲೂ ಕರ್ನಾಟಕದಲ್ಲಿ ಶಾಲೆಗೆ ಹೋಗುವ ವಯೋಮಾನದ ಸುಮಾರು 45,000ಕ್ಕೂ ಹೆಚ್ಚು ಮಕ್ಕಳು ಶಾಲೆಯ ಮುಖವನ್ನೇ ನೋಡಿಲ್ಲ. ಯುನೆಸ್ಕೋ ವರದಿಗಳ ಪ್ರಕಾರ ಭಾರತದಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳ ಸಂಖ್ಯೆ 20 ದಶಲಕ್ಷಕ್ಕೂ ಅಧಿಕ. ಪ್ರಾಥಮಿಕ ಶಿಕ್ಷಣ ಸಂಪೂರ್ಣವಾಗಿ ಉಚಿತ ಎಂದು ಹೇಳಲಾಗುತ್ತಿದ್ದರೂ ನೋಟ್ ಬುಕ್, ಲೇಖನ ಸಾಮಗ್ರಿ, ಸಂಚಾರ ಖರ್ಚುಗಳನ್ನು ಪೋಷಕರು ಅನಿವಾರ್ಯವಾಗಿ ನಿರ್ವಹಿಸಲೇಬೇಕಾಗಿದೆ. ಪ್ರಾಥಮಿಕ ಶಿಕ್ಷಣದಿಂದ ಮಕ್ಕಳು ಹೊರಗುಳಿಯಲು ಆರ್ಥಿಕ ಕಾರಣಗಳಲ್ಲದೆ ಸಾಮಾಜಿಕ ಕಾರಣಗಳೂ ಕಾರಣೀಭೂತವಾಗಿವೆ. ನಾಶವಾಗದ ಜಾತೀಯತೆಯಿಂದಾಗಿ ದಲಿತರ ಮಕ್ಕಳು ಶಾಲೆಯಿಂದ ಹೊರಗುಳಿಯುವಂತೆ ಮಾಡಿದೆ. ದಲಿತರ ಮಕ್ಕಳಿಗೆ ಸರಕಾರ ನೀಡುವ ಉಚಿತ ಸವಲತ್ತುಗಳನ್ನು ಕಂಡು ಇನ್ನೂ ಸಹಿಸಿಕೊಳ್ಳಲಾಗದ ಜನರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. 2021ರಲ್ಲಿ ಸರ್ವಶಿಕ್ಷಾ ಅಭಿಯಾನ ನಡೆಸಿದ ಸಮೀಕ್ಷೆಯಲ್ಲಿ 11ರಿಂದ 13 ವರ್ಷದ ಒಳಗಿನ ಮಕ್ಕಳಲ್ಲಿ ಶೇ.63ರಷ್ಟು ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆಂಬ ಆಘಾತಕಾರಿ ಅಂಶ ಹೊರಬಿದ್ದಿತ್ತು.

ಹೀಗೆ ಹೊರಗುಳಿದ ಮಕ್ಕಳಲ್ಲಿ ಶೇ.49ರಷ್ಟು ಮಕ್ಕಳು ದಲಿತ ವರ್ಗಕ್ಕೆ ಸೇರಿದ್ದರೆ, ಶೇ.48.9ರಷ್ಟು ಮಕ್ಕಳು ಇತರ ಹಿಂದುಳಿದ ವರ್ಗಗಳಿಗೆ ಮತ್ತು ಅಲ್ಪಸಂಖ್ಯಾತ ವರ್ಗಗಳಿಗೆ ಸೇರಿದವರಾಗಿದ್ದಾರೆ. ಹೀಗೆ ಶಾಲೆಯಿಂದ ಹೊರಗುಳಿದ ಮಕ್ಕಳ ಸಂಖ್ಯೆಯಲ್ಲಿ ಬೆಂಗಳೂರು ನಗರ ಜಿಲ್ಲೆ ಮೊದಲ ಸ್ಥಾನದಲ್ಲಿದ್ದರೆ ಕಲಬುರಗಿ ಜಿಲ್ಲೆ ಎರಡನೇ ಸ್ಥಾನದಲ್ಲಿತ್ತು. ಪೋಷಕರು ಖಾಸಗಿ ಮತ್ತು ಇಂಗ್ಲಿಷ್ ಮಾಧ್ಯಮ ಶಾಲೆಗಳ ಕಡೆ ಹೆಚ್ಚು ಒಲವು ತೋರುತ್ತಿರುವುದು ಮುಂದುವರಿದಿದೆ. ಮಕ್ಕಳನ್ನು ಸರಕಾರಿ ಶಾಲೆಗಳ ಕಡೆ ಆಕರ್ಷಿಸಲು ವಿಶೇಷ ಪ್ರಯುತ್ನಗಳು ನಡೆಯದೇ ಹೋದರೆ ಅಥವಾ ಸರಕಾರಿ ಶಾಲೆಗಳನ್ನು ಆಕರ್ಷಕ ಕೇಂದ್ರಗಳನ್ನಾಗಿ ಮಾಡದೇ ಹೋದರೆ ಈ ಪರಿಸ್ಥಿತಿಯನ್ನು ಬದಲಿಸುವುದು ಅಷ್ಟು ಸುಲಭ ಸಾಧ್ಯವಾದ ಕೆಲಸವಲ್ಲ. ಈ ನಿಟ್ಟಿನಲ್ಲಿ ತಮಿಳುನಾಡು ಇತರ ಎಲ್ಲಾ ರಾಜ್ಯಗಳಿಗೂ ಮಾದರಿಯಾಗಿದೆ. ಅಲ್ಲಿ ಇದೇ ವರ್ಷದ ಅಕ್ಟೋಬರ್ ತಿಂಗಳಿನಿಂದ 1ರಿಂದ 5ನೇ ತರಗತಿಯಲ್ಲಿ ಓದುತ್ತಿರುವ ಸರಕಾರಿ ಶಾಲೆಯ ಮಕ್ಕಳಿಗೆ ಮಧ್ಯಾಹ್ನದ ಊಟದ ಜೊತೆಗೆ ಬೆಳಗಿನ ಉಪಾಹಾರವನ್ನು ನೀಡುವ ಯೋಜನೆಯನ್ನು ಜಾರಿಗೆ ತರಲಾಗಿದೆ.

ಆ ಮೂಲಕ ಮಕ್ಕಳಿಗೆ ಬೆಳಗಿನ ಉಪಾಹಾರವನ್ನು ನೀಡುತ್ತಿರುವ ಭಾರತದ ಏಕೈಕ ರಾಜ್ಯ ತಮಿಳುನಾಡು ಎಂಬ ಕೀರ್ತಿಗೆ ಆ ರಾಜ್ಯ ಒಳಗಾಗಿದೆ. ಈ ಯೋಜನೆ ಜಾರಿಗೆ ಬಂದ ನಂತರ ಅಲ್ಲಿನ ಮಕ್ಕಳ ಶಾಲಾ ಹಾಜರಾತಿಯಲ್ಲಿ ಉತ್ತಮ ಬೆಳವಣಿಗೆ ಕಂಡುಬಂದಿದೆ. ತಮಿಳುನಾಡು ಜಾರಿಗೆ ತಂದಿರುವ ಈ ಯೋಜನೆ ಹಲವು ರೀತಿಯಿಂದ ಉಪಯುಕ್ತವಾಗಿದೆ. ಇಂದು ನಮಗೆ ಬೇಕಾಗಿರುವುದು ತಮಿಳುನಾಡಿನ ಮಾದರಿ. ಇಂದಿಗೂ ಗ್ರಾಮೀಣ ಪ್ರದೇಶದ ಹೆಚ್ಚಿನ ಮಕ್ಕಳು ಶಾಲೆಗೆ ಬರುವಾಗ ರಾತ್ರಿ ಮಾಡಿದ ಅಳಿದುಳಿದ ತಂಗಳು ತಿಂದು ಬರುತ್ತಾರೆ ಇಲ್ಲವೇ ಬೆಳಗಿನ ಉಪಾಹಾರ ಸೇವಿಸದೆ ಶಾಲೆಗೆ ಬರುವುದು ಸಾಮಾನ್ಯವಾದ ಸಂಗತಿಯಾಗಿದೆ. ಬೆಳಗಿನ ಉಪಾಹಾರವನ್ನು ನೀಡುವುದರಿಂದ ಶಾಲಾ ಹಾಜರಾತಿ ಸುಧಾರಿಸುವುದರ ಜೊತೆಗೆ ಮಕ್ಕಳ ಆರೋಗ್ಯ ಕೂಡ ಸುಧಾರಿಸುತ್ತದೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ.

ಸರಕಾರಿ ಶಾಲೆಗಳನ್ನು ಗುಣಮಟ್ಟದ ಶಾಲೆಗಳನ್ನಾಗಿ ಪರಿವರ್ತಿಸುವಲ್ಲಿ ಇದೊಂದು ಮಹತ್ವದ ಹೆಜ್ಜೆಯಾಗಿದೆ. ‘‘ಶಾಲೆಗಳಿಗೆ ಭೇಟಿ ನೀಡಿದ ವೇಳೆ ಹಲವು ಮಕ್ಕಳು ಉಪಾಹಾರ ಸೇವಿಸದೆ ಶಾಲೆಗೆ ಬರುವುದನ್ನು ಗಮನಿಸಿ ಈ ಯೋಜನೆ ಜಾರಿಗೆ ಮುಂದಾದೆ, ಈ ಯೋಜನೆಯನ್ನು ಉಚಿತ ಕೊಡುಗೆ, ಉದಾರವಾದ ಕಾರ್ಯ ಎಂದು ಯಾರು ಪರಿಗಣಿಸಬಾರದು’’ ಎಂದು ಬೆಳಗಿನ ಉಪಾಹಾರವನ್ನು ಜಾರಿಗೆ ತಂದ ದಿನ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಆಡಿದ ಮಾತುಗಳು ನಿಜಕ್ಕೂ ಗಮನಾರ್ಹವಾಗಿವೆ. 1955ರಲ್ಲಿ ಅಂದಿನ ಮುಖ್ಯಮಂತ್ರಿಗಳಾಗಿದ್ದ ಕೆ.ಕಾಮರಾಜ್ ತಮಿಳುನಾಡಿನಲ್ಲಿ ಮಧ್ಯಾಹ್ನದ ಬಿಸಿಯೂಟಕ್ಕೆ ಚಾಲನೆ ನೀಡಿದ್ದರು.

2019ರಲ್ಲಿ ಕರ್ನಾಟಕದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾಗಿದ್ದ ಸುರೇಶ್ ಕುಮಾರ್‌ರವರು ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ರಾಜ್ಯದ ಸರಕಾರಿ ಹಾಗೂ ಅನುದಾನಿತ ಶಾಲೆಯ ವಿದ್ಯಾರ್ಥಿಗಳಿಗೆ ಬೆಳಗಿನ ಉಪಾಹಾರ ನೀಡುವ ಯೋಜನೆಯನ್ನು ಜಾರಿಗೆ ತರಲಾಗುವುದು ಎಂದು ಹೇಳಿದ್ದರು. ಆದರೆ ಅದು ಕಾರ್ಯರೂಪಕ್ಕೆ ಬರಲಿಲ್ಲ. ಈ ಯೋಜನೆ ಜಾರಿಗೆ ಬಂದಿದ್ದರೆ ಇಂದು ಕರ್ನಾಟಕದ ಪ್ರಾಥಮಿಕ ಶಿಕ್ಷಣದ ಚಿತ್ರಣ ಬೇರೆಯೇ ಆಗಿರುತ್ತಿತ್ತು.

ಹಸಿವಿನ ಹೊಟ್ಟೆಗಳ ಕಿವಿಗಳಿಗೆ ಏನನ್ನೂ ಕೇಳಿಸಿಕೊಳ್ಳಲು ಸಾಧ್ಯವಿಲ್ಲ. ಇಂದು ನಮ್ಮ ಪ್ರಾಥಮಿಕ ಶಾಲೆಗಳ ಉಳಿವಿಗೆ ಬೇಕಾಗಿರುವುದು ಇಂತಹ ಯೋಜನೆಗಳು. ಇಂತಹ ಯೋಜನೆಗಳಿಗೆ ಒಂದಿಷ್ಟು ಹಣವನ್ನು ಮೀಸಲಿಡಬೇಕಾಗುವುದರಿಂದ ಆರ್ಥಿಕ ಹೊರೆ ಸಾಮಾನ್ಯ. ಆದರೆ ಇಂತಹ ಯೋಜನೆಗಳಿಂದ ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ನೀಡುವ ಮೂಲಕ ಸಾಮಾಜಿಕ ನ್ಯಾಯವನ್ನು ಒದಗಿಸಿದಂತಾಗುತ್ತದೆ. ಇನ್ನೂ ಕೆಲವರು ಮಧ್ಯಾಹ್ನದ ಊಟದ ಯೋಜನೆಯೇ ಸಮಸ್ಯೆಯಾಗಿರುವಾಗ ಬೆಳಗಿನ ಉಪಾಹಾರ ಯೋಜನೆಯನ್ನು ಜಾರಿಗೆ ತಂದರೆ ಮತ್ತಷ್ಟು ಸಮಸ್ಯೆಗಳು ಎದುರಾಗುತ್ತವೆ ಎಂದು ಹೇಳಬಹುದು. ಶಿಕ್ಷಕರು ಉಪಾಹಾರ ಮತ್ತು ಊಟದ ಉಸ್ತುವಾರಿಯಲ್ಲೇ ಕಾಲ ಕಳೆಯಬೇಕಾಗುತ್ತದೆ ಎಂಬ ಮಾತುಗಳು ಸಹಜ. ಎಲ್ಲಾ ಸಮಸ್ಯೆಗಳಿಗೂ ಪರಿಹಾರವಿದ್ದೇ ಇದೆ.

ಮಧ್ಯಾಹ್ನದ ಬಿಸಿಯೂಟದ ಕಾರ್ಯಚಟುವಟಿಕೆಗಳಿಂದ ಶಿಕ್ಷಕರನ್ನು ಹೊರಗಿಟ್ಟು ಈ ಜವಾಬ್ದಾರಿಯನ್ನು ಗ್ರಾಮಪಂಚಾಯತ್, ಸ್ಥಳೀಯ ಸಂಸ್ಥೆಗಳು, ಸರಕಾರೇತರ ಸಂಸ್ಥೆಗಳು ಅಥವಾ ಚಾರಿಟೆಬಲ್ ಟ್ರಸ್ಟ್‌ಗಳಿಗೆ ವಹಿಸಿಕೊಡಲು ವಿಪುಲ ಅವಕಾಶಗಳಿವೆ. ಹಾಗೆ ಮಾಡುವುದರಿಂದ ಶಿಕ್ಷಕರು ತಮ್ಮ ಬೋಧನಾ ಕಾರ್ಯವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಮಾಡಬಲ್ಲರು. ನಮ್ಮ ಸರಕಾರಿ ಶಾಲೆಗಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಕರಿದ್ದಾರೆ. ಅವರಿಂದಾಗಿಯೇ ಇಂದು ಸರಕಾರಿ ಶಾಲೆಗಳು ಉಳಿದುಕೊಂಡು ಮುನ್ನಡೆಯುತ್ತಿವೆ. ಪ್ರತೀ ವರ್ಷ ಶಾಲೆಗಳು ಆರಂಭವಾಗುವ ಮುನ್ನ ಮಕ್ಕಳನ್ನು ಸರಕಾರಿ ಶಾಲೆಗೆ ಸೇರಿಸುವಂತೆ ಸರಕಾರಿ ಶಾಲೆಗಳ ಶಿಕ್ಷಕರು ಪೋಷಕರ ಮನಒಲಿಸುವ ಕಾರ್ಯದಲ್ಲಿ ತೊಡಗುತ್ತಾರೆ. ಶಾಲೆಗಳಿಗೆ ಮಕ್ಕಳನ್ನು ದಾಖಲಿಸಿಕೊಳ್ಳಲು ಅವರ ಪರಿಪಾಡಲು ಅಷ್ಟಿಷ್ಟಲ್ಲ. ಕರ್ನಾಟಕದಲ್ಲಿ ಪ್ರಾಥಮಿಕ ಶಿಕ್ಷಣ ವ್ಯವಸ್ಥೆ ಆರಕ್ಕೇರದ ಮೂರಕ್ಕಿಳಿಯದ ಸ್ಥಿತಿಯಲ್ಲಿದೆ. ಕರ್ನಾಟಕದಲ್ಲಿ ಈಗಲೂ ಶಿಕ್ಷಣದ ಮೇಲೆ ಮಾಡುತ್ತಿರುವ ವೆಚ್ಚ ಜಿಡಿಪಿಯ ಶೇ.3.2ನ್ನು ದಾಟಿಲ್ಲ. ಕಳೆದ 75 ವರ್ಷಗಳಲ್ಲಿ ಕರ್ನಾಟಕದಲ್ಲಿ ಪ್ರಾಥಮಿಕ ಶಿಕ್ಷಣದಲ್ಲಿ ಸ್ವಲ್ಪಮಟ್ಟಿಗಿನ ಪ್ರಗತಿ ಉಂಟಾಗಿದ್ದರೂ ಸಮಸ್ಯೆಗಳ ಸರಪಳಿ ಬೆಳೆಯುತ್ತಲೇ ಇದೆ. ಈ ಸಮಸ್ಯೆಗಳಿಂದ ಪ್ರಾಥಮಿಕ ಶಿಕ್ಷಣ ಹೊರಬರಬೇಕೆಂದರೆ ಮೊದಲು ಶಿಕ್ಷಣಕ್ಕೆ ಮೀಸಲಿಡುವ ಜಿಡಿಪಿಯ ಪಾಲು ಮತ್ತಷ್ಟು ಹೆಚ್ಚಾಗಬೇಕಾಗಿದೆ.

Similar News