ಅಜಯ್ ದೇವಗನ್‌ರ ‘ಭುಜ್’ ಚಿತ್ರದ ಕಾನೂನುಬಾಹಿರ ಪ್ರಸಾರಕ್ಕೆ ಹೈಕೋರ್ಟ್ ತಡೆ

Update: 2022-11-17 18:30 GMT

ಹೊಸದಿಲ್ಲಿ, ನ. 17: ಅಜಯ್ ದೇವಗನ್ ನಟನೆಯ ‘ಭುಜ್: ದ ಪ್ರೈಡ್ ಆಫ್ ಇಂಡಿಯಾ’ ಚಿತ್ರವನ್ನು 700ಕ್ಕೂ ಅಧಿಕ ವೆಬ್‌ಸೈಟ್‌ಗಳು ಕಾನೂನು ಬಾಹಿರವಾಗಿ ಪ್ರಸಾರ ಮಾಡುವುದಕ್ಕೆ ದಿಲ್ಲಿ ಉಚ್ಚ ನ್ಯಾಯಾಲಯ ಶಾಶ್ವತ ತಡೆ ನೀಡಿದೆ. ಅಲ್ಲದೆ, ‘ಪುಂಡ’ ವೆಬ್‌ಸೈಟ್‌ಗಳನ್ನು ನಿರ್ಬಂಧಿಸುವ ತನ್ನ ಹಿಂದಿನ ಆದೇಶವನ್ನು ದೃಢಪಡಿಸಿದೆ. 

‘ಭುಜ್: ದ ಪ್ರೈಡ್ ಆಫ್ ಇಂಡಿಯಾ’ದ ಚಿತ್ರದ ನಕಲನ್ನು ಕಾನೂನು ಬಾಹಿರವಾಗಿ ಹಲವು ವೆಬ್‌ಸೈಟ್‌ಗಳಲ್ಲಿ ಪ್ರಸಾರ ಮಾಡುವುದನ್ನು ತಡೆಯುವಂತೆ ಚಿತ್ರದ ನಿರ್ಮಾಪಕರು ಸಲ್ಲಿಸಿದ ಅರ್ಜಿಯ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ಪ್ರತಿಭಾ ಎಂ. ಸಿಂಗ್ ಅವರು ಈ ಆದೇಶ ನೀಡಿದ್ದಾರೆ. 
ದೂರುದಾರರ  ಹಕ್ಕು ಸ್ವಾಮ್ಯ ಹಾಗೂ ಪ್ರಸಾರ ಮರು ಉತ್ಪಾದನೆ ಹಕ್ಕುಗಳನ್ನು ಉಲ್ಲಂಘಿಸಿ ಚಿತ್ರವನ್ನು ಪ್ರಸಾರ ಮಾಡುವ 42 ವೆಬ್‌ಸೈಟ್‌ಗಳಿಗೆ  ನಿರ್ಬಂಧ ವಿಧಿಸಿ ನ್ಯಾಯಾಲಯ ಆಗಸ್ಟ್‌ನಲ್ಲಿ ಮಧ್ಯಂತರ ತಡೆಯಾಜ್ಞೆ ನೀಡಿತ್ತು. 

‘‘ಎಲ್ಲ ಪುಂಡ ವೆಬ್‌ಸೈಟ್‌ಗಳ ವಿರುದ್ಧ ಶಾಶ್ವತ ತಡೆಯಾಜ್ಞೆ ನೀಡಲಾಗುವುದು.  ಪ್ರತಿವಾದಿ ಸಂಖ್ಯೆ 1ರಿಂದ 42 ಹಾಗೂ ತರುವಾಯ ಅಫಿಡಾವಿಟ್‌ನಲ್ಲಿ ಸೇರಿಸಲಾದ ಇತರ ಡೊಮೈನ್ ಹೆಸರುಗಳು ಸೇರಿ ಒಟ್ಟು 689 ಹೆಚ್ಚುವರಿ ವೆಬ್‌ಸೈಟ್‌ಗಳು/ಡೊಮೈನ್‌ಗಳು ಇವೆ’’ ಎಂದು ನ್ಯಾಯಾಲಯ ನವೆಂಬರ್ 14ರ ತನ್ನ ಆದೇಶದಲ್ಲಿ ತಿಳಿಸಿದೆ. 

Similar News