ಜೆಟ್‌ ಏರ್‌ವೇಸ್‌ ಉದ್ಯೋಗಿಗಳ ಸಂಬಳ ಕಡಿತ, ವೇತನ ರಹಿತ ರಜೆ: ವರದಿ

Update: 2022-11-19 11:08 GMT

ಹೊಸದಿಲ್ಲಿ: ಜೆಟ್ ಏರ್‌ವೇಸ್ ತನ್ನ ಮೂರನೇ ಒಂದು ಭಾಗದಷ್ಟು ಉದ್ಯೋಗಿಗಳನ್ನು ವೇತನವಿಲ್ಲದೆ ರಜೆಯ ಮೇಲೆ ಕಳುಹಿಸಲಿದೆ ಅಥವಾ ಅವರ ಸಂಬಳವನ್ನು 50% ರಷ್ಟು ಕಡಿತಗೊಳಿಸಲಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

2019 ರಲ್ಲಿ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿ ಮೂರು ವರ್ಷಗಳ ಕಾಲ ನೆನಗುದಿಯಲ್ಲಿದ್ದ ಏರ್‌ಲೈನ್ಸ್ ಗೆ ಈ ವರ್ಷದ ಮೇ ತಿಂಗಳಲ್ಲಿ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA) ವಾಣಿಜ್ಯ ವಿಮಾನಗಳನ್ನು ಪುನರಾರಂಭಿಸಲು ಪರವಾನಗಿಯನ್ನು ನೀಡಿತು.

ಏರ್‌ಲೈನ್‌ನ ಕೆಲವು ಉದ್ಯೋಗಿಗಳ ಪ್ರಕಾರ, 50% ಸಂಬಳ ಕಡಿತವು ಡಿಸೆಂಬರ್ 1 ರಿಂದ ಜಾರಿಗೆ ಬರಲಿದೆ.

ಏತನ್ಮಧ್ಯೆ, ಮೂರನೇ ಎರಡರಷ್ಟು ಸಿಬ್ಬಂದಿಗೆ ಈ ಕ್ರಮದಿಂದ ಪರಿಣಾಮ ಬೀರುವುದಿಲ್ಲ ಎಂದು ಏರ್‌ಲೈನ್ ಆಡಳಿತ ಹೇಳಿದೆ. ಉಳಿದ ಮೂರನೇ ಒಂದು ಭಾಗದಷ್ಟು ಉದ್ಯೋಗಿಗಳಿಗೆ, ಅವರ ವೇತನವನ್ನು ತಾತ್ಕಾಲಿಕವಾಗಿ ಕಡಿಮೆಗೊಳಿಸಲಾಗುವುದು ಎಂದು ಅದು ಹೇಳಿದೆ.

ಸಿಬ್ಬಂದಿಯ ಒಂದು ಸಣ್ಣ ಭಾಗಕ್ಕೆ ಮಾತ್ರ ವೇತನವಿಲ್ಲದೆ ರಜೆ ನೀಡಲಾಗುವುದು ಮತ್ತು ಯಾವುದೇ ನೌಕರನನ್ನು ವಜಾಗೊಳಿಸುವುದಿಲ್ಲ ಎಂದು ಆಡಳಿತವು ಹೇಳಿದೆ ಎಂದು ವರದಿ ಉಲ್ಲೇಖಿಸಿದೆ.

"... NCLT ಪ್ರಕ್ರಿಯೆಯ ಪ್ರಕಾರ ಕಂಪನಿಯ ಹಸ್ತಾಂತರಕ್ಕಾಗಿ ನಾವು ಕಾಯುತ್ತಿರುವಾಗ, ನಿರೀಕ್ಷಿತ ಸಮಯಕ್ಕಿಂತ ಹೆಚ್ಚಿನ ಸಮಯವನ್ನು ತೆಗೆದುಕೊಳ್ಳುವುದರಿಂದ ನಮ್ಮ ಹಣದ ಆಗುಹೋಗುಗಳನ್ನು ನಿರ್ವಹಿಸಲು ಕಷ್ಟಕರವಾದ ಕಾರಣ ಕೆಲವು ಅಗತ್ಯ ನಿರ್ಧಾರಗಳನ್ನು ಕೈಗೊಳ್ಳಬೇಕಾಗುತ್ತದೆ" ಎಂದು ಸಂಸ್ಥೆಯು ತಿಳಿಸಿದೆ.

Similar News