​ಚರಿತ್ರೆಯಲ್ಲಿ ಪುರಾವೆಯಿದೆ: ರಾಹುಲ್‌ ರನ್ನು ಸಮರ್ಥಿಸಿದ ಮಹಾತ್ಮಾ ಗಾಂಧಿ ಮರಿಮೊಮ್ಮಗ ತುಷಾರ್ ಗಾಂಧಿ

ಸಾವರ್ಕರ್ ವಿವಾದ

Update: 2022-11-19 12:24 GMT

ಮುಂಬೈ: ಮಹಾರಾಷ್ಟ್ರದಲ್ಲಿ ಸಾವರ್ಕರ್ ಕುರಿತು ತನ್ನ ವಿವಾದಾತ್ಮಕ ಹೇಳಿಕೆಗಳ ರಾಜಕೀಯ ಪರಿಣಾಮಗಳನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಈಗಲೂ ಎದುರಿಸುತ್ತಿದ್ದಾರೆ. ಆದಾಗ್ಯೂ ಶುಕ್ರವಾರ ಬುಲ್ಡಾಣಾ ಜಿಲ್ಲೆಯ ಶೇಗಾಂವ್‌ನಲ್ಲಿ ಭಾರತ ಜೋಡೊ ಯಾತ್ರೆಯ ಸಂದರ್ಭದಲ್ಲಿ ಮಹಾತ್ಮಾ ಗಾಂಧಿಯವರ ಮರಿಮೊಮ್ಮಗ ಹಾಗೂ ಸಾಮಾಜಿಕ ಕಾರ್ಯಕರ್ತ ತುಷಾರ ಗಾಂಧಿಯವರು ತನ್ನ ಜೊತೆಗೂಡಿದಾಗ ರಾಹುಲ್ ಬಲವಾದ ಸಂದೇಶವನ್ನು ರವಾನಿಸಿದ್ದಾರೆ.

ಈ ವಾರದ ಆರಂಭದಲ್ಲಿ ರಾಜಕೀಯ ಬಿರುಗಾಳಿಯನ್ನು ಸೃಷ್ಟಿಸಿದ ರಾಹುಲ್ ಹೇಳಿಕೆಗಳನ್ನು ಸಮರ್ಥಿಸಿಕೊಂಡ ತುಷಾರ ಗಾಂಧಿ,‘‘ವೀರ ಸಾವರ್ಕರ್ ಬ್ರಿಟಿಷರೊಂದಿಗೆ ಸ್ನೇಹ ಹೊಂದಿದ್ದರು ಎನ್ನುವುದು ನಿಜ. ಜೈಲಿನಿಂದ ಹೊರಬರಲು ಅವರು ಬ್ರಿಟಿಷರ ಕ್ಷಮೆ ಯಾಚಿಸಿದ್ದರು. ಅದು ಈ ‘ವಾಟ್ಸ್‌ಆ್ಯಪ್ ವಿವಿ’ಯಿಂದ ನಾವು ತೆಗೆದುಕೊಂಡಂತಲ್ಲ,ಅದಕ್ಕೆ ಚರಿತ್ರೆಯಲ್ಲಿ ಪುರಾವೆಯಿದೆ ’’ ಎಂದು ಹೇಳಿದರು.

 ಜವಾಹರಲಾಲ ನೆಹರು ಮತ್ತು ಮಹಾತ್ಮಾ ಗಾಂಧಿ ಹಾಗೂ ಅವರ ಮರಿಮೊಮ್ಮಕ್ಕಳ ಚಿತ್ರಗಳನ್ನು ಪಕ್ಕಪಕ್ಕದಲ್ಲಿ ಶೇರ್ ಮಾಡಿಕೊಳ್ಳುವ ಮೂಲಕ ಕಾಂಗ್ರೆಸ್ ಸ್ವಾತಂತ್ರ ಹೋರಾಟವನ್ನು ಹಾಲಿ ನಡೆಯುತ್ತಿರುವ ರಾಹುಲ್‌ರ ರಾಷ್ಟ್ರವ್ಯಾಪಿ ಭಾರತ ಜೋಡೊ ಯಾತ್ರೆಯೊಂದಿಗೆ ನೇರವಾಗಿ ಹೋಲಿಸಿದೆ.

ದೇಶವು ತೊಂದರೆಯಲ್ಲಿದ್ದಾಗ ಗಾಂಧಿ-ನೆಹರು ಜೊತೆಜೊತೆಯಾಗಿ ಹೊರಗೆ ಬರದಿರಲು ಸಾಧ್ಯವಿಲ್ಲ ಎಂದು ಟ್ವೀಟಿಸಿರುವ ಕಾಂಗ್ರೆಸ್,‘ಸ್ವಾತಂತ್ರ ಆಂದೋಲನದಿಂದ ಭಾರತವನ್ನು ಒಗ್ಗೂಡಿಸುವ ಆಂದೋಲನದವರೆಗಿನ ಪಯಣವು ಸಾಕ್ಷಿಯಾಗಿದೆ. ನಾವು ಆಗ ದೇಶಕ್ಕೆ ಸ್ವಾತಂತ್ರವನ್ನು ತಂದಿದ್ದೆವು ಮತ್ತು ಇಂದು ದೇಶವನ್ನು ಒಗ್ಗೂಡಿಸುತ್ತಿದ್ದೇವೆ ’ ಎಂದು ಹೇಳಿದೆ.

ಮಹಾರಾಷ್ಟ್ರದಲ್ಲಿ ಭಾರತ ಜೋಡೊ ಯಾತ್ರೆಯ ಕುರಿತು ಮಾತನಾಡಿದ ತುಷಾರ ಗಾಂಧಿ,‘ಯಾತ್ರೆಗಳು ಸಂಪ್ರದಾಯದ ಭಾಗವಾಗಿದ್ದು,ಈ ಎಲ್ಲ ವರ್ಷಗಳಲ್ಲಿ ಹಲವಾರು ಕ್ರಾಂತಿಗಳಿಗೆ ಜನ್ಮ ನೀಡಿವೆ. ಇಂದು ನಮ್ಮ ಪೂರ್ವಜರ ಪರಿಕಲ್ಪನೆಯ ವಿರುದ್ಧವಾಗಿ ದೇಶವು ಸಾಗುತ್ತಿರುವಾಗ ನಾವು ಪ್ರಯತ್ನವನ್ನು ಕೈಬಿಟ್ಟಿಲ್ಲ ಎನ್ನುವುದನ್ನು ಜನರು ಅರಿತುಕೊಳ್ಳುವುದು ಮುಖ್ಯವಾಗುತ್ತದೆ ’ ಎಂದರು.

Similar News