​ಕೋವಿಡ್ ವೇಳೆ ವಂಚನೆ, ಆರ್ಥಿಕ ಅಪರಾಧಗಳಿಂದ ಶೇ.40ರಷ್ಟು ಭಾರತೀಯ ಕಂಪನಿಗಳಿಗೆ ಭಾರೀ ನಷ್ಟ

Update: 2022-11-19 14:54 GMT

ಹೊಸದಿಲ್ಲಿ,ನ.19: ಕೋವಿಡ್ ಸಾಂಕ್ರಾಮಿಕವು ಉತ್ತುಂಗದಲ್ಲಿದ್ದಾಗ ಕಳೆದ 24 ತಿಂಳುಗಳಲ್ಲಿ ವಿವಿಧ ವಂಚನೆ ಮತ್ತು ಆರ್ಥಿಕ ಅಪರಾಧಗಳಿಂದಾಗಿ ಶೇ.40ರಷ್ಟು ಭಾರತೀಯ ಕಂಪನಿಗಳು 50,000 ಡಾ.(ಸುಮಾರು 40.76 ಲ.ರೂ.)ಗಳಿಂದ ಒಂದು ಲ.ಡಾ.(ಸುಮಾರು 81.52 ಲ.ರೂ)ವರೆಗೆ ನಷ್ಟವನ್ನು ಅನುಭವಿಸಿವೆ ಎನ್ನುವುದು ಪ್ರೈಸ್‌ವಾಟರ್‌ಹೌಸ್ ಕೂಪರ್ಸ್ (PWC) ನಡೆಸಿರುವ ಸಮೀಕ್ಷೆಯಲ್ಲಿ ಬೆಳಕಿಗೆ ಬಂದಿದೆ.

ಶೇ.17ರಷ್ಟು ಭಾರತೀಯ ಕಂಪನಿಗಳು 10 ಲ.ಡಾ.(ಸುಮಾರು 8.15 ಕೋ.ರೂ.)ಗಳಿಂದ 5 ಕೋ.ಡಾ.(ಸುಮಾರು 407.6 ಕೋ.ರೂ.)ವರೆಗೆ ಮತ್ತು ಶೇ.5ರಷ್ಟು ಕಂಪನಿಗಳು 5 ಕೋ.ಡಾ.ಗೂ ಅಧಿಕ ನಷ್ಟವನ್ನು ಅನುಭವಿಸಿವೆ ಎಂದು ಸಮೀಕ್ಷಾ ವರದಿಯು ತೋರಿಸಿದೆ.

ಸಮೀಕ್ಷೆಯ ಸಂದರ್ಭ ವಿಶ್ವಾದ್ಯಂತದ 1,296 ಕಂಪನಿಗಳ ಉತ್ತರಗಳನ್ನು ವರದಿಯು ಆಧರಿಸಿದೆ. ಈ ಪೈಕಿ ತಂತ್ರಜ್ಞಾನ,ಹಣಕಾಸು ಸೇವೆಗಳು,ಆರೋಗ್ಯ ಸೇವೆಗಳು,ಕೈಗಾರಿಕಾ ತಯಾರಿಕೆ,ಇಂಧನ ಇತ್ಯಾದಿ ಕ್ಷೇತ್ರಗಳಲ್ಲಿಯ 112 ಭಾರತೀಯ ಕಂಪನಿಗಳು ಸೇರಿದ್ದವು.
ಆದಾಗ್ಯೂ ಭರವಸೆಯೊಂದು ಮೂಡಿದೆ. ವಂಚನೆ ತಡೆಗಟ್ಟಲು ಕ್ರಮಗಳಿಂದಾಗಿ ವಂಚನೆಗಳಲ್ಲಿ ಇಳಿಕೆ ಕಂಡುಬಂದಿದೆ ಎಂದು ವರದಿಯು ತೋರಿಸಿದೆ. 2020ರ ಸಮೀಕ್ಷೆಯಲ್ಲಿ ಶೇ.69ರಷ್ಟು ಭಾರತೀಯ ಕಂಪನಿಗಳು ವಂಚನೆ ಮತ್ತು ಆರ್ಥಿಕ ಅಪರಾಧಗಳಿಂದಾಗಿ ನಷ್ಟವನ್ನು ಅನುಭವಿಸಿದ್ದರೆ,ಕಳೆದ 24 ತಿಂಗಳುಗಳಲ್ಲಿ ಇಂತಹ ಕಂಪನಿಗಳ ಸಂಖ್ಯೆ ಶೇ.52ಕ್ಕೆ ಇಳಿದಿದೆ ಎಂದು ಅದು ತಿಳಿಸಿದೆ.

Similar News