ಶಿವಾಜಿ ಕುರಿತು ವಿವಾದದ ನಡುವೆ ಏಕನಾಥ ಶಿಂಧೆ ‘ಸ್ವಾಭಿಮಾನ ’ವನ್ನು ಕೆಣಕಿದ ಸಂಜಯ್ ರಾವುತ್

Update: 2022-11-20 16:19 GMT

ಮುಂಬೈ,ನ.20: ಛತ್ರಪತಿ ಶಿವಾಜಿ ಮಹಾರಾಜರ ಕುರಿತು ‘ಹಳೆಯ ಐಕಾನ್ (ಆದರ್ಶ)’ ಎಂಬ ಹೇಳಿಕೆಗಾಗಿ ಮಹಾರಾಷ್ಟ್ರದ ರಾಜ್ಯಪಾಲ ಭಗತಸಿಂಗ್ ಕೋಶ್ಯಾರಿ ಅವರನ್ನು ವಜಾಗೊಳಿಸುವಂತೆ ಶಿವಸೇನೆ (ಉದ್ಧವ ಠಾಕ್ರೆ ಬಣ) ನಾಯಕ ಸಂಜಯ ರಾವುತ್ ರವಿವಾರ ಆಗ್ರಹಿಸಿದ್ದಾರೆ. ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ ಶಿಂದೆಯವರ ರಾಜೀನಾಮೆಗೂ ಅವರು ಆಗ್ರಹಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ರಾವುತ್,ಉದ್ಧವ ಠಾಕ್ರೆ ವಿರುದ್ಧ ಬಂಡೇಳುವಾಗ ಶಿಂದೆ ಉಲ್ಲೇಖಿಸಿದ್ದ ‘ಸ್ವಾಭಿಮಾನ’ ಅವರಲ್ಲಿದೆಯೇ ಎಂದು ಕೆಣಕಿದರು.

ಕೋಶ್ಯಾರಿ ಅವರು ಶನಿವಾರ ಶಿವಾಜಿ ಮಹಾರಾಜರನ್ನು ‘ಹಳೆಯ ಐಕಾನ್ ’ಎಂದು ಬಣ್ಣಿಸುವ ಮೂಲಕ ವಿವಾದವನ್ನು ಸೃಷ್ಟಿಸಿದ್ದರು.

ಈ ವಿಷಯದಲ್ಲಿ ಮೌನವಾಗಿರುವುದಕ್ಕಾಗಿ ಮಹಾರಾಷ್ಟ್ರ ಸರಕಾರವನ್ನು ತರಾಟೆಗೆತ್ತಿಕೊಂಡ ರಾವುತ್,ರಾಜ್ಯಪಾಲರು ಒಂದೇ ವರ್ಷದಲ್ಲಿ ನಾಲ್ಕು ಸಲ ಶಿವಾಜಿ ಮಹಾರಾಜರನ್ನು ಅವಮಾನಿಸಿದ್ದಾರೆ. ಆದರೂ ಸರಕಾರವು ವೌನವಾಗಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹಸಚಿವ ಅಮಿತ್ ಶಾ ಅವರು ಶಿವಾಜಿ ಮಹಾರಾಜರನ್ನು ಆದರ್ಶ ಪುರುಷ ಎಂದು ಪರಿಗಣಿಸಿದ್ದಾರೆ ಮತ್ತು ಅವರ ಅಧಿಕೃತ ವಕ್ತಾರರು ಶಿವಾಜಿ ಮಹಾರಾಜರು ಐದು ಸಲ ಔರಂಗಜೇಬ್‌ನ ಕ್ಷಮೆಯನ್ನು ಯಾಚಿಸಿದ್ದರು ಎಂದು ಹೇಳಿದ್ದಾರೆ. ಇದು ಬಿಜೆಪಿಯ ಅಧಿಕೃತ ನಿಲುವೇ? ಬಿಜೆಪಿಯು ಮಹಾರಾಷ್ಟ್ರದ ಕ್ಷಮೆಯನ್ನು ಯಾಚಿಸಬೇಕು ಮತ್ತು ತಕ್ಷಣ ರಾಜ್ಯಪಾಲರನ್ನು ವಜಾಗೊಳಿಸಬೇಕು ಎಂದು ಹೇಳಿದರು.

ಬಿಜೆಪಿಯು ಶಿವಾಜಿ ಮಹಾರಾಜರನ್ನು ಬಹಿರಂಗವಾಗಿ ಅವಮಾನಿಸಿದೆ ಎಂದು ಆರೋಪಿಸಿದ ಅವರು,ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಯುವಂತೆ ಶಿಂದೆಯವರನ್ನು ಆಗ್ರಹಿಸಿದರು.

ಸ್ವಾಭಿಮಾನದ ಘೋಷಣೆಯನ್ನು ನೀಡಿದ್ದ,ಶಿವಸೇನೆಯನ್ನು ಒಡೆದು ಬಿಜೆಪಿಯೊಂದಿಗೆ ಸರಕಾರವನ್ನು ರಚಿಸಿದ ಮುಖ್ಯಮಂತ್ರಿಗಳ ಸ್ವಾಭಿಮಾನ ಈಗ ಎಲ್ಲಿ ಹೋಗಿದೆ? ಅವರು ರಾಜೀನಾಮೆ ನೀಡಬೇಕು. ಮುಖ್ಯಮಂತ್ರಿಗಳಿಗೆ ಶಿವಾಜಿ ಮಹಾರಾಜರ ಬಗ್ಗೆ ಕಿಂಚಿತ್ತಾದರೂ ಗೌರವವಿದ್ದರೆ ಅವರನ್ನು ಅವಮಾನಿಸಿರುವ ಬಿಜೆಪಿಯೊಂದಿಗೆ ಸರಕಾರದಲ್ಲೇಕೆ ಇದ್ದಾರೆ ಎಂದು ರಾವುತ್ ಪ್ರಶ್ನಿಸಿದರು.

ಶನಿವಾರ ಬಿಜೆಪಿಯನ್ನು ಟೀಕಿಸಿದ್ದ ರಾವುತ್,ಅದು ಸಾವರ್ಕರ್ ಕುರಿತು ರಾಹುಲ್ ಗಾಂಧಿ ಹೇಳಿಕೆಯ ವಿರುದ್ಧ ಪ್ರತಿಭಟಿಸುತ್ತಿದೆ. ಈಗ ಅದು ಶಿವಾಜಿ ಮಹಾರಾಜರ ವಿರುದ್ಧ ಹೇಳಿಕೆ ಹೊರಬಿದ್ದ ರಾಜಭವನದ ವಿರುದ್ಧ ಪ್ರತಿಭಟಿಸಬೇಕು ಎಂದು ಹೇಳಿದ್ದರು.

ಶನಿವಾರ ಔರಂಗಾಬಾದ್‌ನ ಡಾ.ಬಾಬಾಸಾಹೇಬ ಅಂಬೇಡ್ಕರ್ ಮರಾಠವಾಡಾ ವಿವಿಯ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಕೋಶ್ಯಾರಿ,ಶಿವಾಜಿ ಮಹಾರಾಜರು ಹಳೆಯ ಐಕಾನ್ ಆಗಿದ್ದಾರೆ ಮತ್ತು ಬಾಬಾಸಾಹೇಬ್ ಅಂಬೇಡ್ಕರ್‌ರಿಂದ ಹಿಡಿದು ನಿತಿನ್ ಗಡ್ಕರಿವರೆಗೆ ಹಲವರಲ್ಲಿ ‘ಹೊಸ ಐಕಾನ್ ’ಗಳನ್ನು ಕಾಣಬಹುದು ಎಂದು ಹೇಳಿದ್ದರು.

ರಾಜ್ಯಪಾಲರ ಹೇಳಿಕೆಯನ್ನು ಖಂಡಿಸಿರುವ ಉದ್ಧವ ಠಾಕ್ರೆ ಬಣದ ವಕ್ತಾರ ಆನಂದ ದುಬೆ,‘ಛತ್ರಪತಿ ಶಿವಾಜಿ ಮಹಾರಾಜರು ನಮ್ಮ ಆರಾಧ್ಯ ದೈವ ಮಾತ್ರವಲ್ಲ,ಅವರು ನಮ್ಮ ಸ್ಫೂರ್ತಿಯ ಮೂಲವೂ ಆಗಿದ್ದಾರೆ. ಅವರು ಯಾವಾಗಲೂ ನಮ್ಮೆಲ್ಲರಿಗೆ ಆದರ್ಶವಾಗಿರುತ್ತಾರೆ. ರಾಜ್ಯಪಾಲರ ಹೇಳಿಕೆಗಳ ಪ್ರಕಾರ ಶ್ರೀರಾಮ ಮತ್ತು ಶ್ರೀಕೃಷ್ಣ ಕೂಡ ಈಗ ‘ಹಳೆಯ ಐಕಾನ್ ’ ಗಳಾಗಿದ್ದಾರೆ. ನಾವು ಪೂಜಿಸಲು ಹೊಸ ದೇವರುಗಳನ್ನು ಹುಡುಕಬೇಕೇ ಎಂದು ಪ್ರಶ್ನಿಸಿದ್ದಾರೆ.

Similar News