ಧಾರ್ಮಿಕ ಮೆರವಣಿಗೆ ವೇಳೆ ಟ್ರಕ್ ಹರಿದು 12 ಮಂದಿ ಸಾವು

Update: 2022-11-21 01:51 GMT

ಪಾಟ್ನಾ, 20 : ಧಾರ್ಮಿಕ ಮೆರವಣಿಗೆ ನಡೆಯುತ್ತಿದ್ದ ವೇಳೆ ವೇಗವಾಗಿ ಬಂದ ಟ್ರಕ್ ಡಿಕ್ಕಿ ಹೊಡೆದು 12 ಮಂದಿ ಮೃತಪಟ್ಟು ಇತರ ಹಲವು ಮಂದಿ ಗಾಯಗೊಂಡ ಧಾರುಣ ಘಟನೆ ಭಾನುವಾರ ರಾತ್ರಿ ಬಿಹಾರದ ವೈಶಾಲಿ ಜಿಲ್ಲೆಯ ನಯಾಗಂಜ್ ಎಂಬಲ್ಲಿ ನಡೆದಿದೆ. ಮೃತಪಟ್ಟವರಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದ್ದಾರೆ.

ರವಿವಾರ  ರಾತ್ರಿ 9 ಗಂಟೆ ಸುಮಾರಿಗೆ ಮಹನಾರ್-ಹಾಜಿಪುರ ಮುಖ್ಯರಸ್ತೆಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಸ್ಥಳೀಯರು ರಸ್ತೆ ಬದಿಯ ಮರದ ಅಡಿಯಲ್ಲಿ ಭುಯಿಯಾನ್ ಬಾಬಾ ಅವರ ಪೂಜೆಗಾಗಿ ಸೇರಿದ್ದರು. ಪ್ರಾರ್ಥನಾ ಸಭೆ ನಡೆಯುತ್ತಿದ್ದ ವೇಳೆ ನಿಯಂತ್ರಣ ತಪ್ಪಿದ ಲಾರಿ ರಸ್ತೆ ಬದಿ ನಿಂತಿದ್ದ ಜನರ ಮೇಳೆ ಹರಿದು ಮರವೊಂದಕ್ಕೆ ಡಿಕ್ಕಿ ಹೊಡೆದು ಮಗುಚಿ ಬಿತ್ತು ಎಂದು ಪೊಲೀಸರು ಹೇಳಿದ್ದಾರೆ.

ವೈಶಾಲಿ ಎಸ್ಪಿ ಮನೀಶ್ ಕುಮಾರ್ ಅವರು ಎಂಟು ಮಂದಿಯ ಸಾವನ್ನು ದೃಢಪಡಿಸಿದ್ದು, ಮೃತರಲ್ಲಿ ಬಹುತೇಕ ಮಂದಿ ಮಕ್ಕಳು ಎಂದು ಹೇಳಿದ್ದಾರೆ. "ಘಟನೆಯ ಸುದ್ದಿ ತಿಳಿಯುತ್ತಿದ್ದಂತೆಯೇ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗಳಿಗೆ ಕರೆದೊಯ್ಯಲಾಗಿದೆ. ಸ್ಥಳೀಯರ ನೆರವಿನಿಂದ ಪರಿಹಾರ ಕಾರ್ಯಾಚರಣೆ ನಡೆಸಲಾಯಿತು. ಘಟನೆ ಬಗ್ಗೆ ತನಿಖೆ ನಡೆಯುತ್ತಿದೆ" ಎಂದು ವಿವರಿಸಿದ್ದಾರೆ.

ನಯಾಗಂಗ್ ಟೋಲಾ ಬಳಿಯ ಆಲದ ಮರದ ಕೆಳಗೆ ರಸ್ತೆಬದಿಯಲ್ಲಿ ಪ್ರಾರ್ಥನೆ ಸಲ್ಲಿಸುವ ಸಲುವಾಗಿ ಬಹಳಷ್ಟು ಮಂದಿ ಸೇರಿದ್ದರು. ಮಹನಾರ್ ಕಡೆಗೆ ವೇಗವಾಗಿ ಚಲಿಸುತ್ತಿದ್ದ ಟ್ರಕ್ ಅವರ ಮೇಲೆ ಹರಿದು ಮರಕ್ಕೆ ಡಿಕ್ಕಿ ಹೊಡೆಯಿತು. ಆರೋಪಿ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ವಾಹನವನ್ನೂ ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮ್ ಮತ್ತು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಮಂದಿ ಗಣ್ಯರು ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿದ್ದು, ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ಮತ್ತು ಗಾಯಾಳುಗಳಿಗೆ 50 ಸಾವಿರ ರೂಪಾಯಿ ಪರಿಹಾರ ಘೋಷಿಸಿದ್ದಾರೆ

Similar News