ಟ್ಯಾಂಕರ್ ಢಿಕ್ಕಿ: 30 ಮಂದಿಗೆ ಗಾಯ, 48 ವಾಹನಗಳು ಜಖಂ

Update: 2022-11-21 02:22 GMT

ಪುಣೆ: ನಗರದ ಹೊರವಲಯದ ನವಲೆ ಸೇತುವೆ ಬಳಿ ಪುಣೆ- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ (Pune-Bengaluru Highway) ಟ್ಯಾಂಕರ್ ಹಲವು ವಾಹನಗಳಿಗೆ ಢಿಕ್ಕಿ ಹೊಡೆದು ಕನಿಷ್ಠ 30 ಮಂದಿ ಗಾಯಗೊಂಡಿದ್ದಾರೆ ಹಾಗೂ 48 ವಾಹನಗಳು ಜಖಂಗೊಂಡಿವೆ.

"ಪುಣೆ- ಬೆಂಗಳೂರು ಹೆದ್ದಾರಿಯ ನವಲೆ ಬ್ರಿಡ್ಜ್ ನಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ 48 ವಾಹನಗಳು ಜಖಂಗೊಂಡಿವೆ. ಪುಣೆ ಅಗ್ನಿಶಾಮಕ ಠಾಣೆಯ ಮತ್ತು ಪುಣೆ ಮೆಟ್ರೋಪಾಲಿಟನ್ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಪರಿಹಾರ ತಂಡಗಳು ಸ್ಥಳಕ್ಕೆ ಧಾವಿಸಿ ಪರಿಹಾರ ಕಾರ್ಯಾಚರಣೆ ನಡೆಸುತ್ತಿವೆ" ಎಂದು ಅಧಿಕಾರಿಗಳು ಹೇಳಿದ್ದಾರೆ.

ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ಟ್ಯಾಂಕರ್ ನ ಬ್ರೇಕ್‍ ವೈಫಲ್ಯದಿಂದಾಗಿ ಅದು ಹಲವು ವಾಹನಗಳಿಗೆ ಢಿಕ್ಕಿ ಹೊಡೆಯಿತು. ಅಪಘಾತ ರಾತ್ರಿ ಸುಮಾರು 9 ಗಂಟೆಯ ವೇಳೆಗೆ ಸಂಭವಿಸಿದ್ದು, ಟ್ಯಾಂಕರ್ ನಿಂದ ರಸ್ತೆಗೆ ತೈಲ ಸೋರಿಕೆಯಾಗಿ ಹಲವು ವಾಹನಗಳು ಅಪಘಾತಕ್ಕೀಡಾದವು. ಘಟನೆಯಿಂದಾಗಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದ್ದು, ಸುಮಾರು ಎರಡು ಕಿಲೋಮೀಟರ್ ದೂರದವರೆಗೆ ವಾಹನಗಳು ಸಾಲುಗಟ್ಟಿದ್ದವು ಎಂದು ಹೇಳಲಾಗಿದೆ.

ಹೊರವರ್ತುಲ ರಸ್ತೆಯ ನವಲೆ ಬ್ರಿಡ್ಜ್ ಅಪಘಾತಗಳ ತಾಣವಾಗುತ್ತಿದ್ದು, ಶುಕ್ರವಾರವಷ್ಟೇ ವೇಗವಾಗಿ ಬಂದ ಕಾರು ಢಿಕ್ಕಿ ಹೊಡೆದು ಮಹಿಳೆ ಮೃತಪಟ್ಟಿದ್ದರು. 

ಇದನ್ನೂ ಓದಿ: ಧಾರ್ಮಿಕ ಮೆರವಣಿಗೆ ವೇಳೆ ಟ್ರಕ್ ಹರಿದು 12 ಮಂದಿ ಸಾವು

Similar News