ಸಿದ್ದರಾಮಯ್ಯರ ಅಭಿಮಾನಿಗಳು ಮತ್ತು ಇಡಬ್ಲ್ಯೂಎಸ್ ಸಂತ್ರಸ್ತರು
ಸಿದ್ದರಾಮಯ್ಯ, ಜಸ್ಟಿಸ್ ನಾಗಮೋಹನ್‌ದಾಸ್, ಸತೀಶ್ ಜಾರಕಿಹೊಳಿ ಇವರೆಲ್ಲಾ ಹತ್ತಾರು ವರ್ಷಗಳಿಂದ ಬಾಯಿ ಬಡಿದು ಕೊಳ್ಳುತ್ತಿದ್ದದ್ದು ಇದನ್ನೇ. ‘ಏ ಶೂದ್ರರೇ ನಿಮ್ಮ ತಟ್ಟೆ ಜೋಪಾನ’ ಎಂದು ಎಚ್ಚರಿಸುತ್ತಿದ್ದರೂ ಎಚ್ಚೆತ್ತುಕೊಳ್ಳದ ಒಕ್ಕಲಿಗ, ಲಿಂಗಾಯತ, ಕುರುಬ ಮುಂತಾದ ಪ್ರಮುಖ ಶೂದ್ರ ಜಾತಿಯವರು ಈಗ ಶಿಕ್ಷಣ ಮತ್ತು ಸರಕಾರಿ ಉದ್ಯೋಗದ ತಮ್ಮ ಕೋಟಾವನ್ನು ಕಳೆದುಕೊಂಡು ಸಂತ್ರಸ್ತರಾಗಿದ್ದಾರೆ.
2022ರ ಜೂನ್ 26 ರಂದು ವಿಧಾನಸಭೆ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರ ಭಾಷಣ ದಾಖಲಾರ್ಹವಾದದ್ದು. ಇದು ಅರ್ಧ ಶತಮಾನದ ಸಿದ್ದರಾಮಯ್ಯ ಅವರ ಮಾತು ಮತ್ತು ಭಾಷಣ ಗಳಲ್ಲೇ ಮಹತ್ವವಾದದ್ದು. ಭಾರತೀಯ ಸಂವಿಧಾನದ ಪೀಠಿಕೆಯನ್ನು ಓದದವರು ಈ ಭಾಷಣವನ್ನಾದರೂ ಕೇಳಿಸಿಕೊಳ್ಳಬೇಕು.
ಅವತ್ತು ನಿವೃತ್ತ ನ್ಯಾಯಮೂರ್ತಿ ನಾಗಮೋಹನ್‌ದಾಸ್ ಅವರ ‘ಮೀಸಲಾತಿ: ಭ್ರಮೆ-ವಾಸ್ತವ’ ಪುಸ್ತಕದ ಬಿಡುಗಡೆ ಕಾರ್ಯಕ್ರಮ. ತಮ್ಮ 20 ನಿಮಿಷಗಳ ಭಾಷಣದಲ್ಲಿ ಚತುರ್ವರ್ಣ ವ್ಯವಸ್ಥೆಯಲ್ಲಿ ಬ್ರಾಹ್ಮಣರು, ಕ್ಷತ್ರಿಯರು ಮತ್ತು ವೈಶ್ಯರಿಗೆ ಓದಲು-ಸಂಪತ್ತನ್ನು ಅನುಭವಿಸಲು, ಅಧಿಕಾರ ನಡೆಸಲು ಅವಕಾಶವಿತ್ತು. ಇದು ಮೀಸಲಾತಿ ಅಲ್ಲವೇ? ಬಹುಸಂಖ್ಯಾತ ಶೂದ್ರರನ್ನು ಅಕ್ಷರ ಸಂಸ್ಕೃತಿಯಿಂದ ವಂಚಿಸಿ, ಶೂದ್ರರು ತಾವೇ ಉತ್ಪಾದಿಸಿದ ಸಂಪತ್ತನ್ನು-ಬೆಳೆದ ಬೆಳೆಯನ್ನು ಅನುಭವಿಸಲು ಅವಕಾಶ ನೀಡದೇ ಇದ್ದದ್ದು ಅನ್ಯಾಯ ಅಲ್ಲವೇ ಎಂದು ಪ್ರಶ್ನಿಸಿದ್ದು ಮಾತ್ರವಲ್ಲದೆ ಈ ಹೊತ್ತಿನ ಹಲವು ಸಾಮಾಜಿಕ ಸಂಕಷ್ಟಗಳ ಮೂಲವನ್ನು ಕೆದಕಿದ್ದರು.
ಭಾರತದ ಮೇಲೆ ನಡೆದ ಚತುರ್ವರ್ಣದ ದಾಳಿ, ಸಹಸ್ರಾರು ವರ್ಷಗಳಿಂದ ಆಚರಿಸಲ್ಪಡುತ್ತಿರುವ ತಾರತಮ್ಯದ ಪಾಂಡಿತ್ಯ, ಇದರಿಂದ ನಿತ್ಯ ಈ ನೆಲದಲ್ಲಿ ಆಗುತ್ತಿರುವ ಅನಾಹುತಗಳನ್ನು ಅವತ್ತಿನ ಕಾರ್ಯಕ್ರಮದಲ್ಲಿ ಮಾತನಾಡಿದವರೆಲ್ಲಾ ಪ್ರಸ್ತಾಪಿಸಿದ್ದರು. ಖ್ಯಾತ ಸಂಗೀತ ನಿರ್ದೇಶಕ ನಾದಬ್ರಹ್ಮ ಹಂಸಲೇಖ ಅವರು ತಮ್ಮ ಮಾತಿನಲ್ಲಿ, ನಮ್ಮ ಮನೆಯ ಕೀಯನ್ನು ಬೇರೆಯವರಿಗೆ ನೀಡಿ ನಾವು ಮನೆ ಕಾಯುವ ಗುಲಾಮರಾಗಿದ್ದೀವಿ ಎಂದು ಮಾರ್ಮಿಕವಾಗಿ ನುಡಿದಿದ್ದರು. ಸಾಮಾಜಿಕ ನ್ಯಾಯಕ್ಕಾಗಿ ಶತಮಾನದಿಂದ ನಡೆಯುತ್ತಿರುವ ಹೋರಾಟದ ತೇರನ್ನು ಕರ್ನಾಟಕದ ಮಟ್ಟಿಗೆ ಮುನ್ನಡೆಸುತ್ತಿರುವ ರಾಜಕೀಯ ನಾಯಕರಲ್ಲಿ ಸಿದ್ದರಾಮಯ್ಯ ಕೂಡ ಒಬ್ಬರು.
ಅದು ವಿಧಾನಸಭೆ ಅಧಿವೇಶನವೇ ಇರಲಿ, ಸಾರ್ವಜನಿಕ ಚರ್ಚೆ ಗಳೇ ಇರಬಹುದು. 13 ಬಜೆಟ್‌ಗಳನ್ನು ಮಂಡಿಸಿದ ಸಿದ್ದರಾಮಯ್ಯ ಅವರ ಇಡೀ ಸಾಮರ್ಥ್ಯವನ್ನು ಕೇವಲ ಹಿಂದೂ-ಮುಸ್ಲಿಮ್ ವಿವಾದಗಳ ಸುತ್ತಲೇ ಕಟ್ಟಿ ಹಾಕಲು ಬಿಜೆಪಿ ಪರಿವಾರ ನಿರಂತರ ಯತ್ನಿಸುತ್ತಲೇ ಇರುತ್ತದೆ. ಕಾಂಗ್ರೆಸ್‌ನಲ್ಲಿ ಸೈದ್ಧಾಂತಿಕ ಸ್ಪಷ್ಟತೆ ಇರುವವರು ಕಡಿಮೆ. ಅದರಲ್ಲೂ ಅಷ್ಟೇ ಸ್ಪಷ್ಟವಾಗಿ ಮತ್ತು ನಿಷ್ಠುರವಾಗಿ ಅದನ್ನು ವ್ಯಕ್ತಪಡಿಸುವವರು ಇನ್ನೂ ಕಡಿಮೆ. ಸಿದ್ದರಾಮಯ್ಯ ಅವರು ಆರ್ಥಿಕ ಅಸಮಾನತೆ, ಜಾತಿ-ತಾರತಮ್ಯ, ಜಾತಿಗಣತಿ, ಸಾಮಾಜಿಕ ನ್ಯಾಯ, ಶೂದ್ರ-ದ್ರಾವಿಡ ಸಂಸ್ಕಾರಗಳ ಮೇಲೆ ನಡೆಯುತ್ತಿರುವ ದಾಳಿ ಇತ್ಯಾದಿಗಳ ವಿಚಾರಗಳನ್ನು ಪ್ರಸ್ತಾಪಿಸಿದಂತೆಲ್ಲಾ ಒಂದಲ್ಲಾ ಒಂದು ವಿವಾದಗಳಲ್ಲಿ ಅವರನ್ನು ಸಿಲುಕಿಸುವ ಯತ್ನವನ್ನು ಬಿಜೆಪಿ ನಾಜೂಕಾಗಿ ಮಾಡುತ್ತಲೇ ಬರುತ್ತಿದೆ. ಇದರ ಹಿಂದೆ ಸಿದ್ದರಾಮಯ್ಯ ಅವರನ್ನು ಒಂಟಿಯನ್ನಾಗಿಸುವ ಹುನ್ನಾರವೂ ಇದೆ. ಇದನ್ನು ಸಿದ್ದರಾಮಯ್ಯ ಅವರು ಜೂನ್ 26ರ ಭಾಷಣದಲ್ಲಿ ನೇರವಾಗಿ ವ್ಯಕ್ತಪಡಿಸಿದ್ದರು.
‘‘ನಾನು ಒಬ್ಬ ಮಾತನಾಡಿದರೆ ಬಿಜೆಪಿಯ 20 ಮಂದಿ ಮೇಲೆ ಬೀಳ್ತಾರೆ. ನಮ್ಮವರು ಮಾತ್ರ ಯಾರೂ ಮಾತನಾಡಲ್ಲ’’ ಎಂದು ನೇರವಾಗಿ ಹೇಳಿದ್ದರು. ನಮ್ಮವರು ಎಂದು ಸಿದ್ದರಾಮಯ್ಯ ಅವರು ಪ್ರಸ್ತಾಪಿಸಿದ್ದರಲ್ಲಿ ಪಕ್ಷದ ಇತರ ನಾಯಕರು, ಸಿದ್ದರಾಮಯ್ಯ ಅವರಿಗಾಗಿ ಪ್ರಾಣ ಬೇಕಾದರೂ ಕೊಡುತ್ತೀವಿ ಎಂದು ಬಿಂಬಿಸಿಕೊಂಡ ಅಭಿಮಾನಿಗಳೂ ಇರಬಹುದು. ಇವರು ಪ್ರಾಣ ಕೊಡುವುದಿರಲಿ ಅಗತ್ಯ ಬಿದ್ದಾಗ ತಮ್ಮನ್ನು ಬೆಂಬಲಿಸಿ ಒಂದು ಹೇಳಿಕೆಯನ್ನೂ ಕೊಡುವುದಿಲ್ಲ ಎನ್ನುವುದು ಸಿದ್ದರಾಮಯ್ಯ ಅವರಿಗೂ ಮನದಟ್ಟಾಗಿದೆ.
ಸಿದ್ದರಾಮಯ್ಯ ಅವರ ವಿಚಾರದಲ್ಲಿ ಆಗಿದ್ದೇ ಇತ್ತೀಚೆಗೆ ಸತೀಶ್ ಜಾರಕಿಹೊಳಿ ಅವರ ವಿಚಾರದಲ್ಲೂ ಆಗಿದೆ. ಹಿಂದೂ ಪದ ಪರ್ಷಿಯನ್ ಮೂಲದ್ದು ಎಂದು ಸತೀಶ್ ಜಾರಕಿಹೊಳಿ ಅವರು ಹೇಳಿದಾಗ ಇವರ ಪರವಾಗಿ ನಿಂತವರು ಬಹಳ ಕಡಿಮೆ. ಸತೀಶ್ ಜಾರಕಿಹೊಳಿ ಅವರು ಹೇಳಿದ ಮಾತನ್ನೇ ಇದುವರೆಗೂ ನೂರಾರು ಮಂದಿ ಹೇಳಿದ್ದಾರೆ. ಆ ಬಗ್ಗೆ ನೂರಾರು ಚರ್ಚೆಗಳೂ ಆಗಿವೆ. ಆದರೂ ಸತೀಶ್ ಜಾರಕಿಹೊಳಿಯವರು ಆ ಮಾತನ್ನು ಪ್ರಸ್ತಾಪಿಸಿದ ತಕ್ಷಣ ಅದನ್ನು ವಿವಾದವನ್ನಾಗಿಸಲಾಯಿತು. ಜಾರಕಿಹೊಳಿಯವರು ಹೆಚ್ಚೂ ಕಡಿಮೆ ಒಂಟಿಯಾದರು.
ನಾರಾಯಣ ಗುರುಗಳಿಗೆ ಕೇಂದ್ರ ಸರಕಾರ ಮತ್ತು ಬಿಜೆಪಿ ಪರಿವಾರ ಅವಮಾನಿಸಿದಾಗ ಈ ಬಗ್ಗೆ ನಿಷ್ಠುರವಾಗಿ ಮಾತನಾಡಿದ ಬಿ.ಕೆ.ಹರಿಪ್ರಸಾದ್ ಅವರನ್ನೂ ಹೀಗೇ ಪ್ರತ್ಯೇಕಗೊಳಿಸಲಾಗಿತ್ತು.
ನಿವೃತ್ತ ನ್ಯಾಯಮೂರ್ತಿ ನಾಗಮೋಹನ್‌ದಾಸ್ ಅವರ ವಿಚಾರದಲ್ಲೂ ಇದೇ ಆಯಿತು. ಪರಿಶಿಷ್ಟ ಜಾತಿ-ಪಂಗಡದವರ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಬೇಕೇ ಎಂದು ವರದಿ ನೀಡಲು ನಾಗಮೋಹನ್‌ದಾಸ್ ಅವರ ನೇತೃತ್ವದಲ್ಲಿ ಸಮಿತಿಯನ್ನು ರಚಿಸಲಾಗಿತ್ತು. ಮುಖ್ಯಮಂತ್ರಿ ಬೊಮ್ಮಾಯಿ ಅವರ ಸರಕಾರ ನಾಗಮೋಹನ್‌ದಾಸ್ ಅವರ ವರದಿಯನ್ನು ಇಡಿ ಇಡಿಯಾಗಿ ಒಪ್ಪಿಕೊಂಡಿತು ಮತ್ತು ಮೀಸಲಾತಿ ಪ್ರಮಾಣವನ್ನು ಸುಗ್ರೀವಾಜ್ಞೆ ಮೂಲಕ ಜಾರಿ ಮಾಡಿತು.
ಹೀಗೆ ಜಾರಿ ಮಾಡಿದ ಕೆಲವೇ ದಿನಗಳಲ್ಲಿ ಬಿಜೆಪಿ ಪರಿವಾರದ ಶಾಮಿಯಾನದ ಅಡಿಯಲ್ಲೇ ಇರುವ ಮತ್ತೊಂದು ಸಂಘಟನೆ ನಾಗಮೋಹನ್‌ದಾಸ್ ಅವರನ್ನು ಹಿಂದೂ ವಿರೋಧಿ, ದೇಶದ್ರೋಹಿ ಎಂದು ಕರೆದು ಪರೋಕ್ಷವಾಗಿ ಜೀವ ಬೆದರಿಕೆಯನ್ನೂ ಹಾಕಿತು. ಹೀಗೆ ಕರೆದಾಗಲೂ ನಾಗಮೋಹನ್‌ದಾಸ್ ಪರವಾಗಿ ಯಾರೂ ಹೇಳಿಕೆ ನೀಡಲಿಲ್ಲ. ಇವರೂ ಒಂಟಿಯಾದರು.
ಎಂ.ಎಂ.ಕಲಬುರ್ಗಿ, ಗೌರಿ ಲಂಕೇಶ್, ಪನ್ಸಾರೆ, ದಾಭೋಲ್ಕರ್ ಅವರಂತಹ ಸೈದ್ಧಾಂತಿಕ ಶೂದ್ರ ಸೇನಾನಿಗಳನ್ನು ಹತ್ಯೆ ಮಾಡುವಾಗಲೂ ಹೀಗೇ ಇವರನ್ನು ಹಿಂದೂ ವಿರೋಧಿ, ದೇಶದ್ರೋಹಿಗಳು ಎಂದು ಬ್ರಾಂಡ್ ಮಾಡುವ ಪಿತೂರಿ ಪಾಂಡಿತ್ಯ ನಡೆದಿತ್ತು ಎನ್ನುವುದನ್ನು ನೆನಪು ಮಾಡಿಕೊಳ್ಳಬೇಕು.
ಸಿದ್ದರಾಮಯ್ಯ, ಸತೀಶ್ ಜಾರಕಿಹೊಳಿ, ಬಿ.ಕೆ.ಹರಿಪ್ರಸಾದ್, ನಾಗಮೋಹನ್‌ದಾಸ್ ಇವರೆಲ್ಲರೂ ನಿಜವಾಗಿ ಬಹುಸಂಖ್ಯಾತ ಹಿಂದೂಗಳ ಪರವಾಗಿ ಅರ್ಧ ಶತಮಾನದಿಂದ ಹೋರಾಡುತ್ತಿದ್ದಾರೆ. ಹಿಂದೂ ಬ್ಯಾನರ್‌ನ ಅಡಿಯಲ್ಲಿ ಇರುವ ಶೇ.85ರಷ್ಟು ಬಹುಜನರ ಪರವಾಗಿ ಇವರು ನಿರಂತರವಾಗಿ ಧ್ವನಿ ಎತ್ತುತ್ತಿದ್ದಾರೆ.
ಚತುರ್ವರ್ಣದ ತಾರತಮ್ಯವನ್ನು, ಜಾತಿ ಶ್ರೇಷ್ಠತೆಯ ವ್ಯಸನವನ್ನು ಪ್ರಶ್ನಿಸಿದವರನ್ನೆಲ್ಲಾ ರಾಕ್ಷಸರನ್ನಾಗಿಸುವ, ವಿಲನ್‌ಗಳನ್ನಾಗಿಸುವ ಪಿತೂರಿ ಪಾಂಡಿತ್ಯ ಪುರಾಣ, ಚರಿತ್ರೆಯುದ್ದಕ್ಕೂ ನಡೆಯುತ್ತಿದೆ. ರಾಜ ಪಂಡಿತರಾಗಿ, ರಾಜ ಮಹರ್ಷಿಗಳಾಗಿ ಅಧಿಕಾರದ ಅಕ್ಕ ಪಕ್ಕ ನುಸುಳಿದವರೆಲ್ಲಾ ಚತುರ್ವರ್ಣ ವ್ಯವಸ್ಥೆಯನ್ನು ಕಾಪಾಡುವುದೇ ರಾಜಧರ್ಮ ಎಂದು ರಾಜರುಗಳನ್ನು ನಂಬಿಸಿ ಅದನ್ನು ಪಾಲಿಸುವಂತೆ ಮಾಡಿದ್ದರು.
ಈ ಕಾರಣಕ್ಕೇ ಚತುರ್ವರ್ಣ ವ್ಯವಸ್ಥೆಯನ್ನು ಧಿಕ್ಕರಿಸಿ ದುರ್ಯೋಧನ ಬೆಸ್ತನಾಗಿದ್ದ ಕರ್ಣನಿಗೆ ರಾಜಾಶ್ರಯ ನೀಡಿ ಕೆಟ್ಟವನಾದ, ಚತುರ್ವರ್ಣ ವ್ಯವಸ್ಥೆಗೆ ವಿರುದ್ಧವಾಗಿ ಶಿವನನ್ನು ಪೂಜಿಸಿ ತಪಸ್ಸು ಮಾಡಿದ ಶಂಬೂಕ ಮಹರ್ಷಿ ಮತ್ತು ಮಾತಂಗ ಮಹರ್ಷಿಗಳ ಹತ್ಯೆ ನಡೆಯಿತು. ಜಾತಿ ಶ್ರೇಷ್ಠತೆಯ ವ್ಯಸನದ ಬೇರುಗಳಿಗೆ ಬೆಂಕಿ ಕಾಯಿಸಿದ ಬಸವಣ್ಣ ಮತ್ತು ಕನಕದಾಸರು ಏನೇನು ಅನುಭವಿಸಿದರು ಎನ್ನುವುದನ್ನು ಬಹಿರಂಗ ಚರ್ಚೆ ನಡೆಸುವುದೂ ಸಾಧ್ಯವಿಲ್ಲದಷ್ಟು ಬೆದರಿಕೆಯ ವಾತಾವರಣವನ್ನು ಸೃಷ್ಟಿಸಲಾಗಿದೆ.
ಬ್ರಿಟಿಷರು ಈ ಜಾತಿ ವ್ಯವಸ್ಥೆಯನ್ನು ಪ್ರಶ್ನಿಸದೆ, ಜಾತಿ ಶ್ರೇಷ್ಠತೆಯ ವ್ಯಸನವನ್ನು ಕಾಪಾಡಿದ್ದರಿಂದಲೇ 400 ವರ್ಷಗಳ ಕಾಲ ಭಾರತವನ್ನು ಸುಗಮವಾಗಿ ಆಳಲು ಸಾಧ್ಯವಾಯಿತು. ಬ್ರಿಟಿಷರಿಗೆ ಭಾಷಾಂತರಕಾರರಾಗಿ, ನ್ಯಾಯ ಪಂಡಿತರಾಗಿ, ಆಸ್ಥಾನ ಪಂಡಿತರಾಗಿ, ದಿವಾನರಾಗಿ ನಿಷ್ಠೆ ತೋರಿಸಿ ಸೇವೆ ಸಲ್ಲಿಸಿದವರೆಲ್ಲರೂ ಜಾತಿ ವ್ಯವಸ್ಥೆ ವಿರುದ್ಧ ಬ್ರಿಟಿಷರು ಹೋಗದಂತೆ ನೋಡಿಕೊಂಡರು. ಬ್ರಿಟಿಷರಿಗೆ ನಿಷ್ಠೆ ತೋರಿಸಿದ ಪಂಡಿತರಂತೆ ಮೊಗಲ್ ದೊರೆಗಳಿಗೆ ನಿಷ್ಠೆ ತೋರಿಸಿದ ಪಂಡಿತ ವರ್ಗವೂ ಬಹಳ ದೊಡ್ಡದಿದೆ.
ಮೊಗಲ್ ದೊರೆಗಳಾದ ಅಕ್ಬರ್ ಮತ್ತು ಔರಂಗಜೇಬ್‌ಗೆ ನಿಷ್ಠೆ ತೋರಿದ್ದ ಪಂಡಿತ ವರ್ಗ ಈ ಇಬ್ಬರೂ ಬಾದ್‌ಷಾಗಳು ಜಾತಿ ವ್ಯವಸ್ಥೆ ವಿರುದ್ಧ ಹೋಗದಂತೆ ತಡೆಯುವಲ್ಲಿ ಯಶಸ್ವಿಯಾಗಿದ್ದರು. ಈ ಕಾರಣಕ್ಕೇ ಇದುವರೆಗೂ ಈ ಇಬ್ಬರೂ ವಿಲನ್‌ಗಳಾಗಿಲ್ಲ. ಆದರೆ ಟಿಪ್ಪು ಸುಲ್ತಾನ್ ಸ್ತನ ತೆರಿಗೆಯನ್ನು ರದ್ದುಗೊಳಿಸಿದ. ಎಲ್ಲಾ ಸಾಮ್ರಾಟರಂತೆ ಬ್ರಿಟಿಷ್ ಪರವಾಗಿದ್ದವರ ಮತ್ತು ತನ್ನ ಶತ್ರುಗಳ ವಿಚಾರದಲ್ಲಿ ಬಹಳ ಕ್ರೂರಿ ಆಗಿದ್ದ ಟಿಪ್ಪು ಜಾತಿ ತಾರತಮ್ಯದ ವಿರುದ್ಧವೂ ಅಷ್ಟೇ ಕ್ರೂರಿಯಾಗಿದ್ದ. ಟಿಪ್ಪುವನ್ನು ವಿಲನ್‌ನಂತೆ ಬಿಂಬಿಸುತ್ತಿರುವುದಕ್ಕೆ ಇರುವ ಕಾರಣ ಇದೊಂದೆ. ಇದನ್ನು ನೇರವಾಗಿ ಹೇಳಲಾಗದೆ ಸುಳ್ಳು ಕತೆಗಳನ್ನು ಹೊಸೆಯುತ್ತಿದ್ದಾರೆ ಅಷ್ಟೆ. ಜಾತಿ ತಾರತಮ್ಯಕ್ಕೆ ಬಲಿಯಾಗಿ ಅವಮಾನಗಳನ್ನು ಎದುರಿಸಿದ್ದ ಸಾಮ್ರಾಟ ಶಿವಾಜಿ ತಮ್ಮನ್ನು ಅವಮಾನಿಸಿದ ಜಾತಿ ತಾರತಮ್ಯದ ವಿರುದ್ಧ ಟಿಪ್ಪುವಿನಷ್ಟೇ ನಿಷ್ಠುರವಾಗಿ ವರ್ತಿಸಿದ್ದರೆ ಇವರನ್ನೂ ವಿಲನ್ ಆಗಿಸುವ ಸಂಚು ನಡೆಯುತ್ತಿರಲಿಲ್ಲವೇ?
ಹೀಗೆ ಪುರಾಣ ಮತ್ತು ಚರಿತ್ರೆಯುದ್ದಕ್ಕೂ ಶೇ.85ರಷ್ಟಿರುವ ಬಹುಜನ ಹಿಂದೂಗಳ ಪರವಾಗಿ ಹೋರಾಡಿದವರು, ಮಾತನಾಡಿದವರೆಲ್ಲರೂ ವಿಲನ್‌ಗಳಾಗಿ ದಾಖಲಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಈಗಲೂ ಭಾರತದ ಸಮಾಜವನ್ನು ಹಿಂಡುತ್ತಿರುವ ಜಾತಿ ವ್ಯವಸ್ಥೆ ವಿರುದ್ಧ ಅಪ್ಪಿ ತಪ್ಪಿ ಒಂದೇ ಒಂದು ಮಾತಾಡಿದರೆ ಆ ಕ್ಷಣದಿಂದಲೇ ಅವರ ಪತನಕ್ಕೆ ಅವರ ನೆರಳಲ್ಲಿ ಅನ್ನ ಉಂಡವರೇ ಮುನ್ನುಡಿ ಬರೆಯುತ್ತಾರೆ ಎನ್ನುವುದು ಇತಿಹಾಸ ಕಲಿಸಿಕೊಟ್ಟಿರುವ ಪಾಠ. ಈ ಉಂಡ ಮನೆಗೆ ದ್ರೋಹ ಬಗೆಯುವ ಪಾಂಡಿತ್ಯದ ಪರಿಣಾಮ ಇಡಬ್ಲ್ಯೂಎಸ್ ವಿಚಾರದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ.
ಮೀಸಲಾತಿಯನ್ನು ಮುಂದಿಟ್ಟುಕೊಂಡು ದಲಿತರ ವಿರುದ್ಧ ನಿರಂತರವಾಗಿ ಶೂದ್ರ ಮತ್ತು ದ್ರಾವಿಡ ಜಾತಿಯ ಯುವ ಸಮೂಹವನ್ನು ಎತ್ತಿ ಕಟ್ಟುವ ಪಿತೂರಿ ಪಾಂಡಿತ್ಯ 60 ವರ್ಷಗಳಿಂದ ನಡೆಯಿತು. ಮಂಡಲ್ ವರದಿ ಜಾರಿಯಾದಾಗ ಅದನ್ನು ವಿರೋಧಿಸಲು ಬಳಕೆಯಾದ ಒಕ್ಕಲಿಗ, ಲಿಂಗಾಯತ, ಕುರುಬ ಮುಂತಾದ ಶೂದ್ರ ಜಾತಿಯ ಯುವಕರ ತೋಳು-ತೊಡೆಗಳನ್ನು ಈಗ ಇಡಬ್ಲ್ಯೂಎಸ್ ಮೀಸಲಾತಿ ವಿಚಾರದಲ್ಲಿ ಮುರಿದು ಕೂರಿಸಿದ್ದಾರೆ. ಒಕ್ಕಲಿಗ, ಲಿಂಗಾಯತ, ಕುರುಬ ಮತ್ತಿತರ ಜಾತಿ ಯುವಕರ ಕೈ ಬೆರಳುಗಳಿಂದ ಇವರದೇ ಕಣ್ಣುಗಳಿಗೆ ತಿವಿ-ತಿವಿದು ಕುರುಡರನ್ನಾಗಿಸಿದ್ದಾರೆ.
60 ವರ್ಷಗಳ ಕಾಲ ದಲಿತರ ವಿರುದ್ಧ ಈ ಒಕ್ಕಲಿಗ, ಲಿಂಗಾಯತ, ಕುರುಬ ಮತ್ತಿತರ ಜಾತಿಯವರ ಮೆದುಳಿಗೆ ಜಾತಿ ಕತ್ತರಿಯಿಂದ ಕಸಿ ಮಾಡಿಸಿಕೊಂಡಿದ್ದರಿಂದಲೇ ಈಗ ಇಡಬ್ಲ್ಯೂಎಸ್ ವಿಚಾರದಲ್ಲಿ ಈ ಜಾತಿಯ ಸ್ವಾಮಿಗಳು, ಮಠಾಧೀಶರು, ಜಾತಿ ನಾಯಕರ ತಲೆಗಳಿಗೆ ಜತೆಯಲ್ಲಿದ್ದವರೇ ಹಿಂದಿನಿಂದ ಬಂದು ತಲೆಗೆ ಹೊಡೆದರೂ ಅದರ ಪ್ರಜ್ಞೆಯೇ ಇಲ್ಲದಂತೆ ಕೋಮಾಕ್ಕೆ ಜಾರಿದ್ದಾರೆ. ಇಷ್ಟು ವರ್ಷಗಳ ಕಾಲ ನಿಮ್ಮ ತಟ್ಟೆಯಲ್ಲಿದ್ದ ಅನ್ನವನ್ನು ಅವರು ಕಿತ್ತುಕೊಂಡರು ಎಂದು ಇನ್ಯಾರದ್ದೋ ಕರೆ ನಮ್ಮನ್ನು ತಿರುಗಿಸಿ ಸುಳ್ಳು ನಾರಾಯಣನ ಕತೆ ಹೆಣೆಯುತ್ತಿದ್ದವರೇ ಈಗ ಇವರ ಕೈಯಲ್ಲಿದ್ದ ತಟ್ಟೆಯನ್ನೇ ಕಿತ್ತುಕೊಂಡು ಹೋದರೂ ಅದರ ಪರಿವೇ ಇಲ್ಲದಂತೆ ಪೆದ್ದು ಪೆದ್ದಾಗಿ ಬಕ್ರಾಗಳಾಗಿದ್ದಾರೆ.
ಸಿದ್ದರಾಮಯ್ಯ, ಜಸ್ಟಿಸ್ ನಾಗಮೋಹನ್‌ದಾಸ್, ಸತೀಶ್ ಜಾರಕಿಹೊಳಿ ಇವರೆಲ್ಲಾ ಹತ್ತಾರು ವರ್ಷಗಳಿಂದ ಬಾಯಿ ಬಡಿದು ಕೊಳ್ಳುತ್ತಿದ್ದದ್ದು ಇದನ್ನೇ. ‘ಏ ಶೂದ್ರರೇ ನಿಮ್ಮ ತಟ್ಟೆ ಜೋಪಾನ’ ಎಂದು ಎಚ್ಚರಿಸುತ್ತಿದ್ದರೂ ಎಚ್ಚೆತ್ತುಕೊಳ್ಳದ ಒಕ್ಕಲಿಗ, ಲಿಂಗಾಯತ, ಕುರುಬ ಮುಂತಾದ ಪ್ರಮುಖ ಶೂದ್ರ ಜಾತಿಯವರು ಈಗ ಶಿಕ್ಷಣ ಮತ್ತು ಸರಕಾರಿ ಉದ್ಯೋಗದ ತಮ್ಮ ಕೋಟಾವನ್ನು ಕಳೆದುಕೊಂಡು ಸಂತ್ರಸ್ತರಾಗಿದ್ದಾರೆ.
ಭಾರತದ ಸಂವಿಧಾನ ರಚನಾ ಸಭೆಯ ಮೊದಲ ಅಧ್ಯಕ್ಷರಾಗಿದ್ದ ಡಾ.ಸಚ್ಚಿದಾನಂದ ಸಿನ್ಹ ಅವರ ಸಂವಿಧಾನ ರಚನಾ ಸಭೆಯ ಭಾಷಣದ ಕೊನೆಯ ಸಾಲು ಹೀಗಿದೆ...
‘‘ಎಲ್ಲಿ ದರ್ಶನವಿಲ್ಲವೋ ಅಲ್ಲಿ ಜನರು ನಾಶವಾಗುತ್ತಾರೆ.’’