ವಾಸ್ತು ಶೈಲಿಗಳಲ್ಲಿ ಧರ್ಮ ಹುಡುಕುವವರು...
ಮಾನ್ಯರೇ,
ಮೈಸೂರಿನ ಬಸ್ ಸ್ಟಾಪ್ ಮೇಲೆ ಇರುವ ಗುಂಬಜ್ ಮುಸ್ಲಿಮ್ ಧರ್ಮದ ವಾಸ್ತು ಆಗಿದ್ದರೆ ದೇಶದ ಎಲ್ಲಾ ಐತಿಹಾಸಿಕ ಮತ್ತು ಸರಕಾರಿ ಕಟ್ಟಡಗಳಲ್ಲಿ ಇರುವ ಕಮಾನುಗಳು (ಅರ್ಚ್) ಸಹ ಮುಸ್ಲಿಮ್ ವಾಸ್ತು ಶೈಲಿಯದ್ದೇ ಎಂಬುದನ್ನು ಮೈಸೂರು ಸಂಸದರು ಅರ್ಥ ಮಾಡಿಕೊಳ್ಳಬೇಕು. ಮೂಲತಃ ಭಾರತೀಯ ವಾಸ್ತು ಶಿಲ್ಪಕಾರರಿಗೆ ಕಮಾನು ಕಟ್ಟುವುದು ಗೊತ್ತೇ ಇರಲಿಲ್ಲ. ಸುಮಾರು ಎರಡೂವರೆ ಸಾವಿರ ವರ್ಷಗಳ ಹಿಂದೆ ಡೋಮ್ ಮತ್ತು ಕಮಾನು ಕಟ್ಟುವ ತಂತ್ರಜ್ಞಾನ ಹುಟ್ಟಿದ್ದು ರೋಮ್ ದೇಶದಲ್ಲಿ. ಅದು ಮುಂದೆ ಗ್ರೀಸ್ ದೇಶಕ್ಕೆ ಹೋಗಿ ಅಲ್ಲಿಂದ ಈಜಿಪ್ಟ್, ಮೆಸಪೋಟಾಮಿಯಾ, ಅರೇಬಿಯಕ್ಕೆ ಹರಡಿ ಕೊನೆಗೆ ಪರ್ಷಿಯಾಕ್ಕೆ ಬಂದಿತ್ತು. ಹನ್ನೊಂದನೇ ಶತಮಾನದಲ್ಲಿ ವಿದೇಶಿ ಮುಸ್ಲಿಮರು ಭಾರತದಲ್ಲಿ ಆಡಳಿತ ಶುರುಮಾಡಿದ ಮೇಲೆ ಪರ್ಷಿಯನ್ ವಾಸ್ತುಶಿಲ್ಪಕಾರರು ಈ ಕಮಾನು ಮತ್ತು ಗುಂಬಜ್ ಕಟ್ಟುವ ತಂತ್ರಜ್ಞಾನವನ್ನು ಭಾರತಕ್ಕೆ ಪರಿಚಯಿಸಿದ್ದು. ಹಾಗಾಗಿ ಈ ವಾಸ್ತು ಶೈಲಿಗೆ ಇಂಡೋ-ಇಸ್ಲಾಮಿಕ್ ಶೈಲಿ ಎಂದೇ ಕರೆಯುತ್ತಾರೆ.
ಆದುದರಿಂದ ಡೋಮ್/ಗುಂಬಜ್‌ನಂತೆ ‘ಕಮಾನು’ ಸಹ ಹಿಂದುತ್ವ ಸಂಸದರಿಗೆ ವರ್ಜ್ಯ ಆಗಬೇಕು ತಾನೇ? ಸಿಖ್ ಧರ್ಮದವರ ಅತ್ಯಂತ ಪವಿತ್ರ ಗುರುದ್ವಾರವಾದ ಸ್ವರ್ಣ ಮಂದಿರ ಸಹಿತ ಎಲ್ಲಾ ಗುರುದ್ವಾರಗಳೂ ಗುಂಬಜ್ ಹೊಂದಿವೆ. ಕೇವಲ ನಾಗರ, ದ್ರಾವಿಡ ಮತ್ತು ವೇಸರ ಶೈಲಿ ಮಾತ್ರ ಶುದ್ಧ ಭಾರತೀಯ ಶೈಲಿ. ಇಂಡೋ-ಸರಸೆನಿಕ್ ಮತ್ತು ಗೋತಿಕ್ ಶೈಲಿ ಭಾರತಕ್ಕೆ ಬಂದಿದ್ದು ಬ್ರಿಟಿಷರ ಕಾಲದಲ್ಲಿ. ಇದನ್ನು ಕೂಡಾ ಕ್ರೈಸ್ತರ ಮತಾಂತರಿ ವಾಸ್ತು ಶೈಲಿ ಅನ್ನಬಹುದೇ? (ಸರಸೆನಿಕ್ ಅಂದರೆ ಕೂಡಾ ಅರೇಬಿಕ್ ಅಥವಾ ಇಸ್ಲಾಮಿಕ್ ಎಂದೇ ನಿಘಂಟಿನಲ್ಲಿ ಅರ್ಥವಿದೆ). ಹಾಗಾದರೆ ಇಂಡೋ ಸರಸೆನಿಕ್ ಮತ್ತು ಗೋತಿಕ್ ಶೈಲಿಯಲ್ಲಿರುವ ನಮ್ಮ ಮೈಸೂರು ಅರಮನೆ ಹಾಗೂ ವಿಧಾನ ಸೌಧ ಕಂಡರೂ ಹಿಂದುತ್ವವಾದಿಗಳಿಗೆ ಅಲರ್ಜಿ ಆಗಬೇಕು ಅಲ್ಲವೇ? ಇಡೀ ಜಗತ್ತೇ ಈಗ ಒಂದು ಹಳ್ಳಿ ಆಗಿರುವಾಗ ಕಟ್ಟಡಗಳ ಸೌಂದರ್ಯ ಹೆಚ್ಚಿಸುವ ವಾಸ್ತು ಶೈಲಿಗಳಲ್ಲಿ ಅದು ಆ ಧರ್ಮದ್ದು ಇದು ಈ ಧರ್ಮದ್ದು ಎಂಬ ಅಡ್ಡ ಗೋಡೆ ಬೇಕೆ?