ಬಿಜೆಪಿಯನ್ನು ಎದುರಿಸಲು ಉದ್ಧವ ಠಾಕ್ರೆ ಮತ್ತು ಪ್ರಕಾಶ್ ಅಂಬೇಡ್ಕರ್ ಮೈತ್ರಿ ಸಾಧ್ಯತೆ

Update: 2022-11-22 17:08 GMT

ಮುಂಬೈ,ನ.22: ಹೆಚ್ಚುತ್ತಿರುವ ಸರ್ವಾಧಿಕಾರವನ್ನು ಎದುರಿಸುವ ಪ್ರಯತ್ನವಾಗಿ ಉದ್ಧವ ಠಾಕ್ರೆ(Uddhav Thackeray)ಯವರು ಮಹಾರಾಷ್ಟ್ರದಲ್ಲಿ ನೂತನ ರಾಜಕೀಯ ಪ್ರಯೋಗ-ಶಿವಶಕ್ತಿ ಮತ್ತು ಭೀಮಶಕ್ತಿ ಮೈತ್ರಿಗಾಗಿ ತನ್ನೊಂದಿಗೆ ಕೈಜೋಡಿಸುವಂತೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ (Dr. B. R. Ambedkar)ಅವರ ಮೊಮ್ಮಗ ಪ್ರಕಾಶ ಅಂಬೇಡ್ಕರ್ರನ್ನು ಆಗ್ರಹಿಸಿದ್ದಾರೆ.

ರವಿವಾರ ಪ್ರಬೋಧಂಕರ್ ಡಾಟ್ ಕಾಮ್ ವೆಬ್ಸೈಟ್(dot com website) ನ ಚಾಲನೆಗಾಗಿ ಉದ್ಧವ ಠಾಕ್ರೆ ಮತ್ತು ಪ್ರಕಾಶ ಅಂಬೇಡ್ಕರ್ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದು ಮಹಾರಾಷ್ಟ್ರದಲ್ಲಿ ನೂತನ ರಾಜಕೀಯ ಮೈತ್ರಿ ಕುರಿತು ಊಹಾಪೋಹಗಳನ್ನು ಸೃಷ್ಟಿಸಿದೆ.

ಪ್ರಕಾಶ ಅಂಬೇಡ್ಕರ್ ನೇತೃತ್ವದ ವಂಚಿತ ಬಹುಜನ ಅಘಾಡಿ-ಭೀಮ ಶಕ್ತಿಯು ವಿದರ್ಭ ಪ್ರದೇಶದಲ್ಲಿ,ವಿಶೇಷವಾಗಿ ದಲಿತ ಮತದಾರರ ಮೇಲೆ ಮತ್ತು ಶಿವಶಕ್ತಿ (ಉದ್ಧವ ಠಾಕ್ರೆ) ಹಿಂದು ಮತದಾರರ ಮೇಲೆ ಗಣನೀಯ ಪ್ರಭಾವ ಹೊಂದಿವೆ.

2019ರ ಸಾರ್ವತ್ರಿಕ ಚುನಾವಣೆಗಳಲ್ಲಿ ಶೇ.14ರಷ್ಟು ಮತಗಳನ್ನು ಗಳಿಸುವ ಮೂಲಕ ವಂಚಿತ ಬಹುಜನ ಅಘಾಡಿಯು ನಾಂದೇಡ್ ಲೋಕಸಭಾ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಅಶೋಕ ಚವಾಣ (Ashoka Chavan)ಸೇರಿದಂತೆ 10 ಕಾಂಗ್ರೆಸ್ ಮತ್ತು ಎನ್ಸಿಪಿ ಅಭ್ಯರ್ಥಿಗಳ ಸೋಲಿಗೆ ಕಾರಣವಾಗಿತ್ತು.

ಉದ್ಧವ ಠಾಕ್ರೆ ಮರಾಠಿ ಜನರಿಗಾಗಿ ಶಿವಸೇನೆಯನ್ನು ಹುಟ್ಟುಹಾಕಿದ್ದ ಪ್ರಬೋಧಂಕರ್ ಠಾಕ್ರೆಯವರ ಮೊಮ್ಮಗನಾಗಿದ್ದಾರೆ.

ಪ್ರಬೋಧಂಕರ್ ಬಳಿಕ ಅವರ ಪುತ್ರ ಬಾಳಾಸಾಹೇಬ್ ಠಾಕ್ರೆಯವರು ಪಕ್ಷವನ್ನು ಮುನ್ನಡೆಸಿದ್ದರು. ಇನ್ನೊಂದೆಡೆ ಪ್ರಕಾಶ ಅಂಬೇಡ್ಕರ್ ಸಂವಿಧಾನ ಶಿಲ್ಪಿ ಹಾಗೂ ಸಮಾಜದಲ್ಲಿನ ಶೋಷಿತ ವರ್ಗಗಳ ಕಲ್ಯಾಣಕ್ಕಾಗಿ ಶ್ರಮಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ ಮೊಮ್ಮಗನಾಗಿದ್ದಾರೆ.

ತನ್ನೊಂದಿಗೆ ಕೈಜೋಡಿಸುವಂತೆ ಪ್ರಕಾಶ ಅಂಬೇಡ್ಕರ್ರನ್ನು ಆಗ್ರಹಿಸಿರುವ ಉದ್ಧವ ಠಾಕ್ರೆ,‘ಭಾರತದಲ್ಲಿ ಪ್ರಜಾಪ್ರಭುತ್ವವನ್ನು ಉಳಿಸಲು ಮತ್ತು ಸಂರಕ್ಷಿಸಲು ಹೋರಾಡಲು ಬಯಸಿರುವವರ ಜೊತೆ ಕೈಜೋಡಿಸಲು ನಾವು ಸಿದ್ಧರಿದ್ದೇವೆ. ದೇಶವು ಸರ್ವಾಧಿಕಾರದತ್ತ ಸಾಗುತ್ತಿದೆ. ನಾವು ಇಂದು ಒಂದಾಗಿ ಪ್ರಜಾಪ್ರಭುತ್ವದ ರಕ್ಷಣೆಗಾಗಿ ಹೋರಾಡದಿದ್ದರೆ ನಮ್ಮ ಅಜ್ಜಂದಿರ ಪರಂಪರೆಯ ಬಗ್ಗೆ ಮಾತನಾಡುವ ಹಕ್ಕು ನಮಗಿಬ್ಬರಿಗೂ ಇಲ್ಲ ’ಎಂದಿದ್ದಾರೆ.

ಉದ್ಧವ ಠಾಕ್ರೆಯವರ ಮನವಿಗೆ ಪ್ರತಿಕ್ರಿಯಿಸಿದ ಪ್ರಕಾಶ ಅಂಬೇಡ್ಕರ್,‘ರಾಜ್ಯದಲ್ಲಿ ಚುನಾವಣೆಗಳು ಘೋಷಣೆಯಾದಾಗ ನಾವು ಜೊತೆಯಾಗುತ್ತೇವೆ. ಚುನಾವಣೆಗಳು ಇಂದು ಘೋಷಣೆಯಾದರೆ ಇಂದೇ ಒಂದಾಗುತ್ತೇವೆ. ಮಹಾರಾಷ್ಟ್ರದ ಹಾಲಿ ಸರಕಾರವು ತಡೆಯಾಜ್ಞೆಯ ಆಧಾರದಲ್ಲಿ ನಡೆಯುತ್ತಿದೆ. ಇದು ರಾಜ್ಯದ ಹಿತಾಸಕ್ತಿಯ ದೃಷ್ಟಿಯಿಂದ ಒಳ್ಳೆಯದಲ್ಲ. ಈ ಬಗ್ಗೆ ಸರ್ವೋಚ್ಚ ನ್ಯಾಯಾಲಯವು ಶೀಘ್ರ ನಿರ್ಧಾರವನ್ನು ತೆಗೆದುಕೊಳ್ಳಬೇಕು ’ಎಂದರು.

Similar News