ನಿರ್ಲಕ್ಷ ಧೋರಣೆಗೆ ಮುಂದೆ ಬೆಲೆ ತೆರಬೇಕಾದೀತು
ಮಾನ್ಯರೇ,
ಜಾಗತಿಕವಾಗಿ ಹವಾಮಾನ ಬದಲಾವಣೆಗೆ ಕಾರಣವಾಗಿರುವ ವಿಷ ಸೂಸುವ ಅನಿಲಗಳ ಬಳಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ವಿಶ್ವಸಂಸ್ಥೆ ನೀಡಿದ ಎಚ್ಚರಿಕೆಯ ಸಂದೇಶವು ಎಲ್ಲ ದೇಶಗಳ ಬದ್ಧತೆಯನ್ನು ವಿಮರ್ಶಿಸಲು ಅನುವು ಮಾಡಿಕೊಟ್ಟಿದೆ ಎಂದರೆ ತಪ್ಪಾಗದು. ಇಂದು ಜಾಗತಿಕವಾಗಿ ಎಲ್ಲ ದೇಶಗಳು ಇದರ ಕುರಿತು ಎಚ್ಚೆತ್ತುಕೊಳ್ಳಬೇಕಾದ ಅಗತ್ಯವಿದ್ದು, ಅತಿ ಹೆಚ್ಚು ಇಂಗಾಲ ಹೊರ ಸೂಸುವಿಕೆಯಲ್ಲಿ ವಿಶ್ವದ ಜಿ-20 ದೇಶಗಳ ಪಾಲು ಶೇ. 75ರಷ್ಟಿದೆ ಎಂಬುದು ಗಮನಾರ್ಹ ಸಂಗತಿಯಾಗಿದೆ.
ಪರಿಸರ ಮಾಲಿನ್ಯ ತಡೆಯಲು ಶ್ರೀಮಂತ ದೇಶಗಳು ಪರಿಣಾಮಕಾರಿಯಾಗಿ ಯೋಜನೆಗಳನ್ನು ರೂಪಿಸಿ ಅನುಷ್ಠಾನಕ್ಕೆ ತರದೆ, ನಿರ್ಲಕ್ಷ ಧೋರಣೆ ಅನುಸರಿಸುತ್ತಿರುವುದು ಜಾಗತಿಕವಾಗಿ ದುಷ್ಪರಿಣಾಮ ಬೀರಲು ಕಾರಣವಾಗಿದೆ. ಇದರ ಕುರಿತು ಪರಿಸರಕ್ಕೆ ಸಂಬಂಧಿಸಿದ ‘ಎಮಿಷನ್ ಗ್ಯಾಪ್ ರಿಪೋರ್ಟ್’ನ ಸಮೀಕ್ಷಾ ವರದಿಯಲ್ಲಿ ಗಂಭೀರವಾಗಿ ಉಲ್ಲೇಖಿಸಲಾಗಿದ್ದು, ಇದೇ ಧೋರಣೆ ಮುಂದುವರಿದಲ್ಲಿ ಜಾಗತಿಕ ತಾಪಮಾನ ಏರಿಕೆಯನ್ನು 1.5 ಡಿಗ್ರಿ ಸೆಲ್ಸಿಯಸ್‌ಗೆ ನಿಯಂತ್ರಿಸುವುದು ಕಠಿಣ ಸವಾಲಾಗುತ್ತದಲ್ಲದೆ, ಇನ್ನು ಕೆಲವೇ ದಶಕಗಳಲ್ಲಿ 2.8 ಡಿಗ್ರಿ ಸೆಲ್ಸಿಯಸ್ ನಷ್ಟು ತಾಪಮಾನದಲ್ಲಿ ಏರಿಕೆ ಕಾಣಲಿದೆ.
ಹೀಗೆ ನಿರ್ಲಕ್ಷ್ಯ ಧೋರಣೆ ಮುಂದುವರಿಸಿದರೆ 2030 ರ ಹೊತ್ತಿಗೆ ಜಾಗತಿಕ ವಾತಾವರಣದಲ್ಲಿ ಇಂಗಾಲ ಹಾಗೂ ಇನ್ನಿತರ ವಿಷ ಅನಿಲಗಳ ಪ್ರಮಾಣ 5,800 ಕೋಟಿ ಟನ್‌ಗೆ ಏರಿಕೆಯಾಗಲಿದೆ ಎಂದು ಈ ವರದಿಯ ಸಮೀಕ್ಷೆಯು ಅಂದಾಜಿಸಿದ್ದು ಇದು ಅತ್ಯಂತ ಆತಂಕಕಾರಿ, ಕಳವಳಕಾರಿ ಸಂಗತಿಯಾಗಿದೆ.
ಕಳೆದ ವರ್ಷ ಗ್ಲಾಸ್ಕೊದಲ್ಲಿ ನಡೆದಿದ್ದ 26ನೇ ವಿಶ್ವಸಂಸ್ಥೆ ಹವಾಮಾನ ಬದಲಾವಣೆ ಸಮಾವೇಶದಲ್ಲಿ ಜಾಗತಿಕ ಹವಾಮಾನ, ತಾಪಮಾನ ಏರಿಕೆ ತಗ್ಗಿಸುವ ವಿಷಯವೇ ಮಹತ್ವ ಪಡೆದಿತ್ತು. ಇದರ ಕುರಿತು ಸುದೀರ್ಘವಾಗಿ ಸಾಕಷ್ಟು ಚರ್ಚೆ, ಚಿಂತನೆಗಳು ನಡೆದಿದ್ದವು. ಈ ಸಮಾವೇಶದಲ್ಲಿ ಪಾಲ್ಗೊಂಡ ದೇಶಗಳು ಪರಿಸರಕ್ಕೆ ವಿಷಕಾರಿಯಾಗಿರುವ ಇಂಗಾಲ, ಇನ್ನಿತರ ಅನಿಲಗಳ ಪ್ರಮಾಣವನ್ನು 50 ಕೋಟಿ ಟನ್‌ನಷ್ಟು ಕಡಿತ ಮಾಡಲು ಭರವಸೆ ನೀಡಿದ್ದವು. ಆದರೆ ಈ ಭರವಸೆಗಳಂತೆ ಈ ದೇಶಗಳು ನಡೆದುಕೊಳ್ಳದಿರುವುದು, ಯಾವುದೇ ಪರಿಣಾಮಕಾರಿ ಯೋಜನೆಗಳನ್ನು ಅನುಷ್ಠಾನಕ್ಕೆ ತರದೆ ಇರುವುದನ್ನು ನೋಡಿದರೆ ಜಗತ್ತಿನ ಭವಿಷ್ಯದ ದಿನಗಳ ಬಗ್ಗೆ ಆತಂಕವಾಗುತ್ತಿದೆ. ಇನ್ನಾದರೂ ಶ್ರೀಮಂತ ದೇಶಗಳು ಸೇರಿ ಎಲ್ಲ ದೇಶಗಳು ವಿಶ್ವಸಂಸ್ಥೆಯ ಸಂದೇಶವನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ.