ಲಂಚಕ್ಕೆ ಕೊನೆಯಿಲ್ಲ
ಮಾನ್ಯರೇ
ಬೆಂಗಳೂರು ನಗರ ಜಿಲ್ಲೆಯ ಉತ್ತರ ತಾಲೂಕು ತಹಶೀಲ್ದಾರ್ ಅವರು ಕ್ರಯ ವಹಿವಾಟಿನ ಮೇಲೆ ಖಾತೆ ಬದಲಾವಣೆ ಮಾಡಿಕೊಡಲು 5 ಲಕ್ಷ ರೂ. ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದಿರುವುದು ವರದಿಯಾಗಿದೆ. 79ಎ ಮತ್ತು ಬಿ ಕಾಯ್ದೆಗಳನ್ನು ರದ್ದುಪಡಿಸಿದ ಮೇಲೆ ಕೃಷಿಕರಲ್ಲದವರೂ ಯಾವ ಪೂರ್ವಾನುಮತಿ ಇಲ್ಲದೆಯೂ ಕೃಷಿ ಭೂಮಿ ಖರೀದಿ ಮಾಡಬಹುದು. 79ಎ ಮತ್ತು ಬಿ ಚಾಲ್ತಿಯಲ್ಲಿದ್ದಾಗ ಕೃಷಿ ಭೂಮಿ ಖರೀದಿಸಲು ಒಂದಷ್ಟು ನಿಬಂಧನೆ, ನಿಯಮಗಳು ಇದ್ದ ಕಾರಣಕ್ಕೆ ಕ್ರಯಕ್ಕೆ ಕೊಂಡ ಜಮೀನಿನ ಖಾತೆ ಬದಲಾವಣೆ ಮಾಡುವ ಸಂದರ್ಭದಲ್ಲಿ ಲಂಚ ರೂಪವಾಗಿ ಹಣ ಹರಿದಾಡುತ್ತಿತ್ತು. ನಿಯಮ ಉಲ್ಲಂಘಿಸಿ ಜಮೀನು ಕೊಂಡ ರೈತರು, ಕೃಷಿಕುಟುಂಬದಲ್ಲದವರು ಗ್ರಾಮಲೆಕ್ಕಿಗ, ರಾಜಸ್ವ ನಿರೀಕ್ಷಕ, ತಹಶೀಲ್ದಾರರಿಗೆ ಲಂಚ ನೀಡುವುದು ಅನಿವಾರ್ಯವಾಗಿತ್ತು.
ಪ್ರಸಕ್ತ ಕೃಷಿ ಭೂಮಿಯನ್ನು ಯಾರು ಬೇಕಾದರೂ ಖರೀದಿ ಮಾಡಬಹುದು. ಆಯಾ ಗ್ರಾಮವಾರು ಕಂದಾಯ ಭೂಮಿಯ ಮಾರುಕಟ್ಟೆ ಮೌಲ್ಯಕ್ಕೆ ಅನುಸಾರವಾಗಿ ಶುಲ್ಕ ಪಾವತಿಸಿ ನೋಂದಣಿಯಾಗಿರುವ ಕ್ರಮ ಪತ್ರದಂತೆ ಖಾತೆ ಮತ್ತು ಪಹಣಿ ಬದಲಾವಣೆ ಮಾಡಲು ಯಾರಿಗೂ ಲಂಚ ಕೊಡುವ ಅವಶ್ಯಕತೆ ಇರಲಾರದು. ಆದರೂ, ಲಂಚ ಕೊಡುತ್ತಲೇ ಇದ್ದಾರೆ. ಗ್ರಾಮಲೆಕ್ಕಿಗ, ತಹಶೀಲ್ದಾರರು ತನಿಖಾ ಸಂಸ್ಥೆಗಳ ಬಲೆಗೆ ಬೀಳುತ್ತಲೇ ಇದ್ದಾರೆ. ಜನರಲ್ಲಿ ಜಾಗೃತಿ ಮೂಡಬೇಕಿದೆ.