ಕೋವಿಡ್ ಕಾಲದಲ್ಲಿ ಸತ್ಯ ಹೇಳಿದವರಿಗೆ ತಡವಾದ ಮನ್ನಣೆ
ಹೊಸ ಕೊರೋನ ಸೋಂಕಿಗೆ ಮೂರು ವರ್ಷಗಳಾಗುತ್ತಿರುವಾಗ ಈ ವೈದ್ಯರು ಮತ್ತು ವಿಜ್ಞಾನಿಗಳು ಎಷ್ಟೆಲ್ಲ ಕಷ್ಟಗಳನ್ನೆದುರಿಸಿಯೂ ತಮ್ಮ ಜನರಿಗಾಗಿ ವೈಜ್ಞಾನಿಕ ಸತ್ಯವನ್ನು ಎತ್ತಿ ಹಿಡಿದದ್ದು ಈಗ ಪ್ರಶಂಸೆಯನ್ನು ಗಳಿಸುತ್ತಿದೆ. ವೈಜ್ಞಾನಿಕ ಭಿನ್ನಾಭಿಪ್ರಾಯಗಳ ಬಗ್ಗೆ ತೆರೆದ ಮನಸ್ಸಿನ ನ್ಯಾಯಯುತ ಚರ್ಚೆಗಳಾಗುವ ಬದಲು ಅವನ್ನು ದಮನಿಸಿದರೆ ವೈದ್ಯಕೀಯ ಸೇವೆಗಳು, ವೈಜ್ಞಾನಿಕ ನಿಲುವುಗಳು ಮತ್ತು ಸಾರ್ವಜನಿಕ ಆರೋಗ್ಯಗಳ ಮೇಲೆ ಗಂಭೀರವಾದ, ದೂರಗಾಮಿಯಾದ ದುಷ್ಪರಿಣಾಮಗಳಾಗುತ್ತವೆ ಎನ್ನುವುದನ್ನು ಕೋವಿಡ್ ಕಾಲದಲ್ಲಾದ ಘಟನೆಗಳು ತೋರಿಸಿಕೊಟ್ಟಿವೆ.
ಕೊರೋನ ಸೋಂಕಿನ ಅಬ್ಬರ ಕಡಿಮೆಯಾಗುತ್ತಿದ್ದಂತೆ ಕಳೆದ ಮೂರು ವರ್ಷಗಳಲ್ಲಿ ಕೊರೋನ ನೆಪದಲ್ಲಿ ಮಾಡಿದ ಅಭೂತಪೂರ್ವವಾದ, ಅತಿರೇಕದ ಕ್ರಮಗಳ ಹಾನಿಗಳೂ, ವೈಫಲ್ಯಗಳೂ ಒಂದೊಂದಾಗಿ ಬಯಲಾಗತೊಡಗಿವೆ. ಕೊರೋನ ಕಾಲದಲ್ಲಿ ಅತ್ಯಂತ ಕಠಿಣ ನಿರ್ಬಂಧಗಳನ್ನು ಹೇರಿದ್ದ ಚೀನಾ, ಆಸ್ಟ್ರೇಲಿಯಾಗಳಂತಹ ದೇಶಗಳೂ ಕೂಡ ತಮ್ಮ ನಿರ್ಬಂಧಗಳನ್ನು ಸಡಿಲಗೊಳಿಸತೊಡಗಿವೆ ಅಥವಾ ರದ್ದು ಗೊಳಿಸುತ್ತಿವೆ.
ಕೊರೋನ ಕಾಲದಲ್ಲಿ ಅಮೆರಿಕದಿಂದ ಹಿಡಿದು, ಭಾರತವೂ ಸೇರಿ ಆಸ್ಟ್ರೇಲಿಯಾದವರೆಗೆ ಆಡಳಿತಗಳು ಮತ್ತು ವೈದ್ಯಕೀಯ ವ್ಯವಸ್ಥೆಗಳು ಕೈಗೊಂಡಿದ್ದ ಬಗೆಬಗೆಯ ನಿರ್ಧಾರಗಳನ್ನು ಪ್ರಶ್ನಿಸಿದ್ದ ಕೆಲವು ವೈದ್ಯರು ಮತ್ತು ವಿಜ್ಞಾನಿಗಳ ಮೇಲೆ ದಾಳಿಗಳಾಗಿದ್ದವು, ಶಿಸ್ತುಕ್ರಮಗಳಾಗಿದ್ದವು, ಮಾಧ್ಯಮ ಬಹಿಷ್ಕಾರಗಳೂ ಆಗಿದ್ದವು; ಅವುಗಳನ್ನು ಕೂಡ ಈಗ ಒಂದೊಂದಾಗಿ ಹಿಂಪಡೆಯಲಾಗುತ್ತಿದೆ. ಲಸಿಕೆ ಪಡೆಯಲು ನಿರಾಕರಿಸಿದ್ದ ದಾದಿಯರು ಮತ್ತಿತರ ಆರೋಗ್ಯ ಕರ್ಮಿಗಳನ್ನು ಕೆಲಸದಿಂದ ವಜಾ ಮಾಡಲಾಗಿದ್ದುದನ್ನೂ ಹಿಂಪಡೆದು ಅವರನ್ನೆಲ್ಲ ಮತ್ತೆ ಕೆಲಸಕ್ಕೆ ಕರೆಯಲಾಗುತ್ತಿದೆ.
ಹೀಗೆ ಮಾಡುತ್ತಿರುವುದನ್ನು ಕೆಲವೆಡೆ ಕೋವಿಡ್ ಕ್ಷಮಾದಾನ ಎಂದು ಕರೆಯಲಾಗುತ್ತಿದೆ, ಆದರೆ ತಪ್ಪು ಮಾಡದವರನ್ನು ತಪ್ಪೆಸಗಿದವರು ಕ್ಷಮಿಸುವುದೇನು ಬಂತು ಎಂದು ಅದನ್ನು ಪ್ರಶ್ನಿಸುವುದೂ ಆಗುತ್ತಿದೆ. ಏನೇ ಆದರೂ, ಈ ಎಲ್ಲ ತಪ್ಪುನಿರ್ಧಾರಗಳಿಂದ ಸಾವನ್ನಪ್ಪಿದವರು, ನರಳಿದವರು, ಮಾನಹಾನಿಗೀಡಾದವರು, ಪ್ರತಿಷ್ಠೆಗೆ ಹಾನಿಯಾದವರು, ಉದ್ಯೋಗ ಕಳೆದುಕೊಂಡವರು ಅಥವಾ ಕಷ್ಟ-ನಷ್ಟಕ್ಕೀಡಾದವರು ಅವಕ್ಕೆ ತಕ್ಕ ಪರಿಹಾರಗಳನ್ನು ಪಡೆಯಲು ಸಾಧ್ಯವಿದೆಯೇ?
ಚೀನಾವು ಡಿಸೆಂಬರ್ 2019ರಲ್ಲಿ ಕೊರೋನ ಸೋಂಕನ್ನು ಗುರುತಿಸಿ, 2020ರ ಫೆಬ್ರವರಿಯಲ್ಲಿ 70 ದಿನಗಳ ಕಾಲ ವುಹಾನ್ ನಗರವನ್ನು ಲಾಕ್‌ಡೌನ್ ಮಾಡಿ, ಸೋಂಕು ಹರಡದಂತೆ ತಡೆಯುವುದಕ್ಕೆ ಹೊಸದಾದ ಯಶಸ್ವಿ ವಿಧಾನವನ್ನು ಜಗತ್ತಿಗೆ ತೋರಿಸಿತೆಂದು ಹೊಗಳಿಸಿಕೊಂಡಿತ್ತು. ಚೀನಾ ಮಾಡಿದ್ದೇನೆಂಬ ವಿವರಗಳು ಲಭ್ಯವಿಲ್ಲದಿದ್ದರೂ, ಅಲ್ಲಿ ಒಂದು ಊರಿನಲ್ಲಿ ಮಾಡಿದ್ದನ್ನು ಹೆಚ್ಚು ವಿಸ್ತೃತವಾಗಿ ಮಾಡುವುದು ಸಾಧ್ಯವೇ, ಅದರ ಪರಿಣಾಮಗಳೇನಾಗಬಹುದು ಎಂಬ ಬಗ್ಗೆ ಯಾವುದೇ ಸಾಕ್ಷ್ಯಾಧಾರಗಳಾಗಲೀ, ಅನುಭವಗಳಾಗಲೀ ಇಲ್ಲದೇ ಇದ್ದರೂ ಅನೇಕ ದೇಶಗಳು ಊರೂರುಗಳನ್ನು ವಾರಗಟ್ಟಲೆ ಲಾಕ್‌ಡೌನ್ ಮಾಡಿ ಮುಚ್ಚಿ ಹಾಕಿದವು. ಭಾರತವಂತೂ 135 ಕೋಟಿ ಜನರಲ್ಲಿ ಕೇವಲ 560 ಕೋವಿಡ್ ಸೋಂಕಿತರಿದ್ದಾಗ ಇಡೀ ದೇಶವನ್ನೇ ಯಾವುದೇ ಮುನ್ಸೂಚನೆಯಿಲ್ಲದೆ ಎರಡು ತಿಂಗಳ ಕಾಲ ಸಂಪೂರ್ಣವಾಗಿ ಮುಚ್ಚಿ ಹಾಕಿತು. ಇಂತಹ ಲಾಕ್‌ಡೌನ್‌ಗಳು ಸೋಂಕು ತಡೆಯುವಲ್ಲಿ ಎಲ್ಲೂ ನೆರವಾಗಲಿಲ್ಲ, ಬದಲಿಗೆ ಆರ್ಥಿಕತೆಯನ್ನೂ, ಶಿಕ್ಷಣವನ್ನೂ, ಜನರ ಮಾನಸಿಕ-ದೈಹಿಕ ಆರೋಗ್ಯವನ್ನೂ ಕೆಡಿಸಿದವು.
ಚೀನಾದಲ್ಲಿ ವ್ಯಾಪಕವಾಗಿ ಲಸಿಕೆಗಳನ್ನು ನೀಡಿದ್ದರೂ ಪ್ರಯೋಜನವಾಗದೆ ಸೋಂಕು ಹರಡುತ್ತಲೇ ಸಾಗಿದಾಗ ಮತ್ತೆ ಮತ್ತೆ ಅತಿ ಕಠಿಣ ಲಾಕ್‌ಡೌನ್ ಮಾಡಲಾಯಿತು, ಜನರನ್ನು ಪ್ರತ್ಯೇಕಿಸಿ ಗೂಡುಗಳಲ್ಲಿ ಇರಿಸಲಾಯಿತು. ಜನರನ್ನು ನಿಯಂತ್ರಿಸಲು ಎಲ್ಲರಿಗೂ ಕ್ಯೂಆರ್ ಕೋಡ್ ಪಟ್ಟಿಗಳು, ಪ್ರತಿನಿತ್ಯ ಪಿಸಿಆರ್ ಪರೀಕ್ಷೆಗಳು ಬಳಕೆಯಾದವು. ಇವೆಲ್ಲವೂ ಚೀನಾದ ಅನೇಕ ಊರುಗಳಲ್ಲಿ ಈಗಲೂ ನಡೆದಿವೆ. ಆದರೆ ಇತ್ತೀಚೆಗೆ ನಡೆದ ಚೀನಾದ ಆಡಳಿತ ಪಕ್ಷದ ಶೃಂಗ ಸಭೆಯಲ್ಲಿ ಕೊರೋನ ನಿಯಂತ್ರಣಕ್ಕೆ ಇಂತಹ ಅಮಾನವೀಯವಾದ ಕ್ರಮಗಳನ್ನು ಕೈಬಿಡುವ ಬಗ್ಗೆ ನಿರ್ಣಯಗಳಾಗಿವೆ.
ಹಿರಿವಯಸ್ಕರು, ಅನ್ಯ ಕಾಯಿಲೆಗಳುಳ್ಳವರು, ಗರ್ಭಿಣಿಯರು ಮುಂತಾದ ಸಮಸ್ಯೆಗೀಡಾಗಬಲ್ಲ ವರ್ಗದವರನ್ನು ಗುರುತಿಸಿ, ಅವರನ್ನು ಸುರಕ್ಷಿತವಾಗಿರಿಸುವ ಬಗ್ಗೆ, ಅವರ ಆರೋಗ್ಯ ರಕ್ಷಣೆಯ ಬಗ್ಗೆ, ಅಂಥವರು ಹೆಚ್ಚಾಗಿ ಇರುವ ಆಸ್ಪತ್ರೆಗಳಂಥ ಜಾಗಗಳನ್ನು ನಿಭಾಯಿಸುವ ಬಗ್ಗೆ ಕಾರ್ಯಯೋಜನೆಗಳನ್ನೂ, ಸಂಶೋಧನೆಗಳನ್ನೂ ರೂಪಿಸುವಂತೆ ಈ ನಿರ್ಣಯವು ಚೀನಾದ ಸರಕಾರಕ್ಕೆ ಆದೇಶಿಸಿದೆ. ಅಂದರೆ ಸುಮಾರು 3 ವರ್ಷಗಳ ಕಾಲ ಕೊರೋನ ಸೋಂಕಿನ ನಿಯಂತ್ರಣದ ಹೆಸರಲ್ಲಿ ಪುಟ್ಟ ಮಕ್ಕಳಿಂದ ವಯೋವೃದ್ಧರವರೆಗೆ ಎಲ್ಲರನ್ನೂ ದಿಗ್ಬಂಧಿಸಿಟ್ಟು, ಲಸಿಕೆ ಚುಚ್ಚಿ ವಿಫಲರಾದ ಬಳಿಕ ಈಗ ಚೀನಾವು ಇವುಗಳಿಂದೇನೂ ಪ್ರಯೋಜನವಿಲ್ಲ ಎಂದರಿತು, ಕೊರೋನದಿಂದ ಸಮಸ್ಯೆಗೀಡಾಗಬಲ್ಲವರನ್ನಷ್ಟೇ ಸುರಕ್ಷಿತವಾಗಿರಿಸುವ ಬಗ್ಗೆ ಯೋಚಿಸತೊಡಗಿದೆ ಎಂದಾಯಿತು.
ಮಂಗಳೂರಿನ ವೈದ್ಯಕೀಯ ತಜ್ಞನಾದ ನಾನು ಮಾರ್ಚ್ 13, 2020ರಂದು ಕರ್ನಾಟಕದಲ್ಲಿ ಕೇವಲ 11 ಪ್ರಕರಣಗಳಷ್ಟೇ ಇದ್ದಾಗ ರಾಜ್ಯದ ಎಲ್ಲಾ ಶಾಲೆ, ಸಮಾರಂಭ, ಮಳಿಗೆ, ಚಿತ್ರಮಂದಿರಗಳನ್ನು ಮುಚ್ಚುವ ರಾಜ್ಯ ಸರಕಾರದ ಹಠಾತ್ ನಿರ್ಧಾರವನ್ನು ವಿರೋಧಿಸಿ ಬರೆದಿದ್ದೆ, ಮರುದಿನ ಅದನ್ನು ‘ವಾರ್ತಾಭಾರತಿ’ಯು ಮುಖಪುಟದಲ್ಲೇ ಪ್ರಕಟಿಸಿತ್ತು. ನನ್ನ ಆ ಹೇಳಿಕೆಯು ಹೀಗಿತ್ತು: ‘‘ಈ ಸರಕಾರಕ್ಕೆ ಯಾರಾದರೂ ಬುದ್ಧಿ ಹೇಳಿ ಅಥವಾ ಆ ಮಾಲ್, ಸಿನೆಮಾ ಮಂದಿರಗಳ ಮಾಲಕರು, ಮದುವೆ ಏರ್ಪಡಿಸಿದವರು ಬೀದಿಗೆ ಬಂದು ಪ್ರತಿಭಟಿಸಿ. ಇದು ಯಾವ ಉಪಯೋಗಕ್ಕೂ ಇಲ್ಲದ ಮೂರ್ಖತನದ ನಿರ್ಧಾರ. ಕೊರೋನ ಹರಡಿಯಾಗಿದೆ, ಭಾರತಕ್ಕೆ ಬಂದಾಗಿದೆ, ಶತಮಾನಗಳ ಕಾಲ ಉಳಿಯಲಿದೆ, ಅದು ಹರಡುವುದನ್ನು ತಡೆಯಲು ಸಾಧ್ಯವಿಲ್ಲ. ಶೇ. 70 ಸೋಂಕಿತರಲ್ಲಿ, ಅದರಲ್ಲೂ ಮಕ್ಕಳು ಮತ್ತು ಕಿರಿವಯಸ್ಕರಲ್ಲಿ, ಯಾವ ರೋಗಲಕ್ಷಣಗಳೂ ಇಲ್ಲದೆ ಅಥವಾ ಅತ್ಯಲ್ಪ ನೆಗಡಿ ಕೆಮ್ಮು ಉಂಟಾಗಿ ಅದು ಹೋಗಿಬಿಡುತ್ತದೆ.
60ಕ್ಕೆ ಮೇಲ್ಪಟ್ಟವರಲ್ಲಿ, ಒಟ್ಟಾರೆಯಾಗಿ ಶೇ. 15ರಷ್ಟು ಸೋಂಕಿತರಲ್ಲಿ, ಶ್ವಾಸಾಂಗಕ್ಕೆ ಸಮಸ್ಯೆಯುಂಟಾಗಿ ಉಸಿರಾಡಲು ಕಷ್ಟವೆನಿಸಬಹುದು, ಅಂತಹವರಷ್ಟೇ ಆಸ್ಪತ್ರೆಗೆ ಬಂದರೆ ಸಾಕು. ಅವರಲ್ಲೂ ಹೆಚ್ಚಿನವರಿಗೆ ಕೇವಲ ಆಮ್ಲಜನಕ ಕೊಟ್ಟರೆ ಸಾಕಾಗುತ್ತದೆ, ಶೇ. 5ರಷ್ಟು ಸೋಂಕಿತರಿಗಷ್ಟೇ ಕೃತಕ ಉಸಿರಾಟದ ಅಗತ್ಯ ಬರಬಹುದು, ಅವರಲ್ಲೂ ಹಲವರು ಗುಣಮುಖರಾಗುತ್ತಾರೆ. ಮಾಲ್, ಮದುವೆ ಮುಚ್ಚಬೇಡಿ. ಈ ಹಿರಿವಯಸ್ಕರು, ಅದಾಗಲೇ ಶ್ವಾಸಾಂಗದ ಸಮಸ್ಯೆಯುಳ್ಳವರು ಅತ್ತ ಹೋಗದಂತೆ ಹೇಳಿ, ಸಾಕು. ಉಸಿರಾಟದ ಸಮಸ್ಯೆಯಾದವರು ಕೂಡಲೇ ಆಸ್ಪತ್ರೆಗೆ ಹೋಗಿ. ತೀವ್ರ ಉಸಿರಾಟದ ಸಮಸ್ಯೆಯಿದ್ದವರಿಗೆ ಚಿಕಿತ್ಸೆ ನೀಡಲು ಆಸ್ಪತ್ರೆಗಳಲ್ಲಿ ಸೂಕ್ತ ವ್ಯವಸ್ಥೆಗಳನ್ನು ಮಾಡಿ, ಸಾಕು. ಮೂಗಿನ ತುದಿಗೆ ನೆಗಡಿಯಾದದ್ದಕ್ಕೆ ಕತ್ತನ್ನೇ ಕತ್ತರಿಸಬೇಡಿ.’’
ನನ್ನ ಈ ಹೇಳಿಕೆಯನ್ನು ವ್ಯಾಪಕವಾಗಿ ಹಂಚಿ ವ್ಯಂಗ್ಯವಾಡಲಾಯಿತು, ಸಾಮಾಜಿಕ ಮಾಧ್ಯಮಗಳಲ್ಲಿ ತಿಂಗಳುಗಟ್ಟಲೆ ನನ್ನನ್ನು ಹಂಗಿಸಿ ಬರೆಯಲಾಯಿತು, ಸರಕಾರಿ ವಿರೋಧಿ ಹೇಳಿಕೆ ನೀಡಿದರೆಂದು ನನ್ನ ಮೇಲೆ ಪುತ್ತೂರಿನ ಪೊಲೀಸ್ ಠಾಣೆಯಲ್ಲಿ ದೂರನ್ನೂ ದಾಖಲಿಸಲಾಯಿತು. ಅದಕ್ಕೇನೂ ತಲೆ ಕೆಡಿಸಿಕೊಳ್ಳದೆ ಕೊರೋನ ಸೋಂಕಿನ ನಿಯಂತ್ರಣ, ರೋಗಲಕ್ಷಣಗಳು, ಚಿಕಿತ್ಸೆ, ಗಂಭೀರ ಸಮಸ್ಯೆಗಳು, ಅವನ್ನು ಗುರುತಿಸುವ ಬಗೆ ಮತ್ತು ನಿಭಾವಣೆ ಇತ್ಯಾದಿ ಎಲ್ಲಾ ವಿಚಾರಗಳ ಬಗ್ಗೆ ನಾನು ಸತತವಾಗಿ ಬರೆಯುತ್ತಲೇ ಹೋದೆ, ‘ವಾರ್ತಾಭಾರತಿ’ಯ ಯುಟ್ಯೂಬ್ ಚಾನೆಲ್‌ನಲ್ಲೂ, ಇತರ ಮಾಧ್ಯಮಗಳಲ್ಲೂ, ಫೇಸ್‌ಬುಕ್‌ನಲ್ಲೂ ಅನೇಕ ವೀಡಿಯೊಗಳ ಮೂಲಕ ವೈಜ್ಞಾನಿಕ ಮಾಹಿತಿಯನ್ನು ನೀಡಿ ಜನರಲ್ಲಿ ಧೈರ್ಯವನ್ನು ತುಂಬುವ ಕೆಲಸವನ್ನು ಮಾಡಿದೆ.
ಡಾ. ಬಾಲಸರಸ್ವತಿ ಅವರೊಂದಿಗೆ ‘ಕೊರೋನ ಹೆದರದಿರೋಣ’ ಎಂಬ ಪುಸ್ತಕವನ್ನೂ ಆಗಸ್ಟ್ 2020ರಲ್ಲೇ ಬರೆದೆ. ಶಾಲೆ-ಕಾಲೇಜುಗಳನ್ನು ಮುಚ್ಚಿದುದನ್ನು ಮೊದಲಿನಿಂದಲೇ ವಿರೋಧಿಸುತ್ತಾ ಬಂದ ನಾನು, ಪ್ರೊ. ನಿರಂಜನಾರಾಧ್ಯ ಮುಂತಾದವರ ಮುತುವರ್ಜಿಯಿಂದ ಡಿಸೆಂಬರ್ 2020ರಲ್ಲಿ ಶಾಲೆಗಳನ್ನು ಕೂಡಲೇ ಪುನರಾರಂಭಿಸಬೇಕೆಂಬ ಆಂದೋಲನವೂ ನಡೆಯಿತು. ಬಳಿಕ 2021ರಲ್ಲಿ ಲಸಿಕೆಗಳನ್ನು ನೀಡಹೊರಟಾಗಲೂ ನಾನು ಅದರ ಸಾಧಕ-ಬಾಧಕಗಳ ಬಗ್ಗೆ ಸವಿವರವಾಗಿ ವಿಶ್ಲೇಷಿಸಿದ್ದೆ. ಆಗಲೂ ಕೆಲವು ವೈದ್ಯರು ನನ್ನನ್ನು ಟೀಕಿಸಿ, ಸುಳ್ಳುಗಳ ಅಂಕಣಗಳನ್ನೇ ಬರೆದರು.
ಮೇ 2021ರಲ್ಲಂತೂ ಮಾಸ್ಕ್ ನೆಪದಲ್ಲಿ ನನ್ನ ತೇಜೋವಧೆ ಮಾಡಲು ವೈದ್ಯಕೀಯ ಸಂಘಟನೆಗಳೂ ಸೇರಿದಂತೆ ಹಲವರು ಮುಗಿಬಿದ್ದರು, ಪೊಲೀಸ್ ಪ್ರಕರಣಗಳನ್ನೂ ದಾಖಲಿಸಲಾಯಿತು; ವೈದ್ಯಕೀಯ ಸಂಘಟನೆಗಳೇ ನನ್ನ ವಿರುದ್ಧ ಜಿಲ್ಲಾಡಳಿತಕ್ಕೂ, ವೈದ್ಯಕೀಯ ಮಂಡಳಿಗೂ ದೂರು ನೀಡಿ ಮಾನಹಾನಿಕರವಾದ ವೀಡಿಯೊಗಳನ್ನು ಹರಿಯಬಿಟ್ಟರು. ಆದರೂ ಎದೆಗುಂದದೆ ತನ್ನ ವೃತ್ತಿಯ ವಿಜ್ಞಾನಕ್ಕೆ ಬದ್ಧನಾಗಿ ಕೆಲಸ ಮಾಡುತ್ತಲೇ ಹೋದ ನಾನು, ನನ್ನ ಮೇಲೆ ಹಾಕಲಾಗಿದ್ದ ಪ್ರಕರಣಗಳಿಗೆ ಉಚ್ಚ ನ್ಯಾಯಾಲಯದಿಂದ ತಡೆಯಾಜ್ಞೆ ಪಡೆದೆ, ತೇಜೋವಧೆ ಮಾಡಿದ ವೈದ್ಯರ ಮೇಲೂ, ಮಾಧ್ಯಮಗಳು ಹಾಗೂ ಇತರರ ಮೇಲೂ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಿದೆ.
ಹಾಗೆಯೇ, ಕೊರೋನ ನಿಯಂತ್ರಣದ ಅತಿರೇಕಗಳ ಬಗ್ಗೆ ಪ್ರಶ್ನಿಸಿದ್ದ ಬೆಂಗಳೂರಿನ ವೈದ್ಯರಾದ ಡಾ. ರಾಜು ಕೃಷ್ಣಮೂರ್ತಿ, ಡಾ. ಆಂಜನಪ್ಪ, ಲಸಿಕೆಗಳ ಅಡ್ಡ ಪರಿಣಾಮಗಳ ಬಗ್ಗೆ ಎಚ್ಚರಿಸಲು ಪ್ರಯತ್ನಿಸಿದ್ದ ನರಶಸ್ತ್ರಚಿಕಿತ್ಸಾ ತಜ್ಞ ಡಾ. ಭಾನುಪ್ರಕಾಶ್ ಅವರ ಮೇಲೂ ಟೀಕಾಸ್ತ್ರಗಳಾದವು, ವೈದ್ಯಕೀಯ ಮಂಡಳಿ, ಜಿಲ್ಲಾಡಳಿತ ಮುಂತಾದವು ಕ್ರಮ ಕೈಗೊಳ್ಳಲು ಮುಂದಾದವು. ಮೂರನೇ ಅಲೆ, ನಾಲ್ಕನೇ ಅಲೆಗಳ ನೆಪವೊಡ್ಡಿ ಹೊಸ ಹೊಸ ಔಷಧಗಳನ್ನು ಮುಂದೊತ್ತಲು ರಾಜ್ಯ ಸರಕಾರದ ತಜ್ಞರ ಸಮಿತಿಯ ಪ್ರಯತ್ನಗಳನ್ನು ಈ ಎಲ್ಲ ವೈದ್ಯರೂ ವಿರೋಧಿಸಿದಾಗ, ಸರಕಾರ ನೇಮಿಸಿದ ವೈದ್ಯರ ಹೊರತು ಬೇರೆ ಯಾರೂ ಮಾತಾಡಕೂಡದೆಂದು ಆರೋಗ್ಯ ಸಚಿವರು ತಾಕೀತು ಮಾಡಲು ಯತ್ನಿಸಿದರು, ಆದರೆ ಅದು ಅಲ್ಲಿಗೇ ಕಮರಿ ಹೋಯಿತು.
ಅನೇಕ ದೇಶಗಳಲ್ಲಿ ಕೋವಿಡ್ ನೀತಿಗಳನ್ನು ವೈಜ್ಞಾನಿಕ, ವೈಚಾರಿಕ, ನೈತಿಕ, ನ್ಯಾಯಿಕ ನೆಲೆಗಳಲ್ಲಿ ಪ್ರಶ್ನಿಸಿದ್ದವರ ಮೇಲೆ ಹೀಗೆಯೇ ದಾಳಿಗಳಾಗಿವೆ. ಅಕ್ಟೋಬರ್ 2020ರಲ್ಲಿ ಅತ್ಯಂತ ಪ್ರತಿಷ್ಠಿತವಾದ ಸ್ಟಾನ್‌ಫೋರ್ಡ್, ಹಾವರ್ಡ್ ಮತ್ತು ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯಗಳಲ್ಲಿ ರೋಗ ಪ್ರಸರಣ ತಜ್ಞರಾಗಿದ್ದ, ಅನೇಕ ಪ್ರಶಸ್ತಿಗಳನ್ನು ಪಡೆದಿದ್ದ ಜಯ್ ಭಟ್ಟಾಚಾರ್ಯ, ಮಾರ್ಟಿನ್ ಕಲ್‌ಡಾರ್ಫ್ ಮತ್ತು ಸುನೇತ್ರ ಗುಪ್ತಾ ಅವರು ಜೊತೆಗೂಡಿ, ಕೊರೋನ ನಿಯಂತ್ರಣಕ್ಕೆ ಲಾಕ್ ಡೌನ್ ಮಾಡುವುದರಿಂದ ಪ್ರಯೋಜನಕ್ಕಿಂತ ಹಾನಿಯೇ ಹೆಚ್ಚುವುದರಿಂದ ಲಾಕ್‌ಡೌನ್ ಮಾಡಬಾರದೆಂದೂ, ಶಾಲೆ-ಕಾಲೇಜುಗಳನ್ನು ಮುಚ್ಚಬಾರದೆಂದೂ, ಕೊರೋನದಿಂದ ಸಮಸ್ಯೆಗೀಡಾಗಬಲ್ಲವರನ್ನು ಸುರಕ್ಷಿತವಾಗಿರಿಸುವುದಕ್ಕೆ ಮಾತ್ರವೇ ಆದ್ಯತೆ ನೀಡಬೇಕೆಂದೂ ‘ಬ್ಯಾರಿಂಗ್ಟನ್ ಘೋಷಣೆ’ ಎಂಬ ಹೇಳಿಕೆಯನ್ನು ಸಿದ್ಧಪಡಿಸಿದರು, ಅದಕ್ಕೆ ಅಮೆರಿಕ ಮತ್ತು ಯೂರೋಪ್‌ಗಳ 9 ಲಕ್ಷಕ್ಕೂ ಹೆಚ್ಚು ವೈದ್ಯರು, ವಿಜ್ಞಾನಿಗಳು ಮತ್ತು ಜನಸಾಮಾನ್ಯರು ತಮ್ಮ ಒಪ್ಪಿಗೆಯನ್ನು ಸೂಚಿಸಿದರು, ನೊಬೆಲ್ ಪುರಸ್ಕೃತ ವಿಜ್ಞಾನಿ ಮೈಕೆಲ್ ಲೆವಿಟ್ ಕೂಡ ಅದರಲ್ಲಿ ಸೇರಿದ್ದರು; ಇವನ್ನೇ ಮೊದಲಿನಿಂದಲೂ ಹೇಳುತ್ತಲೇ ಇದ್ದ ನಾನು ಕೂಡಾ ಹೀಗೆ ಸಹಿ ಮಾಡಿದವರಲ್ಲಿ ಸೇರಿದ್ದೆ.
ಆದರೆ ಈ ಬ್ಯಾರಿಂಗ್ಟನ್ ಘೋಷಣೆಯೂ ತೀವ್ರ ಟೀಕೆಗೀಡಾಯಿತು, ಜಯ್ ಭಟ್ಟಾಚಾರ್ಯ, ಮಾರ್ಟಿನ್ ಕಲ್‌ಡಾರ್ಫ್ ಮತ್ತು ಸುನೇತ್ರ ಗುಪ್ತಾ ಅವರನ್ನೂ, ಮೈಕೆಲ್ ಲೆವಿಟ್ ಅವರನ್ನೂ ಕೋವಿಡ್ ಬಗ್ಗೆ ತಪ್ಪುಮಾಹಿತಿ ನೀಡುವವರ ಪಟ್ಟಿಗೆ ಸೇರಿಸಲಾಯಿತು, ಅವರ ಸಾಮಾಜಿಕ ಮಾಧ್ಯಮಗಳ ಹೇಳಿಕೆಗಳ ಮೇಲೆ ಕತ್ತರಿಯಾಡಿಸಲಾಯಿತು, ಫೆಬ್ರವರಿಯಲ್ಲಿ ಬ್ಯಾರಿಂಗ್ಟನ್ ಘೋಷಣೆಯ ಫೇಸ್‌ಬುಕ್ ಪುಟವನ್ನೇ ನಿಷ್ಕ್ರಿಯಗೊಳಿಸಲಾಯಿತು. ಘೋಷಣೆಗೆ ಸಹಿ ಮಾಡಿದ್ದ ಭೌತ ವಿಜ್ಞಾನಿ ಡೆನಿಸ್ ರಾನ್‌ಕೋರ್ಟ್ ಅವರು ಮಾಸ್ಕ್ ಗಳಿಂದಾಗಬಹುದಾದ ಸಮಸ್ಯೆಗಳ ಬಗ್ಗೆ ಬರೆದಿದ್ದ ಲೇಖನವನ್ನು ರಿಸರ್ಚ್‌ಗೇಟ್ ಕಿತ್ತು ಹಾಕಿತು, ಕೊನೆಗೆ ಅವರನ್ನೇ ನಿಷೇಧಿಸಿತು.
ಆ ನಡುವೆ, ‘ಬ್ರಿಟಿಷ್ ಮೆಡಿಕಲ್ ಜರ್ನಲ್’ನಂತಹ ಪ್ರತಿಷ್ಠಿತ ವೈದ್ಯಕೀಯ ಪತ್ರಿಕೆಯಲ್ಲಿ ಸಂಪಾದಕ ಕಮ್ರಾನ್ ಅಬ್ಬಾಸಿ ಅವರು ಕೋವಿಡ್ ನಿಯಂತ್ರಣದಲ್ಲಿ ರಾಜಕೀಯ, ಔಷಧ ವಹಿವಾಟಿನ ಭ್ರಷ್ಟಾಚಾರ ಎಲ್ಲವೂ ಸೇರಿಕೊಂಡು ವೈಜ್ಞಾನಿಕ ಕ್ರಮಗಳು ಕಡೆಗಣಿಸಲ್ಪಡುತ್ತಿವೆ ಎಂದು ಬರೆದುದು ಯಾರ ಕಣ್ಣನ್ನೂ ತೆರೆಸಲಿಲ್ಲ.
ನಂತರದಲ್ಲಿ ಕೊರೋನ ವಿರುದ್ಧ ಎಂಆರ್‌ಎನ್‌ಎ ಲಸಿಕೆಗಳನ್ನು ಸರಿಯಾದ ಪರೀಕ್ಷೆಗಳನ್ನೂ ನಡೆಸದೆ ತರಾತುರಿಯಿಂದ ಬಳಸಲಾರಂಭಿಸಿದಾಗ ಅದನ್ನು ಪ್ರಶ್ನಿಸಿದವರ ಮೇಲೂ ಟೀಕೆಗಳಾದವು, ಬಹಿಷ್ಕಾರಗಳಾದವು, ಕೆಲಸದಿಂದ ಕಿತ್ತು ಹಾಕುವುದೂ ಆಯಿತು. ಎಂಆರ್‌ಎನ್‌ಎ ತಂತ್ರಜ್ಞಾನ ಮತ್ತು ಲಸಿಕೆಗಳ ಬಗ್ಗೆ ಮೊದಲ ವಿಜ್ಞಾನಿಗಳಲ್ಲೊಬ್ಬರಾದ ರಾಬರ್ಟ್ ಮಲೋನ್ ಅವರು ಈ ಹೊಸ ಲಸಿಕೆಯ ಸುರಕ್ಷತೆಯ ಬಗ್ಗೆ ಗಂಭೀರವಾದ ಪ್ರಶ್ನೆಗಳನ್ನೆತ್ತಿದ್ದಕ್ಕಾಗಿ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಬೇಕಾಯಿತು, ಅವರ ಟ್ವಿಟರ್ ಖಾತೆಯನ್ನು ಮುಚ್ಚಲಾಯಿತು.
ಕ್ಯಾಲಿಫೋರ್ನಿಯಾದ ಇರ್ವಿನ್ ವಿಶ್ವವಿದ್ಯಾನಿಲಯದಲ್ಲಿ ಮನೋವಿಜ್ಞಾನ ಮತ್ತು ವೈದ್ಯಕೀಯ ನೈತಿಕತೆಗಳ ಪ್ರೊಫೆಸರ್ ಆಗಿದ್ದ ಆರೋನ್ ಖೈರಾಟಿ ಅವರು ಲಸಿಕೆಗಳ ಮೇಲೆ ನಡೆಸಲಾಗಿತ್ತೆನ್ನಲಾದ ಪರೀಕ್ಷೆಗಳ ದತ್ತಾಂಶಗಳ ಬಗ್ಗೆ ಪ್ರಶ್ನಿಸಿದ್ದಕ್ಕಾಗಿ ಅವರನ್ನು ವಿಶ್ವವಿದ್ಯಾನಿಲಯದಿಂದ ರಜೆಯ ಮೇಲೆ ಕಳುಹಿಸಿ, ನಂತರ ಹೊರಹಾಕಲಾಯಿತು. ಸ್ಟಾನ್‌ಫೋರ್ಡ್ ವಿಶ್ವವಿದ್ಯಾನಿಲಯದ ಗೌರವಾನ್ವಿತ ರೋಗ ಪ್ರಸರಣ ತಜ್ಞರಾದ ಪ್ರೊ. ಜಾನ್ ಅಯೋನಿಡೀಸ್ ಅವರು ಕೊರೋನ ಸೋಂಕು ಅಷ್ಟೇನೂ ಮಾರಕವಾದುದಲ್ಲ ಎಂದು ಸೋಂಕಿನ ಆರಂಭದಿಂದಲೇ ಹೇಳುತ್ತಿದ್ದುದನ್ನು ಕಡೆಗಣಿಸಿ ಅವರನ್ನೂ ಕೀಳುಗಳೆಯಲಾಯಿತು.
ಕೊರೋನ ಲಾಕ್‌ಡೌನ್ ವಿಫಲವಾಗಿ, ಲಸಿಕೆಗಳೂ ಸೋಂಕು ತಡೆಯಲಾಗದೆ, ಎಲ್ಲರಿಗೂ ಸೋಂಕು ತಗಲಿ, ಸಾವುಗಳನ್ನೂ ತಡೆಯಲಾಗದೆ, ಅತ್ತ ಈ ಅವೈಜ್ಞಾನಿಕ, ಅಮಾನವೀಯ ಕ್ರಮಗಳಿಂದ ಆರ್ಥಿಕತೆ, ಕಲಿಕೆ, ಮಕ್ಕಳು, ಮಹಿಳೆಯರು ಮತ್ತು ಒಟ್ಟಾರೆಯಾಗಿ ಜನರೆಲ್ಲರ ಆರೋಗ್ಯ ರಕ್ಷಣೆ ಎಲ್ಲವೂ ತೀವ್ರವಾಗಿ ಬಾಧಿತವಾಗಿ, ಈ ವಿಜ್ಞಾನಿಗಳೂ, ವೈದ್ಯರುಗಳೂ ಎಚ್ವರಿಸಿದ್ದುದೆಲ್ಲವೂ ನಿಜವಾಗುತ್ತಿದ್ದಂತೆ ನಿಧಾನವಾಗಿ ಇವರ ಮೇಲೆ ನಡೆಯುತ್ತಿದ್ದ ದಾಳಿಗಳು ನಿಂತಿವೆ, ಅವರ ಸಲಹೆಗಳನ್ನು ಆಲಿಸುವುದಕ್ಕೆ ಅವಕಾಶ ನೀಡಲಾಗುತ್ತಿದೆ, ಸಾಮಾಜಿಕ ಮಾಧ್ಯಮಗಳಲ್ಲಿ ಹೇರಲಾಗಿದ್ದ ನಿಷೇಧವನ್ನು ಮರುಪರಿಶೀಲಿಸಬೇಕೆಂಬ ಕೂಗು ಜೋರಾಗುತ್ತಿದೆ.
ಇಸ್ರೇಲಿನ ಶಿರ್-ರಾಝ್ ಮತ್ತಿತರರು ಕೋವಿಡ್ ಕಾಲದಲ್ಲಿ ವೈಜ್ಞಾನಿಕ ನೆಲೆಯಿಂದ ಪ್ರಶ್ನೆಗಳನ್ನೆತ್ತಿದ್ದಕ್ಕಾಗಿ ತಮ್ಮ ಸಂಸ್ಥೆಗಳಿಂದಲೂ, ಸಹೋದ್ಯೋಗಿಗಳಿಂದಲೂ, ಸರಕಾರಗಳಿಂದಲೂ ಕಿರುಕುಳಗಳನ್ನನುಭವಿಸಿದ, ಬಹಿಷ್ಕೃತರಾದ, ಕೆಲಸಗಳನ್ನು ಕಳೆದುಕೊಂಡ ಆಸ್ಟ್ರೇಲಿಯಾ, ಕೆನಡಾ, ಜೆಕ್ ಗಣರಾಜ್ಯ, ಜರ್ಮನಿ, ಇಸ್ರೇಲ್, ಯುಕೆ ಮತ್ತು ಅಮೆರಿಕಗಳ 13 ವೈದ್ಯರು ಹಾಗೂ ವಿಜ್ಞಾನಿಗಳನ್ನು ಸಂದರ್ಶಿಸಿ ಅವರ ಅನುಭವಗಳನ್ನು ‘ಮಿನರ್ವಾ’ ಎಂಬ ಪತ್ರಿಕೆಯಲ್ಲಿ ಕೆಲದಿನಗಳ ಹಿಂದೆ ಪ್ರಕಟಿಸಿದ್ದಾರೆ. (Minerva 2022. https://doi.org/10.1007/s11024-022-09479-4)
ಇವರೆಲ್ಲರೂ ಕೊರೋನ ಬಗ್ಗೆ ಅಧಿಕೃತ ನಿಲುವುಗಳನ್ನೂ, ಲಾಕ್‌ಡೌನ್, ಮಾಸ್ಕ್, ಆಧಾರರಹಿತ ಚಿಕಿತ್ಸೆ, ಪರೀಕ್ಷೆಗಳಾಗದ ಲಸಿಕೆಗಳು ಇತ್ಯಾದಿಗಳನ್ನು ಪ್ರಶ್ನಿಸಿದ್ದಕ್ಕಾಗಿ ತಮ್ಮನ್ನು ಹೊರಗಿಟ್ಟದ್ದು, ತೇಜೋವಧೆ ಮಾಡಿದ್ದು, ಮುಖ್ಯ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ವಿರುದ್ಧ ಪ್ರತಿಕೂಲವಾದ, ಬೆದರಿಸುವ ವರದಿಗಳನ್ನು ಪ್ರಕಟಿಸಿದ್ದು, ಸಾರ್ವಜನಿಕ ಆರೋಗ್ಯಕ್ಕೆ ಅಪಾಯಕಾರಿ ಎಂಬಂತೆ ಬಿಂಬಿಸಲ್ಪಟ್ಟದ್ದು, ಕೆಲಸದಿಂದ ತೆಗೆದುಹಾಕಲ್ಪಟ್ಟದ್ದು, ತನಿಖೆಗೊಳಪಡಿಸಿದ್ದು, ವೈದ್ಯಕೀಯ ವೃತ್ತಿಯ ಪರವಾನಿಗೆಯನ್ನು ರದ್ದು ಪಡಿಸಿದ್ದು, ಯಾವುದೇ ಕಾರಣಗಳನ್ನು ನೀಡದೆ ತಾವಿದ್ದ ಉನ್ನತ ಹುದ್ದೆಗಳಿಂದಲೂ, ವೈದ್ಯಕೀಯ ಪತ್ರಿಕೆಗಳ ಸಂಪಾದಕ ಮಂಡಳಿಯಿಂದಲೂ ವಜಾಗೊಳಿಸಿದ್ದು, ಕಾನೂನು ಕ್ರಮಗಳನ್ನು ಕೈಗೊಂಡದ್ದು, ಮೊದಲೇ ಪ್ರಕಟಗೊಂಡಿದ್ದ ವೈಜ್ಞಾನಿಕ ಸಂಶೋಧನಾ ಬರಹಗಳನ್ನು ಪತ್ರಿಕೆಗಳು ಹಿಂಪಡೆದದ್ದು, ವೈದ್ಯಕೀಯ ಸಂಸ್ಥೆಗಳು ನಿರ್ಬಂಧಗಳನ್ನು ಹೇರಿದ್ದು ಇವೇ ಮುಂತಾದ ಕಷ್ಟಗಳನ್ನೂ, ಶಿಕ್ಷೆಗಳನ್ನೂ ಈ ಸಮೀಕ್ಷೆಯಲ್ಲಿ ಹೊರಗೆಡವಿದ್ದಾರೆ.
ಹೀಗೆ ಕಷ್ಟಕ್ಕೀಡಾದವರು ಸಾಮಾನ್ಯ ವೈದ್ಯರೋ, ವಿಜ್ಞಾನಿಗಳೋ ಆಗಿರಲಿಲ್ಲ; ಅವರಲ್ಲಿ ಹೆಚ್ಚಿನವರು ಅತ್ಯಂತ ಗೌರವಾನ್ವಿತರಾಗಿದ್ದರು, ನೊಬೆಲ್ ಪುರಸ್ಕಾರವೂ ಸೇರಿದಂತೆ ಅತ್ಯುನ್ನತ ಪುರಸ್ಕಾರಗಳನ್ನೂ, ಮನ್ನಣೆಗಳನ್ನೂ ಗಳಿಸಿದವರಾಗಿದ್ದರು. ಹಾಗಿದ್ದರೂ ಅವರು ವರ್ಷಗಳ ಕಾಲ ದುಡಿದ ಸಂಸ್ಥೆಗಳು, ಅವರ ಸಂಶೋಧನೆಗಳನ್ನು ಪ್ರಕಟಿಸಿದ ಪತ್ರಿಕೆಗಳು, ಸರಕಾರಗಳು, ವೈದ್ಯಕೀಯ ಸಂಘ-ಸಂಸ್ಥೆಗಳು ಅವರೆದುರು ತಿರುಗಿಬಿದ್ದವು. ಆ್ಯಂಟನಿ ಫೌಚಿಯಂತಹ ಹಿರಿಯರೇ ಇವರನ್ನು ತರಲೆಗಳೆಂದು ಪರಿಗಣಿಸಿದರು.
ಅಮೆರಿಕ, ಯುರೋಪ್ ಮತ್ತಿತರ ದೇಶಗಳ ಆಡಳಿತಗಳು, ಗೂಗಲ್, ಫೇಸ್‌ಬುಕ್, ಟ್ವಿಟರ್‌ಗಳಂತಹ ಕಂಪೆನಿಗಳ ಮೇಲೆ ಒತ್ತಡ ಹೇರಿದವು, ಆ ಕಂಪೆನಿಗಳೂ ಅದಕ್ಕೆ ತಲೆಬಾಗಿ ಈ ವೈದ್ಯರು ಮತ್ತು ವಿಜ್ಞಾನಿಗಳ ಮೇಲೆ ನಿರ್ಬಂಧ ಹೇರಿದವು.
ಇವರೆಲ್ಲರೂ ತಮ್ಮ ವೈಚಾರಿಕ ಪ್ರತಿರೋಧಕ್ಕೆ ಅದೇ ಮೊದಲ ಬಾರಿಗೆ ಅನುಭವಿಸಿದ ಈ ಶಿಕ್ಷೆಗಳಿಂದ ಆಶ್ಚರ್ಯ, ಆಘಾತಕ್ಕೊಳಗಾದರೂ, ಒಂದಿಷ್ಟೂ ಜಗ್ಗದೆ ತಮ್ಮ ನಿಲುವಿಗೆ ಬದ್ಧರಾಗಿ, ತಮ್ಮ ಪ್ರತಿರೋಧವನ್ನು ಮುಂದುವರಿಸಿದರು, ಅದಕ್ಕೆ ತಮ್ಮದೇ ಆದ ವಿಧಾನಗಳನ್ನು ಕಂಡುಕೊಂಡರು. ಅಂತರ್ಜಾಲದಲ್ಲಿ, ತಮಗೆ ಲಭ್ಯವಾದ ಪತ್ರಿಕೆಗಳು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಬರಹಗಳ ಮೂಲಕ, ವೀಡಿಯೊಗಳ ಮೂಲಕ ತಮ್ಮ ಪ್ರತಿರೋಧವನ್ನು ಮುಂದುವರಿಸಿದರು.
ಹೊಸ ಕೊರೋನ ಸೋಂಕಿಗೆ ಮೂರು ವರ್ಷಗಳಾಗುತ್ತಿರುವಾಗ ಈ ವೈದ್ಯರು ಮತ್ತು ವಿಜ್ಞಾನಿಗಳು ಇಂತೆಲ್ಲ ಕಷ್ಟಗಳನ್ನೆದುರಿಸಿಯೂ ತಮ್ಮ ಜನರಿಗಾಗಿ ವೈಜ್ಞಾನಿಕ ಸತ್ಯವನ್ನು ಎತ್ತಿ ಹಿಡಿದದ್ದು ಪ್ರಶಂಸೆಯನ್ನು ಗಳಿಸುತ್ತಿದೆ. ವೈಜ್ಞಾನಿಕ ಭಿನ್ನಾಭಿಪ್ರಾಯಗಳ ಬಗ್ಗೆ ತೆರೆದ ಮನಸ್ಸಿನ ನ್ಯಾಯಯುತ ಚರ್ಚೆಗಳಾಗುವ ಬದಲು ಅವನ್ನು ದಮನಿಸಿದರೆ ವೈದ್ಯಕೀಯ ಸೇವೆಗಳು, ವೈಜ್ಞಾನಿಕ ನಿಲುವುಗಳು ಮತ್ತು ಸಾರ್ವಜನಿಕ ಆರ�