ಫಿಫಾ ವಿಶ್ವಕಪ್: ಸ್ವಿಟ್ಸರ್‌ಲ್ಯಾಂಡ್ ಶುಭಾರಂಭ

ಕ್ಯಾಮರೂನ್ ವಿರುದ್ಧ 1-0 ಗೆಲುವು

Update: 2022-11-24 12:22 GMT

ದೋಹಾ, ನ.24: ಫಿಫಾ ವಿಶ್ವಕಪ್‌ನ ‘ಜಿ’ ಗುಂಪಿನ ತನ್ನ ಮೊದಲ ಪಂದ್ಯದಲ್ಲಿ ಸ್ವಿಟ್ಸರ್‌ಲ್ಯಾಂಡ್ ತಂಡ ಕ್ಯಾಮರೂನ್ ತಂಡವನ್ನು 1-0 ಗೋಲುಗಳ ಅಂತರದಿಂದ ಮಣಿಸಿ ಶುಭಾರಂಭ ಮಾಡಿದೆ.

 ಗುರುವಾರ ಅಲ್ ಜನಾಬ್ ಸ್ಟೇಡಿಯಮ್‌ನಲ್ಲಿ ನಡೆದ ಪಂದ್ಯದಲ್ಲಿ ಬ್ರೀಲ್ ಎಂಬೋಲೊ 48ನೇ ನಿಮಿಷದಲ್ಲಿ ಗೆಲುವಿನ ಗೋಲು ಗಳಿಸಿದರು. ಈ ಗೆಲುವಿನ ಮೂಲಕ ಸ್ವಿಟ್ಸರ್‌ಲ್ಯಾಂಡ್ ಮೂರಂಕವನ್ನು ಗಳಿಸಿತು.

ಕೆಲವು ಉತ್ತಮ ದಾಳಿಯ ಮೂಲಕ ಕ್ಯಾಮರೂನ್ ಪಂದ್ಯದಲ್ಲಿ ಉತ್ತಮ ಆರಂಭ ಪಡೆದಿತ್ತು. ಆದರೆ ಹಲವು ಅವಕಾಶಗಳನ್ನು ಕೈಚೆಲ್ಲಿತು. ಸ್ವಿಟ್ಸರ್‌ಲ್ಯಾಂಡ್‌ಗೆ ಆರಂಭದಲ್ಲಿ ಅವಕಾಶ ಲಭಿಸಿತ್ತು. ಆದರೆ ಎರಡೂ ತಂಡಗಳು ಮೊದಲಾರ್ಧದ ಅಂತ್ಯಕ್ಕೆ ಗೋಲು ಗಳಿಸಲು ವಿಫಲವಾದವು. ಆದಾಗ್ಯೂ ದ್ವಿತೀಯಾರ್ಧದಲ್ಲಿ ಸ್ವಿಟ್ಸರ್‌ಲ್ಯಾಂಡ್ ಸುಧಾರಿತ ಪ್ರದರ್ಶನ ನೀಡಿದ್ದು, 48ನೇ ನಿಮಿಷದಲ್ಲಿ ಎಂಬೋಲೊ ಆಕರ್ಷಕ ಗೋಲು ಗಳಿಸಿ 1-0 ಮುನ್ನಡೆ ಒದಗಿಸಿಕೊಟ್ಟರು.

ಎಂಬೋಲೊ ತಾನು ಹುಟ್ಟಿದ ದೇಶದ ವಿರುದ್ಧವೇ ಗೋಲು ಗಳಿಸಿ ಗಮನ ಸೆಳೆದರು. ಕ್ಯಾಮರೂನ್‌ನಲ್ಲಿ ಜನಿಸಿರುವ ಎಂಬೋಲೊ ಬಾಸೆಲ್‌ನಲ್ಲಿ ಬೆಳೆದಿದ್ದರು.

ಕ್ಯಾಮರೂನ್ ತಂಡ ವಿಶ್ವಕಪ್‌ನಲ್ಲಿ ಸತತ 8ನೇ ಪಂದ್ಯವನ್ನು ಸೋತಿದೆ. ಸ್ಪರ್ಧಾತ್ಮಕ ಟೂರ್ನಿಯಲ್ಲಿ ಮೆಕ್ಸಿಕೊ ಮಾತ್ರ 1930 ಹಾಗೂ 1958ರ ನಡುವೆ ಸತತ 9 ಪಂದ್ಯಗಳಲ್ಲಿ ಸೋತಿದೆ.

ಮತ್ತೊಂದೆಡೆ ಸ್ವಿಟ್ಸರ್‌ಲ್ಯಾಂಡ್ ಆರನೇ ಟೂರ್ನಮೆಂಟ್‌ನಲ್ಲಿ ವಿಶ್ವಕಪ್‌ನ ಆರಂಭಿಕ ಪಂದ್ಯವನ್ನು ಜಯಿಸಿದೆ. 1966ರಲ್ಲಿ ಜರ್ಮನಿ ವಿರುದ್ಧ ವಿಶ್ವಕಪ್‌ನ ಮೊದಲ ಪಂದ್ಯವನ್ನು ಸೋತಿತ್ತು.


 

Similar News