ಜಗ ದಗಲ
‘ದಿ ಮೌಸ್‌ಟ್ರಾಪ್’ 70ನೇ ವಾರ್ಷಿಕೋತ್ಸವ
‘ಕ್ವೀನ್ ಆಫ್ ಕ್ರೈಮ್’ ಎಂದೇ ಗುರುತಾಗಿರುವ ಜಗತ್ತಿನ ಅತ್ಯುತ್ತಮ ಪತ್ತೇದಾರಿ ಕಾದಂಬರಿಕಾರ್ತಿ ಅಗಾಥಾ ಕ್ರಿಸ್ಟಿ. ನಾಟಕಕಾರರಾಗಿಯೂ ಹೆಸರಾಗಿದ್ದ ಇಂಗ್ಲೆಂಡಿನ ಈ ಬರಹಗಾರ್ತಿಯ ‘ದಿ ಮೌಸ್‌ಟ್ರಾಪ್’ ಅತ್ಯಂತ ದೀರ್ಘಕಾಲ ಪ್ರದರ್ಶನಗೊಂಡ ನಾಟಕವಾಗಿದ್ದು, ಮೊದಲ ಬಾರಿಗೆ ನ್ಯೂಯಾರ್ಕ್‌ನ ಬ್ರಾಡ್ವೇ ಥಿಯೇಟರ್‌ನಲ್ಲಿ ಪ್ರದರ್ಶನಗೊಳ್ಳಲಿದೆ.
1952ರಿಂದ ಲಂಡನ್‌ನ ವೆಸ್ಟ್ ಎಂಡ್ ಥಿಯೇಟರಿನಲ್ಲಿ ಪ್ರದರ್ಶಗೊಳ್ಳುತ್ತಿರುವ ಈ ನಾಟಕ ಸುಮಾರು 29,000 ಪ್ರದರ್ಶನಗಳನ್ನು ಕಂಡಿದೆ. ಆವತ್ತಿಂದ ಕೋವಿಡ್ ಹೊತ್ತಿನವರೆಗೂ ಅದರ ಪ್ರದರ್ಶನ ನಿಂತಿರಲೇ ಇಲ್ಲ. ಕೋವಿಡ್ ಬಳಿಕ ಮತ್ತೆ ಸೆಪ್ಟಂಬರ್‌ನಿಂದ ನಾಟಿಂಗ್‌ಹ್ಯಾಮ್ ಥಿಯೇಟರ್ ರಾಯಲ್‌ನಲ್ಲಿ ಪ್ರದರ್ಶನ ಶುರುವಾಗಿದ್ದು, ಇದು ‘ದಿ ಮೌಸ್‌ಟ್ರಾಪ್’ ಪ್ರದರ್ಶನದ 70ನೇ ವಾರ್ಷಿಕೋತ್ಸವ.
ಕ್ರಿಸ್ಟಿ ಜೀವಿತಾವಧಿಯಲ್ಲಿ ನ್ಯೂಯಾರ್ಕ್‌ನಲ್ಲಿ ಅವರ ಈ ನಾಟಕ ಪ್ರದರ್ಶನ ಸಾಧ್ಯವಾಗಿರಲೇ ಇಲ್ಲ. ಅದೀಗ 70 ವರ್ಷಗಳ ನಂತರ ಆಗುತ್ತಿದೆ. 1952ರ ಮೂಲ ಸೆಟ್‌ನ ಉಳಿದಿರುವ ಏಕೈಕ ತುಣುಕು, ಮ್ಯಾಂಟೆಲ್‌ಪೀಸ್ ಗಡಿಯಾರವನ್ನು 2023ರಲ್ಲಿ ನ್ಯೂಯಾರ್ಕ್ ನಲ್ಲಿ ಸಿದ್ಧಗೊಳ್ಳಲಿರುವ ಸೆಟ್‌ಗೆ ಲಂಡನ್‌ನಿಂದ ನೀಡಲಾಗುತ್ತದಂತೆ.
ಕ್ರಿಸ್ಟಿಯ ಮರ್ಡರ್ ಮಿಸ್ಟ್ರಿ ಜನಪ್ರಿಯ ರಂಗಭೂಮಿಯ ಸ್ವರೂಪವನ್ನೇ ಬದಲಿಸಿತು. ನಾಟಕದ ವೆಸ್ಟ್ ಎಂಡ್ ಥಿಯೇಟರಿನಲ್ಲಿನ ಪ್ರದರ್ಶನಗಳ ಪ್ರೇಕ್ಷಕರಲ್ಲಿ ಸರಿಸುಮಾರು ಮೂರನೇ ಒಂದು ಭಾಗದಷ್ಟು ವಿದೇಶಿ ಪ್ರವಾಸಿಗರು ಎನ್ನಲಾಗುತ್ತದೆ. ಈಗ ಇದು ನ್ಯೂಯಾರ್ಕ್‌ನಲ್ಲಿ ಪ್ರದರ್ಶನಗೊಳ್ಳಲಿರುವುದು ಉತ್ತರ ಅಮೆರಿಕದಲ್ಲಿನ ದೊಡ್ಡ ಸಂಖ್ಯೆಯ ಕ್ರಿಸ್ಟಿ ಅಭಿಮಾನಿಗಳಿಗೆ ಖುಷಿಯ ವಿಚಾರ.
ಕ್ರಿಸ್ಟಿ 1932ರಲ್ಲಿ ತನ್ನ ಕಾದಂಬರಿ ‘ದಿ ಮರ್ಡರ್ ಆಫ್ ರೋಜರ್ ಅಕ್ರೊಯ್ಡೊ’ ಆಧರಿಸಿದ ‘ದಿ ಫೇಟಲ್ ಅಲಿಬಿ’ ಸೇರಿದಂತೆ ಬೆರಳೆಣಿಕೆಯಷ್ಟು ಕೃತಿಗಳನ್ನು ಮಾತ್ರವೇ ಬ್ರಾಡ್ವೇನಲ್ಲಿ ಪ್ರದರ್ಶಿಸಿದ್ದರು. ಈಗ ಲಂಡನ್‌ನ ಕೌಂಟಿ ಹಾಲ್‌ನಲ್ಲಿ ಪ್ರದರ್ಶನಗೊಳ್ಳುತ್ತಿರುವ ಅವರ ‘ವಿಟ್ನೆಸ್ ಫಾರ್ ದಿ ಪ್ರಾಸಿಕ್ಯೂಷನ್’, ನ್ಯೂಯಾರ್ಕ್‌ನಲ್ಲಿ 1954ರಿಂದ 1956ರವರೆಗೆ ಪ್ರದರ್ಶನಗೊಂಡಿತ್ತು.
1952ರಲ್ಲಿ ‘ದಿ ಮೌಸ್‌ಟ್ರಾಪ್’ ಪ್ರಾರಂಭವಾದಾಗ ರಿಚರ್ಡ್ ಅಟೆನ್‌ಬರೋ ಮತ್ತು ಶೀಲಾ ಸಿಮ್ ದಂಪತಿ ನಟಿಸಿದ್ದರು. ಲಂಡನ್‌ನಲ್ಲಿ ಪ್ರಾರಂಭವಾಗಿ 70 ವರ್ಷಗಳು ಪೂರ್ಣಗೊಂಡಿರುವ ನೆನಪಿಗಾಗಿ ವಿಶೇಷ ಕಾರ್ಟೂನನ್ನೂ ಬಿಡುಗಡೆ ಮಾಡಲಾಗಿದೆ.
ಬರ್ಲಿನ್ ಶೀತಲ ಸಮರದ ಆ ದಿನಗಳು
ಸುಮಾರು 40 ವರ್ಷಗಳಿಗೂ ಹೆಚ್ಚು ಕಾಲ ಶೀತಲ ಸಮರದಲ್ಲಿ ಕನಲಿಹೋಗಿದ್ದ ದೇಶ ಜರ್ಮನಿ. ಎರಡು ಜಾಗತಿಕ ಮಹಾಯುದ್ಧಗಳು ಜರ್ಮನಿಯನ್ನು ಹೋಳಾಗಿಸಿದ್ದವು. ಇದರಲ್ಲಿ ನಿಜವಾಗಿಯೂ ದಶಕಗಳ ಕಾಲ ನಲುಗಿದವರು ಜರ್ಮನಿಯ ರಾಜಧಾನಿ ಬರ್ಲಿನ್ ನಗರದ ಜನರು.
ಎರಡನೇ ಮಹಾಯುದ್ಧದಲ್ಲೂ ಸೋತುಹೋದ ಬಳಿಕ ಜರ್ಮನಿಯನ್ನು ಫ್ರಾನ್ಸ್, ಅಮೆರಿಕ, ಸೋವಿಯತ್ ಒಕ್ಕೂಟ (ಇಂದಿನ ರಶ್ಯ) ಮತ್ತು ಬ್ರಿಟನ್ ನಾಲ್ಕು ಪ್ರಾಂತಗಳಾಗಿಸಿದವು. ರಾಜಧಾನಿ ಬರ್ಲಿನ್ ಕೂಡ ಹಾಗೆಯೇ ನಾಲ್ಕು ತುಂಡಾಯಿತು. ಫ್ರಾನ್ಸ್, ಅಮೆರಿಕ ಮತ್ತು ಬ್ರಿಟನ್ ಆಳ್ವಿಕೆಯ ಪಶ್ಚಿಮ ಜರ್ಮನಿ ಭಾಗವು ಫೆಡರಲ್ ರಿಪಬ್ಲಿಕ್ ಆಫ್ ಜರ್ಮನಿ (ಎಫ್‌ಆರ್‌ಜಿ) ಎಂದಾದರೆ, ಸೋವಿಯತ್ ಒಕ್ಕೂಟದ ಆಳ್ವಿಕೆಯ ಪೂರ್ವ ಜರ್ಮನಿಯು ಜರ್ಮನ್ ಡೆಮಾಕ್ರಟಿಕ್ ರಿಪಬ್ಲಿಕ್ (ಜಿಡಿಆರ್) ಆಯಿತು. ಸಿದ್ಧಾಂತಗಳ ಸಂಘರ್ಷವೂ ಜೋರಾಯಿತು. ಬಂಡವಾಳಶಾಹಿ ಹಿಡಿತದ ಪಶ್ಚಿಮ ಜರ್ಮನಿಯನ್ನು ಎದುರಿಸುತ್ತಲೇ ಇರುವ ಸ್ಥಿತಿ ಸಮಾಜವಾದಿ ಸಿದ್ಧಾಂತದ ಸೋವಿಯತ್ ಒಕ್ಕೂಟಕ್ಕೆ ಉಂಟಾಗಿತ್ತು. ಅದರ ಆಡಳಿತಕ್ಕೆ ಬೇಸತ್ತ ಪೂರ್ವ ಜರ್ಮನಿಯ ಸಾವಿರಾರು ಮಂದಿ ಪಶ್ಚಿಮ ಜರ್ಮನಿಗೆ ವಲಸೆ ಹೋದರು. 1958ರಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಯಿತು. ಪೂರ್ವದಿಂದ ಜನರ ವಲಸೆ ತಡೆಯಲು ಬರ್ಲಿನ್ ನಗರದಲ್ಲಿ 1961ರಲ್ಲಿ ಗೋಡೆ ನಿರ್ಮಾಣವಾಯಿತು. ಒಂದೇ ನಗರಿಯ ಜನರು ಬೇರೆ ಬೇರೆಯಾಗುವಂತಾಯಿತು. ಬಂಧುಗಳು ಬೇರೆಬೇರೆಯಾಗಿ ಹೋದರು. ಎಲ್ಲವೂ ಪರಸ್ಪರರ ಪಾಲಿಗೆ ಪರಕೀಯವಾಗಿಬಿಟ್ಟಿತ್ತು. 140 ಕಿ.ಮೀ. ಉದ್ದದ ಈ ಗೋಡೆಯನ್ನು ಹಲವರು ದಾಟಲು ಯತ್ನಿಸಿ ಜೀವ ಕಳೆದುಕೊಂಡದ್ದೂ ಇತ್ತು. ಇದೆಲ್ಲ ಅಸಹನೆ ಕೊನೆಗೂ ಅಂತ್ಯವಾದದ್ದು 1989ರ ನವೆಂಬರ್ 9ರಂದು ಮಧ್ಯರಾತ್ರಿ. ಪೂರ್ವದಿಂದ ಪಶ್ಚಿಮ ಜರ್ಮನಿಗೆ ಜನರು ಹೋಗಬಹುದೆಂದು ಪೂರ್ವದ ಕಮ್ಯುನಿಸ್ಟ್ ಸರಕಾರ ಘೋಷಿಸಿದ್ದೇ ಎರಡೂ ಬದಿಯಿಂದ ಜನಪ್ರವಾಹ ಹರಿದುಬಂದು, ತಮ್ಮ ನಡುವೆ 28 ವರ್ಷಗಳಿಂದ ನಿಂತಿದ್ದ ಗೋಡೆಯನ್ನು ಛಿದ್ರಗೊಳಿಸಿತು. ಶೀತಲ ಸಮರ ತಂದಿಟ್ಟಿದ್ದ ತಲ್ಲಣದ ಕಾಲವು ಹಾಗೆ ಕೊನೆಯಾಗಿತ್ತು.
ಶೀತಲ ಸಮರದ ಆ ದಿನಗಳನ್ನು, ಯುದ್ಧಕಾಲದ ಹಲವು ಸಂಗತಿಗಳ ಮರುಸೃಷ್ಟಿಯೊಂದಿಗೆ ಕಾಣಿಸುವ ವಸ್ತುಸಂಗ್ರಹಾಲಯವು ಈಗ ಬರ್ಲಿನ್‌ನಲ್ಲಿ ತೆರೆದಿದೆ. ಬರ್ಲಿನ್ ಗೋಡೆ ಎದ್ದುನಿಂತಿದ್ದ ಸ್ಥಳದಿಂದ ಕೆಲವೇ ನೂರು ಮೀಟರ್‌ಗಳ ಅಂತರದಲ್ಲಿಯೇ ತಲೆಯೆತ್ತಿರುವ ಇದು, ವಿಶ್ವದಲ್ಲೇ ಮೊದಲ ಶೀತಲ ಸಮರ ವಸ್ತುಸಂಗ್ರಹಾಲಯವಾಗಿದೆ.
ಅವತ್ತಿನ ಹಲವು ಕ್ಷಿಪಣಿಗಳು, ಶಸ್ತ್ರಗಳು ಮೊದಲಾದವುಗಳ ಕಲಾಕೃತಿಗಳು ಒಂದೆಡೆಯಾದರೆ, ಅವತ್ತಿನ ಸನ್ನಿವೇಶವನ್ನು ಧ್ವನಿ ಮತ್ತು ದೃಶ್ಯ ಮಾಧ್ಯಮದ ಮೂಲಕ ಪ್ರಸ್ತುತಪಡಿಸುವ ವಿಭಾಗ ಮತ್ತೊಂದೆಡೆಗಿದೆ. ವರ್ಚುವಲ್ ರಿಯಾಲಿಟಿ ಮೂಲಕ ಇತಿಹಾಸವನ್ನು ಮತ್ತೆ ಕಾಣಿಸುವ ಬಗೆಯಂತೂ ಅದ್ಭುತ ಎಂದು ವರದಿಗಳು ಹೇಳುತ್ತವೆ. ಎಲ್ಲ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದೆ ಈ ಮ್ಯೂಸಿಯಂ.
ಪಾಕಿಸ್ತಾನದಲ್ಲಿ ಕುಸಿಯುತ್ತಿರುವ ವೃತ್ತಪತ್ರಿಕೆ ಉದ್ಯಮ
ಪಾಕಿಸ್ತಾನದಲ್ಲಿ ದಿನಪತ್ರಿಕೆ ಮಾರಾಟ ಕುಸಿಯತೊಡಗಿರುವ ವಿಚಾರ ದೊಡ್ಡ ಸುದ್ದಿಯಾಗುತ್ತಿದೆ. ಹಾಗೆ ನೋಡಿದರೆ ಇದು ದಕ್ಷಿಣ ಏಶ್ಯದ ಹಲವಾರು ದೇಶಗಳಲ್ಲಿನ ಸ್ಥಿತಿಯೂ ಹೌದು.
ದಶಕದ ಹಿಂದಿನವರೆಗೂ ವೃತ್ತಪತ್ರಿಕೆ ಉದ್ಯಮವು ಪಾಕಿಸ್ತಾನದಲ್ಲಿ ಚೆನ್ನಾಗಿಯೇ ಇತ್ತು. ಎಲ್ಲ ಕಚೇರಿಗಳು, ಕೆಫೆಗಳು, ಮನೆಗಳಲ್ಲಿ ವೃತ್ತಪತ್ರಿಕೆಯೊಂದು ಅಗತ್ಯ ಎಂಬಂತಿತ್ತು. ಆದರೆ 2001ರಿಂದ 2008ರ ನಡುವೆ ಪರ್ವೇಝ್ ಮುಷರ್ರಫ್ ಅಧ್ಯಕ್ಷತೆಯ ಕಾಲದಲ್ಲಿ ಪ್ರಾರಂಭವಾದ ಹತ್ತಾರು ಖಾಸಗಿ ಟಿವಿ ಸುದ್ದಿ ವಾಹಿನಿಗಳು ಮುದ್ರಣ ಮಾಧ್ಯಮದ ಮೇಲೆ ಕರಾಳ ಛಾಯೆಯನ್ನು ಬೀರಲಾರಂಭಿಸಿದವು.
ಹೀಗೆಲ್ಲ ಆಗುವ ಮೊದಲು ಇಸ್ಲಾಮಾಬಾದಿನಲ್ಲಿ 700 ಪತ್ರಿಕಾ ಮಾರಾಟಗಾರರಿದ್ದರು. ರಾವಲ್ಪಿಂಡಿಯಲ್ಲಿ ಇವರ ಸಂಖ್ಯೆ 1,600ರಷ್ಟಿತ್ತು. ಈಗ ಅದು ಅರ್ಧಕ್ಕರ್ಧ ಕುಸಿದಿದೆ ಎನ್ನುತ್ತವೆ ವರದಿಗಳು. ಮುದ್ರಣ ಮಾಧ್ಯಮದ ಈ ಕುಸಿತಕ್ಕೆ ಇರುವ ಮುಖ್ಯ ಕಾರಣ, ಸರಕಾರಿ ಜಾಹೀರಾತುಗಳ ಮೇಲೆ ಅವಲಂಬಿತವಾಗಿರುವುದು. ಇತ್ತೀಚೆಗೆ ಸರಕಾರಗಳು ಜಾಹೀರಾತು ಕಡಿತವನ್ನು ಪಾಲಿಸುತ್ತಿರುವುದರಿಂದ ಅವುಗಳಿಂದ ಬರುವ ಆದಾಯದಲ್ಲಿ ದೊಡ್ಡ ಇಳಿಕೆಯಾಗಿದೆ.
ಇವೆಲ್ಲದರ ನಡುವೆಯೂ, ಜನರು ಒಂದು ಅಭಿಪ್ರಾಯಕ್ಕಾಗಿ ಮತ್ತು ತಾವು ಪ್ರೀತಿಸುವ ಸಂಪಾದಕೀಯಗಳಿಗಾಗಿ ದಿನವೂ ಕಾಯುವುದರಿಂದ, ವಿಶ್ವಾಸಾರ್ಹ ಪತ್ರಿಕೆಗಳು ಎಂಥದೇ ಸಂಕಟ ಕಾಲದಲ್ಲಿಯೂ ಉಳಿದೇ ಉಳಿಯುತ್ತವೆ ಎಂಬ ವಿಶ್ವಾಸವನ್ನೂ ವಿಶ್ಲೇಷಕರು ವ್ಯಕ್ತಪಡಿಸುತ್ತಾರೆ. ಹಿರಿಯ ತಲೆಮಾರಿನ ಅನೇಕರಿಗೆ ನಿತ್ಯ ಬೆಳಗ್ಗೆ ಚಹ ಸೇವನೆ ವೇಳೆ ವೃತ್ತಪತ್ರಿಕೆ ಇರಲೇಬೇಕು. ಪತ್ರಿಕೆ ಪ್ರಕಟವಾಗದಿರುವ ಕೆಲವು ದಿನಗಳಲ್ಲಿ ಹಿಂದಿನ ದಿನದ ಪತ್ರಿಕೆಯಿಟ್ಟುಕೊಂಡು ಚಹ ಸೇವಿಸುತ್ತ ಕಣ್ಣಾಡಿಸುವವರೂ ಇದ್ದಾರೆನ್ನುತ್ತದೆ ಒಂದು ವರದಿ. ಅದು ಪತ್ರಿಕೆಯನ್ನೋದುವ ಖುಷಿಯೆಂಥದು ಎಂಬುದನ್ನು ನಿರೂಪಿಸುವ ಸಂಗತಿ.