ಕೋಮುವಾದಿ ಏಕರೂಪ ನಾಗರಿಕ ಸಂಹಿತೆಯೋ? ನ್ಯಾಯಸಮ್ಮತ ನಾಗರಿಕ ಸಂಹಿತೆಯೋ?
ಏಕರೂಪ ನಾಗರಿಕ ಸಂಹಿತೆಯನ್ನು ತನ್ನ ಪರಮ ಕೋಮುವಾದಿ ಕಾರ್ಯಕ್ರಮಗಳಾದ ಆರ್ಟಿಕಲ್ 370 ರದ್ದತಿ, ಬಾಬರಿ ಮಸೀದಿ ಜಾಗದಲ್ಲಿ ರಾಮಮಂದಿರ ನಿರ್ಮಾಣ ಮಾಡುವ ಅಜೆಂಡಗಳ ಜೊತೆಗೆ ಸೇರಿಸಿ ಅದರ ಮೂಲ ಆಶಯವನ್ನೇ ಕೊಲ್ಲುತ್ತಾ ಬಂದಿದೆ. ಹೀಗಾಗಿ ಈ ಚುನಾವಣಾ ಸಮಯದಲ್ಲಿ ಬಿಜೆಪಿ ಹೇಳುವ ಏಕರೂಪ ನಾಗರಿಕ ಸಂಹಿತೆಗೂ, ಸಂವಿಧಾನದ ಆಶಯವಾಗಿದ್ದ ನಾಗರಿಕ ಸಂಹಿತೆಗೂ ಇರುವ ಮೂಲಭೂತ ವ್ಯತ್ಯಾಸಗಳನ್ನು ಅರಿಯುವುದು ಅತ್ಯಗತ್ಯವಾಗಿದೆ.
ಚುನಾವಣೆಗಳು ಹತ್ತಿರ ಬರುತ್ತಿದ್ದಂತೆ , ಹೇಳಿಕೊಳ್ಳಲು ಯಾವುದೇ ಜನಪರ ಸಾಧನೆಗಳಿಲ್ಲದ ಬಿಜೆಪಿ ಎಲ್ಲಾ ರಾಜ್ಯಗಳಲ್ಲಿ ಕೋಮುವಾದಿ ಧ್ರುವೀಕರಣ ತಂತ್ರವನ್ನು ಅನುಸರಿಸುತ್ತಿದೆ. ಅದರ ಭಾಗವಾಗಿಯೇ, ಚುನಾವಣೆಯನ್ನು ಎದುರಿಸುತ್ತಿರುವ ಗುಜರಾತ್, ಹಿಮಾಚಲ ಪ್ರದೇಶಗಳಲ್ಲಿ ತಾನು ಅಧಿಕಾರಕ್ಕೆ ಬಂದರೆ 'ಏಕರೂಪ ನಾಗರಿಕ ಸಂಹಿತೆ'ಯನ್ನು ಜಾರಿ ಮಾಡಲು ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡುತ್ತಿದೆ. ಬಿಜೆಪಿ ರಾಜ್ಯಗಳ ನಡುವೆ ಇಂತಹ ಹಿಂದುತ್ವ ಪಂದ್ಯಗಳು ನಡೆದರೆ ತಾನು ಸದಾ ಎಲ್ಲರಿಗಿಂತ ಮುಂದು ಎಂದು ಸಾಬೀತು ಪಡಿಸಿಕೊಳ್ಳುವ ಉಮೇದಿನಲ್ಲಿರುವ ಕರ್ನಾಟಕದ ಮುಖ್ಯಮಂತ್ರಿ ಬೊಮ್ಮಾಯಿಯವರೂ ಕರ್ನಾಟಕದಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತರಲು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಘೋಷಿಸಿದ್ದಾರೆ. ಕೇಂದ್ರದಲ್ಲಿ ಹಾಗೂ ರಾಜ್ಯದಲ್ಲಿ ಎರಡೂ ಕಡೆ ಬಿಜೆಪಿ ಸರಕಾರವೇ ಇರುವುದರಿಂದ ತಮ್ಮದು ಡಬಲ್ ಇಂಜಿನ್ ಸರಕಾರ ಎಂದು ಹೇಳಿಕೊಳ್ಳುವ ಈ ಬಿಜೆಪಿ ಮುಖ್ಯಮಂತ್ರಿಗಳು, ಅಂತಹ ವಿಶೇಷ ಅವಕಾಶವಿದ್ದರೂ ತಮ್ಮ ರಾಜ್ಯಗಳಲ್ಲಿ ಒಂದಾದರೂ ಜನೋಪಯೋಗಿ ಯೋಜನೆಯ ಹೆಸರಲ್ಲಿ ಮತಗಳನ್ನು ಕೇಳಲಾಗದೆ, ಪದೇಪದೇ ಕೋಮುವಿಭಜಕ ವಿಚ್ಛಿದ್ರಕಾರಿ ಚುನಾವಣಾ ತಂತ್ರಗಳನ್ನೇ ಬಳಸುವುದು ಅವುಗಳ ಜನವಿರೋಧಿತನವನ್ನು ಪರೋಕ್ಷವಾಗಿ ಬಯಲುಗೊಳಿಸುತ್ತಿಲ್ಲವೇ?
ಈ ಏಕರೂಪ ನಾಗರಿಕ ಸಂಹಿತೆ Uniform Civil Codeಯ ಪ್ರಸ್ತಾವ ಸಂವಿಧಾನದ ಪ್ರಭುತ್ವ ನಿರ್ದೇಶನಾ ತತ್ವದ 44ನೇ ಕಲಮಿನಲ್ಲಿದ್ದರೂ, ಬಿಜೆಪಿ ಮತ್ತು ಅದರ ಪೂರ್ವ ರೂಪವಾದ ಭಾರತೀಯ ಜನಸಂಘ (ಬಿಜೆಎಸ್) ಅದನ್ನು ಸಂವಿಧಾನದ ಆಶಯಗಳಿಗೆ ತದ್ವಿರುದ್ಧವಾಗಿ ವ್ಯಾಖ್ಯಾನಿಸುತ್ತಾ ಬಂದಿದೆ. ಏಕರೂಪ ನಾಗರಿಕ ಸಂಹಿತೆಯನ್ನು ತನ್ನ ಪರಮ ಕೋಮುವಾದಿ ಕಾರ್ಯಕ್ರಮಗಳಾದ ಆರ್ಟಿಕಲ್ 370 ರದ್ದತಿ, ಬಾಬರಿ ಮಸೀದಿ ಜಾಗದಲ್ಲಿ ರಾಮಮಂದಿರ ನಿರ್ಮಾಣ ಮಾಡುವ ಅಜೆಂಡಗಳ ಜೊತೆಗೆ ಸೇರಿಸಿ ಅದರ ಮೂಲ ಆಶಯವನ್ನೇ ಕೊಲ್ಲುತ್ತಾ ಬಂದಿದೆ. ಹೀಗಾಗಿ ಈ ಚುನಾವಣಾ ಸಮಯದಲ್ಲಿ ಬಿಜೆಪಿ ಹೇಳುವ ಏಕರೂಪ ನಾಗರಿಕ ಸಂಹಿತೆಗೂ, ಸಂವಿಧಾನದ ಆಶಯವಾಗಿದ್ದ ನಾಗರಿಕ ಸಂಹಿತೆಗೂ ಇರುವ ಮೂಲಭೂತ ವ್ಯತ್ಯಾಸಗಳನ್ನು ಅರಿಯುವುದು ಅತ್ಯಗತ್ಯವಾಗಿದೆ.
ಸಂವಿಧಾನ ಸಭೆ ಮತ್ತು ನಾಗರಿಕ ಸಂಹಿತೆಯ ಬಗೆಗಿನ ಚರ್ಚೆಗಳು
ಭಾರತದ ಸಂವಿಧಾನದಲ್ಲಿ ಮತ್ತು ಅದನ್ನು ಆಧರಿಸಿ ರೂಪುಗೊಂಡ ಭಾರತೀಯ ದಂಡ ಸಂಹಿತೆಗಳಲ್ಲಿ ಭಾರತದ ನಾಗರಿಕರೆಲ್ಲರಿಗೂ ಜಾತಿ-ಲಿಂಗ-ಧರ್ಮಗಳ ಭೇದವಿಲ್ಲದಂತೆ ಏಕರೂಪವಾಗಿ ಅಪರಾಧ ಸಂಹಿತೆಗಳು ಲಾಗೂ ಆಗುತ್ತವೆ. ಅದೇ ರೀತಿ ಸಿವಿಲ್ ಪರಿಧಿಗೆ ಬರುವ ಆಸ್ತಿ ವಿಕ್ರಯ, ಕರಾರು ಒಪ್ಪಂದ ಇನ್ನಿತರ ಕಾಯ್ದೆಗಳು ಸಮಾನವಾಗಿ ಲಾಗೂ ಆದರೂ ಹಲವು ರಾಜ್ಯ ಸರಕಾರಗಳು ನಿರೀಕ್ಷಣಾ ಜಾಮೀನು, ಮೋಟಾರ್ ವೆಹಿಕಲ್ ಕಾಯ್ದೆಯಂಥ ವಿಷಯಗಳಲ್ಲಿ ತಮ್ಮ ರಾಜ್ಯಕ್ಕೆ ಅಗತ್ಯ ಎಂದು ಭಾವಿಸುವ ಮಾರ್ಪಾಡುಗಳನ್ನು ಮಾಡಿಕೊಂಡಿವೆ. ಹೀಗಾಗಿ ಪ್ರಧಾನವಾಗಿ ಏಕರೂಪತೆ ಇದ್ದರೂ ಹಲವು ರಾಜ್ಯವಾರು ವ್ಯತ್ಯಾಸಗಳೂ ಇವೆ. ಆದರೆ ಇವುಗಳಾಚೆ, ವಿವಾಹ-ವಿಚ್ಛೇದನ, ವಾರಸುದಾರಿಕೆ-ಉತ್ತರಾಧಿಕಾರತ್ವ, ದತ್ತು ಸ್ವೀಕಾರದಂಥ ವೈಯಕ್ತಿಕ ಹಾಗೂ ಕೌಟುಂಬಿಕ ವಿಚಾರಗಳಿಗೆ ಸಂಬಂಧಪಟ್ಟಂತೆ ಏಕರೂಪ ನಾಗರಿಕ ಸಂಹಿತೆ ಬೇಕೇ ಎಂಬ ಬಗ್ಗೆ ಸಂವಿಧಾನ ಸಭೆಯಲ್ಲಿ ಸುದೀರ್ಘವಾದ ಚರ್ಚೆಗಳು ನಡೆದಿವೆ. ಆ ಚರ್ಚೆಗಳಲ್ಲಿ ಸಂವಿಧಾನಕರ್ತರು ಏಕರೂಪತೆಯೆಂದರೆ ಹಿಂದೂ ಮತ ಸಂಹಿತೆಯನ್ನು ಏಕರೂಪವಾಗಿ ಇಡೀ ದೇಶದ ಮೇಲೆ ಹೇರುವ ಏಕರೂಪತೆಯೆಂದು ಎಲ್ಲೂ ಪ್ರಸ್ತಾವಿಸಿಲ್ಲ. ಹಾಗೆಯೇ ಎಲ್ಲಾ ಮತಗಳಲ್ಲಿರುವ 'ಅತ್ಯುತ್ತಮ' ಅಂಶಗಳನ್ನು ಒಟ್ಟು ಸೇರಿಸಿ ಕಾನೂನು ಮಾಡಿ ದೇಶದ ಮೇಲೆ ಹೇರಬೇಕೆಂಬುದು ಸಂವಿಧಾನಕರ್ತರ ಉದ್ದೇಶವಾಗಿರಲಿಲ್ಲ. ವಿವಾಹ-ವಿಚ್ಛೇದನ, ವಾರಸುದಾರಿಕೆ-ಉತ್ತರಾಧಿಕಾರತ್ವ, ದತ್ತು ಸ್ವೀಕಾರ ವಿಷಯಗಳಿಗೆ ಸಂಬಂಧಪಟ್ಟ ಎಲ್ಲಾ ಆಚರಣೆಗಳು ಬಹುಪಾಲು ಆಯಾ ಮತಧರ್ಮ ಮತ್ತು ಸಂಪ್ರದಾಯಗಳನ್ನು ಆಧರಿಸಿ ರೂಪುಗೊಂಡಿವೆ ಮತ್ತು ಅವು ಹೆಣ್ಣಿನ ಮೇಲೆ ಗಂಡಿನ ಅಧಿಕಾರವನ್ನು ಸ್ಥಾಪಿಸುವ ಮತ್ತು ಹೆಣ್ಣಿಗೆ ಯಾವುದೇ ಅಧಿಕಾರವನ್ನು, ಪಾಲನ್ನು ನಿರಾಕರಿಸುವ ಪುರುಷಾಧಿಪತ್ಯ ಪ್ರೇರಿತ ಕಟ್ಟಳೆಗಳೇ ಆಗಿವೆ.
ಉದಾಹರಣೆಗೆ, ಅಂಬೇಡ್ಕರ್ ಅವರು 1949ರಲ್ಲಿ ಹಿಂದೂ ಮಹಿಳೆಯರಿಗೆ ಅಲ್ಪಸ್ವಲ್ಪಕೌಟುಂಬಿಕ ಅಧಿಕಾರವನ್ನಾದರೂ ಒದಗಿಸಬೇಕೆಂದು ಮುಂದಿಟ್ಟ ಹಿಂದೂ ಕೋಡ್ ಬಿಲ್‌ನಲ್ಲಿ ವಿವರಿಸುವಂತೆ, ಆಗ ಹಿಂದೂ ಮಹಿಳೆಯರಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲಿರಲಿಲ್ಲ, ಗಂಡನ ಆಸ್ತಿಯ ಮೇಲೆ ಪ್ರಧಾನ ಹಕ್ಕು ಗಂಡನ ಮನೆಯವರಿಗೇ ಮತ್ತು ಗಂಡು ಮಕ್ಕಳಿಗೇ ವಿನಾ ವಿಧವೆಗೂ ಇಲ್ಲ, ಹೆಣ್ಣು ಮಕ್ಕಳಿಗೂ ಇರಲಿಲ್ಲ. ಹೆಣ್ಣುಮಕ್ಕಳು ಇತರ ಜಾತಿಯವರನ್ನು ಮದುವೆಯಾಗುವಂತೆಯೂ ಇರಲಿಲ್ಲ, ಇತರ ಜಾತಿಯವರನ್ನು ದತ್ತು ಸ್ವೀಕಾರ ಮಾಡುವಂತೆಯೂ ಇರಲಿಲ್ಲ. ಗಂಡು ಎಷ್ಟು ಬೇಕಾದರೂ ಮದುವೆಯಾಗಬಹುದಾಗಿದ್ದರೂ, ಮಹಿಳೆ ಗಂಡ ಸತ್ತರೂ ಮದುವೆಯಾಗುವಂತಿರಲಿಲ್ಲ. ಹೀಗೆ ವಿವಾಹ ಮತ್ತು ವಿಚ್ಛೇದನ ಎರಡರಲ್ಲೂ ವೈವಾಹಿಕ ಹಾಗೂ ಕೌಟುಂಬಿಕ ಜೀವನದಲ್ಲಿ ಹಿಂದೂ ಧರ್ಮವು ಹೆಣ್ಣುಮಕ್ಕಳಿಗೆ ಗುಲಾಮಳಂತೆ ಬಿಟ್ಟಿ ಚಾಕರಿ ಮಾಡುವುದನ್ನು ಸಾಂಪ್ರದಾಯಿಕ ಶಾಸನ ಮಾಡಿದೆ. ಎಲ್ಲಾ ಹಕ್ಕು ಮತ್ತು ಅಧಿಕಾರಗಳನ್ನು ನಿರಾಕರಿಸಿದೆ.
ಇದಕ್ಕೆ ಹೋಲಿಸಿದರೆ, ಇಸ್ಲಾಮಿನಲ್ಲಿ ಮದುವೆಗೆ ಮುಂಚೆ ಹೆಣ್ಣಿನ ಒಪ್ಪಿಗೆಯನ್ನು ಕೇಳಲಾಗುತ್ತದೆ ಹಾಗೂ ಅಲ್ಲಿ ಮದುವೆಯೆಂಬುದು ಒಂದು ಕರಾರು ಒಪ್ಪಂದ. ಆದರೆ ಅಲ್ಲಿಯೂ ಬಹುಪತ್ನಿತ್ವ ಧರ್ಮಾಬಾಹಿರವಲ್ಲ ಮತ್ತು ಗಂಡು ಹೆಣ್ಣು ಇಬ್ಬರಿಗೂ ಮದುವೆ ಕರಾರನ್ನು ಮುರಿಯುವ ಅಧಿಕಾರವಿದ್ದರೂ, ವಿಚ್ಛೇದಿತ ಮಹಿಳೆಗೆ ನಿರ್ದಿಷ್ಟ ಅವಧಿಯನ್ನು ಮೀರಿದ ನಂತರ ಕುಟುಂಬ ಪೋಷಣೆಗೆ ಪರಿಹಾರವನ್ನು ಕೊಡಬೇಕಿಲ್ಲ. ಕ್ರಿಶ್ಚಿಯನ್ ಮತವು ಮಹಿಳೆಯ ಮರು ವಿವಾಹ ಮತ್ತು ವಿಧವಾ ವಿವಾಹವನ್ನು ವ್ಯಭಿಚಾರವೆಂದು ಪರಿಗಣಿಸುತ್ತದೆ. ಆದರೆ ಈ ಎಲ್ಲಾ ಮತಧರ್ಮಗಳು ಒಂದಲ್ಲ ಒಂದು ರೀತಿಯಲ್ಲಿ ಮಹಿಳೆಯರನ್ನು ಶೋಷಿಸುವ ಮತ್ತು ಪುರುಷಾಧಿಪತ್ಯವನ್ನು ಪೋಷಿಸುವ ವೈವಾಹಿಕ ಮತ್ತು ಕೌಟುಂಬಿಕ ಸಂಪ್ರದಾಯಗಳನ್ನು ಶಾಸನವನ್ನಾಗಿ ಮಾಡಿಟ್ಟಿದೆ. ಅದರಲ್ಲಿ ಬ್ರಾಹ್ಮಣೀಯ ಹಿಂದೂ ಮತಸೂತ್ರಗಳು ಇತರ ಎಲ್ಲಾ ಮತಗಳಿಗಿಂತ ಮಹಿಳಾ ವಿರೋಧಿಯಾಗಿವೆ. ಆದರೆ ನಮ್ಮ ಸಂವಿಧಾನವು ಈ ದೇಶದ ಎಲ್ಲ ಪ್ರಜೆಗಳಿಗೂ ಸಮಾನವಾದ ಹಕ್ಕುಗಳನ್ನು ಖಾತರಿ ಮಾಡುತ್ತದೆ ಹಾಗೂ ಗಂಡು-ಹೆಣ್ಣಿನ ನಡುವೆ ತಾರತಮ್ಯ ಮಾಡಬಾರದೆಂದು ವಿಧಿಸುತ್ತದೆ. ಹೀಗಾಗಿ ಲಿಂಗ ತಾರತಮ್ಯ ಮತ್ತು ಪುರುಷಾಧಿಪತ್ಯವನ್ನು ಹೇರುವ ವೈವಾಹಿಕ ಮತ್ತು ಕೌಟುಂಬಿಕ ವ್ಯವಹಾರಗಳನ್ನು ರದ್ದು ಮಾಡಿ ಗಂಡು-ಹೆಣ್ಣಿನ ನಡುವೆ ತಾರತಮ್ಯ ಮಾಡದ ಒಂದು ಆದರ್ಶ-ತಾರತಮ್ಯವಿಲ್ಲದ ಏಕರೂಪ ನಾಗರಿಕ ಸಂಹಿತೆಯನ್ನು ಮೂಲಭೂತ ಹಕ್ಕಾಗಿಸಬೇಕೆಂಬ ಬಗ್ಗೆ ಸಂವಿಧಾನ ಸಭೆಯ ಮೂಲಭೂತ ಹಕ್ಕುಗಳ ಸಮಿತಿಯಲ್ಲಿ ಬಿಸಿಬಿಸಿ ಚರ್ಚೆಯಾಯಿತು.
ಆದರೆ, ನಮ್ಮ ಸಂವಿಧಾನ ದೇಶದ ಪ್ರಜೆಗಳಿಗೆ ಧಾರ್ಮಿಕ ಸ್ವಾತಂತ್ರ್ಯವನ್ನೂ ನೀಡುತ್ತದೆ ಮತ್ತು ಅದು ಮೂಲಭೂತ ಹಕ್ಕಾಗಿದೆ. ಅಂದರೆ ಆ ಹಕ್ಕನ್ನು ಯಾವ ಸರಕಾರಗಳೂ ಕಿತ್ತುಕೊಳ್ಳುವಂತಿಲ್ಲ. ಆದರೆ ಎಲ್ಲಾ ವೈವಾಹಿಕ ಹಾಗೂ ಕೌಟುಂಬಿಕ ವ್ಯವಹಾರಗಳನ್ನು ನಿಯಂತ್ರಿಸುವ ವೈಯಕ್ತಿಕ ಕಾನೂನುಗಳು ಧಾರ್ಮಿಕ ಲೇಪನವನ್ನೇ ಹೊಂದಿವೆ. ಅಲ್ಲಿ ಪ್ರಭುತ್ವ ಏಕರೂಪತೆ ತರುವುದನ್ನು ಧಾರ್ಮಿಕ ಹಕ್ಕಿನ ಉಲ್ಲಂಘನೆಯಾಗುತ್ತದೆ ಎಂಬ ವಾದವನ್ನು ಮುಂದಿಡಲಾಯಿತು. ಕೊನೆಗೆ ಬಿಜೆಪಿಯವರು ಆಗ ಆರಾಧಿಸುತ್ತಿರುವ ವಲ್ಲಭಭಾಯಿ ಪಟೇಲ್ ಅವರ ನೇತೃತ್ವದ ಒಂಭತ್ತು ಸದಸ್ಯರ ಮೂಲಭೂತ ಹಕ್ಕುಗಳ ಉಪ ಸಮಿತಿಯಲ್ಲಿ ಬಹುಸಂಖ್ಯಾತರು (ಪಟೇಲರನ್ನು ಒಳಗೊಂಡು) ಏಕರೂಪ ನಾಗರಿಕ ಸಂಹಿತೆಯನ್ನು ಮೂಲಭೂತ ಹಕ್ಕುಗಳನ್ನಾಗಿ ಪರಿಗಣಿಸಬಾರದೆಂದು ನಿರ್ಧರಿಸಿದರು.
ಹೀಗಾಗಿ ಅದನ್ನು ಸಂವಿಧಾನದ ಪ್ರಭುತ್ವ ನಿರ್ದೇಶನಾ ತತ್ವಗಳಡಿಯಲ್ಲಿ ಆರ್ಟಿಕಲ್ 44 ಆಗಿ ಸೇರಿಸಲಾಯಿತು. (ಆರ್ಟಿಕಲ್ 38-48ರವರೆಗಿನ ಪ್ರಭುತ್ವ ನಿರ್ದೇಶನಾ ತತ್ವಗಳು ಪ್ರಭುತ್ವಕ್ಕೆ ಒಂದು ಮಾರ್ಗದರ್ಶಿ ಸೂತ್ರವೇ ವಿನಾ ಅವುಗಳನ್ನು ಸರಕಾರ ಈಡೇರಿಸದಿದ್ದರೆ ನ್ಯಾಯಾಲಯಗಳಲ್ಲಿ ಹಕ್ಕಿನ ಉಲ್ಲಂಘನೆಯೆಂದು ಯಾರೂ ದಾವೆ ಹೂಡುವಂತಿಲ್ಲ.) ಆರ್ಟಿಕಲ್ 44ರ ಪ್ರಕಾರ ''ಪ್ರಭುತ್ವವು ಭಾರತದಾದ್ಯಂತ ತನ್ನ ಎಲ್ಲಾ ನಾಗರಿಕರಿಗೆ ಏಕರೂಪ ನಾಗರಿಕ ಸಂಹಿತೆಯನ್ನು ದೊರಕಿಸಿಕೊಡಲು ಪ್ರಯತ್ನಿಸುತ್ತದೆ'' ಎಂದು ಹೇಳುತ್ತದೆ. ಹೀಗಾಗಿ ಇಲ್ಲಿ 'ಪ್ರಯತ್ನ' ಎನ್ನುವ ಪದ ಅರಿವು ಮೂಡಿಸಿ, ಸಮ್ಮತಿಯನ್ನು ರೂಪಿಸಿ ನಂತರ ಸಂಹಿತೆಯನ್ನು ರೂಪಿಸಲಾಗುವುದೇ ವಿನಾ ಕಾನೂನು ಹೇರಿಕೆಯ ಮುಖಾಂತರವಲ್ಲ ಎಂಬ ಅರ್ಥವನ್ನು ಕೊಡುತ್ತದೆ. ಇದನ್ನು ಸುಪ್ರೀಂಕೋರ್ಟಿನ ವಿಭಿನ್ನ ಪೀಠಗಳೂ ಹೀಗೆಯೇ ವ್ಯಾಖ್ಯಾನಿಸಿವೆ. ಹೀಗಾಗಿ ಸಂವಿಧಾನ ಸಭೆಯಲ್ಲಿ ನಡೆದ ಚರ್ಚೆ ಹಾಗೂ ಆರ್ಟಿಕಲ್ 44ರ ಸಾರಾಂಶ: -ಏಕರೂಪ ನಾಗರಿಕ ಸಂಹಿತೆಯ ನಿಜವಾದ ಆಶಯ ಎಲ್ಲಾ ಮತಧರ್ಮಗಳಲ್ಲಿರುವ ಭಿನ್ನತೆಯನ್ನು ಕಿತ್ತುಹಾಕಿ ಏಕರೂಪತೆಯನ್ನು ತರುವುದಲ್ಲ. -ಬದಲಿಗೆ ಎಲ್ಲಾ ಮತಧರ್ಮಗಳಲ್ಲೂ ಇರುವ ಲಿಂಗ ತಾರತಮ್ಯ ಆಧಾರಿತ ವೈಯಕ್ತಿಕ ಕಾನೂನುಗಳ ಬದಲಿಗೆ ನ್ಯಾಯ ಸಮ್ಮತ ನಾಗರಿಕ ಸಂಹಿತೆಯನ್ನು ತರುವುದಾಗಿತ್ತು. -ಅದನ್ನು ಕೂಡಲೇ ಕಾನೂನಿನ ಮೂಲಕ ಹೇರದೆ ಅರಿವು ಮತ್ತು ಸಮ್ಮತಿಗಳ ಮೂಲಕ ತರಬೇಕೆಂಬುದು ಸಂವಿಧಾನದ ಆಶಯವಾಗಿತ್ತು. ಆದರೆ ಅಂದು ಸಂವಿಧಾನ ಸಭೆಯಲ್ಲೂ ಇಂದಿನ ಬಿಜೆಪಿಯ ಹಲವಾರು ಪಿತಾಮಹರಿದ್ದರು. ಸಂವಿಧಾನ ಸಭೆಯ ಸದಸ್ಯರಾಗಿದ್ದ ಹಿಂದೂ ಮಹಾಸಭಾದ ಸದಸ್ಯರು ಹಾಗೂ ಕಾಂಗ್ರೆಸ್‌ನೊಳಗೂ ಇದ್ದ ಹಿಂದೂ ಮಹಾಸಭಾದ ಮನಸ್ಥಿತಿಯವರು ನ್ಯಾಯಸಮ್ಮತ ನಾಗರಿಕ ಸಂಹಿತೆಗೆ ತದ್ವಿರುದ್ಧವಿದ್ದರು ಎಂಬುದನ್ನು ಗಮನಿಸಿದರೆ ಇಂದಿನ ಬಿಜೆಪಿಯ ಏಕರೂಪತೆ ಏನೆಂಬುದು ಇನ್ನೂ ಸ್ಪಷ್ಟವಾಗುತ್ತದೆ.
ಹಿಂದೂ ಮಹಿಳೆಗೆ ಸಮಾನತೆ ನಿರಾಕರಿಸಿದ ಅಂದಿನ ಹಿಂದುತ್ವವಾದಿಗಳು
ಒಂದು ನ್ಯಾಯಸಮ್ಮತ ನಾಗರಿಕ ಸಂಹಿತೆ ಬೇಕೆಂಬ ಬಗ್ಗೆ ಸಂವಿಧಾನ ಸಭೆ ಒಮ್ಮತಕ್ಕೆ ಬಂದರೂ ಅದನ್ನು ಜಾರಿಗೆ ತರುವ ಬಗ್ಗೆ ಕಾಂಗ್ರೆಸ್‌ನೊಳಗೇ ಇದ್ದ ಆರೆಸ್ಸೆಸಿಗರಿಗೂ ಮತ್ತು ಆರೆಸ್ಸೆಸ್-ಹಿಂದೂ ಮಹಾಸಭಾ ಇನ್ನಿತ್ಯಾದಿ ಕರ್ಮಠ ಬ್ರಾಹ್ಮಣೀಯ ಹಿಂದುತ್ವವಾದಿಗಳಿಗೂ ಸುತಾರಾಂ ಸಮ್ಮತಿಯಿರಲಿಲ್ಲ. ಹೀಗಾಗಿಯೇ ಅಂಬೇಡ್ಕರ್ ಅವರು ಹಿಂದೂ ಹೆಣ್ಣು ಮಕ್ಕಳಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು, ವಿವಾಹ, ವಿಚ್ಛೇದನ ಮತ್ತು ದತ್ತು ಸ್ವೀಕಾರಗಳಲ್ಲಿ ಸಮಾನವಾದ ಅಧಿಕಾರದಂತಹ ಸೀಮಿತ ಹಕ್ಕುಗಳನ್ನು ಪ್ರಸ್ತಾವಿಸಿ 'ಹಿಂದೂ ಕೋಡ್ ಬಿಲ್' ಅನ್ನು ಪ್ರಸ್ತಾವಿಸಿದಾಗ ಸಂವಿಧಾನ ಸಭೆಯ ಬಹುಪಾಲು ಪ್ರತಿಷ್ಠಿತ ಹಿಂದೂ ಸದಸ್ಯರು ಅದರ ವಿರುದ್ಧ ಸಿಡಿದೆದ್ದುಬಿಟ್ಟರು!
ಆರೆಸ್ಸೆಸ್-ಮಹಾಸಭಾ ಇನ್ನಿತ್ಯಾದಿ ಬ್ರಾಹ್ಮಣಶಾಹಿ ಹಿಂದುತ್ವವಾದಿಗಳು ಅಂಬೇಡ್ಕರ್ ಅವರನ್ನು ದೇಶದ್ರೋಹಿ-ಧರ್ಮದ್ರೋಹಿ ಎಂದು ದಾಳಿ ಮಾಡಿದರು. ಉತ್ತರ ಭಾರತದಾದ್ಯಂತ ಈ ಮನುವಾದಿಗಳು ಹಲವಾರು ಕಡೆ ಉಗ್ರ ಪ್ರತಿಭಟನೆ ನಡೆಸಿ ಅಂಬೇಡ್ಕರ್ ಮತ್ತು ನೆಹರೂ ಪ್ರತಿಕೃತಿಗಳನ್ನು ಸುಟ್ಟರು. ಇಂದಿನ ಬಿಜೆಪಿಯ ಅಂದಿನ ರೂಪವಾದ ಜನಸಂಘದ ಮೊದಲ ಅಧ್ಯಕ್ಷ ಶ್ಯಾಮಪ್ರಸಾದ ಮುಖರ್ಜಿಯವರಂತೂ ಅಂಬೇಡ್ಕರರ ಹಿಂದೂ ಕೋಡ್ ಬಿಲ್ ದೇಶವನ್ನು ಛಿದ್ರಗೊಳಿಸುವ ಸಂಚೆಂದು ಆರೋಪಿಸಿ ಉಗ್ರವಾಗಿ ಖಂಡಿಸಿದ್ದರು. 1949ರ ಡಿಸೆಂಬರ್‌ನಲ್ಲಿ ಈ ಹಿಂದೂ ಕೋಡ್ ಬಿಲ್ ಬಗ್ಗೆ ಸಂವಿಧಾನ ಸಭೆಯಲ್ಲಿ ಚರ್ಚೆಯಾದಾಗ ಚರ್ಚೆಯಲ್ಲಿ ಭಾಗವಹಿಸಿದ 28 ಜನರಲ್ಲಿ 23 ಜನರು ಹಿಂದೂ ಕೋಡ್ ಬಿಲ್ ಅನ್ನು ವಿರೋಧಿಸುತ್ತಾರೆ. ಆ ರೀತಿ ಅಂಬೇಡ್ಕರ್ ಅವರು ಮುಂದಿಟ್ಟ ನ್ಯಾಯ ಸಮ್ಮತ ಹಿಂದೂ ಕೋಡ್ ಬಿಲ್‌ಅನ್ನು ಖಂಡತುಂಡವಾಗಿ ವಿರೋಧಿಸಿದವರಲ್ಲಿ ಸರ್ದಾರ್ ವಲ್ಲಭಬಾಯಿ ಪಟೇಲ್, ಪಟ್ಟಾಭಿ ಸೀತಾರಾಮಯ್ಯ, ಮದನಮೋಹನ ಮಾಳವೀಯ, ಶ್ಯಾಮಪ್ರಸಾದ ಮುಖರ್ಜಿ ಪ್ರಮುಖರು. 1951ರ ಸೆಪ್ಟಂಬರ್‌ನಲ್ಲಿ ಭಾರತದ ಪ್ರಥಮ ರಾಷ್ಟ್ರಪತಿ ಬಾಬು ರಾಜೇಂದ್ರ ಪ್ರಸಾದ್ ಅವರು ಒಂದೊಮ್ಮೆ ಈ ಬಿಲ್ ಅನ್ನು ಮಧ್ಯಂತರ ಸಂಸತ್ತು ಅನುಮೋದಿಸಿದರೂ ತಾನು ತನ್ನ ವೀಟೊ ಅಧಿಕಾರವನ್ನು ಬಳಸಿಕೊಂಡು ಅದನ್ನು ತಿರಸ್ಕರಿಸುವುದಾಗಿಯೂ, ಇಲ್ಲದಿದ್ದರೆ ರಾಜೀನಾಮೆ ಕೊಡುವುದಾಗಿಯೂ ಬೆದರಿಸಿದರು. ಇದೆಲ್ಲದರಿಂದ ಬೇಸತ್ತು ಅಂಬೇಡ್ಕರ್ ಅವರು, 1951ರ ಸೆಪ್ಟಂಬರ್‌ನಲ್ಲಿ ತಮ್ಮ ಮಂತ್ರಿ ಪದವಿಗೆ ರಾಜೀನಾಮೆ ಇತ್ತು ನೆಹರೂ ಮಂತ್ರಿ ಮಂಡಲದಿಂದ ಹೊರಬರಬೇಕಾಯಿತು. ಹೀಗೆ ಅರೆಸ್ಸೆಸ್, ಜನಸಂಘ, ಈಗಿನ ಬಿಜೆಪಿ ಮತ್ತು ಕಾಂಗ್ರೆಸನ್ನೂ ಒಳಗೊಂಡಂತೆ ಇತರ ಪಕ್ಷಗಳಲ್ಲೂ ಇರುವ ಗುಪ್ತ ಹಿಂದುತ್ವವಾದಿಗಳು ಉದ್ದಕ್ಕೂ ನ್ಯಾಯ ಸಮ್ಮತ ನಾಗರಿಕ ಸಂಹಿತೆಯನ್ನು ವಿರೋಧಿಸಿಕೊಂಡೇ ಬರುತ್ತಿದ್ದರೂ, ಜನಸಂಘ ಮತ್ತು ಬಿಜೆಪಿ 1951ರಿಂದಲೂ ಏಕರೂಪ ನಾಗರಿಕ ಸಂಹಿತೆಯನ್ನು ಮಾತ್ರ ಜಾರಿಗೆ ತರುತ್ತೇವೆಂದು ಘೋಷಿಸಿಕೊಂಡೇ ಬರುತ್ತಿವೆ. ಅದಕ್ಕೆ ಸಂವಿಧಾನದ ಒತ್ತಾಸೆ ಇದೆಯೆಂದು ಪ್ರಚಾರ ಮಾಡುತ್ತಿವೆೆ. ಮೇಲೆ ಗಮನಿಸಿದಂತೆ ಸಂವಿಧಾನವು ಪ್ರಭುತ್ವಕ್ಕೆ ನಿರ್ದೇಶನ ನೀಡುವುದು ನ್ಯಾಯ ಸಮ್ಮತ ನಾಗರಿಕ ಸಂಹಿತೆಯನ್ನು ಜಾರಿಗೆ ತರಲೆಂದೇ ವಿನಾ ಎಲ್ಲಾ ಧರ್ಮಗಳ ಮೇಲೆ ತನ್ನ ಹಿಂದುತ್ವವಾದಿ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿ ಮಾಡುವುದನ್ನಲ್ಲ. ಇತ್ತೀಚೆಗೆ ಮೋದಿ ಸರಕಾರವೇ ನೇಮಕ ಮಾಡಿದ ಲಾ ಕಮಿಷನ್ ಕೂಡ ಇದನ್ನೇ ಹೇಳಿತ್ತು.
''ಏಕರೂಪ ಸಂಹಿತೆ: ಅಗತ್ಯವೂ ಇಲ್ಲ- ಅಪೇಕ್ಷಣೀಯವೂ ಅಲ್ಲ'' - ಲಾ ಕಮಿಷನ್
ಮೋದಿ ಸರಕಾರ 2016ರಲ್ಲಿ ನೇಮಕ ಮಾಡಿದ ಲಾ ಕಮಿಷನ್ ಇದರ ಬಗ್ಗೆ ಕೂಲಂಕಷ ಅಧ್ಯಯನ ಮಾಡಿ ''ದೇಶದ ಇವತ್ತಿನ ಸಂದರ್ಭದಲ್ಲಿ ಒಂದು ಏಕರೂಪ ನಾಗರಿಕ ಸಂಹಿತೆ ಅಗತ್ಯವೂ ಇಲ್ಲ. ಅಪೇಕ್ಷಣೀಯವೂ ಅಲ್ಲ. ಹೀಗಾಗಿ ನಾವು ಅದರ ಬಗ್ಗೆ ಗಮನ ಕೊಡದೆ, ಎಲ್ಲಾ ವೈಯಕ್ತಿಕ ಕಾನೂನಿನಲ್ಲಿರುವ ಲಿಂಗ ತಾರತಮ್ಯವನ್ನು ನಿವಾರಿಸುವ ದಿಕ್ಕಿನಡೆ ಗಮನವನ್ನು ಹರಿಸಿ ಅದರ ಬಗ್ಗೆ ನಮ್ಮ ಶಿಫಾರಸುಗಳನ್ನು ನೀಡಿದ್ದೇವೆ'' ಎಂದು ವರದಿ ನೀಡಿದ್ದರು. ಅದರಂತೆ, ಹಿಂದೂ ವೈಯಕ್ತಿಕ ಕಾನೂನಿನಲ್ಲಿ 'ಹಿಂದೂ ಅವಿಭಜಿತ ಕುಟುಂಬ'ವೆಂಬ ವರ್ಗೀಕರಣವನ್ನು ತೆಗೆದುಹಾಕುವ, ಕೌಟುಂಬಿಕ ಜೀವನದಲ್ಲಿ ಹೆಣ್ಣನ್ನು ಕುಟುಂಬದ ಪುರುಷನ ಅಧೀನಗೊಳಿಸುವ ಸಂಹಿತೆಗಳನ್ನು ರದ್ದು ಪಡಿಸುವ ಶಿಫಾರಸುಗಳನ್ನು ನೀಡಿತ್ತು. ಹಾಗೆಯೇ ಮುಸ್ಲಿಮ್ ವೈಯಕ್ತಿಕ ಕಾನೂನಿನಲ್ಲಿ ವ್ಯಭಿಚಾರವನ್ನು ವಿಚ್ಛೇದನಕ್ಕೆ ಒಂದು ಕಾರಣವನ್ನಾಗಿಸುವ ಹಾಗೂ ಬಹುಪತ್ನಿತ್ವವನ್ನು ಅಪರಾಧವೆಂದು ನಿಖಾ ನಾಮದಲ್ಲೇ ಘೋಷಿಸುವ ಸಲಹೆಯನ್ನು ನೀಡಿತು.
ಕ್ರಿಶ್ಚಿಯನ್ ವೈಯಕ್ತಿಕ ಕಾನೂನಿನಲ್ಲಿ ವಿಚ್ಛೇದನವನ್ನು ಮಹಿಳೆಯ ಪರವಾಗಿ ಸಡಿಲಗೊಳಿಸುವ ಶಿಫಾರಸುಗಳನ್ನು ಮಾಡಿತ್ತು. ಹಾಗೆ ನೋಡಿದರೆ ಈ ಬಗ್ಗೆ ಸುಪ್ರೀಂ ಕೋರ್ಟಿನಲ್ಲಿ ದಾಖಲಾದ ದಾವೆಗೆ ಸಂಬಂಧಪಟ್ಟಂತೆ ಕೇಂದ್ರ ಸರಕಾರ ನೀಡಿದ ಅಫಿಡವಿಟ್‌ನಲ್ಲೂ ಏಕರೂಪ ನಾಗರಿಕ ಸಂಹಿತೆ ಜಾರಿ ಮಾಡುವ ಯಾವುದೇ ಪ್ರಸ್ತಾವ ತಮ್ಮ ಮುಂದೆ ಇಲ್ಲವೆಂದೇ ಹೇಳಿಕೆ ನೀಡಿತ್ತು. ಅದರೆ, ಗುಜರಾತ್ ಚುನಾವಣೆಗಳು ಘೋಷಿತವಾಗುತ್ತಿದ್ದಂತೆ ತನ್ನ ರಾಗ ಬದಲಿಸಿದ ಕೇಂದ್ರ ಸರಕಾರ ಇದರ ಬಗ್ಗೆ ತಾನು ಉತ್ಸುಕನಾಗಿದೆಯೆಂದು ಘೋಷಿಸಿದೆ ಮತ್ತು ಅದರ ಬಗ್ಗೆ ಸಮಗ್ರ ಶಿಫಾರಸು ನೀಡಲು ಮತ್ತೊಮ್ಮೆ ಅದನ್ನು ಲಾ ಕಮಿಷನ್‌ಗೆ ವರ್ಗಾಯಿಸಿದೆ. ಈ ವರೆಗೆ ಲಾ ಕಮಿಷನ್‌ಗೆ ಅಧ್ಯಕ್ಷರಿರಲಿಲ್ಲ. ಆದರೆ ಹಿಜಾಬ್ ವಿಷಯದಲ್ಲಿ ಹಿಂದುತ್ವವಾದಿಗಳಿಗೆ ಅನುಕೂಲವಾದ ಆದೇಶ ಹಾಗೂ ಬುನಾದಿಗಳನ್ನು ಒದಗಿಸಿದ ಕರ್ನಾಟಕದ ಮಾಜಿ ಮುಖ್ಯ ನ್ಯಾಯಾಧೀಶ ಅವಸ್ಥಿ ಅವರನ್ನು 22ನೇ ಲಾ ಕಮಿಷನ್‌ನ ಅಧ್ಯಕ್ಷರನ್ನಾಗಿ ನವೆಂಬರ್‌ನಲ್ಲಿ ಮೋದಿ ಸರಕಾರ ನೇಮಿಸಿದೆ!
ಬಿಜೆಪಿಯ ನಾಗರಿಕ ಸಂಹಿತೆ ಹಿಂದೂ ಮಹಿಳೆಯರಿಗೇ ಮಾರಕ
ಹೀಗಾಗಿ ಬಿಜೆಪಿ ಹೇಳುತ್ತಿರುವ ಏಕರೂಪ ನಾಗರಿಕ ಸಂಹಿತೆ ಮನುವಾದಿ ಹಿಂದುತ್ವ ಸಂಹಿತೆಯೇ ವಿನಾ ಸಂವಿಧಾನದಲ್ಲಿ ಅಂಬೇಡ್ಕರ್ ಆಶಯದಂತೆ ಸೇರಿಸಲ್ಪಟ್ಟಿದ್ದ ನ್ಯಾಯ ಸಮ್ಮತ ಏಕರೂಪ ನಾಗರಿಕ ಸಂಹಿತೆಯಲ್ಲ.
ಈ ಮನುವಾದಿ ನಾಗರಿಕ ಸಂಹಿತೆ ಜಾರಿಗೆ ಬಂದರೆ ಅದಕ್ಕೆ ಮೊದಲು ಬಲಿಯಾಗುವುದು ಹಿಂದೂ ಮಹಿಳೆಯರೇ. ಮೊನ್ನೆ ಪತ್ರಿಕೆಯೊಂದರಲ್ಲಿ ಪ್ರಕಟವಾದ ಗಣಪತಿ ಸಚ್ಚಿದಾನಂದ ಸ್ವಾಮೀಜಿಯ ಶಿವಪುರಾಣದ ಬರಹವನ್ನು ಓದಿದರೆ ಸಾಕು ಬಿಜೆಪಿ ಜಾರಿ ಮಾಡಬೇಕೆಂದಿರುವ ಮನುವಾದಿ, ಹಿಂದೂ ಮಹಿಳಾ ವಿರೋಧಿ ನಾಗರಿಕ ಸಂಹಿತೆಯ ವಿವರಗಳು ಅರ್ಥವಾಗುತ್ತದೆ. ಆದ್ದರಿಂದ ಹಿಂದೂ ಮಹಿಳೆಯರು ಮತ್ತು ಮಾನವಂತ ಪುರುಷರೇ ಬಿಜೆಪಿಯ ಬ್ರಾಹ್ಮಣೀಯ ಹಿಂದುತ್ವದ ಏಕರೂಪತೆಯನ್ನು ವಿರೋಧಿಸಬೇಕು. ಏಕರೂಪ ಸಂಹಿತೆಯೆಂದರೆ ಅಲ್ಪಸಂಖ್ಯಾತರ ಮೇಲೆ ಹಿಂದುತ್ವದ ಹೇರಿಕೆಯೇ! ಆದರೆ ಬಿಜೆಪಿಯ ಉದ್ದೇಶ ಅಷ್ಟೇ ಅಲ್ಲ. ಏಕರೂಪ ನಾಗರಿಕ ಸಂಹಿತೆಯನ್ನು ಸದ್ಯಕ್ಕೆ ಜಾರಿಗೆ ತರದಿದ್ದರೂ ಅದರ ಬಗೆಯ ಚರ್ಚೆಯನ್ನು ತನ್ನ ಇತರ ಮುಸ್ಲಿಮ್ ವಿರೋಧಿ ಪ್ರಚಾರದ ಭಾಗವಾಗಿ ಮುನ್ನೆಲೆಗೆ ತರುತ್ತಿರುವುದರಲ್ಲಿ ಒಂದು ಸ್ಪಷ್ಟವಾದ ಉದ್ದೇಶವಿದೆ. ಅದು ಮುಸ್ಲಿಮರು ಹೆಚ್ಚು ಮಕ್ಕಳನ್ನು ಹುಟ್ಟಿಸುತ್ತಾರೆ, ಮುಸ್ಲಿಮ್ ಪುರುಷರಿಗೆ ಮಾತ್ರ ಬಹುಪತ್ನಿತ್ವದ ಅವಕಾಶವಿದೆ. ಇವೆಲ್ಲ ಬಳಸಿಕೊಂಡು ಮುಸ್ಲಿಮರು ಭಾರತದ ವಿರುದ್ಧ 'ಕುಟುಂಬ ಜಿಹಾದ್' ಮಾಡುತ್ತಾರೆ ಇತ್ಯಾದಿ. ಇಂತಹ ಕೋಮುವಾದಿ ದ್ವೇಷ ಪ್ರಚಾರಗಳೇ ಇದರ ಹಿಂದಿನ ಉದ್ದೇಶ. ಆದ್ದರಿಂದಲೇ ಗುಜರಾತಿನಲ್ಲಿ ಚುನಾವಣಾ ಪ್ರಚಾರ ಮಾಡುತ್ತಿರುವ ಗೃಹಮಂತ್ರಿ ಅಮಿತ್ ಶಾ ಅವರೂ ಮುಸ್ಲಿಮರಿಗೆ 2002ರಲ್ಲಿ ಸರಿಯಾದ ಪಾಠ ಕಲಿಸಲಾಯಿತು ಎಂದು ಹೇಳುವ ಉಸಿರಿನಲ್ಲೇ ಬಿಜೆಪಿಯು ದೇಶಾದ್ಯಂತ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತರಲಿದೆ ಎಂದು ಹೇಳುತ್ತಾರೆ. ಬೇಕಿರುವುದು ಬಿಜೆಪಿಯ ಕೋಮುವಾದಿ, ಮಹಿಳಾ ವಿರೋಧಿ ಏಕರೂಪ ನಾಗರಿಕ ಸಂಹಿತೆಯಲ್ಲ. ಬೇಕಿರುವುದು ಲಿಂಗ ತಾರತಮ್ಯ ರಹಿತ, ನ್ಯಾಯಸಮ್ಮತ ನಾಗರಿಕ ಸಂಹಿತೆ.