ಪ್ರತಿಮೆಗಳ ರಾಜಕೀಯದಲ್ಲಿ ಮೈಮರೆಸುವವರು
ಮಾನ್ಯರೇ,
ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆಗೆ ವೇದಿಕೆ ಸಜ್ಜಾಗುತ್ತಿದೆ. 2023ರ ಮೇ ತಿಂಗಳಿನಲ್ಲಿ ಚುನಾವಣೆಗಳು ನಡೆಯಲಿವೆ. ಪ್ರತಿಯೊಂದು ರಾಜಕೀಯ ಪಕ್ಷಗಳು ಕೂಡ ವಿವಿಧ ರೀತಿಯಲ್ಲಿ ಚುನಾವಣೆಗೆ ತಯಾರಿ ನಡೆಸುತ್ತಿವೆ. ಇದರೊಂದಿಗೆ ರಾಜ್ಯದಲ್ಲಿ ಪ್ರತಿಮೆಗಳ ರಾಜಕೀಯವು ಪ್ರಾರಂಭಗೊಂಡಿದ್ದು, ಮತದಾರರನ್ನು ಪ್ರತಿಮೆಗಳ ಮೂಲಕ ಓಲೈಸಲು ರಾಜಕೀಯ ಪಕ್ಷಗಳು ಮುಂದಾಗಿವೆ. ಇದಕ್ಕೆ ಪುಷ್ಟಿ ನೀಡುವಂತೆ ಇತ್ತೀಚೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಬೆಂಗಳೂರಿನಲ್ಲಿ ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ಅನಾವರಣಗೊಳಿಸಿದ್ದಾರೆ. ಇದರೊಂದಿಗೆ ಮೈಸೂರಿನ ಕಾಂಗ್ರೆಸ್ ಶಾಸಕರಾಗಿರುವ ತನ್ವೀರ್ ಸೇಠ್‌ರವರು ಶ್ರೀರಂಗ ಪಟ್ಟಣ ಅಥವಾ ಮೈಸೂರಿನಲ್ಲಿ ಟಿಪ್ಪುಸುಲ್ತಾನರ 100 ಅಡಿ ಎತ್ತರದ ಪ್ರತಿಮೆಯನ್ನು ಸ್ಥಾಪಿಸುವುದಾಗಿ ಹೇಳಿಕೆ ನೀಡಿದ್ದಾರೆ. ಇದು ಬಹಳಷ್ಟು ರಾಜಕೀಯ ಚರ್ಚೆಗಳಿಗೆ ಕಾರಣವಾಗಿದೆ. ಪ್ರತಿಮೆಗಳ ನಿರ್ಮಾಣ ಮಾಡಲು ಜನರು ಸರಕಾರಕ್ಕಾಗಲಿ, ರಾಜಕೀಯ ನಾಯಕರಿಗಾಗಲಿ ಬೇಡಿಕೆ ಸಲ್ಲಿಸಲಿಲ್ಲ. ರಾಜಕೀಯ ವ್ಯಕ್ತಿಗಳು ತಮ್ಮ ರಾಜಕೀಯ ಲಾಭದ ಉದ್ದೇಶದೊಂದಿಗೆ ಪ್ರತಿಮೆಗಳನ್ನು ಸ್ಥಾಪಿಸಲು ಹೊರಟಿದ್ದಾರೆ. ಜನರ ನೈಜ ಸಮಸ್ಯೆಗಳನ್ನು ಮರೆಮಾಚುತ್ತಿದ್ದಾರೆ. ಶಿಕ್ಷಣ, ಉದ್ಯೋಗ, ಬಡತನ ಮತ್ತು ಅಭಿವೃದ್ಧಿಗೆ ಒತ್ತು ನೀಡದೆ ಪ್ರತಿಮೆಗಳಿಗೆ ಆದ್ಯತೆ ನೀಡುತ್ತಿದ್ದಾರೆ. ಭಾವನಾತ್ಮಕ ವಿಷಯಗಳ ಮೂಲಕ ಜನರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಜನರು ಕೂಡ ರಾಜಕೀಯ ಪಕ್ಷಗಳ ರಾಜಕೀಯ ನಾಟಕವನ್ನು ಅರ್ಥಮಾಡಿಕೊಂಡು ಮುಂದಿನ ದಿನಗಳಲ್ಲಿ ಮತ ಚಲಾಯಿಸಬೇಕಾಗಿದೆ.