ಕಡವೆ ಕಾರ್ಯಾಚರಣೆ!
ಅದು ಹೆಣ್ಣು ಕಡವೆ. ಮಲೆನಾಡು ಗಿಡ್ಡ ತಳಿಯ ಹಸುವಿನ ಗಾತ್ರವನ್ನು ಹೊಂದಿತ್ತು. ಪಕ್ಕನೆ ನೋಡುವಾಗ ಹಸುವಿನಂತೆ ಕಂಡರೂ ಅದರ ಬಾಲ ತೀರಾ ಸಣ್ಣದು, ಕುತ್ತಿಗೆ ಉದ್ದ, ಕಣ್ಣಿನ ಕೆಳಗೆ ರಂಧ್ರದ ರೀತಿಯ ರಚನೆಯನ್ನು ಹೊಂದಿತ್ತು. ಅದಾಗಲೇ ಅರಣ್ಯಾಧಿಕಾರಿ, ಗಾರ್ಡ್, ವಾಚರುಗಳು ಆಗಮಿಸಿಯಾಗಿತ್ತು. ಕಡವೆ ಯಾವುದೇ ಪ್ರತಿಭಟನೆ ಇಲ್ಲದೆ, ಕರುಣಾಜನಕ ದೃಷ್ಟಿ ಬೀರುತ್ತ ಸುಮ್ಮನೆ ನಿಂತಿತ್ತು.
ಮೊನ್ನೆ ಬೆಳಗ್ಗೆ ಕೂಲಿಯಾಳುಗಳಿಗೆ ತಿಂಡಿ ತಯಾರಿಸುವ ಗಡಿಬಿಡಿಯಲ್ಲಿದ್ದೆ. ಹತ್ತಿರದಲ್ಲೇ ಇದ್ದ ಮನೆಗೆಲಸದವಳ ಮೊಬೈಲಿಗೆ ಒಂದು ಕರೆ ಬಂತು. ಕರೆ ಸ್ವೀಕರಿಸಿದ ಅವಳು ‘‘ಏನು ಕಡವೆಯನ್ನು ಕಟ್ಟಿ ಹಾಕಿದ್ದಾ? ಅದನ್ನು ನೋಡಲು ಏನುಂಟು? ಕೆಲಸಕ್ಕೆ ರಜೆ ಹಾಕಿ ನಾನು ಬರುವುದಿಲ್ಲ’’ ಹೇಳುವುದು ಕೇಳಿಸಿತು. ವನ್ಯಪ್ರಾಣಿಗಳ ಬಗ್ಗೆ ಕಾಳಜಿ ಇರುವ ನನಗೆ ಕಡವೆ ಎಂಬ ಶಬ್ದ ಕಿವಿಗೆ ಬಿದ್ದಾಗ ಕುತೂಹಲ ಉಂಟಾಯಿತು. ‘‘ಯಾರು ಫೋನ್ ಮಾಡಿದ್ದು? ಏನು ವಿಷಯ?’’ ಕೇಳಿದ್ದಕ್ಕೆ ಹೇಳಿದಳು, ‘‘ಮಗಳು ಫೋನ್ ಮಾಡಿದ್ದು ಅಕ್ಕಾ.
ನನ್ನ ಮನೆ ಸಮೀಪ ಇರುವ ಹೊಳೆಗೆ ಸೇತುವೆ ಕಟ್ಟುತ್ತಾ ಇದ್ದಾರಲ್ಲ ಅಲ್ಲಿ ಒಂದು ಕಡವೆಯನ್ನು ಕಟ್ಟಿ ಹಾಕಿದ್ದಾರಂತೆ. ಅದನ್ನು ನೋಡಲು ಮಗಳು ಕರೆದಿದ್ದಾಳೆ. ನನಗೆ ಕಡವೆ ಹೊಸದೇನೂ ಅಲ್ಲ. ನಾನು ಹೋಗುವುದಿಲ್ಲ. ನೀವು ಹೋಗುವುದಾದರೆ ಹೋಗಿ’’. ‘‘ಅದು ಅಲ್ಲಿಗೆ ಯಾಕೆ ಬಂತಂತೆ? ಅಸಾಮಾನ್ಯ ಓಟದ ಪ್ರಾಣಿಯಾದ ಅದನ್ನು ಹೇಗೆ ಕಟ್ಟಿಹಾಕಿದರು? ಗೊತ್ತಾಗಿದ್ಯಾ?’’ ಪ್ರಶ್ನಿಸಿದೆ. ‘‘ಕಾಡು ನಾಯಿಗಳು ಅದನ್ನು ಅಟ್ಟಿಸುತ್ತಿದ್ದುವಂತೆ. ಅದು ಓಡುತ್ತ ಓಡುತ್ತ ಹೊಳೆ ದಾಟಿ ಆಚೆ ದಡದಲ್ಲಿರುವ ಅಡಿಕೆ ತೋಟಕ್ಕೆ ಕಾಲಿಟ್ಟಿತಂತೆ. ಓಡುವ ರಭಸಕ್ಕೆ ಅಲ್ಲಿರುವ ಕೆಸರಿನ ಹೊಂಡಕ್ಕೆ ಬಿದ್ದು ಎಷ್ಟು ಪ್ರಯತ್ನಿಸಿದರೂ ಏಳಲಾಗಲಿಲ್ಲವಂತೆ. ಇದನ್ನು ನೋಡುತ್ತಿದ್ದ ಅಲ್ಲಿಯೇ ಇದ್ದ ಸೇತುವೆ ಕೆಲಸಗಾರರು ಅದು ಹಸುವೆಂದು ಭ್ರಮಿಸಿ ಅದನ್ನು ಅಲ್ಲಿಂದ ಎಬ್ಬಿಸಿ ಕಟ್ಟಿ ಹಾಕಿದರಂತೆ. ಅವರು ನಮ್ಮೂರಿನವರಲ್ಲ; ಗದಗದವರು. ಅವರಿಗೆ ಕಡವೆಯನ್ನು ನೋಡಿ ಗೊತ್ತಿಲ್ಲ. ಆಮೇಲೆ ಅವರಿಗೆ ಅದು ಕಾಡುಪ್ರಾಣಿಯೆಂದು ಗೊತ್ತಾಯಿತಂತೆ’’ ಎಂದು ಉತ್ತರ ಕೊಟ್ಟಳು. ‘‘ಹಾಗಾದರೆ ನಾನು ಹೋಗುತ್ತೇನೆ. ನನಗೆ ಕಡವೆ ನೋಡಬೇಕು’’ ಎಂದೆ.
ರಕ್ಷಿತಾರಣ್ಯಕ್ಕೆ ಹೊಂದಿಕೊಂಡು ಇರುವ ನಮ್ಮೂರಿನಲ್ಲಿ ಆಗಾಗ ಕಾಡುಪ್ರಾಣಿಗಳ ದರ್ಶನವಾಗುತ್ತ ಇರುತ್ತದೆ. ಕೆಲವು ಕಿಡಿಗೇಡಿಗಳು ಕಾಡಿಗೆ ಹೋಗಿ ಪ್ರಾಣಿಗಳನ್ನು ಬೇಟೆಯಾಡಿ ತಿನ್ನುವುದೂ ಇದೆ. ತಿಂಗಳ ಹಿಂದೆಯಷ್ಟೇ ನಮ್ಮ ಮನೆ ಸಮೀಪ ಒಬ್ಬ ಹಂದಿಗೆಂದು ಕೋವಿ ಕಟ್ಟಿದ್ದ. ಆದರೆ ಅದಕ್ಕೆ ಹಂದಿಯ ಬದಲಾಗಿ ಕಡವೆ ಬಿದ್ದಿತ್ತು. ಮನೆಗೆ ಸಾಗಿಸಲು ಸಾಧ್ಯವಿಲ್ಲದಷ್ಟು ಅದು ದೊಡ್ಡದು ಇದ್ದುದರಿಂದ ಅವನು ಪಕ್ಕದ ಮನೆಯವನೊಡಗೂಡಿ ಅಲ್ಲೇ ಅದರ ಕೈಕಾಲು, ಹೊಟ್ಟೆ, ತಲೆ ಬೇರ್ಪಡಿಸಿ ಮಾಂಸ ಮಾಡುವ ಸಮಯದಲ್ಲಿ ಯಾರೋ ಅರಣ್ಯಾಧಿಕಾರಿಗಳಿಗೆ ಫೋನ್ ಮಾಡಿದ್ದರು.
ತಕ್ಷಣ ಬಂದ ಅಧಿಕಾರಿಗಳು ಅವರಿಬ್ಬರನ್ನು ಮಾಲು ಸಮೇತ ಜೀಪಿಗೆ ಹಾಕಿ ಮಡಿಕೇರಿ ಪೊಲೀಸ್ ಸ್ಟೇಷನ್‌ಗೆ ಕರೆದುಕೊಂಡು ಹೋದರು. ನಾನು ಅವರಿನ್ನೂ ಕಳ್ಳಬೇಟೆ ಅಪರಾಧಕ್ಕಾಗಿ ಜೈಲಿನಲ್ಲಿ ಕೊಳೆಯುತ್ತಿರುತ್ತಾರೆ ಅಂದುಕೊಂಡಿದ್ದೆ. ಆದರೆ ಹಾಗೇನೂ ಆಗಲಿಲ್ಲ. ಯಾವುದೋ ಪ್ರಾಣಿಯ ದಾಳಿಗೆ ಒಳಗಾಗಿ ಸತ್ತು ಹೊಳೆಯಲ್ಲಿ ತೇಲಿಕೊಂಡು ಬಂದ ಕಡವೆಯನ್ನು ತಿನ್ನುವ ಉದ್ದೇಶದಿಂದ ಕತ್ತರಿಸಿದ್ದು ಹೊರತು ಗುಂಡು ಹಾರಿಸಿ ಕೊಂದದ್ದಲ್ಲ ಎಂದು ಅಪರಾಧಿಯ ಪರ ವಕೀಲರು ವಾದಿಸಿ ಕೇಸು ಬಿದ್ದು ಹೋಗುವಂತೆ ಮಾಡಿದರು(ಅರಣ್ಯ ರಕ್ಷಕ ಸಿಬಂದಿಯ ಕೈ ಬೆಚ್ಚಗೆ ಮಾಡಿದ್ದಕ್ಕೆ ಅವರೇ ಆ ರೀತಿ ವಕೀಲರಿಗೆ ಹೇಳಿಕೊಟ್ಟರು ಎಂದು ಊರಲ್ಲಿ ಆಡಿಕೊಳ್ಳುತ್ತಿದ್ದಾರೆ). ಹೀರೋ ಫೋಸು ಕೊಡುತ್ತ ಅವರಿಬ್ಬರೂ ಎರಡೇ ದಿನದಲ್ಲಿ ಊರಿಗೆ ವಾಪಸಾದರು.
ಕಡವೆಯನ್ನು ಕಟ್ಟಿಹಾಕಿದ್ದಾರಂತೆ ಎಂದು ಕೆಲಸದವಳು ಹೇಳುವಾಗ ಮೇಲಿನ ಘಟನೆ ಜ್ಞಾಪಕಕ್ಕೆ ಬಂತು. ಇರಲಿ, ಈಗ ಈ ಕಡವೆಯ ವಿಷಯಕ್ಕೆ ಬರುತ್ತೇನೆ. ನಾನು ಬೇಗ ಬೇಗ ತಿಂಡಿ ತಯಾರಿಸಿ, ಚಾ ಮಾಡಿ ಇಟ್ಟು ಮನೆಗೆಲಸದವಳಿಗೆ ಹೇಳಿ ಹೊರಟೆ. ನನ್ನ ಮನೆಯಿಂದ ಅವಳ ಮನೆಗೆ ಸುಮಾರು ಎರಡು ಕಿ.ಮೀ. ದೂರ. ನಾನು ಅಲ್ಲಿಗೆ ತಲುಪಿದಾಗ ಕಡವೆಯ ಸುತ್ತ ಜನ ಸೇರಿದ್ದರು. ಅದನ್ನು ಉದ್ದ ಹಗ್ಗದ ಸಹಾಯದಿಂದ ಅಡಿಕೆ ಮರಕ್ಕೆ ಕಟ್ಟಿ ಹಾಕಿದ್ದರು. ಅದಕ್ಕೆ ಕೊಂಬು ಇರಲಿಲ್ಲ. ಅದು ಹೆಣ್ಣು ಕಡವೆ.
ಮಲೆನಾಡು ಗಿಡ್ಡ ತಳಿಯ ಹಸುವಿನ ಗಾತ್ರವನ್ನು ಹೊಂದಿತ್ತು. ಪಕ್ಕನೆ ನೋಡುವಾಗ ಹಸುವಿನಂತೆ ಕಂಡರೂ ಅದರ ಬಾಲ ತೀರಾ ಸಣ್ಣದು, ಕುತ್ತಿಗೆ ಉದ್ದ, ಕಣ್ಣಿನ ಕೆಳಗೆ ರಂಧ್ರದ ರೀತಿಯ ರಚನೆಯನ್ನು ಹೊಂದಿತ್ತು. ಅದಾಗಲೇ ಅರಣ್ಯಾಧಿಕಾರಿ, ಗಾರ್ಡ್, ವಾಚರುಗಳು ಆಗಮಿಸಿಯಾಗಿತ್ತು. ಕಡವೆ ಯಾವುದೇ ಪ್ರತಿಭಟನೆ ಇಲ್ಲದೆ, ಕರುಣಾಜನಕ ದೃಷ್ಟಿ ಬೀರುತ್ತ ಸುಮ್ಮನೆ ನಿಂತಿತ್ತು. ಅದರ ಕುತ್ತಿಗೆಯ ಅಡಿಭಾಗದಲ್ಲಿ ನಾಯಿ ಕಚ್ಚಿ ಗಾಯ ಮಾಡಿತ್ತು. ನೊಣಗಳು ಗಾಯಕ್ಕೆ ಮುತ್ತುತ್ತಿದ್ದವು. ನೊಣ ಕೂರದಂತಿರಲು ಮತ್ತು ಗಾಯ ವಾಸಿಯಾಗಲು ಪ್ರಥಮಚಿಕಿತ್ಸೆಯಾಗಿ ವಾಚರ್ ಕೂಸಣ್ಣ ಬೇವಿನೆಣ್ಣೆಗೆ ಅರಸಿನ ಬೆರೆಸಿ ಗಾಯಕ್ಕೆ ಹಚ್ಚಿದ. ಆಗಲೂ ಅದು ಪ್ರತಿರೋಧ ತೋರಲಿಲ್ಲ. ನನಗೆ ಆಗ ಕಡವೆ ಹಸುವಿಗಿಂತಲೂ ಸಾಧುಪ್ರಾಣಿ ಎಂದು ಅನಿಸಿತು.
ಯಾರೋ ಅಲ್ಲಿದ್ದವರು ಅದಕ್ಕೆ ಕುಡಿಯಲು ನೀರು ಕೊಡಲು ಹೇಳಿದರು. ಕೂಸಣ್ಣ ಬಕೆಟಿನಲ್ಲಿ ಹೊಳೆಯಿಂದ ನೀರು ತುಂಬಿಸಿ ಅದರ ಮುಂದೆ ಇಟ್ಟ. ಪಾಪ ಹುಟ್ಟಿದ ಮೇಲೆ ಬಕೆಟೇ ನೋಡದ ಅದು ಬಕೆಟಿನಿಂದ ನೀರು ಹೇಗೆ ತಾನೇ ಕುಡಿದೀತು?! ಇದನ್ನು ಅರಿತವನಂತೆ ಕೂಸಣ್ಣ ಅದರ ದವಡೆಯನ್ನು ಒಂದು ಕೈಯಿಂದ ಹಿಡಿದು, ಇನ್ನೊಂದು ಕೈಯಿಂದ ಬಕೆಟನ್ನು ಎತ್ತಿ ಹಿಡಿದು ನೀರನ್ನು ಮೆಲ್ಲನೆ ಅದರ ಬಾಯಿಗೆ ಹನಿಸಿದ. ಅದು ಬಾಯಿ ಒಡೆದು ನಾಲಿಗೆ ಚಪ್ಪರಿಸುತ್ತ ಕಾಲು ಬಕೆಟ್ ನೀರನ್ನು ಕುಡಿಯಿತು. ಅದರ ಬೆನ್ನನ್ನು ಸವರಿದ. ಹೊಟ್ಟೆ ಮುಟ್ಟಿ ‘‘ಓಹ್! ಇದು ಗಬ್ಬವತಿ. ಮರಿ ಅಡ್ಡಾಡುವುದು ಗೊತ್ತಾಗುತ್ತಿದೆ’’ ಎಂದು ಹೇಳಿದ. ನನಗೆ ಅದರ ಮೇಲೆ ಕನಿಕರ ಉಕ್ಕಿ ಬಂತು.
ಅರಣ್ಯಾಧಿಕಾರಿ ಹೇಳಿದರು, ‘‘ಅದರ ಮೈಮೇಲೆ ಏಟಾಗಿದೆ. ಅದಕ್ಕೆ ಟ್ರೀಟ್‌ಮೆಂಟಿನ ಅಗತ್ಯ ಇದೆ. ಅದನ್ನು ಜೀಪಲ್ಲಿ ಹಾಕಿ ಸಂಪಾಜೆಯ ಅರಣ್ಯ ಸಿಬ್ಬಂದಿಯವರ ಕ್ವಾರ್ಟರ್ಸ್‌ಗೆ ಕರೆದುಕೊಂಡು ಹೋಗೋಣ. ಅಲ್ಲಿಗೆ ಮಡಿಕೇರಿಯಿಂದ ವೈದ್ಯರನ್ನು ಕರೆಸಿ ಶುಶ್ರೂಷೆ ಮಾಡೋಣ.’’ ಎಲ್ಲರೂ ‘‘ಸರಿ’’ ಎಂದು ಒಪ್ಪಿದರು. ಜೀಪಿರುವಲ್ಲಿಗೆ ಹೋಗಬೇಕಾದರೆ ಇನ್ನೂರು ಹೆಜ್ಜೆಯಷ್ಟು ನಡೆಯಬೇಕಿತ್ತು.
ಅದರ ಹಿಂದಿನಿಂದ ಇಬ್ಬರು ನಡೆಯುವಂತೆ ನೂಕಿದರು. ಮುಂದಿನಿಂದ ಒಬ್ಬ ಅದಕ್ಕೆ ಕಟ್ಟಿದ ಹಗ್ಗವನ್ನು ಎಳೆಯತೊಡಗಿದ. ಅದು ಮೆಲ್ಲಮೆಲ್ಲನೆ ನಡೆಯತೊಡಗಿತು. ನಾನೂ ಅದರ ಹಿಂದಿನಿಂದ ನಡೆದೆ. ಜೀಪಿನ ಹತ್ತಿರ ಬರುವಾಗ ಅದಕ್ಕೆ ಎಲ್ಲಿಂದ ತ್ರಾಣ ಬಂತು ಗೊತ್ತಿಲ್ಲ; ಜೀಪಿನ ಬದಿಯಿಂದ ದೌಡಾಯಿಸಲು ತೊಡಗಿತು. ಅರಣ್ಯ ರಕ್ಷಕ ಸಿಬ್ಬಂದಿಗಳು ಅದನ್ನು ಬಲವಾಗಿ ಹಿಡಿದು ನಿಲ್ಲಿಸಿ ಕೈಕಾಲಿಗೆ ಹಗ್ಗ ಬಿಗಿದು ಜೀಪು ಏರಿಸಲು ನೋಡಿದರು. ಉಹುಂ. ಅದು ಅಲುಗಾಡಲಿಲ್ಲ. ಸತ್ತಂತೆ ಕೈಕಾಲು ಸೆಟೆಸಿ ಬಿದ್ದುಕೊಂಡಿತು. ‘ಓ... ಕೆಲಸ ಕೆಟ್ಟಿತು ಎನ್ನುತ್ತ ಅವರು ಅದರ ಕೈಕಾಲಿಗೆ ಕಟ್ಟಿದ ಹಗ್ಗವನ್ನು ಬಿಡಿಸಿದರು. ಈಗ ಅದು ನೆಟ್ಟಗೆ ನಿಂತುಕೊಂಡಿತು.
ಅರಣ್ಯಾಧಿಕಾರಿ ಅದರ ಮೈದಡವಿ ‘‘ಇದಕ್ಕೆ ಹೆಚ್ಚೇನೂ ಪೆಟ್ಟು ಆಗಿಲ್ಲ. ಪೆಟ್ಟಾಗಿರುತ್ತಿದ್ದರೆ ದೌಡಾಯಿಸುತ್ತಿರಲಿಲ್ಲ. ಬೇವಿನೆಣ್ಣೆಯನ್ನು ಹೇಗೂ ಹಚ್ಚಿಯಾಗಿದೆ. ಗಾಯ ವಾಸಿಯಾಗಲು ಅಷ್ಟು ಸಾಕು. ಬೇರೆ ಔಷಧಿಯ ಅಗತ್ಯ ಇಲ್ಲ. ಇದನ್ನು ಇಲ್ಲಿಯೇ ಬಿಟ್ಟುಬಿಡೋಣ. ಇದಕ್ಕೆ ಈ ಪರಿಸರದ ಪರಿಚಯ ಇರುವುದರಿಂದ ತೊಂದರೆಯೇನೂ ಇಲ್ಲ’’ ಎನ್ನುತ್ತ ಕುತ್ತಿಗೆಯಿಂದ ಹಗ್ಗ ಬಿಚ್ಚಿದರು. ಇದನ್ನೇ ಕಾದಿದ್ದಂತೆ ಅದು ಕುಪ್ಪಳಿಸುತ್ತಾ, ಕಿವಿ ನೆಟ್ಟಗೆ ಮಾಡಿ ನಾಗಾಲೋಟದಿಂದ ಓಡತೊಡಗಿತು. ಹೊಳೆಗೆ ಹಾರಿ ಈಜುತ್ತ ಕ್ಷಣಾರ್ಧದಲ್ಲಿ ಎದುರು ಇರುವ ಕಾಡನ್ನು ಸೇರಿ ಕಣ್ಮರೆಯಾಯಿತು. ಮರುದಿನ ಬೆಳಿಗ್ಗೆ ಕೆಲಸದವಳು ದೂರದಿಂದಲೇ ‘‘ಅಕ್ಕಾ, ಅಕ್ಕಾ’’ ಎಂದು ಕರೆಯುತ್ತಲೇ ಬಂದಳು.
ಎಂದಿನಂತೆ ಅಡುಗೆಮನೆಯಲ್ಲಿದ್ದ ನಾನು ‘‘ಏನು?’’ ಎನ್ನುತ್ತ ಹೊರಗೆ ಬಂದೆ. ತುಂಬ ಉದ್ವೇಗದಲ್ಲಿದ್ದಳು. ‘‘ಅಕ್ಕಾ, ನಾನು ಕೆಲಸಕ್ಕೆ ಬರುವ ದಾರಿಯಲ್ಲಿ ಒಂದು ಕಡವೆ ಸತ್ತು ಬಿದ್ದಿದೆ. ಅದರ ಹೊಟ್ಟೆ ಭಾಗವನ್ನು ಕಾಡುನಾಯಿಗಳು ತಿಂದಿವೆ. ದೂರದಲ್ಲಿ ಅವುಗಳ ಗುಂಪು ಓಡುವುದನ್ನು ನೋಡಿದೆ. ನಾಳೆ ಅವು ಮತ್ತೆ ಬಂದು ಉಳಿದ ಭಾಗವನ್ನು ತಿನ್ನಲೂ ಬಹುದು.
ಅದು ನಿನ್ನೆ ನೀವು ನೋಡಿದ ಕಡವೆಯೇ. ಕುತ್ತಿಗೆಯ ಅಡಿಭಾಗದಲ್ಲಿ ಅರಸಿನ ಹಚ್ಚಿದ್ದು ಎದ್ದು ಕಾಣುತ್ತಿದೆ. ಅದನ್ನು ಅಷ್ಟು ಬೇಗ ಬಿಟ್ಟುಬಿಡಬಾರದಿತ್ತು. ಅರಣ್ಯ ಸಿಬ್ಬಂದಿಯ ಗೃಹದಲ್ಲಿಟ್ಟು ಗಾಯ ಪೂರ್ತಿ ವಾಸಿಯಾದ ಮೇಲೆ ಬಿಡಬೇಕಿತ್ತು. ಪಾಪ! ಅದಕ್ಕೆ ತುಂಬ ನೋವು ಇರುವುದರಿಂದಲೇ ಕಾಡುನಾಯಿಗಳಿಂದ ತಪ್ಪಿಸಿಕೊಳ್ಳಲಾಗಲಿಲ್ಲ’’ ಎಂದಳು. ‘‘ನನ್ನನ್ನು ರಕ್ಷಿಸಿ’’ ಎಂಬಂತೆ ದಯನೀಯ ದೃಷ್ಟಿಯಿಂದ ನೋಡುತ್ತಿರುವ ಕಡವೆಯ ಚಿತ್ರ ಕಣ್ಣ ಮುಂದೆ ಬಂದು ಅದನ್ನು ಉಳಿಸಿಕೊಳ್ಳಲಾಗದಿದ್ದುದಕ್ಕೆ ಅಪರಾಧಿ ಪ್ರಜ್ಞೆ ನನ್ನನ್ನು ಕಾಡಿತು.