ನಕಲಿ ಆಧಾರ್ ಕಾರ್ಡ್ ಹಾವಳಿ: ಕರ್ನಾಟಕ ಸಹಿತ 8 ರಾಜ್ಯಗಳಲ್ಲಿ ಸಮೀಕ್ಷೆ ನಡೆಸಲು ಕೇಂದ್ರದ ಚಿಂತನೆ; ವರದಿ
ಹೊಸದಿಲ್ಲಿ: ನಕಲಿ ಆಧಾರ್ ಕಾರ್ಡ್ ಗಳ ಬಗ್ಗೆ ಹೆಚ್ಚುತ್ತಿರುವ ಕಳವಳದ ನಡುವೆ ಕೇಂದ್ರ ಸರ್ಕಾರವು ಕೇರಳ, ತಮಿಳುನಾಡು, ಕರ್ನಾಟಕ, ಅಸ್ಸಾಂ, ಪಶ್ಚಿಮ ಬಂಗಾಳ, ಮೇಘಾಲಯ, ತ್ರಿಪುರಾ ಮತ್ತು ಮಹಾರಾಷ್ಟ್ರಗಳಲ್ಲಿ ಮಾದರಿ ಸಮೀಕ್ಷೆ ಕೈಗೊಳ್ಳುವ ನಿರೀಕ್ಷೆಯಿದೆ. ಈ ಕುರಿತಂತೆ ಕೇಂದ್ರ ಗೃಹ ಕಾರ್ಯದರ್ಶಿ ನವೆಂಬರ್ ತಿಂಗಳ ಕೊನೆಯ ವಾರದಲ್ಲಿ ಎಲ್ಲಾ ರಾಜ್ಯಗಳ ಗೃಹ ಕಾರ್ಯದರ್ಶಿಗಳೊಂದಿಗೆ ಸಭೆ ನಡೆಸಿದ್ದಾರೆ ಎಂದು news18.com ವರದಿ ಮಾಡಿದೆ.
ಮಾದರಿ ಸಮೀಕ್ಷೆ (ಸ್ಯಾಂಪಲ್ ಸರ್ವೇ)ಗೆ ಗುರುತಿಸಲಾದ ಎಂಟು ರಾಜ್ಯಗಳಲ್ಲಿ ಕೆಲವೊಂದು ಜಿಲ್ಲೆಗಳನ್ನು ಸೂಕ್ಷ್ಮ ಎಂದು ಗುರುತಿಸಲಾಗಿದೆ. ಕೇರಳದ ಎರ್ಣಾಕುಳಂ, ತಮಿಳುಮಾಡಿನ ತಿರುಪ್ಪುರ್, ಕರ್ನಾಟಕದ ಬೆಂಗಳೂರು, ಅಸ್ಸಾಂ ರಾಜ್ಯದ ಕರೀಂಗಂಜ್, ಗೋಲ್ಪುರ, ಧುಬ್ರಿ, ಸೌತ್ ಸಾಲ್ಮರ, ಹೈಲಕಂಡಿ, ಮೇಘಾಲಯದ ಈಸ್ ಖಾಸಿ ಹಿಲ್ಸ್ ಜಿಲ್ಲೆ, ತ್ರಿಪುರಾದ ಸಿಪಹಿಜಲ, ಮಹಾರಾಷ್ರದ ಮುಂಬೈ ಸೆಂಟ್ರಲ್, ಪಾಲ್ಘರ್, ಪ ಬಂಗಾಳದ ನಾರ್ತ್ 24 ಪರಗಣ ಮತ್ತು ಸೌತ್ 24 ಪರಗಣ ಇವುಗಳನ್ನು ಸೂಕ್ಷ್ಮ ಜಿಲ್ಲೆಗಳೆಂದು ಗುರುತಿಸಲಾಗಿದೆ.
ಸಮೀಕ್ಷೆಯನ್ನು ಯಾವ ರೀತಿ ಕೈಗೊಳ್ಳಬೇಕೆಂಬ ಕುರಿತು ರಾಜ್ಯಗಳ ಅಭಿಪ್ರಾಯ ಕೇಳಲಾಗಿದೆ. ಎಲ್ಲಾ ರಾಜ್ಯಗಳಿಗೆ ತಮ್ಮ ಅಭಿಪ್ರಾಯ ತಿಳಿಸುವಂತೆ ಸೂಚಿಸಲಾಗಿದೆ.
ಈ ಕುರಿತಂತೆ ಕೇಂದ್ರ ಸಂಬಂಧಿತ ಅಧಿಕಾರಿಗಳ ಜೊತೆ ಮತ್ತೆ ಚರ್ಚೆ ನಡೆಸಲಿದೆ ಎಂದು ವರದಿಯಾಗಿದೆ.