ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಕುರಿತು ಪ್ರಿಯಾಂಕಾ ಗಾಂಧಿ ಅಂತಿಮ ನಿರ್ಧಾರ : ವರದಿ

Update: 2022-12-10 07:32 GMT

ಶಿಮ್ಲಾ: ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಯ ಗೆಲುವಿಗೆ ಕಾರಣಕರ್ತರಲ್ಲಿ ಒಬ್ಬರಾದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ Congress General Secretary Priyanka Gandhi Vadra ಅವರು ರಾಜ್ಯದ ಮುಖ್ಯಮಂತ್ರಿ ಯಾರು ಎಂಬ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಹಿಮಾಚಲಪ್ರದೇಶ ರಾಜ್ಯದಲ್ಲಿ ಸಿಎಂ ಸ್ಥಾನಕ್ಕಾಗಿ ತೀವ್ರ ಪೈಪೋಟಿ ಏರ್ಪಟ್ಟಿದೆ.

ಶುಕ್ರವಾರ ಸಂಜೆ ರಾಜ್ಯದ 40 ಕಾಂಗ್ರೆಸ್ ಶಾಸಕರು ಪಕ್ಷದ ಸಾಂಪ್ರದಾಯಿಕ ಒಂದು ಗೆರೆಯ ನಿರ್ಣಯವನ್ನು ಅಂಗೀಕರಿಸಿದ್ದು, ನಿರ್ಧಾರ ತೆಗೆದುಕೊಳ್ಳಲು "ಹೈಕಮಾಂಡ್"ಗೆ ಅಧಿಕಾರ ನೀಡಿದ್ದಾರೆ. ರವಿವಾರದೊಳಗೆ ನಿರ್ಧಾರ ಹೊರಬೀಳುವ ನಿರೀಕ್ಷೆಯಿದೆ

ಪ್ರಿಯಾಂಕಾ ಗಾಂಧಿ ಅವರು ಹಿಮಾಚಲ ಪ್ರದೇಶದಲ್ಲಿ ಪಕ್ಷದ ಪ್ರಚಾರವನ್ನು ಹೊಸ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಹಲವಾರು ರ್ಯಾಲಿಗಳೊಂದಿಗೆ ಮುನ್ನಡೆಸಿದ್ದರು. ಚುನಾವಣೆಯ ಕಾರ್ಯತಂತ್ರದ ಯೋಜನೆಯಲ್ಲಿ ನಿಕಟವಾಗಿ ತೊಡಗಿಸಿಕೊಂಡಿದ್ದರು. ಪಕ್ಷಕ್ಕೆ ಗೆಲುವನ್ನು ಖಾತ್ರಿಪಡಿಸುವಲ್ಲಿ ಹಾಗೂ  ಬಿಜೆಪಿಯ ಚುನಾವಣಾ ಯಂತ್ರವನ್ನು ಸೋಲಿಸುವಲ್ಲಿ ಅವರ ನಾಯಕತ್ವವನ್ನು ಅನೇಕ ನಾಯಕರು ಶ್ಲಾಘಿಸಿದರು.

ಪ್ರಚಾರದ ಹೊಣೆ ಹೊತ್ತಿರುವ ಪ್ರಿಯಾಂಕಾ ಗಾಂಧಿಯವರ ಮೊದಲ ಚುನಾವಣಾ ಯಶಸ್ಸು ಇದಾಗಿದೆ. ಈ ವರ್ಷದ ಆರಂಭದಲ್ಲಿ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಅವರು ಪ್ರಚಾರವನ್ನು ಮುನ್ನಡೆಸಿದಾಗ ಪಕ್ಷವು ಸೋತಿತ್ತು.

ಸಿರ್ಮೂರ್, ಕಂಗ್ರಾ, ಸೋಲನ್ ಹಾಗೂ  ಉನಾದಲ್ಲಿ ನಡೆದ ರ್ಯಾಲಿಗಳಲ್ಲಿ ಪ್ರಿಯಾಂಕಾ ಗಾಂಧಿ ಅವರು ಅಗ್ನಿಪಥ್, ಹಣದುಬ್ಬರ, ನಿರುದ್ಯೋಗ ಹಾಗೂ  ಹಳೆಯ ಪಿಂಚಣಿ ಯೋಜನೆಗಳ ಸಮಸ್ಯೆಗಳನ್ನು ಪ್ರಸ್ತಾಪಿಸಿದ್ದರು.

Similar News