ನಾನು ದೊಡ್ಡ ತಪ್ಪು ಮಾಡಿದ್ದೇನೆ: ಆಪ್ ಪಕ್ಷಕ್ಕೆ ಸೇರಿದ ಕೆಲವೇ ಗಂಟೆಗಳ ನಂತರ ಕಾಂಗ್ರೆಸ್ ಗೆ ಮರಳಿದ ಅಲಿ ಮೆಹದಿ

Update: 2022-12-10 08:14 GMT

ಹೊಸದಿಲ್ಲಿ: ದಿಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ಅಲಿ ಮೆಹದಿ ಅವರು ನಿಷ್ಠೆಯನ್ನು ಬದಲಿಸಿ ಆಮ್ ಆದ್ಮಿ ಪಕ್ಷಕ್ಕೆ ಸೇರಿದ ಕೆಲವೇ ಗಂಟೆಗಳ ನಂತರ ಕಾಂಗ್ರೆಸ್  ಪಕ್ಷಕ್ಕೆ ಮರು ಸೇರ್ಪಡೆಯಾಗಿರುವುದಾಗಿ ಹೇಳಿದ್ದಾರೆ. 

ಇಂದು ಮುಂಜಾನೆ, ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ ಮಾತನಾಡಿದ ಮೆಹದಿ,  ತಾನು ಮಾಡಿರುವ  "ತಪ್ಪಿಗೆ" ಕ್ಷಮೆಯಾಚಿಸಿದರು ಹಾಗೂ  "ನಾನು ರಾಹುಲ್ ಗಾಂಧಿಯವರ ಕಾರ್ಯಕರ್ತ " ಎಂದು ಹೇಳಿದರು.

ಇತ್ತೀಚೆಗೆ ದಿಲ್ಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಮುಸ್ತಫಾಬಾದ್ನಿಂದ ಆಯ್ಕೆಯಾದ ಕೌನ್ಸಿಲರ್ಗಳಾದ ಸಬಿಲಾ ಬೇಗಂ ಹಾಗೂ  ಬ್ರಿಜ್ಪುರಿಯಿಂದ ಆಯ್ಕೆಯಾಗಿದ್ದ ನಾಝಿಯಾ ಖಾತೂನ್  ನನ್ನೊಂದಿಗೆ  ಎಎಪಿಗೆ ಸೇರ್ಪಡೆಗೊಂಡಿದ್ದರು. ಅವರೆಲ್ಲರೂ ಕಾಂಗ್ರೆಸ್ ಗೆ ಮರು ಸೇರ್ಪಡೆಯಾಗಿದ್ದಾರೆ ಎಂದು  ಮೆಹದಿ ಹೇಳಿದರು.

ಶನಿವಾರ ಮುಂಜಾನೆ 1:25 ಕ್ಕೆ ಪೋಸ್ಟ್ ಮಾಡಲಾದ ವೀಡಿಯೊದಲ್ಲಿ  ಮೆಹದಿ ಕೈಮುಗಿದು ಕ್ಷಮೆಯಾಚಿಸುತ್ತಿರುವುದು ಕಂಡುಬಂದಿದೆ.

"ನಾನು ದೊಡ್ಡ ತಪ್ಪು ಮಾಡಿದ್ದೇನೆ. ನನ್ನ ತಂದೆ 40 ವರ್ಷಗಳಿಂದ ಕಾಂಗ್ರೆಸ್ನಲ್ಲಿದ್ದಾರೆ, ಇತರ ಕೌನ್ಸಿಲರ್ಗಳಿಗೆ ಇದೇ ರೀತಿಯ ವೀಡಿಯೊಗಳನ್ನು ಅಪ್ಲೋಡ್ ಮಾಡಲು ಕೇಳಿಕೊಂಡಿದ್ದೇನೆ" ಎಂದು ಮೆಹದಿ ಹೇಳಿದ್ದಾರೆ. 

ಬ್ರಿಜ್ಪುರಿಯ ಕೌನ್ಸಿಲರ್ ನಾಝಿಯಾ ಖಾತೂನ್, ಮುಸ್ತಫಾಬಾದ್ನ ಕೌನ್ಸಿಲರ್ ಸಬಿಲಾ ಬೇಗಂ ಹಾಗೂ  300 ಮತಗಳಿಂದ ಸೋತ ನಮ್ಮ ಬ್ಲಾಕ್ ಅಧ್ಯಕ್ಷ ಅಲೀಂ ಅನ್ಸಾರಿ ಅವರು ಈಗಲೂ ರಾಹುಲ್ ಜಿ ಮತ್ತು ಪ್ರಿಯಾಂಕಾ ಜೀ ಅವರ ಕಾರ್ಯಕರ್ತರಾಗಿ ಉಳಿಯುತ್ತಾರೆ, ರಾಹುಲ್ ಗಾಂಧಿ ಜಿಂದಾಬಾದ್," ಎಂದು ಅವರು ಇನ್ನೊಂದು ಟ್ವೀಟ್ನಲ್ಲಿ ಹೇಳಿದ್ದಾರೆ.

Similar News