ಕಣ್ಣೀರಿಟ್ಟು ವೈರಲ್ ಆಗಿ ಅರ್ಜೆಂಟಿನಾ ಪಂದ್ಯವನ್ನು ಕಣ್ತುಂಬಿಕೊಂಡ ಬಾಲಕ !

ಖತರ್ ಸ್ಟೇಡಿಯಂನಲ್ಲಿ ಕೇರಳದ ಮೆಸ್ಸಿ ಅಭಿಮಾನಿಯ ಸಂಭ್ರಮ

Update: 2022-12-11 12:27 GMT

ಲುಸೈಲ್ (ಖತರ್): ಮೊದಲಿಗೆ ಅದ್ಭುತ ಡ್ರಾ, ಪಂದ್ಯದಲ್ಲಿ 16ಕ್ಕೂ ಹೆಚ್ಚು ಬಾರಿ ಹಳದಿ ಕಾರ್ಡ್ ಎಚ್ಚರಿಕೆ, ಆಸನದ ತುದಿಯಲ್ಲಿ ಕೂರಿಸಿದ ಪೆನಾಲ್ಟಿ ಶೂಟೌಟ್, ಕೊನೆಗೆ ಅರ್ಜೆಂಟಿನಾ ತಂಡದ ರೋಚಕ ಗೆಲುವು - ಡಿಸೆಂಬರ್ 10ರಂದು ನಡೆದ ಫೀಫಾ ವಿಶ್ವಕಪ್ ಫುಟ್‌ಬಾಲ್ ಕ್ವಾರ್ಟರ್ ಫೈನಲ್‌ನ ಅರ್ಜೆಂಟಿನಾ-ನೆದರ್‌ಲೆಂಡ್ ಪಂದ್ಯ ವಿಶ್ವಾದ್ಯಂತ ಇರುವ ಫುಟ್‌ಬಾಲ್ ಪ್ರೇಮಿಗಳಿಗೆ ರಸದೌತಣವನ್ನೇ ನೀಡಿತು. ಆದರೆ, ಕೇರಳದ ಕಾಸರಗೋಡು ಜಿಲ್ಲೆಯ ತ್ರಿಕಾರಿಪುರ ನಿವಾಸಿ ಹಾಗೂ ಅರ್ಜೆಂಟಿನಾ ತಂಡದ ದೊಡ್ಡ ಅಭಿಮಾನಿಯಾದ 13 ವರ್ಷದ ನಿಬ್ರಾಸ್‌ಗೆ ಈ ಗೆಲುವು ಸಿಹಿಯಾದ ಸೇಡು ತೀರಿಸಿಕೊಂಡಷ್ಟು ಖುಷಿ ನೀಡಿತು.

ಅರ್ಜೆಂಟಿನಾ ತನ್ನ ಪ್ರಥಮ ಪಂದ್ಯದಲ್ಲಿ ಸೌದಿ ಅರೇಬಿಯಾ ಎದುರು ಪರಾಭವಗೊಂಡಾಗ ರೋದಿಸಿದ್ದ ಈ ಬಾಲಕನ ವಿಡಿಯೊ ವೈರಲ್ ಆಗಿತ್ತು. ಅದೇ ಬಾಲಕ ಡಿಸೆಂಬರ್ 10ರಂದು ಖತರ್‌ನ ಲುಸೈಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯವನ್ನು ಖುದ್ದಾಗಿ ವೀಕ್ಷಿಸಿ ತನ್ನ ಅಚ್ಚುಮೆಚ್ಚಿನ ಆಟಗಾರರ ಆಟವನ್ನು ಕಣ್ತುಂಬಿಕೊಂಡನು. ಪಂದ್ಯದುದ್ದಕ್ಕೂ ಅರ್ಜೆಂಟೀನಾ ರಾಷ್ಟ್ರಧ್ವಜವನ್ನು ಹಿಡಿದುಕೊಂಡಿದ್ದ ಆತ "ಮೆಸ್ಸಿ, ಮೆಸ್ಸಿ" ಎಂದು ಕೂಗುತ್ತಿದ್ದ ವಿಡಿಯೋ ವೈರಲ್ ಆಗಿದೆ. 

ನವೆಂಬರ್ 22ರಂದು ನಡೆದಿದ್ದ ಅರ್ಜೆಂಟಿನಾ-ಸೌದಿ ಅರೇಬಿಯಾ ನಡುವಿನ ಪಂದ್ಯದಲ್ಲಿ ಸೌದಿ ಅರೇಬಿಯಾ 2-1 ಅಂತರದಲ್ಲಿ ಗೆಲುವು ಸಾಧಿಸಿತ್ತು. ಈ ಪಂದ್ಯದ ನಂತರ ನಿಬ್ರಾಸ್‌ನನ್ನು ಸುತ್ತುವರಿದಿದ್ದ ಜನರ ಗುಂಪೊಂದು ಆತನ ತಂಡದ ವೈಫಲ್ಯದ ಕುರಿತು ಹಂಗಿಸಿತ್ತು. ಆ ಸಂದರ್ಭದಲ್ಲಿ ದುಃಖದಿಂದ ನಿಬ್ರಾಸ್, "ಇದು ಕೇವಲ ಒಂದು ಪಂದ್ಯ. ಮುಂದೆ ಹಲವಾರು ಪಂದ್ಯಗಳು ಬರುವುದಿದೆ" ಎಂದು ಹೇಳಿದ್ದ. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಈ ವಿಡಿಯೊ ವೈರಲ್ ಆದ ನಂತರ ಪಯ್ಯಣ್ಣೂರ್ ಮೂಲದ ಪ್ರವಾಸದ ಏಜೆನ್ಸಿಯಾದ ಸ್ಮಾರ್ಟ್ ಏಜೆನ್ಸಿಯು ಅರ್ಜೆಂಟಿನಾ ತಂಡ ಆಡುವ ಪಂದ್ಯವನ್ನು ವೀಕ್ಷಿಸಲು ಹಾಗೂ ಖತರ್‌ನಲ್ಲಿ ಎರಡು ದಿನ ಉಳಿದುಕೊಳ್ಳಲು ನಿಬ್ರಾಸ್ ಗೆ ಪ್ರವಾಸ ಅವಕಾಶ ಒದಗಿಸುವ ಪ್ರಾಯೋಜಕತ್ವ ವಹಿಸಿಕೊಂಡಿತು.

"ನನ್ನ ಗೆಳೆಯರು ನನ್ನ ಅರಿವಿಗೆ ಬಾರದಂತೆ ಆ ವಿಡಿಯೊ ಚಿತ್ರೀಕರಿಸಿದ್ದರಿಂದ ನಾನು ಮೊದಲು ಕೋಪಗೊಂಡಿದ್ದೆ ಎಂದು ಈ ಮುನ್ನ ನಿಬ್ರಾಸ್ ಹೇಳಿಕೊಂಡಿದ್ದ. ಆದರೆ, ಆ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ಬೆನ್ನಿಗೇ ಆತನನ್ನು ಖತರ್‌ಗೆ ಕಳಿಸುವ ಕೊಡುಗೆಯನ್ನು ಪ್ರವಾಸಿ ಏಜೆನ್ಸಿ ನೀಡಿದೆ.

ನಿಬ್ರಾಸ್ ಗುರುವಾರದಂದು ಖತರ್ ತಲುಪಿದ್ದ ಮತ್ತು ಆತನನ್ನು ಪ್ರವಾಸಿ ಏಜೆನ್ಸಿಯ ಪ್ರತಿನಿಧಿಗಳು ಸ್ವಾಗತಿಸಿದ್ದರು. ಮರು ದಿನವೇ ಆತ ಅರ್ಜೆಂಟಿನಾ ತಂಡದ ನಾಯಕ ಹಾಗೂ ತನ್ನ ಪಾಲಿನ ಹೀರೊ ಲಿಯೊನೆಲ್ ಮೆಸ್ಸಿಯ ಆಟವನ್ನು ನೇರವಾಗಿ ವೀಕ್ಷಿಸಿದ. ಇದಲ್ಲದೆ ರೋಚಕ ಹಣಾಹಣಿಯಲ್ಲಿ ಆತನ ಅಚ್ಚುಮೆಚ್ಚಿನ ತಂಡವಾದ ಅರ್ಜೆಂಟಿನಾ ಗೆಲುವಿನ ನಗೆ ಬೀರಿತ್ತು. 

Full View

Similar News