‘ಸುಲ್ಲಿಡೀಲ್ಸ್’ ಪ್ರಕರಣದ ಆರೋಪಿಯ ವಿರುದ್ಧ ಕಾನೂನುಕ್ರಮಕ್ಕೆ ದಿಲ್ಲಿ. ಲೆ.ಗವರ್ನರ್ ಅನುಮತಿ

Update: 2022-12-11 16:30 GMT

ಹೊಸದಿಲ್ಲಿ,ಡಿ.11: ಆನ್‌ಲೈನ್‌ನಲ್ಲಿ ಮುಸ್ಲಿಂ ಮಹಿಳೆಯರ ‘ಹರಾಜಿಗಿಡುವ’ ಅಣಕವಾಡಿದ 'ಸುಲ್ಲಿಡೀಲ್ಸ್' ಪ್ರಕರಣದ ಆರೋಪಿಗಳ ವಿರುದ್ಧ ಕಾನೂನುಕ್ರಮ ಕೈಗೊಳ್ಳಲು ದಿಲ್ಲಿಯ ಲೆಫ್ಟಿನೆಂಟ್ ಜನರಲ್ ವಿ.ಕೆ. ಸಕ್ಸೇನಾ ರವಿವಾರ ಅನುಮತಿ ನೀಡಿದ್ದಾರೆ.

 ಪ್ರಕರಣದ ಪ್ರಮುಖ ಆರೋಪಿ ಓಂಕಾರೇಶ್ವರ ಠಾಕೂರ್ ವಿರುದ್ಧ ಭಾರತೀಯ ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 196 ಅಡಿ ಕಾನೂನುಕ್ರಮ ಕೈಗೊಳ್ಳಲಾಗುವುದು ಎಂದು ಮೂಲಗಳು ತಿಳಸಿವೆ. ದೇಶದ ವಿರುದ್ಧ ಅಪರಾಧ ಎಸಗಿದ ಹಾಗೂ  ದುಷ್ಕೃತ್ಯ ನಡೆಸಲು ಕ್ರಿಮಿನಲ್ ಸಂಚು ಹೂಡಿದ ಆರೋಪಗಳನ್ನು ಆತನ ವಿರುದ್ಧ ಹೊರಿಸಲಾಗಿದೆ ಎಂದು ಅವು ಹೇಳಿವೆ.

ಈ ಸೆಕ್ಷನ್‌ನಡಿ ಆರೋಪಿಗಳ ವಿರುದ್ದ ಕಾನೂನುಕ್ರಮ ಕೈಗೊಳ್ಳಬೇಕಾದರೆ ಪೊಲೀಸರಿಗೆ ಲೆಫ್ಟಿನೆಂಟ್ ಗವರ್ನರ್ ಅವರ ಅನುಮತಿಯ ಅಗತ್ಯವಿರುತ್ತದೆ.

ಸುಲ್ಲಿ ಡೀಲ್ಸ್ ಆ್ಯಪ್ ಹಾಗೂ ಸುಲ್ಲಿ ಡೀಲ್ಸ್ ಟ್ವಿಟ್ಟರ್ ಹ್ಯಾಂಡಲ್ ಅನ್ನು ಆರೋಪಿ ಠಾಕೂರ್ ಸೃಷ್ಟಿಸಿದ್ದು, ಅವುಗಳ ಮೂಲಕ ಆತ ಮುಸ್ಲಿಂ ಸಮುದಾಯಕ್ಕೆ ಸೇರಿದ ಮಹಿಳೆಯರನ್ನು ಹರಾಜಿಗಿಡುವ ಅಣಕವಾಡುತ್ತಿದ್ದ. ಮುಸ್ಲಿಂ ಸಮುದಾಯವನ್ನು ಅಪಮಾನಿಸುವುದೇ ಆತನ ದುರುದ್ದೇಶವಾಗಿತ್ತೆಂದು ಆರೋಪಿಸಲಾಗಿದೆ.

ದಿಲ್ಲಿ ಪೊಲೀಸರು 2021ರ ಜುಲೈ 7ರಂದು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದರು.‘‘ಆರೋಪಿಯ ವಿರುದ್ಧ ದಾಖಲಿಸಿರುವ ಪ್ರಕರಣ ಮೇಲ್ನೋಟಕ್ಕೆ ದೃಢಪಟ್ಟಂತೆ ಕಾಣುತ್ತದೆ. ಹೀಗಾಗಿ ಆತನ ವಿರುದ್ಧ ಕಾನೂನುಕ್ರಮ ಕೈಗೊಳ್ಳಲು ಅನುಮತಿ ನೀಡಲಾಗಿದೆ’’ ಎಂದು ಮೂಲಗಳು ತಿಳಿಸಿವೆ.

ಸುಲ್ಲಿ ಡೀಲ್ಸ್ ಘಟನೆಯ ವಿರುದ್ಧ ದೇಶಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಸುಲ್ಲಿಡೀಲ್ಸ್ ಮೊಬೈಲ್ ಆ್ಯಪ್ ಮೂಲಕ ನೂರಾರು ಮುಸ್ಲಿಂ ಮಹಿಳೆಯರನ್ನು ಅವರ ಭಾವಚಿತ್ರಗಳೊಂದಿಗೆ ಅನುಮತಿಯಿಲ್ಲದೆಯೇ ತಿರುಚಿ,ಹರಾಜಿಗಿಡಲಾಗಿತ್ತು. 

Similar News