ರಾಜಸ್ಥಾನ: ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ 3 ಕೋಚಿಂಗ್ ವಿದ್ಯಾರ್ಥಿಗಳು ಆತ್ಮಹತ್ಯೆ

Update: 2022-12-12 14:51 GMT

ಜೈಪುರ, ಡಿ.12: ರಾಜಸ್ಥಾನದ ಕೋಟಾದಲ್ಲಿ ಸ್ಪರ್ಧಾತ್ಮಕ ಕಾಲೇಜು ಪ್ರವೇಶ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ಮೂವರು ವಿದ್ಯಾರ್ಥಿಗಳು ಇಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.  ಮೃತದೇಹಗಳನ್ನು ಶವಾಗಾರದಲ್ಲಿ ಇರಿಸಲಾಗಿದ್ದು, ಸತ್ಯಾಂಶ ತಿಳಿಯಲು ಪೊಲೀಸರು ತನಿಖೆ ಆರಂಭಿಸಿದ್ದಾರೆ. ವಿದ್ಯಾರ್ಥಿಗಳು 16, 17 ಮತ್ತು 18 ವರ್ಷ ವಯಸ್ಸಿನವರಾಗಿದ್ದರು ಎಂದು  NDtv ವರದಿ ಮಾಡಿದೆ. 

ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳಾದ ಅಂಕುಶ್ ಮತ್ತು ಉಜ್ವಲ್ ಬಿಹಾರ ಮೂಲದವರಾಗಿದ್ದಾರೆ.  ಇಬ್ಬರೂ ಸ್ನೇಹಿತರಾಗಿದ್ದು, ಪಕ್ಕದ ಕೊಠಡಿಗಳಲ್ಲಿ ಒಂದೇ ಹಾಸ್ಟೆಲ್‌ನಲ್ಲಿ ವಾಸವಿದ್ದರು.  ಒಬ್ಬರು ಎಂಜಿನಿಯರಿಂಗ್ ಕಾಲೇಜು ಪ್ರವೇಶಕ್ಕೆ ತಯಾರಿ ನಡೆಸುತ್ತಿದ್ದರೆ, ಇನ್ನೊಬ್ಬರು  ವೈದ್ಯಕೀಯ ಕಾಲೇಜು ಪ್ರವೇಶ ಪರೀಕ್ಷೆಗೆ ಓದುತ್ತಿದ್ದರು. ವಿದ್ಯಾರ್ಥಿಗಳಿಂದ ಯಾವುದೇ ಆತ್ಮಹತ್ಯೆ ಪತ್ರಗಳು ಇನ್ನೂ ಪತ್ತೆಯಾಗಿಲ್ಲ.

ಮೂರನೇ ವಿದ್ಯಾರ್ಥಿ, ಪ್ರಣವ್, ಮಧ್ಯಪ್ರದೇಶದ ಮೂಲದವರಾಗಿದ್ದು, NEET ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರು. ಸ್ಪರ್ಧಾತ್ಮಕ ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಪರೀಕ್ಷೆಗಳಿಗೆ ಪೂರ್ವಸಿದ್ಧತಾ ತರಗತಿಗಳನ್ನು ಒದಗಿಸುವ ಕೋಚಿಂಗ್ ಸೆಂಟರ್‌ಗಳಿಗೆ ಹೆಸರುವಾಸಿಯಾಗಿರುವ ಕೋಟಾದ ಕೋಚಿಂಗ್ ಕೇಂದ್ರಗಳಲ್ಲಿ ಹಲವು ಆತ್ಮಹತ್ಯೆ ಪ್ರಕರಣಗಳು ವರದಿಯಾಗಿದೆ.

 ತಮ್ಮ ಶಾಲಾ ಶಿಕ್ಷಣದ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗಲು ಈ ಕೋಚಿಂಗ್ ಕೇಂದ್ರಗಳ ವೇಳಾಪಟ್ಟಿಗಳು ವಿದ್ಯಾರ್ಥಿಗಳನ್ನು ಹೆಚ್ಚಿನ ಒತ್ತಡಕ್ಕೆ ದೂಡುತ್ತವೆ ಎಂದು ಆರೋಪಿಸಲಾಗಿದೆ.

Similar News