2022ರಲ್ಲಿ ಮೊದಲ ಬಾರಿ ಶೇ.6ಕ್ಕೂ ಕೆಳಗಿಳಿದ ಚಿಲ್ಲರೆ ಹಣದುಬ್ಬರ

Update: 2022-12-12 15:53 GMT

ಹೊಸದಿಲ್ಲಿ,ಡಿ.12: ಹಾಲಿ ಕ್ಯಾಲೆಂಡರ್ ವರ್ಷದಲ್ಲಿ ಮೊದಲ ಬಾರಿಗೆ ನವಂಬರ್‌ನಲ್ಲಿ ಭಾರತದ ಚಿಲ್ಲರೆ ಹಣದುಬ್ಬರವು ಶೇ.6ಕ್ಕಿಂತ ಕೆಳಗಿಳಿದಿದೆ. ಶೇ.7ಕ್ಕೂ ಅಧಿಕವಿದ್ದ ಆಹಾರ ಬೆಲೆ ಹಣದುಬ್ಬರ ಶೇ.4.67ಕ್ಕೆ ಕುಸಿಯುವುದರೊಂದಿಗೆ ಚಿಲ್ಲರೆ ಹಣದುಬ್ಬರವು ಅಕ್ಟೋಬರ್‌ನ ಶೇ.6.77ರಿಂದ ಶೇ.5.88ಕ್ಕೆ ಇಳಿದಿದೆ. ಆದಾಗ್ಯೂ ಗ್ರಾಮೀಣ ಚಿಲ್ಲರೆ ಹಣದುಬ್ಬರವು ಶೇ.6.09ರಷ್ಟು ಅಧಿಕ ಮಟ್ಟದಲ್ಲಿಯೇ ಉಳಿದುಕೊಂಡಿದೆ.

ತಯಾರಿಕೆ ಉತ್ಪಾದನೆಯಲ್ಲಿ ಶೇ.5.6ರಷ್ಟು ಗಮನಾರ್ಹ ಕುಸಿತ ಮತ್ತು ವಿದ್ಯುತ್ ಉತ್ಪಾದನೆಯಲ್ಲಿ ದಾಖಲಾದ ಕನಿಷ್ಠ ಪ್ರಗತಿಯಿಂದಾಗಿ ಅಕ್ಟೋಬರ್‌ನಲ್ಲಿ ಭಾರತದ ಕೈಗಾರಿಕಾ ಉತ್ಪಾದನೆಯು ಶೇ.4ರಷ್ಟು ತೀವ್ರ ಕುಸಿತವವನ್ನು ದಾಖಲಿಸಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಇದು ಮೂರು ತಿಂಗಳಲ್ಲಿ ಎರಡನೇ ಬಾರಿ ಉತ್ಪಾದನೆಯ ಕುಸಿತವಾಗಿದೆ. ಪರಿಷ್ಕೃತ ಅಂಕಿಅಂಶಗಳಂತೆ ಭಾರತದ ಕೈಗಾರಿಕೆ ಉತ್ಪಾದನೆಯು ಸೆಪ್ಟಂಬರ್‌ನಲ್ಲಿ ಸುಮಾರು ಶೇ.3.4ರಷ್ಟು ಬೆಳವಣಿಗೆಯನ್ನು ದಾಖಲಿಸಿತ್ತು.

ಅಕ್ಟೋಬರ್‌ನಲ್ಲಿ ಕೈಗಾರಿಕಾ ಉತ್ಪಾದನಾ ಸೂಚ್ಯಂಕ (ಐಐಪಿ)ವು 129.6ರಷ್ಟಿದ್ದು,ಇದು 2021 ಸೆಪ್ಟೆಂಬರ್ ಬಳಿಕ ಕನಿಷ್ಠ ಮಟ್ಟವಾಗಿದೆ. ತಯಾರಿಕೆ ಉತ್ಪಾದನೆಯು 2021 ಜೂನ್ ಬಳಿಕ ತನ್ನ ಕನಿಷ್ಠ ಮಟ್ಟಕ್ಕೆ ಕುಸಿದಿದ್ದು,ಗಣಿ ಉತ್ಪಾದನೆಯಲ್ಲಿ ಶೇ.2.5 ಮತ್ತು ವಿದ್ಯುತ್ ಉತ್ಪಾದನೆಯಲ್ಲಿ ಕೇವಲ ಶೇ.1.2ರಷ್ಟು ಏರಿಕೆಯಾಗಿದೆ.

ಐಐಪಿಯಲ್ಲಿನ 32 ತಯಾರಿಕೆ ಕ್ಷೇತ್ರಗಳ ಪೈಕಿ 17 ನಕಾರಾತ್ಮಕ ಬೆಳವಣಿಗೆಯನ್ನು ದಾಖಲಿಸಿವೆ.

Similar News