ನಾನು ಶೂದ್ರ, ನನಗೆ ಒಳ್ಳೆಯ ಹಿಂದಿ ಗೊತ್ತಿಲ್ಲ: ನಿರ್ಮಲಾ ಸೀತರಾಮನ್‌ಗೆ ಸಂಸದ ರೇವಂತ್‌ ರೆಡ್ಡಿ ತಿರುಗೇಟು

"ಅವರು ಬ್ರಾಹ್ಮಣವಾದಿ ಹಾಗಾಗಿ ಅವರಲ್ಲಿ ಉತ್ತಮ ಭಾಷೆ ಇರಬಹುದು"

Update: 2022-12-12 17:35 GMT

ಹೊಸದಿಲ್ಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು ಸಂಸತ್ತಿನಲ್ಲಿ ವಿಭಜಕ ಭಾಷೆ ಬಳಸುತ್ತಿದ್ದಾರೆ ಎಂದು ಕಾಂಗ್ರೆಸ್ (Congress) ಸಂಸದ ಎ ರೇವಂತ್ ರೆಡ್ಡಿ (Revanth Reddy) ಸೋಮವಾರ ಆರೋಪಿಸಿದ್ದಾರೆ.

ರೆಡ್ಡಿ ಅವರು ಕೇಳಿದ ರೂಪಾಯಿ ಮೌಲ್ಯ ಕುಸಿತದ ಕುರಿತ ಪ್ರಶ್ನೆಗೆ ಹಣಕಾಸು ಸಚಿವೆ ಸೀತಾರಾಮನ್ ಪ್ರತಿಕ್ರಿಯಿಸಿ ಲೋಕಸಭೆಯಲ್ಲಿ ಮಾಡಿದ ಭಾಷಣದ ತುಣುಕುಗಳನ್ನು ರೆಡ್ಡಿ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

" ತೆಲಂಗಾಣದಿಂದ ಬಂದ ವ್ಯಕ್ತಿ, ತನ್ನ ಹಿಂದಿ ದುರ್ಬಲವಾಗಿದೆ ಎಂದು ಹೇಳುತ್ತಾರೆ. ನನ್ನ ಹಿಂದಿ ಕೂಡ ದುರ್ಬಲವಾಗಿದೆ, ಅವರ ದುರ್ಬಲ ಹಿಂದಿಗೆ ನಾನು ದುರ್ಬಲ ಹಿಂದಿಯೊಂದಿಗೆ ಪ್ರತಿಕ್ರಿಯಿಸುತ್ತೇನೆ" ಎಂದು ಸೀತಾರಾಮನ್ ವ್ಯಂಗ್ಯವಾಡಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ರೆಡ್ಡಿ, "ಸಚಿವರು ತಮ್ಮ ಭಾಷೆಯ ಬಗ್ಗೆ ಪ್ರತಿಕ್ರಿಯಿಸುವುದು ಸೂಕ್ತವಲ್ಲ. ನಾನು ಶೂದ್ರ (Shudra), ನನಗೆ ಒಳ್ಳೆಯ ಹಿಂದಿ ಗೊತ್ತಿಲ್ಲದಿರಬಹುದು. ಅವರು ಬ್ರಾಹ್ಮಣವಾದಿ  ಆಗಿರಬಹುದು, ಹಾಗಾಗಿ ಅವರ ಭಾಷೆ ಚೆನ್ನಾಗಿರಬಹುದು." ಎಂದು ರೆಡ್ಡಿ ಟೀಕಿಸಿದ್ದಾರೆ.

ಸೀತಾರಾಮನ್ ಅವರ ಹೇಳಿಕೆಗಳು ವಿಷಾದನೀಯ ಎಂದು ಹೇಳಿದ ರೆಡ್ಡಿ, ಬ್ರಿಟಿಷರಂತೆ ಬಿಜೆಪಿ ಯಾವಾಗಲೂ ಒಡೆದು ಆಳುವ ರಾಜಕೀಯವನ್ನು ಅನುಸರಿಸುತ್ತಿದೆ. ಅವರು ದೇಶದ ಜನರನ್ನು ಭಾಷೆ, ಆಹಾರ, ಜಾತಿ ಮತ್ತು ಧರ್ಮದ ಆಧಾರದ ಮೇಲೆ ವಿಭಜಿಸಿದ್ದಾರೆ ಎಂದು ಹೇಳಿದ್ದಾರೆ. 

ಈ ವೇಳೆ ಪ್ರತಿಕ್ರಿಯಿಸಿದ, ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರು,  ಸದನದಲ್ಲಿ ಯಾರ ಜಾತಿ ಅಥವಾ ಧರ್ಮವನ್ನು ಉಲ್ಲೇಖಿಸದಂತೆ ಸಂಸದರಿಗೆ ಎಚ್ಚರಿಕೆ ನೀಡಿದರು ಎಂದು ಪಿಟಿಐ ವರದಿ ಮಾಡಿದೆ. ಜಾತಿ, ಧರ್ಮದ ಆಧಾರದಲ್ಲಿ ಸಂಸದರನ್ನು ಸದನಕ್ಕೆ ಆಯ್ಕೆ ಮಾಡಿಲ್ಲ ಎಂದು ಸ್ಪೀಕರ್‌ ಹೇಳಿದ್ದಾರೆ.

"ಇಲ್ಲಿನ ಯಾರಾದರೂ ಸದನದಲ್ಲಿ ಅಂತಹ ಪದಗಳನ್ನು ಬಳಸಬಾರದು. ಇಲ್ಲದಿದ್ದರೆ, ಅಂತಹ ಸದಸ್ಯರ ವಿರುದ್ಧ ನಾನು ಕ್ರಮ ತೆಗೆದುಕೊಳ್ಳಬೇಕಾಗುತ್ತದೆ.” ಎಂದು ಅವರು ಎಚ್ಚರಿದ್ದಾರೆ.

Similar News