ನನ್ನ ಆಯ್ಕೆಯಲ್ಲದ ವ್ಯಕ್ತಿಗಳು ಚುನಾಯಿತರಾದರೆ, ಅಂತಹ ಗ್ರಾಮಗಳಿಗೆ ಅನುದಾನ ನೀಡುವುದಿಲ್ಲ: ಬಿಜೆಪಿ ಶಾಸಕ ಬೆದರಿಕೆ

Update: 2022-12-12 17:45 GMT

ಮುಂಬೈ: ತಾನು ಆಯ್ಕೆ ಮಾಡಿದ ವ್ಯಕ್ತಿ ಸರಪಂಚರಾಗಿ ಚುನಾಯಿತರಾಗದಿದ್ದರೆ ಸರ್ಕಾರದ ಅನುದಾನವನ್ನು ಗ್ರಾಮಕ್ಕೆ ನೀಡುವುದಿಲ್ಲ ಎಂದು ಭಾರತೀಯ ಜನತಾ ಪಾರ್ಟಿ (BJP) ಶಾಸಕ ನಿತೇಶ್ ರಾಣೆ (Nitesh Rane) ಗ್ರಾಮಸ್ಥರಿಗೆ ಬಹಿರಂಗವಾಗಿ ಬೆದರಿಕೆ ಹಾಕಿರುವ ಘಟನೆ ನಡೆದಿದೆ ಎಂದು indiatoday.in ವರದಿ ಮಾಡಿದೆ.

ಮಹಾರಾಷ್ಟ್ರದ ನಂದಗಾಂವ್‌ನಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ಪ್ರಚಾರದ ವೇಳೆ ಗ್ರಾಮಸ್ಥರನ್ನು ಉದ್ದೇಶಿಸಿ ಮಾತನಾಡಿದ ರಾಣೆ, ಆಡಳಿತ ಪಕ್ಷದ ಶಾಸಕರಾಗಿರುವ ತನ್ನ ಅಧಿಕಾರದ ಬಗ್ಗೆ ಗ್ರಾಮಸ್ಥರು ಗಮನಹರಿಸುವಂತೆ ಸೂಚಿಸಿದ್ದು, ಸರ್ಕಾರದ ಹಣವು ನನ್ನ ಕೈಯಲ್ಲಿದೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಲು ಕರೆ ನೀಡಿದ್ದಾರೆ.

"ನಾನು ಇದರೊಂದಿಗೆ ತುಂಬಾ ಸ್ಪಷ್ಟವಾಗಿರುತ್ತೇನೆ. ನನ್ನ ಆಯ್ಕೆಯ ಸರಪಂಚರನ್ನು ಆಯ್ಕೆ ಮಾಡುವ ಗ್ರಾಮಗಳು ನನ್ನಿಂದ ಹಣವನ್ನು ಪಡೆಯುತ್ತವೆ. ನಾನು ಏನನ್ನೂ ಮುಚ್ಚಿಡುವುದಿಲ್ಲ. ನಾನು ನಾರಾಯಣ ರಾಣೆ ಸ್ಕೂಲ್ ಆಫ್ ಥಾಟ್‌ನಲ್ಲಿ ತರಬೇತಿ ಪಡೆದಿದ್ದೇನೆ. ತಪ್ಪಿಯೂ ಚುನಾಯಿತರಾದ ಸರಪಂಚರು ನನ್ನ ಆಯ್ಕೆಯಲ್ಲದಿದ್ದರೆ ನನ್ನ ನಿಧಿಯಿಂದ ನಿಮಗೆ ಒಂದು ರೂಪಾಯಿ ಸಿಗದಂತೆ ನೋಡಿಕೊಳ್ಳುತ್ತೇನೆ. ಇದನ್ನು ಬೆದರಿಕೆ ಎಂದು ಪರಿಗಣಿಸಿದರೂ ಅಭ್ಯಂತರವಿಲ್ಲ” ಎಂದು ರಾಣೆ ಹೇಳಿದ್ದಾರೆ.

"ಮತದಾನ ಮಾಡುವಾಗ ಇದನ್ನು ನಿಮ್ಮ ಮನಸ್ಸಿನಲ್ಲಿಟ್ಟುಕೊಳ್ಳಿ - ಎಲ್ಲಾ ನಿಧಿಗಳು ನನ್ನ ಕೈಯಲ್ಲಿವೆ. ಅದು ಜಿಲ್ಲಾ ಯೋಜನಾ ನಿಧಿಯಾಗಲಿ, ಗ್ರಾಮೀಣಾಭಿವೃದ್ಧಿ ನಿಧಿಯಾಗಲಿ ಅಥವಾ ಕೇಂದ್ರ ಸರ್ಕಾರದ ನಿಧಿಯಾಗಲಿ ಎಲ್ಲವೂ ನನ್ನ ಕೈಯಲ್ಲಿದೆ. ನಾನು ಆಡಳಿತ ಪಕ್ಷದ ಶಾಸಕನಾಗಿದ್ದೇನೆ,  ಜಿಲ್ಲಾಧಿಕಾರಿ, ಸಂಬಂಧಪಟ್ಟ ಇಲಾಖೆಗಳ ಮಂತ್ರಿಗಳು, ಅಥವಾ ಉಪಮುಖ್ಯಮಂತ್ರಿ ಅಥವಾ ಮುಖ್ಯಮಂತ್ರಿಯೇ ಆಗಿರಲಿ, ಯಾರೂ ನನ್ನನ್ನು ಕೇಳದೆ ನಂದಗಾಂವ್‌ಗೆ ಅನುದಾನ ನೀಡುವುದಿಲ್ಲ. ಆದ್ದರಿಂದ, ಇದನ್ನು ನಿಮ್ಮ ತಲೆಯಲ್ಲಿ ಸ್ಪಷ್ಟವಾಗಿ ಇಟ್ಟುಕೊಳ್ಳಿ. ನಿತೇಶ್ ರಾಣೆ ಅವರ ಆಯ್ಕೆಯ ಸರಪಂಚ್ ಇಲ್ಲದಿದ್ದರೆ, ನಂದಗಾಂವ್‌ನಲ್ಲಿ ಯಾವುದೇ ಅಭಿವೃದ್ಧಿಯಾಗುವುದಿಲ್ಲ.” ಎಂದು ಶಾಸಕ ಗ್ರಾಮಸ್ಥರಿಗೆ ಬೆದರಿಕೆ ಹಾಕಿದ್ದಾರೆ.

Similar News