ಶಾಸಕರ ಭದ್ರತೆಗೆ ನಿರ್ಭಯಾ ನಿಧಿ ಬಳಕೆ: ವಿವಾದದ ಬಳಿಕ ವಾಹನಗಳನ್ನು ಮರಳಿ ಠಾಣೆಗಳಿಗೆ ಹಸ್ತಾಂತರಿಸಿದ ಶಿಂಧೆ ಸರ್ಕಾರ

Update: 2022-12-13 07:59 GMT

ಮುಂಬೈ: ನಿರ್ಭಯಾ ನಿಧಿ (Nirbhaya fund) ಬಳಸಿ ಖರೀದಿಸಲಾದ ಬೊಲೆರೋ ವಾಹನಗಳನ್ನು ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ್‌ ಶಿಂಧೆ (Eknath Shinde) ಬಣಕ್ಕೆ ಸೇರಿದ ಶಾಸಕರ ಭದ್ರತೆಗಾಗಿ ಬಳಸಲಾಗುತ್ತಿದೆ ಎಂದು ಮಾಧ್ಯಮಗಳು ವರದಿ ಮಾಡಿದ ನಂತರ ಅವುಗಳನ್ನು ಪಡೆಯಲಾಗಿದ್ದ ಪೊಲೀಸ್ ಠಾಣೆಗಳಿಗೆ ಅವುಗಳನ್ನು ಮರಳಿ ಹಸ್ತಾಂತರಿಸಲಾಗಿದೆ, ಈ ವಾಹನಗಳನ್ನು ಶಿವಾಜಿ ನಗರ, ಘಾಟ್ಕೊಪರ್‌ ಮತ್ತು ಮುಲುಂದ್‌ ಠಾಣೆಗಳಿಗೆ ವಾಪಸ್‌ ನೀಡಲಾಗಿದೆ ಎಂದು ತಿಳಿದು ಬಂದಿದೆ ಎಂದು indianexpress.com ವರದಿ ಮಾಡಿದೆ.

ಶಿಂಧೆ ಬಣದ ಶಾಸಕರ ಭದ್ರತೆಗಾಗಿ ಬಳಸಲಾದ ಎಲ್ಲಾ ವಾಹನಗಳನ್ನು ಮುಂದಿನ ಕೆಲ ದಿನಗಳಲ್ಲಿ  ಆಯಾ ಪೊಲೀಸ್‌ ಠಾಣೆಗಳಿಗೆ ಹಿಂತಿರುಗಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

ವಾಹನಗಳ ಚಾಲಕರನ್ನೂ ಮರಳಿ ಠಾಣೆಗಳಿಗೆ ನಿಯೋಜಿಸಲಾಗಿದ್ದು ಈ ವಾಹನಗಳನ್ನು ಮತ್ತೆ ಗಸ್ತು ಉದ್ದೇಶಗಳಿಗೆ ಬಳಸಲಾಗುವುದು.

ಈ ವರ್ಷದ ಜೂನ್‌ ತಿಂಗಳಿನಲ್ಲಿ ನಿರ್ಭಯಾ ನಿಧಿಯನ್ನು ಬಳಸಿ ಖರೀದಿಸಲಾಗಿದ್ದ 220 ಬೊಲೆರೋ ವಾಹನಗಳಲ್ಲಿ 47 ವಾಹನಗಳನ್ನು  ಶಿಂಧೆ ನೇತೃತ್ವದ ಬಾಳಾಸಾಹೇಬಾಂಚಿ ಶಿವ ಸೇನೆಯ ಶಾಸಕರು ಮತ್ತು ಸಂಸದರ ಭದ್ರತೆಗಾಗಿ ಬಳಸಲಾಗಿತ್ತು. ಇವುಗಳಲ್ಲಿ 17 ವಾಹನಗಳನ್ನು ಕೆಲ ವಾರಗಳು ಹಾಗೂ ತಿಂಗಳುಗಳ ಕಾಲ ಬಳಸಿ ಮರಳಿಸಲಾಗಿದ್ದರೆ 30 ವಾಹನಗಳನ್ನು ಶಾಸಕರ ಭದ್ರತೆಗೆ ಬಳಸಲಾಗಿತ್ತು ಹಾಗೂ ಠಾಣೆಗಳು ತಮ್ಮ ಹಳೆಯ ವಾಹನಗಳನ್ನೇ ಬಳಸುವಂತಾಗಿತ್ತು ಎಂದು indianexpress.com ಇತ್ತೀಚೆಗೆ ವರದಿ ಮಾಡಿತ್ತು. ಕೆಲ ಠಾಣೆಗಳು ವಾಹನಗಳಿಲ್ಲದೆ ಇತರ ಠಾಣೆಗಳಿಂದ ವಾಹನಗಳನ್ನು ಎರವಲು ಪಡೆಯುವ ಸ್ಥಿತಿಯಿರುವಾಗ ಈ ರೀತಿ ವಾಹನಗಳನ್ನು ಶಾಸಕರ ಭದ್ರತೆಗೆ ಬಳಸಲಾಗುತ್ತಿರುವ ಬಗ್ಗೆಯೂ ವರದಿಯಲ್ಲಿ ತಿಳಿಸಲಾಗಿತ್ತು.

ಉದ್ಧವ್‌ ಠಾಕ್ರೆ ನೇತೃತ್ವದ ಶಿವಸೇನೆ, ಕಾಂಗ್ರೆಸ್‌ ಪಕ್ಷ ಇದೇ ವಿಚಾರ ಮುಂದಿಟ್ಟುಕೊಂಡು ಸರ್ಕಾರವನ್ನು ಟೀಕಿಸಿದ್ದರೆ ಒಂದು ವಾರದೊಳಗೆ ವಾಹನಗಳನ್ನು ಠಾಣೆಗಳಿಗೆ ವಾಪಸ್‌ ನೀಡದೇ ಇದ್ದರೆ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನೂ ಶಿವಸೇನೆ ಸಂಸದೆ ಪ್ರಿಯಾಂಕ ಚತುರ್ವೇದಿ ನೀಡಿದ್ದರು.

ಇದನ್ನೂ ಓದಿ: ಗೋಧಿ ಚೀಲ ಕದ್ದಿದ್ದಾನೆಂದು ಆರೋಪಿಸಿ ಕಾರ್ಮಿಕನನ್ನು ಟ್ರಕ್‌ಗೆ ಕಟ್ಟಿ ಪೊಲೀಸ್ ಠಾಣೆಗೆ ಕರೆತಂದ ಚಾಲಕ

Similar News