ಇಸ್ಲಾಮಿಕ್ ಸಹಕಾರ ಸಂಘಟನೆ ಪಾಕಿಸ್ತಾನದ ಮುಖವಾಣಿ: ಭಾರತ

Update: 2022-12-13 18:19 GMT

ಹೊಸದಿಲ್ಲಿ, ಡಿ. 13: ಇಸ್ಲಾಮಿಕ್ ಸಹಕಾರ ಸಂಘಟನೆ (ಒಐಸಿ)ಯ ಮಹಾಕಾರ್ಯದರ್ಶಿ ಹುಸೈನ್ ಇಬ್ರಾಹೀಮ್ ತಾಹ ಪಾಕಿಸ್ತಾನದ ಮುಖವಾಣಿಯಾಗಿದ್ದಾರೆ ಎಂದು ಭಾರತ ಮಂಗಳವಾರ ಹೇಳಿದೆ. ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ ಅವರು ನೀಡಿರುವ ಭೇಟಿಯನ್ನು ಭಾರತ ಟೀಕಿಸಿದೆ.

ತಾಹ ಡಿಸೆಂಬರ್ 10ರಿಂದ 12ರವರೆಗೆ ಪಾಕ್ ಆಕ್ರಮಿತ ಕಾಶ್ಮೀರ ಪ್ರವಾಸದಲ್ಲಿದ್ದರು. ಈ ಸಂದರ್ಭದಲ್ಲಿ ಪಾಕಿಸ್ತಾನದ ಸೇನೆಯು ಅವರೊಂದಿಗೆ ಮಾತುಕತೆ ನಡೆಸಿದೆ. ಅವರು ಪಾಕಿಸ್ತಾನದ ಪ್ರಧಾನಿ ಶೆಹ್ಬಾಝ್ ಶರೀಫ್ ಮತ್ತು ವಿದೇಶ ಸಚಿವ ಬಿಲಾವಲ್ ಭುಟ್ಟೊ ಜೊತೆಗೂ ಮಾತುಕತೆ ನಡೆಸಿದ್ದಾರೆ.

‘‘ವಿವಿಧ ವಿಷಯಗಳಲ್ಲಿ ಸಾರಾಸಗಟು ಕೋಮುವಾದಿ, ಏಕಪಕ್ಷೀಯ ಮತ್ತು ವಾಸ್ತವಿಕತೆಗೆ ದೂರವಾಗಿರುವ ನಿಲುವುಗಳನ್ನು ಅನುಸರಿಸುವ ಮೂಲಕ 57 ದೇಶಗಳ ಅಂತರ್-ಸರಕಾರಿ ಸಮಿತಿ (ಐಒಸಿ)ಯು ತನ್ನ ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿದೆ ಎಂದು ಭಾರತದ ವಿದೇಶ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.
‘‘ಭಾರತದಲ್ಲಿ, ಅದರಲ್ಲೂ ಮುಖ್ಯವಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿ ಗಡಿಯಾಚೆಯ ಭಯೋತ್ಪಾದನೆಗೆ ಉತ್ತೇಜನ ನೀಡುವ ಪಾಕಿಸ್ತಾನದ ದುಷ್ಟ ಕಾರ್ಯಸೂಚಿಯ ಅನುಷ್ಠಾನದಲ್ಲಿ ಭಾಗಿಯಾಗುವುದರಿಂದ ತಾಹಾ ಹಿಂದೆ ಸರಿಯುತ್ತಾರೆ ಎಂದು ನಾವು ಆಶಿಸುತ್ತೇವೆ’’ ಎಂದು ವಕ್ತಾರರು ಹೇಳಿದರು.

ಕಾಶ್ಮೀರಕ್ಕೆ ಸಂಬಂಧಿಸಿದ ವಿಷಯದಲ್ಲಿ ಮಧ್ಯಪ್ರವೇಶಿಸುವ ಹಕ್ಕು ಯಾವ ದೇಶಕ್ಕೂ ಇಲ್ಲ ಎನ್ನುವ ಭಾರತದ ನಿಲುವನ್ನು ಬಾಗ್ಚಿ ಪುನರುಚ್ಚರಿಸಿದರು.
‘‘ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದ ವಿಷಯದಲ್ಲಿ ಮಧ್ಯಪ್ರವೇಶಿಸುವ ಹಕ್ಕು ಒಐಸಿಗೆ ಇಲ್ಲ. ಅದು ಭಾರತದ ಅವಿಭಾಜ್ಯ ಅಂಗವಾಗಿದೆ. ಭಾರತದ ಆಂತರಿಕ ವ್ಯವಹಾರದಲ್ಲಿ ಹಸ್ತಕ್ಷೇಪ ನಡೆಸಲು ಒಐಸಿ ಮತ್ತು ಅದರ ಮಹಾಕಾರ್ಯದರ್ಶಿ ನಡೆಸುವ ಯಾವುದೇ ಪ್ರಯತ್ನವು ಸಂಪೂರ್ಣವಾಗಿ ಅಸ್ವೀಕಾರಾರ್ಹವಾಗಿದೆ’’ ಎಂದು ಅವರು ತಿಳಿಸಿದ್ದಾರೆ.

Similar News