ಭಾರತ್ ಜೋಡೊ ಯಾತ್ರೆಗೆ ಕೈಜೋಡಿಸಿದ ಮಾಜಿ ಆರ್‌ಬಿಐ ಗವರ್ನರ್ ರಘುರಾಮ್ ರಾಜನ್ ವಿರುದ್ಧ ಬಿಜೆಪಿ ವಾಗ್ದಾಳಿ

Update: 2022-12-15 02:25 GMT

ಹೊಸದಿಲ್ಲಿ: ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೊ ಯಾತ್ರೆಗೆ ರಿಸರ್ವ್ ಬ್ಯಾಂಕಿನ ಮಾಜಿ ಗವರ್ನರ್ ರಘುರಾಮ್ ರಾಜನ್ ಕೈಜೋಡಿಸಿದ್ದು, ಈ ಕ್ರಮವನ್ನು ಬಿಜೆಪಿ ಕಟುವಾಗಿ ಟೀಕಿಸಿದೆ.

ಆರ್‌ಬಿಐ ಮಾಜಿ ಗವರ್ನರ್ ಪಕ್ಷಪಾತದ ವ್ಯಕ್ತಿ ಹಾಗೂ ಅವಕಾಶವಾದಿ ಎನ್ನುವುದು ಇದರಿಂದ ಸ್ಪಷ್ಟವಾಗಿದೆ ಎಂದು ಬಿಜೆಪಿ ವಾಗ್ದಾಳಿ ನಡೆಸಿರುವುದಾಗಿ timesofindia.com ವರದಿ ಮಾಡಿದೆ.

"ಅವರು ಬಿಂಬಿಸಿಕೊಂಡಂತೆ ರಘುರಾಮ್ ರಾಜನ್ ಅವರು ತಟಸ್ಥ ನಿಲುವಿನ ತಜ್ಞರಲ್ಲ ಎನ್ನುವುದನ್ನು ನಾವು ನಿರಂತರವಾಗಿ ಹೇಳುತ್ತಾ ಬಂದಿದ್ದೆವು. ತಮ್ಮನ್ನು ಆರ್‌ಬಿಐ ಗವರ್ನರ್ ಮಾಡಿದ್ದಕ್ಕಾಗಿ ಕಾಂಗ್ರೆಸ್‍ಗೆ ಹೊಂದಿದ್ದ ಋಣವನ್ನು ತೀರಿಸುತ್ತಿರುವುದರ ಪ್ರತಿಬಿಂಬ. ಅವರ ಅಸಾಧ್ಯ ಆಕಾಂಕ್ಷೆ ಗಾಂಧಿಗಳ ನಿಯಂತ್ರಣದ ಪಕ್ಷದಲ್ಲಿ ದೇಶದ ಹಣಕಾಸು ಸಚಿವರಾಗುವುದು" ಎಂದು ಬಿಜೆಪಿ ಮಾಧ್ಯಮ ವಿಭಾಗದ ಮುಖ್ಯಸ್ಥ ಹಾಗೂ ಸಂಸದ ಅನಿಲ್ ಬಲೂನಿ ಟೀಕಿಸಿದ್ದಾರೆ.

"ಕೋವಿಡ್ ಸಾಂಕ್ರಾಮಿಕದಂಥ ಸಂಕಷ್ಟ ಮತ್ತು ಭೌಗೋಳಿಕ ರಾಜಕೀಯ ಪ್ರಕ್ಷುಬ್ಧತೆಯ ನಡುವೆಯೂ ದೇಶದ ಆರ್ಥಿಕತೆಯನ್ನು ಸಮರ್ಥವಾಗಿ ನಿಭಾಯಿಸುತ್ತಾ ಬಂದ ಮೋದಿ ಸರ್ಕಾರದ ಸಾಧನೆಯನ್ನು ರಾಜನ್ ಕಡೆಗಣಿಸಿದ್ದಾರೆ ಹಾಗೂ ಯುಪಿಎ ಸರ್ಕಾರದ ವೈಫಲ್ಯಗಳು, ಭ್ರಷ್ಟಾಚಾರ ಮತ್ತು ಬಂಡವಾಳಶಾಹಿ ಮನೋಭಾವವನ್ನು ಮುಚ್ಚಿಹಾಕುವ ಪ್ರಯತ್ನ ಮಾಡಿದ್ದಾರೆ. ಅವರು ಎಲ್ಲಿಂದ ಬಂದಿದ್ದಾರೆ ಎನ್ನುವುದು ಇದೀಗ ಸ್ಪಷ್ಟವಾಗಿದೆ" ಎಂದು ಮಾತಿನ ಚಾಟಿ ಬೀಸಿದ್ದಾರೆ.

ಬಿಜೆಪಿ ಐಟಿ ವಿಭಾಗದ ಮುಖ್ಯಸ್ಥ ಅಮಿತ್ ಮಾಳವೀಯ ಕೂಡಾ ರಾಜನ್ ಕ್ರಮವನ್ನು ಟೀಕಿಸಿ ಟ್ವೀಟ್ ಮಾಡಿದ್ದಾರೆ. "ಕಾಂಗ್ರೆಸ್ ನೇಮಕ ಮಾಡಿದ್ದ ಆರ್‌ಬಿಐ ಗವರ್ನರ್ ರಘುರಾಮ್ ರಾಜನ್, ಭಾರತ್ ಜೋಡೊದಲ್ಲಿ ಪಾಲ್ಗೊಂಡಿರುವುದು ಅಚ್ಚರಿಯೇನೂ ಅಲ್ಲ. ಅವರು ಮುಂದಿನ ಮನಮೋಹನ್ ಸಿಂಗ್ ಎಂದು ಬಿಂಬಿಸಿಕೊಂಡಿದ್ದಾರೆ. ಭಾರತದ ಆರ್ಥಿಕತೆ ಬಗೆಗಿನ ಅವರ ಹೇಳಿಕೆಗಳು ತಿರಸ್ಕಾರಯೋಗ್ಯ ಮತ್ತು ಅವಕಾಶವಾದಿ" ಎಂದು ಟ್ವೀಟ್ ಮಾಡಿದ್ದಾರೆ. ಈ ಬಗ್ಗೆ timesofindia.com ವರದಿ ಮಾಡಿದೆ.

Similar News