ಆರೆಸ್ಸೆಸ್‌ ʻಮಹಿಳೆಯರನ್ನು ದಮನಿಸುತ್ತಿದೆʼ: ರಾಹುಲ್‌ ಗಾಂಧಿ ಆರೋಪ

ಮಹಿಳಾ ಸದಸ್ಯರಿಲ್ಲದ ಸಂಸ್ಥೆ ಎಂದು ಟೀಕಿಸಿದ ಕಾಂಗ್ರೆಸ್‌ ನಾಯಕ

Update: 2022-12-15 12:27 GMT

ಹೊಸದಿಲ್ಲಿ: ಆರೆಸ್ಸೆಸ್‌ (RSS) ʻಮಹಿಳೆಯರನ್ನು ದಮನಿಸುತ್ತಿದೆʼ ಎಂದು ಆರೋಪಿಸಿದ ಕಾಂಗ್ರೆಸ್‌ (Congress) ನಾಯಕ ರಾಹುಲ್‌ ಗಾಂಧಿ (Rahul Gandhi), ಇದೇ ಕಾರಣದಿಂದ ಆರೆಸ್ಸೆಸ್‌ ಮಹಿಳೆಯರನ್ನು ಸದಸ್ಯರನ್ನಾಗಿ ಹೊಂದಿಲ್ಲ ಎಂದಿದ್ದಾರೆ.

"ಆರೆಸ್ಸೆಸ್‌ ಮತ್ತು ಬಿಜೆಪಿಯ ಉದ್ದೇಶ ಭಯವನ್ನು ಹರಡುವುದು ಎಂದು ಆರೋಪಿಸಿದ ಅವರು ತಮ್ಮ ಭಾರತ್‌ ಜೋಡೋ ಯಾತ್ರಾ ಭಯ ಮತ್ತು ದ್ವೇಷವನ್ನು ಮೆಟ್ಟಿ ನಿಲ್ಲುವ ಉದ್ದೇಶ ಹೊಂದಿದೆ," ಎಂದರು.

"ಅವರ ಸಂಘಟನೆಯಲ್ಲಿ ನೀವು ಮಹಿಳೆಯನ್ನು ನೋಡುವುದಿಲ್ಲ, ಅವರು  ಮಹಿಳೆಯರನ್ನು ದಮನಿಸುತ್ತಾರೆ. ತಮ್ಮ ಸಂಘಟನೆಯಲ್ಲಿ ಮಹಿಳೆಯರಿಗೆ ಅವಕಾಶ ನೀಡುವುದಿಲ್ಲ," ಎಂದು ರಾಹುಲ್‌ ಹೇಳಿದರು.

"ನಾನು ಆರೆಸ್ಸೆಸ್‌ ಮತ್ತು ಬಿಜೆಪಿ ಜನರನ್ನು ಕೇಳಬಯಸುತ್ತೇನೆ. ನೀವು ಜೈ ಶ್ರೀ ರಾಮ್‌ ಹೇಳುತ್ತೀರಿ, ಏಕೆ ಜೈ ಸಿಯಾರಾಂ ಹೇಳುವುದಿಲ್ಲ. ಏಕೆ ಸೀತಾ ಮಾತೆಯನ್ನು ಕೈಬಿಟ್ಟಿದ್ದೀರಿ? ಏಕೆ ಆಕೆಯನ್ನು ಅವಮಾನಿಸಿದ್ದೀರಿ? ಏಕೆ ಭಾರತದ ಮಹಿಳೆಯರನ್ನು ಅವಮಾನಿಸಿದ್ದೀರಿ?" ಎಂದು ರಾಹುಲ್‌ ಪ್ರಶ್ನಿಸಿದರು.

ನಿರುದ್ಯೋಗದ ಭಯ ಹೆಚ್ಚುತ್ತಿದೆ ಎಂದು ಹೇಳಿದ ಅವರು ಈ ಭಯದಿಂದ ಬಿಜೆಪಿ ಮತ್ತು ಆರೆಸ್ಸೆಸ್‌ ಮಾತ್ರ ಲಾಭ ಪಡೆಯುತ್ತಿವೆ ಹಾಗೂ ಈ ಭಯವನ್ನು ದ್ವೇಷವಾಗಿ ಪರಿವರ್ತಿಸುತ್ತಿವೆ, ಅವರ ಸಂಘಟನೆ ದೇಶವನ್ನು ಒಡೆಯಲು, ಭೀತಿಯನ್ನು ಹಾಗೂ ದ್ವೇಷವನ್ನು ಹರಡುವ ಯತ್ನ ನಡೆಸುತ್ತಿದೆ, ಆದುದರಿಂದ ಭಾರತ್‌ ಜೋಡೋ ಯಾತ್ರಾದ ಮುಖ್ಯ ಉದ್ದೇಶ ದೇಶದಲ್ಲಿ ಭಯ ಮತ್ತು ದ್ವೇಷದ ವಿರುದ್ಧ ಎದ್ದು ನಿಲ್ಲುವುದಾಗಿದೆ," ಎಂದು ರಾಹುಲ್‌ ಹೇಳಿದರು.

Similar News