ಭದ್ರತಾ ಸಿಬ್ಬಂದಿ ಕೊರತೆ ತುಂಬಲು ಖಾಸಗಿ ವಲಯ ಸನ್ನದ್ಧಗೊಂಡಿರಬೇಕು: ಕೇಂದ್ರ ಸಚಿವ ವಿ.ಕೆ.ಸಿಂಗ್ ಕರೆ

Update: 2022-12-17 15:12 GMT

ಹೊಸದಿಲ್ಲಿ: ದೇಶದಲ್ಲಿ ತರಬೇತು ಪಡೆದ ವೃತ್ತಿಪರ ಭದ್ರತಾ ಸಿಬ್ಬಂದಿಯ ಕೊರತೆಯಿರುವುದನ್ನು ಕೇಂದ್ರ ಸಚಿವ ವಿ.ಕೆ.ಸಿಂಗ್ ಶನಿವಾರ ಗಮನಸೆಳೆದಿದ್ದು, ಈ ಕೊರತೆಯನ್ನು ತುಂಬಲು ಖಾಸಗಿ ಭದ್ರತಾ ವಲಯವು ಮುಂಚೂಣಿಯಲ್ಲಿರಬೇಕೆಂದು ಕರೆ ನೀಡಿದ್ದಾರೆ.

ಖಾಸಗಿ ಭದ್ರತಾ ಕೈಗಾರಿಕೆಯ ಕೇಂದ್ರೀಯ ಸಂಘ (ಸಿಎಪಿಎಸ್ಐ)ದ ವಾರ್ಷಿಕ ಸಮಾವೇಶದಲ್ಲಿ ಮಾತನಾಡುತ್ತಿದ್ದ ಅವರು ದೇಶದಲ್ಲಿರುವ ವಿಮಾನ ನಿಲ್ದಾಣಗಳು ಹಾಗೂ ರೈಲ್ವೆ ನಿಲ್ದಾಣಗಳಂತಹ ಸ್ಥಳಗಳಲ್ಲಿ ಹಾಗೂ ಹಲವಾರು ಸರಕಾರಿ ಸಂಸ್ಥಾಪನೆಗಳಿಗೆ ಭದ್ರತೆಯ ಅಗತ್ಯವಿದೆ. ಈ ಬೇಡಿಕೆಗಳನ್ನು ಪೂರೈಸಲು ಖಾಸಗಿ ಭದ್ರತಾ ಕ್ಷೇತ್ರವು ತನ್ನ ಸಿಬ್ಬಂದಿಗಳನ್ನು ಸನ್ನದ್ಧಗೊಳಿಸುವ ಹಾಗೂ ಅವರಿಗೆ ತರಬೇತಿ ನೀಡುವ ಅಗತ್ಯವಿದೆ ಎಂದು ಸಿಂಗ್ ಅಭಿಪ್ರಾಯಿಸಿದರು.

ದೇಶೀಯ ಹಾಗೂ ಅಂತರ್ರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಇರುವ ಬೇಡಿಕೆಯನ್ನು ಪೂರೈಸಲು ಭಾರತೀಯ ಖಾಸಗಿ ಭದ್ರತಾ ಕೈಗಾರಿಕಾ ಕ್ಷೇತ್ರಕ್ಕೆ ಇದೊಂದು ಸದವಕಾಶವಾಗಿದೆ ಎಂದು ರಸ್ತೆಸಾರಿಗೆ, ಹೆದ್ದಾರಿ ಹಾಗೂ ನಾಗರಿಕ ವಾಯುಯಾನ ಖಾತೆಯ ಸಹಾಯಕ ಸಚಿವರಾದ ವಿ.ಕೆ.ಸಿಂಗ್ ಹೇಳಿದರು.

ಅಂತಾರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾದಂತಹ ಗುಣಮಟ್ಟ ಹಾಗೂ ಮಾನದಂಡಗಳನ್ನು ನಿಗದಿಪಡಿಸಬೇಕಾದ ಅಗತ್ಯವಿದೆಯೆಂದು ಅಭಿಪ್ರಾಯಿಸಿದ ಕೇಂದ್ರ ಸಚಿವರು, ಹಾಗೆ ಮಾಡುವುದರಿಂದ ಖಾಸಗಿ ಭದ್ರತಾ ಸಿಬ್ಬಂದಿಗೆ ದೇಶದಲ್ಲಿ ಮಾತ್ರವಲ್ಲದೆ, ಸಾಗರೋತ್ತರ ದೇಶದಲ್ಲಿಯೂ ಸುರಕ್ಷತೆ, ಭದ್ರತೆ ಕುರಿತ ಮಹತ್ವದ ಸಂಸ್ಥಾಪನೆಗಳ ರಕ್ಷಣೆಯ ಜವಾಬ್ದಾರಿಯನ್ನು ಅವರು ವಹಿಸಿಕೊಳ್ಳಬಹುದಾಗಿದೆ ಎಂದು ಸಚಿವರು ಅಭಿಪ್ರಾಯಿಸಿದರು.

ಇಂದು ಸರಕಾರದಿಂದ ಹಿಡಿದು ಕೈಗಾರಿಕೆ ಹಾಗೂ ವಸತಿ ಕ್ಷೇತ್ರಗಳ ತನಕ ಭದ್ರತೆಯ ಅವಶ್ಯಕತೆಯಿದೆ. ಭವಿಷ್ಯದ ಸವಾಲುಗಳನ್ನು ಎದುರಿಸುವುದಕ್ಕಾಗಿ ಭದ್ರತಾ ಏಜೆನ್ಸಿಗಳು ತಮ್ಮ ಪರಿಣತಿಯನ್ನು ಮೇಲ್ದರ್ಜೆಗೇರಿಸಿಕೊಳ್ಳಲು ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಕೃತಕ ಬುದ್ದಿಮತ್ತೆಯ ಬಳಕೆಯನ್ನು ಅಳವಡಿಸಿಕೊಳ್ಳುವುದು ಅಗತ್ಯವೆಂದು ವಿ.ಕೆ.ಸಿಂಗ್ ಹೇಳಿದರು.

ಸಿಎಪಿಎಸ್ಐ ಅಧ್ಯಕ್ಷ ಕನ್ವರ್ ವಿಕ್ರಮ್ಸಿಂಗ್ ಮಾತನಾಡಿ ಖಾಸಗಿ ಭದ್ರತಾ ಸಿಬ್ಬಂದಿ ದೇಶದಲ್ಲಿ ಮಾತ್ರವಲ್ಲದೆ ವಿದೇಶದಲ್ಲಿ ಉದೋಗಗಳನ್ನು ಪಡೆದುಕೊಳ್ಳುವಂತೆ ಮಾಡಲು ಬಿಐಎಸ್ ಮಾನದಂಡಗಳನ್ನು ರೂಪಿಸುತ್ತಿದೆಯೆಂದು ಹೇಳಿದರು. 

ಖಾಸಗಿ ಭದ್ರತಾ ಕೈಗಾರಿಕಾ ವಲಯವು ಸೇನೆಯಲ್ಲಿ ಅಲ್ಪಾವಧಿಯ ಸೇವೆ ಸಲ್ಲಿಸುವ ‘ ಅಗ್ನಿವೀರರನ್ನು ’ಕೂಡಾ ನಿಯೋಜಿಸಲಿದೆ ಹಾಗೂ ಅವರಿಗೆ ವಿಶೇಷ ತರಬೇತಿಯನ್ನು ನೀಡದೆ ಎಂದರು., ಇದರಿಂದಾಗಿ ಅವರಿಗೆ ಈ ವಲಯದಲ್ಲಿ ಉತ್ತಮ ಉದ್ಯೋಗಗಳು ಲಭಿಸಲಿವೆ ಎಂದವರು ಭರವಸೆ ವ್ಯಕ್ತಪಡಿಸಿದರು.

ಖಾಸಗಿ ಭದ್ರತಾ ಉದ್ಯಮವು ಒಂದು ಕೋಟಿಗೂ ಅಧಿಕ ಜನರಿಗೆ ಉದ್ಯೋಗ ನೀಡಿದ್ದು, ಅದು ಅತ್ಯಧಿಕ ಉದ್ಯೋಗದಾತ ವಲಯವಾಗಿದೆ. ಖಾಸಗಿ ಭದ್ರತಾ ಉದ್ಯಮವನ್ನು ನಿಯಂತ್ರಿಸಲು ಪ್ರಾಧಿಕಾರವೊಂದನ್ನು ರಚಿಸಲು ಖಾಸಗಿ ಭದ್ರತಾ ಏಜೆನ್ಸಿಗಳ (ನಿಯಂತ್ರಣ) ಕಾಯ್ದೆಗೆ ತಿದ್ದುಪಡಿ ಮಾಡುವಂತೆಯೂ ಅವರು ಕೇಂದ್ರ ಸರಕಾರವನ್ನು ಆಗ್ರಹಿಸಿದರು. ಖಾಸಗಿ ಭದ್ರತಾ ವಲಯದ ಬೆಳವಣಿಗೆಗಾಗಿ ವಿದೇಶಿ ನೇರ ಹೂಡಿಕೆಯನ್ನು ಈಗ ಇರುವ ಶೇ.೪೯ ಶೇಕಡದಿಂದ ಶೇ.೭೪ಕ್ಕೇರಿಸಲು ಅವಕಾಶ ನೀಡಬೇಕೆಂದು ವಿಕ್ರಮ್ ಸಿಂಗ್ ಒತ್ತಾಯಿಸಿದರು.

Similar News