ಸಾಂಸ್ಕೃತಿಕ ಕಪಟತನ

Update: 2022-12-17 19:30 GMT


ವ್ಯಕ್ತಿಯ ಮನಸ್ಸಿನಂತೆಯೇ ಸಮಾಜದ ಮನಸ್ಸೂ ಕೂಡಾ. ವ್ಯಕ್ತಿಗತ ಮನಸ್ಸು ತನ್ನ ಪುನರಾವರ್ತಿತ ಆಲೋಚನೆಗಳಿಂದ ಅದನ್ನು ತನ್ನ ಜೊತೆಯಲ್ಲಿ ಬದುಕುವವರಿಗೆ ಹಂಚುತ್ತಾ, ಪ್ರಭಾವಿಸುತ್ತಾ, ನಂಬಿಸುತ್ತಾ ಹೋದಂತೆ, ಇತರ ಸ್ವತಂತ್ರ ಮನಸ್ಸುಗಳು ಆ ಆಲೋಚನೆಗಳನ್ನು ಸ್ವೀಕರಿಸುತ್ತಾ, ಒಪ್ಪುತ್ತಾ, ನಂಬುತ್ತಾ, ತಾವೂ ಇತರರಿಗೆ ದಾಟಿಸುತ್ತಾ ಹೋಗುತ್ತಾರೆ. ಅದು ಮುಂದೆ ಸಂಕಲಿತ ಮನಸ್ಥಿತಿಯಾಗುತ್ತದೆ. ಕಲೆಕ್ಟಿವ್ ಮೈಂಡ್ ಸೆಟ್ ಅನ್ನೋದು ಅದನ್ನೇ. ಇನ್ನು ಎರಡನೆಯ ಹಂತದಲ್ಲಿ ಪರಸ್ಪರ ಹಂಚಿಕೊಂಡು ತಮ್ಮದಾಗಿಸಿಕೊಂಡಿರುವ ಮನೋಭಾವನೆಗಳನ್ನು ಗಟ್ಟಿಗೊಳಿಸಲು ನೀತಿ ನೇಮಗಳನ್ನು ರೂಢಿಸಲು ಕಟ್ಟಳೆಗಳನ್ನು ರೂಪಿಸುತ್ತಾರೆ. ಕಟ್ಟಳೆಗಳ ಸ್ವರೂಪವೇ ನಿರ್ದಿಷ್ಟತೆಯಲ್ಲಿ ಕಟ್ಟಿಹಾಕುವುದು. ಅದರಿಂದ ವ್ಯಕ್ತಿ ತನ್ನನ್ನು ತಾನು ಯಾವುದು ಒಳ್ಳೆಯದು, ಯಾವುದು ಕೆಟ್ಟದು ಎಂದು ಒಡಂಬಡಿಕೆಯ ಪ್ರಕಾರ ತಿಳಿಸಲಾಗಿರುತ್ತದೆಯೋ ಅದನ್ನು ಒಪ್ಪಿಕೊಂಡು ಹೋಗಿರುತ್ತಾನೆ. ಇದರಲ್ಲಿ ಕ್ರಿಯಾತ್ಮಕವಾಗಿರುವ ಅಂಶವೆಂದರೆ ಪುನರಾವರ್ತನೆ. ಆಲೋಚನೆಗಳೆಲ್ಲವೂ ಯಾವುದೋ ಒಂದು ನಿರ್ದಿಷ್ಟ ಮೂಲ ಮತ್ತು ಪ್ರಕಾರಗಳಿಂದ ಬರುವುದಿಲ್ಲ. ವ್ಯಕ್ತಿಯ ವಿವಿಧ ಚಟುವಟಿಕೆಗಳು ನಡೆಯುವಾಗ ಮನಸ್ಸು ಕೆಲಸ ಮಾಡುತ್ತಿರುತ್ತವೆ. ಹಾಗೆ ಅದು ಕೆಲಸ ಮಾಡುವಾಗ ವ್ಯಕ್ತಿಗೆ ಆಲೋಚನೆಗೆ ಹಲವು ಪ್ರೇರಣೆಗಳು ಸಿಗುತ್ತಿರುತ್ತವೆ. ಹಾಗಾಗಿ ಕಟ್ಟಳೆಗೆ ಒಳಗಾಗಿರುವ ವ್ಯಕ್ತಿಯ ಮನಸ್ಸು ಎಲ್ಲಾ ವಿಷಯಗಳನ್ನೂ ತನ್ನಲ್ಲಿ ಈಗಾಗಲೇ ಬಿತ್ತಲ್ಪಟ್ಟಿರುವ ಮಾನದಂಡದಿಂದ ಅಳೆಯುತ್ತಾ ಹೋಗುತ್ತಾನೆ. ಇದು ಒಳ್ಳೆಯದು, ಇದ್ದು ಕೆಟ್ಟದು ಎನ್ನುತ್ತಾನೆ. ಇದರಿಂದ ಪಾಪ, ಇದರಿಂದ ಪುಣ್ಯ ಎನ್ನುತ್ತಾನೆ. ಅದರಂತೆ ಅವನು ಬೇಕು ಅಥವಾ ಬೇಡ ಎನ್ನುತ್ತಾನೆ.

ಒಬ್ಬನ ಬೇಕು ಬೇಡಗಳು ಅವನೊಬ್ಬನ ಇಷ್ಟ ಅಥವಾ ಇಷ್ಟವಲ್ಲದ್ದು ಮಾತ್ರವೇ ಆಗಿದ್ದರೆ ಸಮಸ್ಯೆ ಇರುತ್ತಿರಲಿಲ್ಲ. ಆದರೆ ಈ ಬೇಕು ಬೇಡಗಳಲ್ಲಿ ಸಾಂಸ್ಕೃತಿಕ, ಸಾಮಾಜಿಕ, ಧಾರ್ಮಿಕ ನೆಲೆಗಳಲ್ಲಿ ರೂಪುಗೊಂಡ ಸಂಕಲಿತ ಮನಸ್ಥಿತಿಗಳಿರುತ್ತವೆ. ಒಳ್ಳೆಯದು ಮತ್ತು ಕೆಟ್ಟದು ಎಂಬುದು ಒಂದು ಗ್ರಹಿಕೆ. ಇದು ಹಲವಾರು ಸಂದರ್ಭಗಳಲ್ಲಿ ಭ್ರಮೆಯೂ ಆಗಿರುವ ಸಾಧ್ಯತೆಗಳು ಇರುತ್ತವೆ. ಅಗತ್ಯ ಮತ್ತು ಅನಗತ್ಯ ಎಂಬುದು ಬರಿಯ ಗ್ರಹಿಕೆಗೆ ಮೀರಿದ ವೈಜ್ಞಾನಿಕ ವಾಸ್ತವ. ಒಂದಷ್ಟು ವಿಚಾರಗಳನ್ನು ಒಪ್ಪಿಕೊಂಡು ಅವುಗಳನ್ನು ಒಳ್ಳೆಯದು ಎಂದು ಭಾವಿಸಿ, ಅದಕ್ಕೆ ಮೌಲ್ಯವನ್ನು ಕೊಟ್ಟು, ಅದನ್ನು ಒಂದು ಸಮೂಹದ ಜನರು ತಮ್ಮಲ್ಲಿ ಹಂಚಿಕೊಂಡು, ಅದನ್ನು ಪಾಲಿಸಲು ಪ್ರತ್ಯಕ್ಷವಾಗಿಯೋ, ಪರೋಕ್ಷವಾಗಿಯೋ ಬದ್ಧರಾಗಿರುತ್ತಾರೆ. ಈ ಬದ್ಧತೆಯೇ ಅವರ ಹಲವಾರು ಪ್ರಮುಖ ವರ್ತನೆಗಳಿಗೆ, ಕ್ರಿಯೆ ಮತ್ತು ಪ್ರತಿಕ್ರಿಯೆಗಳಿಗೆ ಕಾರಣವಾಗಿರುತ್ತದೆ. ಸಾಮಾಜಿಕವಾಗಿ ಸಂಸ್ಕೃತಿಯನ್ನು ಮನೋವೈಜ್ಞಾನಿಕವಾಗಿ ಹೇಳುವುದಾದರೆ, ಮೆಂಟಲ್ ಪ್ರೋಗ್ರಾಮಿಂಗ್ ಮತ್ತು ಮೆಂಟಲ್ ಸಾಫ್ಟ್‌ವೇರನ್ನು ಒಂದು ಸಮೂಹ ತಮ್ಮತಮ್ಮಲ್ಲಿ ಹಂಚಿಕೊಂಡಿರುವುದು. ಸಂಸ್ಕೃತಿ ಎಂಬುದು ಹೊರಗೆ ರೀತಿ, ನೀತಿ, ನೇಮ, ಆಚರಣೆಗಳ ರೂಪದಲ್ಲಿ ಅಷ್ಟೇ ಕಾಣುತ್ತಿರುತ್ತದೆ.

ಅಂದರೆ ವ್ಯಕ್ತಿ ಹಣೆಗೆ ಬೊಟ್ಟಿಟ್ಟುಕೊಳ್ಳುವುದೋ, ಒಂದು ನಿರ್ದಿಷ್ಟ ಮಾದರಿಯ ಉಡುಪು ಹಾಕಿಕೊಳ್ಳುವುದೋ, ಭಾಷೆ ಮತ್ತು ಪಾರಿಭಾಷಿಕ ಪದಗಳನ್ನು ಉಪಯೋಗಿಸುವುದೋ ಇತ್ಯಾದಿಗಳಾಗಿರುತ್ತವೆ. ಆದರೆ ಅದು ಇನ್ನೂ ಸ್ವಲ್ಪ ಒಳಗೆ ಧೋರಣೆಗಳು, ನಿರೀಕ್ಷೆಗಳು ಮತ್ತು ಗ್ರಹಿಕೆಯ ರೂಪದಲ್ಲಿ ಇರುತ್ತವೆ. ಇನ್ನೂ ಒಳಕ್ಕೆ ಹೋದರೆ, ಅಂದರೆ ಮೂಲದಲ್ಲಿ ಅದರ ಸ್ವರೂಪವೆಂದರೆ ತಾನು ಒಪ್ಪಿರುವ ಮೌಲ್ಯ ಮತ್ತು ಊಹೆಗಳನ್ನು ಹೊಂದಿರುತ್ತದೆ. ಈ ದಿಕ್ಕಿನಲ್ಲಿ ಆಲೋಚಿಸಿದರೆ ಗಾಬರಿಯಾಗುವ ವಿಷಯವೆಂದರೆ ಮೌಲ್ಯ ಎಂಬುದು ಮನುಷ್ಯನೇ ತಾನೇ ತಾನಾಗಿ ವಸ್ತು, ವಿಚಾರ, ವಿಷಯ, ವ್ಯಕ್ತಿಗಳಿಗೆ ಅಭಿಮಾನಪೂರ್ವಕ ಒಪ್ಪಿತ ರೀತಿಯಲ್ಲಿ ಆರೋಪಿಸಿರುವುದು. ಅದರಂತೆಯೇ ಇನ್ನು ಊಹೆಗಳನ್ನು ಬಿಡಿ, ಯಾವ ರೂಪಗಳನ್ನಾದರೂ ತಾನು ನುಲಿದಂತಲ್ಲಾ, ಬಳುಕಿದಂತಲ್ಲಾ ತೆಗೆದುಕೊಳ್ಳಬಹುದು. ಈ ಸಾಂಸ್ಕೃತಿಕ ಪ್ರಭಾವಗಳು ಒಬ್ಬ ವ್ಯಕ್ತಿ ಹೇಗೆ ಆಲೋಚಿಸುತ್ತಾನೆ, ಹೇಗೆ ಭಾವಿಸುತ್ತಾನೆ, ಹೇಗೆ ವರ್ತಿಸುತ್ತಾನೆ ಎಂಬುದನ್ನು ನಿರ್ಧರಿಸುತ್ತವೆ. ಇದನ್ನು ಸಾಮಾನ್ಯೀಕರಿಸಿ ಸಮೂಹದಲ್ಲಿಯೂ ಕಾಣಬಹುದು. ಆದ್ದರಿಂದಲೇ ಬ್ರಿಟಿಷರೇ ಮೊದಲಾದ ವಿದ್ಯಾವಂತ ವ್ಯಾಪಾರಿ ಮತ್ತು ವಸಾಹತು ನಿರ್ಮಾಪಕರು ಸಂಸ್ಕೃತಿ ಅಧ್ಯಯನಕ್ಕೆ ಬಹಳ ಮಹತ್ವಕೊಟ್ಟರು. ಇದರಿಂದ ತಮ್ಮ ಉದ್ದೇಶವನ್ನು ನೆರವೇರಿಸಿಕೊಳ್ಳಲು ಯಾರನ್ನು, ಯಾವ ಸಮೂಹವನ್ನು ಎಷ್ಟರಮಟ್ಟಿಗೆ ನಂಬಬೇಕು, ಒಪ್ಪಬೇಕು ಮತ್ತು ಬಳಸಿಕೊಳ್ಳಬಹುದು ಎಂಬುದನ್ನು ಒಂದು ಹಂತಕ್ಕೆ ನಿರ್ಧರಿಸಲು ಸಾಧ್ಯವಾಗುತ್ತಿತ್ತು.

ಒಬ್ಬ ವ್ಯಕ್ತಿಯ ಅಥವಾ ಸಮೂಹದ ಒಪ್ಪಿತ ಮೌಲ್ಯ, ಶ್ರದ್ಧಾ ನಂಬಿಕೆ, ವರ್ತನೆ ಮತ್ತು ಪ್ರತಿಕ್ರಿಯೆಗಳು, ಧೋರಣೆ ಮತ್ತು ದೃಷ್ಟಿಕೋನಗಳು ಕೇಂದ್ರವಾಗಿ ಸಂಸ್ಕೃತಿಯನ್ನೇ ಹೊಂದಿರುವುದರಿಂದ ಸಾಂಸ್ಕೃತಿಕವಾಗಿ ವ್ಯಕ್ತಿಯನ್ನು ಮತ್ತು ಸಮೂಹವನ್ನು ನೋಡಿ ಅವರಿಗೆ ಹಣೆಪಟ್ಟಿ ಕಟ್ಟುವ ವಿದ್ಯಮಾನಗಳು ವಸಾಹತುಗಳ ಕಾಲದಲ್ಲಿ ಹೆಚ್ಚು ಗಂಭೀರವಾಗಿ ಪ್ರಾರಂಭವಾಯಿತು. ಆದರೆ ಸಾಂಸ್ಕೃತಿಕ ಪ್ರಭಾವಗಳು ತಮ್ಮ ಮೂಲವನ್ನು ನಿರ್ಮಿಸಿಕೊಳ್ಳುವುದಕ್ಕಿಂತ ಮುನ್ನವೇ ನಿಸರ್ಗವು ವ್ಯಕ್ತಿಯ ಮನಸ್ಸಿನ ಆಳದಲ್ಲಿ ಮತ್ತೊಂದು ಕೇಂದ್ರಾಡಳಿತ ಕಚೆೇರಿಯನ್ನು ಹೊಂದಿದೆ. ಸಂಸ್ಕೃತಿ ಮನುಷ್ಯ ನಿರ್ಮಿತ. ನೈಸರ್ಗಿಕವಾದ ಸ್ವಭಾವವು ಪ್ರಾಕೃತಿಕ. ಈಗ ಮಾತ್ರವಲ್ಲ, ಸಂಸ್ಕೃತಿ ಎಂಬುದು ಯಾವ ಮನುಷ್ಯನಿಗೆ ಪರಿಚಯವಾಯಿತೋ, ಅಂದಿನಿಂದಲೂ ಈ ಎರಡಕ್ಕೂ ಸಂಘರ್ಷ ಆಗುತ್ತಲೇ ಇದೆ. ಹಾಗಾಗಿ ಮನುಷ್ಯನು ತನ್ನ ಸಂಸ್ಕೃತಿಗೂ ಮತ್ತು ತನಗೂ ಯಾವುದಕ್ಕೂ ಪ್ರಾಮಾಣಿಕವಾಗಿರಲು ಸಾಧ್ಯವಿಲ್ಲದೇ ತಳಮಳಿಸುತ್ತಿದ್ದಾನೆ. ಅವನ ತಳಮಳದ ಪ್ರತಿಫಲವು ರಾಜಕೀಯ, ಧಾರ್ಮಿಕಾಚರಣೆಗಳಲ್ಲಿ, ಸಾಮಾಜಿಕ ನಡವಳಿಕೆಗಳಲ್ಲಿ ತೋರುತ್ತಿವೆ. ಜಾಗತಿಕವಾಗಿ ವಿಸ್ತಾರಗೊಳ್ಳುತ್ತಿರುವ ಅವನಿಗಿರುವ ಅವಕಾಶಗಳಿಗೆ ಮತ್ತು ಆಕರ್ಷಣೆಗಳಿಗೆ ಅವನ ಸಾಂಸ್ಕೃತಿಕ ನೆಲೆಗಳು ತೊಡಕಾಗುತ್ತವೆ ಎಂದು ಎನಿಸುತ್ತದೆ. ಆದರೆ ಅಸ್ಮಿತೆ, ತಮ್ಮದು ಎಂಬ ಹೆಮ್ಮೆ, ಅಭಿಮಾನಭಾವಗಳು ಅವನನ್ನು ಪ್ರಶ್ನಿಸುತ್ತವೆ. ಹಾಗಾಗಿ ಅವನು ತನ್ನ ವೈಯಕ್ತಿಕ ಆಕರ್ಷಣೆಗಳಿಗೆ ಸಂಸ್ಕೃತಿಯನ್ನು ಹಿಂದಕ್ಕೆ ಸರಿಸುತ್ತಾನೆ. ತನಗೆ ಬೇಕಾದಾಗ ಮುನ್ನೆಲೆಗೆ ತರುತ್ತಾನೆ. ತನ್ನ ಹಿತಾಸಕ್ತಿಗೆ ಅದನ್ನು ಒಂದು ಸಾಧನವನ್ನಾಗಿ ಮಾಡಿಕೊಳ್ಳುತ್ತಾನೆ. ಇದನ್ನು ಸಾಂಸ್ಕೃತಿಕ ಕಪಟತನ ಎನ್ನಬಹುದು. ತನ್ನ ಸಾಂಸ್ಕೃತಿಕ ಕಪಟತನವನ್ನು ಅವನು ಗುರುತಿಸಿಕೊಳ್ಳದೇ ಹೋದಲ್ಲಿ ಈ ಗೋಜಲು ಮತ್ತು ಗೊಂದಲಗಳು ಮುಗಿಯದ ಕತೆ.

Similar News

ನಾಸ್ತಿಕ ಮದ
ಅಂಜುಗೇಡಿತನ
ಮನದರಿವು
ಬಯಲರಿವು
ಬಯಲರಿವು
ಗೀಳಿಗರು