ಪ್ರೇರಕ ಶಕ್ತಿ

Update: 2024-09-01 06:21 GMT

ವ್ಯಕ್ತಿ ಮತ್ತು ವಿಶ್ವ ಎರಡೂ ಬದಲಾವಣೆಗೆ ಒಳಗಾಗುವಂತಹದ್ದೇ.

ವ್ಯಕ್ತಿಯ ಆಲೋಚನೆಗಳು, ಭಾವನೆಗಳು, ಮನಸ್ಥಿತಿ, ಪರಿಸ್ಥಿತಿ, ದೇಹ ಮತ್ತು ಪರಿಸರ ಎಲ್ಲವೂ ಬದಲಾವಣೆಗೆ ಒಳಗಾಗುವುದು ಸ್ವಾಭಾವಿಕ. ಆಲೋಚನೆಗಳು, ಜೀವನ ಶೈಲಿ, ವರ್ತನೆಗಳು, ಕಾಮನೆಗಳು, ನಡವಳಿಕೆಗಳು ಕೂಡಾ ಬದಲಾಗುತ್ತವೆ ಮತ್ತು ಬದಲಾಯಿಸಲು ಸಾಧ್ಯ. ಆದರೆ ಅವುಗಳು ಸ್ವಾಭಾವಿಕವಾಗಿ ಮತ್ತು ಆಗಬೇಕಾದ ವೇಗದಲ್ಲಿ ಬದಲಾಗಲು ತಡೆ ಎಂದರೆ ಅದೇ ವ್ಯಕ್ತಿಯ ಧೋರಣೆಗಳು ಮತ್ತು ಮನೋಭಾವಗಳು.

ತನ್ನಲ್ಲಿ ಬದಲಾವಣೆಯನ್ನು ತಂದುಕೊಳ್ಳಬೇಕೆಂದರೆ ಸಾಧ್ಯ. ಇನ್ನೊಬ್ಬರಲ್ಲಿ ಬದಲಾವಣೆಯನ್ನು ತರಬೇಕೆಂದರೆ ಕಷ್ಟ, ಆದರೆ ಸಾಧ್ಯ. ಒಟ್ಟಾರೆ ಬದಲಾವಣೆ ಸಾಧ್ಯ, ಏಕೆಂದರೆ ಅದು ವಿಶ್ವದ ಮತ್ತು ಯಾವುದೇ ಜೀವಿಯ ಸಹಜ ಗುಣ.

ತನ್ನಲ್ಲಿ ತಾನು ಬದಲಾವಣೆಯನ್ನು ತಂದುಕೊಳ್ಳಲು ಆತ್ಮಾವಲೋಕನದ್ದೇ ಬಹಳ ಮುಖ್ಯ ಪಾತ್ರ. ತನ್ನ ಇತಿಮಿತಿಗಳನ್ನು ಮತ್ತು ಸಾಮರ್ಥ್ಯಗಳನ್ನು, ಹಾಗೆಯೇ ತನ್ನಲ್ಲಿ ಇರಬೇಕೆಂದು ಬಯಸುವುದನ್ನು, ಬೇಡವೆಂದು ಇಷ್ಟಪಡದ್ದನ್ನು ಗುರುತಿಸಿಕೊಂಡು, ಅದರ ಅನುಸಾರ ಹಳೆಯ ರೂಢಿಯಿಂದ ಹೊರಬರುವ ಮತ್ತು ಹೊಸರೂಢಿಯನ್ನು ಮಾಡಿಕೊಳ್ಳುವ ಕೆಲಸ ಮಾಡುವುದು.

ಬದಲಾವಣೆ ಎನ್ನುವುದು ತಮ್ಮಲ್ಲಾಗಲಿ, ಇತರರಲ್ಲಾಗಲಿ ಆಗ ಬೇಕಾಗಿರುವುದು ಮನಸ್ಸಿನಲ್ಲಿ.

ಸರಿ, ಈಗ ಇತರರಲ್ಲಿ ಬದಲಾವಣೆಯನ್ನು ತರಬೇಕಾದರೆ ಏನು ಮಾಡಬೇಕು?

ಸಾಮಾಜಿಕ ಪ್ರಪಂಚ ಮತ್ತು ಆಂತರಿಕ ಪ್ರಪಂಚವೆಂಬ ಎರಡು ಪ್ರಪಂಚದಲ್ಲಿ ನಾವಿರುವುದು. ಎರಡೂ ಪ್ರಪಂಚಗಳು ನಾನಾ ವಿಷಯಗಳಿಂದ ನಿರ್ಮಾಣವಾಗಿದ್ದು ತಮ್ಮ ಪ್ರಭಾವವನ್ನು ಬೀರುತ್ತಲಿರುವವು. ಇಂತಹ ಪ್ರಭಾವಗಳೇ ನಮ್ಮಲ್ಲಿನ ಕಾರಕ ವಿಷಯಗಳಿಗೆ ಮೂಲ. ಇನ್ನು ಇಂತಹ ಕಾರಕ ವಿಷಯಗಳು ಬದಲಾವಣೆಗೆ ಒಳಗಾಗಬೇಕೆಂದರೆ ಪ್ರೇರಕ ಶಕ್ತಿಗಳು ಬೇಕು.

ಬದಲಾವಣೆಗಳನ್ನು ಬಯಸುವವರು ಮೊತ್ತ ಮೊದಲು ಮನವರಿಕೆ ಮಾಡಿಕೊಳ್ಳಬೇಕಾದ ವಿಷಯವೆಂದರೆ ಬದಲಾವಣೆ ಆಗಿಯೇ ಆಗುವುದು ಎಂದು. ಒಂದು ರೀತಿಯಲ್ಲಿ ಆಗಲಿಲ್ಲವೆಂದರೆ ಮತ್ತೊಂದು ಬಗೆಯಲ್ಲಿ ಆಗಿಯೇ ಆಗುವುದು ಎಂದು. ಎಲ್ಲಾ ಕಾರಕಗಳಿಗೂ ಒಂದೇ ಪ್ರೇರಕ ಅಥವಾ ವೇಗವರ್ಧಕ ಅಥವಾ ಕ್ಯಾಟಲಿಸ್ಟುಗಳು ಇರುವುದಿಲ್ಲ. ಸಮೀಪಿಸುವ ಬಗೆಗಳು ಅಥವಾ ಅಪ್ರೋಚ್ ಬದಲಾಗಬೇಕು.

ಈ ವ್ಯಕ್ತಿ ಅಥವಾ ಈ ಮನಸ್ಸು ಅಥವಾ ಈ ವ್ಯವಸ್ಥೆ ಬದಲಾವಣೆಗೆ ಒಳಗಾಗದು ಎಂದೋ, ನಾನೆಷ್ಟು ಪ್ರಯತ್ನಪಟ್ಟರೂ ನನ್ನಿಂದ ಬದಲಾಗಿಸಲು ಸಾಧ್ಯವಿಲ್ಲ ಎಂದೋ ಎಂಬ ಧೋರಣೆ ಮತ್ತು ಆಲೋಚನೆಗಳು ಗಾಢವಾಗಿ ನಮ್ಮಲ್ಲಿದ್ದರೆ ಕ್ಯಾಟಲಿಸ್ಟ್ ಅಥವಾ ಪ್ರೇರಕರಾಗಿ ನಾವು ವಿಫಲರಾಗುತ್ತೇವೆ. ಬದಲಾವಣೆ ಎಂಬುದು ವ್ಯಕ್ತಿಯಲ್ಲಾಗಲಿ, ವ್ಯವಸ್ಥೆಯಲ್ಲಾಗಲಿ ಆಗಬೇಕಿದ್ದರೆ ಆಗ್ರಹದ ಬದಲಾಗಿ ಮನವೊಲಿಸುವುದರಲ್ಲೇ ಯಶಸ್ಸು. ಅದೇ ತಂತ್ರ.

ಮನೆಯಲ್ಲಿ ಮಕ್ಕಳಲ್ಲಿ ಬದಲಾವಣೆ ತರಲು ಇಚ್ಛಿಸುವ ಪೋಷಕರಾಗಲಿ, ಶಾಲೆಯಲ್ಲಿ ಶಿಕ್ಷಕರಾಗಲಿ ಪ್ರೇರಕರಾಗುವ ಬದಲು ವಿರೋಧಿಗಳಾಗಿಬಿಡುತ್ತಾರೆ. ವಿರೋಧಿಗಳೆಂದು ಕಂಡಾಗ ಅವರನ್ನು ಎಂದಿಗೂ ಒಪ್ಪಿಕೊಳ್ಳುವುದಿಲ್ಲ. ಬದಲಾಗಿ ಮಕ್ಕಳಲ್ಲಿ ವಿರೋಧಿಗಳ ವಿರುದ್ಧವಾಗಿ ಹೋರಾಟದ ಮನೋಭಾವ ಬೆಳೆಯುತ್ತದೆ ಮತ್ತು ಬಂಡಾಯಗಾರರಾಗುತ್ತಾರೆ.

ಹಾಗೆಯೇ ವ್ಯಕ್ತಿಯೊಬ್ಬ ತನ್ನದೇ ಮನಸ್ಸನ್ನು ಅಥವಾ ಇತರ ವ್ಯಕ್ತಿಗತ ಮನಸ್ಥಿತಿಯನ್ನು ಅಥವಾ ಸಮಾಜದ ಸಂಕಲಿತ ಮನಸ್ಥಿತಿಯನ್ನು ಬದಲಾಯಿಸಬೇಕೆಂದರೆ ಬೋಧಕರಂತೆ, ವಿರೋಧಿಗಳಂತೆ ಆಗ್ರಹಿಸುವ ಬದಲು ಪ್ರೇರಕರಾಗಿ, ಅಂದರೆ ಕ್ಯಾಟಲಿಸ್ಟುಗಳಾಗಿ ಕೆಲಸ ಮಾಡಬೇಕು.

ಪ್ರೇರಕರ ಮುಖ್ಯವಾದ ಲಕ್ಷಣಗಳೆಂದರೆ ತಾವು ಬದಲಾವಣೆಯನ್ನು ತರುವ ವ್ಯಕ್ತಿಗಳಲ್ಲಿ ಅಥವಾ ಸಮೂಹಗಳಲ್ಲಿ ಕೋಪವನ್ನು ಹೊಂದಿರುವುದಿಲ್ಲ. ಕಾಳಜಿಯನ್ನು ಹೊಂದಿರುತ್ತಾರೆ. ಅವರಿಗೆ ತೊಡಕಾಗಿರುವ ವಿಷಯಗಳನ್ನು ಅವರ ಗಮನಕ್ಕೆ ತರುವ ಮೂಲಕ, ಅವುಗಳನ್ನು ನಿವಾರಿಸಲು ತಾವೂ ಜೊತೆಗಾರರಾಗುತ್ತಾರೆ ಮತ್ತು ಸಹಕರಿಸುತ್ತಾರೆ. ದೂರು ದುಮ್ಮಾನಗಳಿಲ್ಲದೆ ಅವರಿಗೂ ಮತ್ತು ತಮಗೂ ಇರುವ ಅಂತರವನ್ನು ಕಡಿಮೆಯಾಗಿಸಿಕೊಳ್ಳುತ್ತಾರೆ ಮತ್ತು ಬೇಲಿಗಳಿದ್ದರೆ, ತಡೆಗೋಡೆಗಳಿದ್ದರೆ, ಅವನ್ನು ಕಿತ್ತು ಹಾಕುತ್ತಾರೆ.

ತಾವು ಯಾರಲ್ಲಿ ಬದಲಾವಣೆ ತರಬೇಕೆಂದು ಬಯಸುತ್ತಾರೋ ಅವರನ್ನು ಬಂಧಿತರಾಗಿಸುವುದಿಲ್ಲ, ಅನುಮಾನಿಸುವುದಿಲ್ಲ, ಅಪಮಾನಿಸುವುದಿಲ್ಲ, ಅವರ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವುದಿಲ್ಲ; ಆದರೆ ಅವರ ಆದ್ಯತೆಗಳನ್ನು ಗುರುತಿಸಿಕೊಳ್ಳಲು ನೆರವಾಗುತ್ತಾರೆ. ಅವರ ಅಗತ್ಯಗಳನ್ನು ಪೂರೈಸಿಕೊಳ್ಳಲು ಸಹಕರಿಸುತ್ತಾರೆ. ಅವರ ಬಯಕೆಗಳನ್ನು ಮುಂದೂಡಲು ಮನವೊಲಿಸುತ್ತಾರೆ. ಅವರ ದುಡುಕುಗಳನ್ನು ತಹಬಂದಿಗೆ ತರುವ ಮಾರ್ಗಗಳನ್ನು ಹುಡುಕುತ್ತಾರೆ. ಗೊಂದಲಗಳಿದ್ದಲ್ಲಿ ಅವುಗಳನ್ನು ಎಳೆ ಎಳೆಯಾಗಿ ಬಿಡಿಸುತ್ತಾ ಸಿಕ್ಕುಗಳಿಂದ ಹೊರಗೆ ಬರಲು ಜೊತೆಯಾಗುತ್ತಾರೆ. ಇದು ಪ್ರೇರಕರು ಮಾಡುವ ಕೆಲಸ.

ಪ್ರೇರಕರು ಒತ್ತಡವನ್ನು ಹೇರುವುದಿಲ್ಲ, ಆತಂಕವನ್ನು ಉಂಟುಮಾಡುತ್ತಾ ದಿಗಿಲು ಪಡಿಸುವುದಿಲ್ಲ. ಇರುವ ಒತ್ತಡ, ಆತಂಕ ಮತ್ತು ಭಯಗಳನ್ನು ನಿವಾರಿಸುವುದರಲ್ಲಿ ಆಸಕ್ತಿ ತೋರುವರು. ಹೆದರಿಸುವವರು, ಒತ್ತಡವನ್ನು ಉಂಟುಮಾಡುವವರು, ವೈಫಲ್ಯದ ಭೀತಿಯನ್ನು ತರುವವರು, ತನ್ನ ಮಾತನ್ನಷ್ಟೇ ಕೇಳುವುದರಿಂದಲಷ್ಟೇ ನಿನಗೆ ಒಳಿತು ಎನ್ನುವವರು, ತಾನು ತೋರಿಸುವ ದಿಕ್ಕು ದಾರಿಗಳಿಂದಲೇ ನೀನು ಗುರಿ ಮುಟ್ಟುವುದು ಎನ್ನುವವರು, ಹಿಂದಿನ ವೈಫಲ್ಯಗಳನ್ನು ಎತ್ತಾಡುವವರು ಅಥವಾ ಅಣಕಿಸಿ ತೋರಿಸುವವರು; ಪ್ರೇರಕ ಶಕ್ತಿಗಳಾಗಲಾರರು. ಬದಲಿಗೆ ಬದಲಾಗುವ ಮನಸ್ಸಿಗೆ ಮಾರಕವೇ ಆಗುವರು.

ತನ್ನಲ್ಲಿ ತಾನು, ಇತರರಲ್ಲಿ, ಸಮಾಜದಲ್ಲಿ ಬದಲಾವಣೆಯನ್ನು ಬಯಸುವವರು ಪ್ರೇರಕರಾಗುವುದರಲ್ಲಿ ಮಾತ್ರವೇ ಬದಲಾವಣೆಯ ಪ್ರಕ್ರಿಯೆಯು ಒಂದು ಹಂತಕ್ಕೆ ಗುರಿಗಾಣುವುದು. ಹೊರಗಿನ ಒತ್ತಡಗಳು, ಕಟ್ಟುಪಾಡುಗಳು, ಶಿಕ್ಷೆಯ ಭೀತಿಗಳು ಬದಲಾವಣೆ ತರುವುದಕ್ಕಿಂತ ಅವರ ಅನಪೇಕ್ಷಿತ ಗುಣಗಳನ್ನು ಅಡಗಿರುವಂತೆ ಮಾಡಿದ್ದು, ನಂತರ ವಿಜೃಂಭಿಸಿಕೊಂಡು ಬರಲು ಅವಕಾಶವನ್ನು ಕಾಯುತ್ತಿರುತ್ತದೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Contributor - ಯೋಗೇಶ್ ಮಾಸ್ಟರ್,

contributor

Similar News

ಅಂಜುಗೇಡಿತನ
ಮನದರಿವು
ಬಯಲರಿವು
ಬಯಲರಿವು
ಗೀಳಿಗರು