ತೆರೆದಿದೆ ಮನೆ

Update: 2024-08-18 06:46 GMT
Editor : jafar sadik

ಮುಕ್ತವಾದ ಮನಸ್ಸನ್ನು ಹೊಂದಲು ಅಥವಾ ಮನಸ್ಸನ್ನು ಮುಕ್ತವಾಗಿಸಿಕೊಳ್ಳಲು ಇರುವ ಮನುಷ್ಯನ ಬಯಕೆಯ ಚರಿತ್ರೆ ಬಹುಕಾಲದ್ದು. ಬರೆದಿರುವ ಕಾವ್ಯ, ಕತೆ, ರೂಪಕಗಳಲ್ಲಿ, ಮಂಡಿಸುವ ತತ್ವ, ಸಿದ್ಧಾಂತ, ಜಿಜ್ಞಾಸೆಗಳಲ್ಲಿ, ಕಂಡಿರುವ ದರ್ಶನಗಳಲ್ಲಿ, ಆಗಿರುವ ಮನನಗಳಲ್ಲಿ, ಗ್ರಹಿಸಿರುವ ಶ್ರವಣಗಳಲ್ಲಿ, ಮಾಡಿರುವ ಸಾಧನೆ, ಬೋಧನೆಗಳಲ್ಲಿ, ಪಟ್ಟಿರುವ ವೇದನೆಗಳಲ್ಲಿ ಮನಸ್ಸಿಗಿರುವ ಮುಕ್ತವಾಗುವ ಬಯಕೆಯ ದಾಖಲೆಗಳಿವೆ.

ಭಾವನೆಗಳು ಮತ್ತು ವಿಚಾರಗಳು, ಅನುಭವಗಳು ಮತ್ತು ದರ್ಶನಗಳು, ಚಿಂತನೆಗಳು ಮತ್ತು ಚಿಂತೆಗಳು; ಯಾವುದಾದರೂ ಪಿಂಡಗಟ್ಟಿ ರೂಪುಗೊಳ್ಳಬೇಕಾಗಿರುವುದು ಮನಸ್ಸಿನ ಗರ್ಭಕೋಶದಲ್ಲೇ. ಮನಾಲಯ ಅಥವಾ ಮನಸ್ಸಿನ ಆಲಯ ಅಥವಾ ಮನಸ್ಸೆಂಬ ಮನೆಯು ಎಷ್ಟರ ಮಟ್ಟಿಗೆ ಆ ವಿಷಯಗಳಿಗೆ ಅಥವಾ ಯಾವುದೇ ಸಂಗತಿಗಳಿಗೆ ತನ್ನಲ್ಲಿ ಅವಕಾಶಕೊಡುತ್ತದೆಯೋ ಅಷ್ಟರಮಟ್ಟಿಗೆ ಅವು ರೂಪುಗೊಳ್ಳುತ್ತವೆ. ಮನಸ್ಸೆಂಬ ಮನೆಯೊಳಗೆ ಯಾವ ಉಪಚಾರಗಳು, ಸೌಲಭ್ಯಗಳು ದೊರಕುತ್ತವೆಯೋ, ಎಷ್ಟರಮಟ್ಟಿಗೆ ನಡೆಸಿಕೊಳ್ಳುತ್ತದೆಯೋ ಅಷ್ಟರಮಟ್ಟಿಗೆ ಮನೆಯಿಂದ ವ್ಯಕ್ತಿಯು ಹೊರಗೆ ಬರುತ್ತಾನೆ.

ಸರೋವರ, ಸಾಗರ, ಆಲಯ, ಬಯಲು ಇತ್ಯಾದಿಗಳಂತೆ ಮನೆಯೂ ಮನಸ್ಸಿನ ರೂಪಕವಾಗಿ ಅನೇಕ ಸಾಹಿತ್ಯಗಳಲ್ಲಿ ಕಂಡಿವೆ.

ಮನಸ್ಸು, ಅಂದರೆ ಮನೆ ನನ್ನದು. ನನ್ನ ಮನಸ್ಸಿನಲ್ಲಿ ಅಥವಾ ಮನೆಯನ್ನು ಪ್ರವೇಶಿಸುವ ಪ್ರತಿಯೊಬ್ಬರೂ, ಪ್ರತಿಯೊಂದೂ ನನಗಿಂತ ಹೊರತಾದವರು, ಅಂದರೆ ಅತಿಥಿಗಳು. ಈ ಅತಿಥಿಗಳೋ ಪ್ರವೇಶಿಸುವ ಸ್ವರೂಪವೆಂದರೆ ಭಾವನೆಗಳು, ವಿಚಾರಗಳು, ಅನುಭವಗಳು. ಯಾವ ರೂಪವಾದರೂ ನನ್ನ ಅನುಭವವಾಗಲೇ ಬರುವವು ಮತ್ತು ಪ್ರೇರಣೆಯನ್ನು ನೀಡುವವು. ಈ ಭಾವನೆಗಳು, ವಿಚಾರಗಳು, ಅನುಭವಗಳು, ಪ್ರೇರಣೆಗಳೆಲ್ಲವೂ ಮನಸ್ಸನ್ನು ಜೀವಂತವಾಗಿರಿಸುವ ಚೈತನ್ಯಗಳೇ.

ಕುವೆಂಪು ‘ತೆರೆದಿದೆ ಮನೆ ಓ ಬಾ ಅತಿಥಿ’ ಎನ್ನುತ್ತಾ ಮುಕ್ತವಾದ ಮನಸ್ಸನ್ನು ಹೊಂದಿರಲು ಒಂದು ಧೋರಣೆಯನ್ನು ಮತ್ತು ಪ್ರೇರಣೆಯನ್ನು ಮಾದರಿಯಾಗಿಡುತ್ತಾರೆ. ನೆನಪಿರಲಿ, ನಮ್ಮ ನಮ್ಮ ಧೋರಣೆಗಳನುಸಾರವಾಗಿ ಪ್ರೇರಣೆಗಳನ್ನು ಪಡೆಯುತ್ತೇವೆ.

ವ್ಯಕ್ತಿಗಳು, ವಿಷಯಗಳು, ವಿಚಾರಗಳು, ಭಾವನೆಗಳು, ಅನುಭವಗಳು, ಪ್ರಸಂಗಗಳು; ಯಾವುದಾದರೂ ಮನೆಗೆ ಅತಿಥಿಗಳೇ ಹೊರತು ಒಡೆಯರೋ ಅಥವಾ ಜೊತೆಯಲ್ಲಿ ಇರುವ ಸಹವಾಸಿಗಳೋ ಅಲ್ಲ. ನನಗೆ ಉಸಿರಾಡಲು ಅವು ಗಾಳಿಯಾಗುತ್ತವೆ. ಅವೇ ಉಸಿರಲ್ಲ. ನನ್ನ ಕಣ್ಣುಗಳಿಗೆ ಅವು ಬೆಳಕಾಗುತ್ತವೆ. ಅವೇ ಕಣ್ಣುಗಳಲ್ಲ. ಉಸಿರು ನನ್ನದು. ಕಣ್ಣುಗಳು ನನ್ನದು. ಬಗೆಬಗೆಯಾಗಿ ಬಾಳನ್ನು ತರಲಿ, ಆದರೆ ಬಾಳ್ವೆಯು ನನ್ನದು. ಯಾವ ರೀತಿಯಲ್ಲಿ, ಯಾವ ರೂಪದಲ್ಲಿ ಬಂದರೂ ಅವು ಪ್ರೇರಣೆಯಾಗುತ್ತವೆ, ಚೈತನ್ಯವಾಗುತ್ತವೆ. ಪ್ರೇರಣೆ ಅಥವಾ ಸ್ಫೂರ್ತಿಗಳೆಲ್ಲವೂ ಮನಸ್ಸಿಗೆ ಚೈತನ್ಯ ನೀಡುವವೇ ಆಗಿವೆ.

ತೆರೆದ ಮನೆಗೆ ಬರುವ ಅತಿಥಿಗಳಿಂದ ಅಥವಾ ತೆರೆದ ಮನಕ್ಕೆ ದಕ್ಕುವ ವಿಷಯ, ಭಾವನೆ ಮತ್ತು ಅನುಭವಗಳಿಂದ ಉಂಟಾಗುವ ಆನಂದವನ್ನು, ಚೈತನ್ಯವನ್ನು ವ್ಯಕ್ತಿಗಳು ತಮ್ಮ ಮಾತುಗಳಲ್ಲಿ, ಕೆಲಸಗಳಲ್ಲಿ, ಕಾವ್ಯಗಳಲ್ಲಿ, ಬರಹಗಳಲ್ಲಿ, ಇತರರನ್ನು ನಡೆಸಿಕೊಳ್ಳುವುದರಲ್ಲಿ, ಇರುವುದರಲ್ಲಿ, ತೊಡುವುದರಲ್ಲಿ, ನಡೆಯುವುದರಲ್ಲಿ, ನುಡಿಯುವುದರಲ್ಲಿ ಅಭಿವ್ಯಕ್ತಪಡಿಸುತ್ತಾರೆ.

‘ಇಂತಾದರೂ ಬಾ, ಅಂತಾದರೂ ಬಾ’ ಎಂದು ಅತಿಥಿಯನ್ನು ಕರೆಯುವುದರಲ್ಲಿ ಮುಕ್ತತೆ ಇದೆ. ಇಂತೇ ಬರಬೇಕು, ಅಂತೇ ಬರಬೇಕು ಎಂದು ಆಗ್ರಹಿಸುವುದಿಲ್ಲ, ನಿರ್ಬಂಧಗಳನ್ನು ಹೇರುವುದಿಲ್ಲ. ಆಗ್ರಹಗಳಿದ್ದರೆ ಆವೇಶ ಉಂಟಾಗುತ್ತವೆ. ಆವೇಶವಿದ್ದಲ್ಲಿ ಒತ್ತಡ ಮತ್ತು ಆತಂಕ ಉಂಟಾಗುತ್ತದೆ. ಅವು ಮನಸ್ಸಿನ ಆರೋಗ್ಯಕ್ಕೆ ಒಳಿತಲ್ಲ. ಇಂತೇ ಇರಬೇಕು, ಅಂತೇ ಇರಬೇಕು ಎಂದು ನಿರ್ದಿಷ್ಟ ಬಯಕೆಗಳು ಇದ್ದು, ಅವು ನೆರವೇರದಿದ್ದಲ್ಲಿ ನಿರಾಸೆಯಾಗುತ್ತದೆ, ಬೇಸರವಾಗುತ್ತದೆ, ವಿಷಯದ ಬಗ್ಗೆ ಜಿಗುಪ್ಸೆಯಾಗುತ್ತದೆ, ಕೋಪ ಬರುತ್ತದೆ, ಆಸಕ್ತಿ ಕಳೆದುಕೊಳ್ಳುತ್ತದೆ; ಏನು ಬೇಕಾದರೂ ನಕಾರಾತ್ಮಕವಾಗಿರುವುದು ಆಗುತ್ತದೆ. ಅದು ಮನಸ್ಸಿಗೆ ಸ್ಫೂರ್ತಿಯನ್ನೋ, ಚೈತನ್ಯವನ್ನೋ, ಆನಂದವನ್ನೋ ನೀಡುವುದಲ್ಲ. ಹಾಗಾಗಿ ನಿರೀಕ್ಷೆ, ಅಪೇಕ್ಷೆಗಳಿಲ್ಲದೇ ಮನೆಯನ್ನು ತೆರೆದಿಟ್ಟು, ಅತಿಥಿಯನ್ನು ಎದುರುಗೊಳ್ಳುವ ಸೂತ್ರ ಈ ಮುಕ್ತ ಮನಸ್ಸಿನದು. ಹಾಗೆಯೇ ಬರುವುದೆಲ್ಲಾ ಅತಿಥಿಗಳೇ ಹೊರತು ಜೊತೆಗೇ ಇರುವವರಲ್ಲ, ನಮ್ಮ ಒಡೆಯರಲ್ಲ, ಹಾಗೆಯೇ ದಾಸರೂ ಅಲ್ಲ, ಅವರ ಜೊತೆ ನಮ್ಮದಾಗಲಿ, ನಮ್ಮ ಜೊತೆಗೆ ಅವರದಾಗಲಿ ಜೀತ ಬಂಧವಿಲ್ಲ.

ಮನಸ್ಸು ಮುಕ್ತವಾಗಿರಲು ಬಹಳ ಮುಖ್ಯವಾದುದೆಂದರೆ, ಹೊಸತಿಗೆ ಹಂಬಲಿಸುವುದು. ಹೊಸತಿಗೆ ತೆರೆದುಕೊಳ್ಳುವುದು. ಹೊಸತನ್ನು ಅಪ್ಪಲು ತೋಳುಗಳನ್ನು ಮುಕ್ತವಾಗಿ ತೆರೆದಿರುವುದು. ಅದು ಮನಸ್ಸಿಗೆ ಹೊಸ ಲಯವನ್ನು ಅಥವಾ ಗತಿಯನ್ನು ನೀಡುತ್ತದೆ. ಹೊಸ ಲಹರಿಯನ್ನು, ಹೊಸ ಹೊಳಹನ್ನು, ಒಳಹನ್ನು ದಕ್ಕುವಂತೆ ಮಾಡುತ್ತದೆ. ಹೊಸತಿಗೆ ಹಂಬಲಿಸುವ ಮನಸ್ಸು ಹಳತನ್ನು ನೋಡುವುದಿಲ್ಲ. ಹಳತೇ ಭಾರ. ಭೂತವೇ ಬಾಧೆ. ಯಾವುದೋ ವ್ಯಕ್ತಿ, ಯಾವುದೋ ಪ್ರಸಂಗ, ಯಾವುದೋ ಗಾಯ, ಯಾವುದೋ ನೋವು, ಯಾವುದೋ ಅಗಲಿಕೆ; ಎಲ್ಲವೂ ಹಿಂದಿನದೇ, ಹಿಂಭಾರವೇ, ಬೇಸರವೇ. ಬೇಸರವನ್ನು ಸರಿಸುವಂತಹ ನೇಸರವನ್ನಾಗಿ ಹೊಸ ದಿನವನ್ನು, ಹೊಸ ಬಾಳನ್ನು, ಹೊಸತನ್ನು ಎದುರುಗೊಳ್ಳುವುದು ತೆರೆದ ಮನದ ಬಲು ಮುಖ್ಯವಾದ ಗುಣ.

‘ತೆರೆದಿದೆ ಮನೆ ಓ ಬಾ ಅತಿಥಿ

ಹೊಸ ಬೆಳಕಿನ, ಹೊಸ ಗಾಳಿಯ

ಹೊಸ ಬಾಳನು ತಾ ಅತಿಥಿ’.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Similar News

ಗೀಳಿಗರು
ತನ್ನಾರೈಕೆ
ಭೂತದ ಗೀಳು
ಶಿಸ್ತು