ಬಿಹಾರ ಕಳ್ಳಭಟ್ಟಿ ದುರಂತ: ತನಿಖೆಗೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದಿಂದ ತಂಡ ನಿಯೋಜನೆ

Update: 2022-12-18 14:55 GMT

ಹೊಸದಿಲ್ಲಿ, ಡಿ.18: ಬಿಹಾರ ಕಳ್ಳ ಭಟ್ಟಿ ದುರಂತದ ಬಗ್ಗೆ ಸ್ಥಳದಲ್ಲೇ ತನಿಖೆಗೆ ತನ್ನ ಸದಸ್ಯರೊಬ್ಬರ ನೇತೃತ್ವದಲ್ಲಿ ತನ್ನದೇ ಆದ ತಂಡವನ್ನು ನಿಯೋಜಿಸಲಾಗುವುದು ಎಂದು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಶನಿವಾರ ಹೇಳಿದೆ. 

ಬಿಹಾರದ ಸರಣ್ ಜಿಲ್ಲೆಯ ಛಾಪ್ರಾದಲ್ಲಿ ಸಂಭವಿಸಿದ ಕಳ್ಳಭಟ್ಟಿ ದುರಂತದಲ್ಲಿ ಮೃತರ ಸಂಖ್ಯೆ 70 ಕ್ಕೆ ಏರಿಕೆಯಾದ ಬಳಿಕ ಈ ಬೆಳವಣಿಗೆ ನಡೆದಿದೆ.

ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಶನಿವಾರ ಕಳ್ಳಭಟ್ಟಿ ದುರಂತದ  ಸಂತ್ರಸ್ತರಿಗೆ ಎಲ್ಲಿ ಹಾಗೂ ಯಾವ ರೀತಿಯ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ ಎಂಬ ಬಗ್ಗೆ ಮಾಹಿತಿ ಕೋರಿದೆ. 
‘ಅವರಲ್ಲಿ ಹೆಚ್ಚಿನವರು ಬಡ ಕುಟುಂಬದಿಂದ ಬಂದವರು. ಬಹುಶಃ ಅವರಿಗೆ ಖಾಸಗಿ ಆಸ್ಪತ್ರೆಯಲ್ಲಿ ದುಬಾರಿ ವೈದ್ಯಕೀಯ ಚಿಕಿತ್ಸೆ ಪಡೆಯಲು ಸಾಧ್ಯವಿಲ್ಲ. ಆದುದರಿಂದ ಎಲ್ಲಿ ಲಭ್ಯವಿದೆಯೋ ಅಲ್ಲಿ ಅವರಿಗೆ ಸಾಧ್ಯವಾದಷ್ಟು ಉತ್ತಮ ವೈದ್ಯಕೀಯ ಚಿಕಿತ್ಸೆ ಒದಗಿಸುವುದು ರಾಜ್ಯ ಸರಕಾರದ ಜವಾಬ್ದಾರಿಯಾಗಿದೆ’ಎಂದು ಆಯೋಗ ಹೇಳಿದೆ. 

ಕಳ್ಳಭಟ್ಟಿ ಸೇವಿಸಿದ ವ್ಯಕ್ತಿಗಳಿಗೆ ಪರಿಹಾರ, ಪುನರ್ವಸತಿಗಾಗಿ ಹಾಗೂ ರಾಜ್ಯಾದ್ಯಂತ ಕಳ್ಳಭಟ್ಟಿ ಉತ್ಪಾದನಾ ಕೇಂದ್ರಗಳನ್ನು ನೆಲಸಮಗೊಳಿಸಲು ತೆಗೆದುಕೊಂಡ ಕ್ರಮಗಳನ್ನು ತಿಳಿಯಲು ಬಯಸುವುದಾಗಿ ಆಯೋಗ ಹೇಳಿದೆ.

ಕಳ್ಳಭಟ್ಟಿ ದುರಂತದ ಕುರಿತು ನಾಲ್ಕು ವಾರಗಳ ಒಳಗೆ ವರದಿ ಸಲ್ಲಿಸುವಂತೆ ಆಯೋಗ ಬಿಹಾರ ಸರಕಾರಕ್ಕೆ ನಿರ್ದೇಶಿಸಿದೆ. ಈ ವರದಿಯು ಕಳ್ಳಭಟ್ಟಿ ಸೇವನೆಯಿಂದ ಕಣ್ಣು ಕಳೆದುಕೊಂಡವರಿಗೆ ನೀಡಲಾದ ವೈದ್ಯಕೀಯ ಚಿಕಿತ್ಸೆಯ ಸ್ಥಿತಿಗತಿ, ಸಂತ್ರಸ್ತರು ಅಥವಾ ಅವರ ಕುಟುಂಬಕ್ಕೆ ನೀಡಲಾದ ಪರಿಹಾರ, ದಾಖಲಿಸಲಾದ ಎಫ್ಐಆರ್ ಹಾಗೂ ನಿರ್ಲಕ್ಷ್ಯ ಬೆಳಕಿಗೆ ಬಂದಾಗ ಸರಕಾರಿ ಅಧಿಕಾರಿಗಳ ವಿರುದ್ಧ ಕೈಗೊಂಡ ಕ್ರಮಗಳನ್ನು ಒಳಗೊಂಡಿರಬೇಕು ಎಂದು ಆಯೋಗ ಸೂಚಿಸಿದೆ.

Similar News