ಸೆಪ್ಟಿಕ್‌ ಟ್ಯಾಂಕ್‌ ಸ್ವಚ್ಛಗೊಳಿಸುವಾಗ ಮೃತಪಟ್ಟ 104 ಕಾರ್ಮಿಕರ ಕುಟುಂಬಗಳಿಗೆ ದೊರೆಯದ ಪರಿಹಾರ

ಕೇಂದ್ರವನ್ನು ಪ್ರಶ್ನಿಸಿದ ಸಂಸದೀಯ ಸಮಿತಿ

Update: 2022-12-19 07:25 GMT

ಹೊಸದಿಲ್ಲಿ: ಮ್ಯಾನ್‌ಹೋಲ್‌ಗಳು ಅಥವಾ ಸೆಪ್ಟಿಕ್‌ ಟ್ಯಾಂಕ್‌ಗಳನ್ನು ಸ್ವಚ್ಛಗೊಳಿಸುವಾಗ ಮೃತಪಟ್ಟ 104 ಕಾರ್ಮಿಕರ ಕುಟುಂಬಗಳಿಗೆ ಪರಿಹಾರ ಬಿಡುಗಡೆಗೊಳಿಸುವಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ತೋರಿಸಿರುವ ಅನಾಸ್ಥೆಯನ್ನು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಂಸದೀಯ ಸ್ಥಾಯಿ ಸಮಿತಿ ಪ್ರಶ್ನಿಸಿದೆ.

ಬಿಜೆಪಿ ಸಂಸದೆ ರಮಾ ದೇವಿ ನೇತೃತ್ವದ ಈ ಸಮಿತಿಯು ಡಿಸೆಂಬರ್‌ 16 ರಂದು ಸಂಸತ್ತಿನಲ್ಲಿ ಮಂಡಿಸಿದ ತನ್ನ ವರದಿಯಲ್ಲಿ ಮೇಲಿನ ಅಂಶವನ್ನು ಉಲ್ಲೇಖಿಸಿದೆ.

ಈ ಪ್ರಕರಣಗಳಲ್ಲಿ ಸಂಬಂಧಿತ ಕುಟುಂಬಗಳಿಗೆ ಪರಿಹಾರ ಒದಗಿಸಲು ಕೇಂದ್ರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ಕ್ರಮಕೈಗೊಳ್ಳಬೇಕು ಎಂದು ಸಮಿತಿ ಹೇಳಿದೆಯಲ್ಲದೆ ಈ ಕುರಿತು ವಿಳಂಬವಿರಬಾರದು ಹಾಗೂ ಕ್ರಮಕೈಗೊಂಡ ಕುರಿತು ಸಮಿತಿಗೆ ವರದಿ ಸಲ್ಲಿಸಬೇಕು ಎಂದು ವರದಿ ಹೇಳಿದೆ.

1993 ರಿಂದ ಒಳಚರಂಡಿ ಅಥವಾ ಸೆಪ್ಟಿಕ್‌ ಟ್ಯಾಂಕ್‌ ಸ್ವಚ್ಛಗೊಳಿಸುವಾಗ ಮೃತಪಟ್ಟವರ ಕುಟುಂಬಗಳಿಗೆ ರೂ 10 ಲಕ್ಷ  ಪರಿಹಾರ ಒದಗಿಸಬೇಕು ಎಂದು 2014 ರಲ್ಲಿ ಸುಪ್ರೀಂ ಕೋರ್ಟ್‌ ಆದೇಶಿಸಿತ್ತು.

ಇಂತಹ ಪ್ರಕರಣಗಳ ಕುರಿತಂತೆ ರಾಜ್ಯ ಸರ್ಕಾರಗಳೊಂದಿಗೆ ನಿರಂತರ ಸಂವಹನ ನಡೆಸಲಾಗುತ್ತಿದ್ದು ಇಂತಹ 973 ಪ್ರಕರಣಗಳ ಪೈಕಿ 537ಗೆ ಸಂಬಂಧಿಸಿದಂತೆ ಎಫ್‌ಐಆರ್‌ಗಳು ದಾಖಲಾಗಿವೆ. ಈ ಅಪಾಯಕಾರಿ ಕೆಲಸಕ್ಕಾಗಿ ಕಾರ್ಮಿಕರನ್ನು ನಿಯೋಜಿಸಿದ ವ್ಯಕ್ತಿಗಳ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಸಾಮಾಜಿಕ ನ್ಯಾಯ ಇಲಾಖೆಯು ಸಮಿತಿಗೆ ಮಾಹಿತಿ ನೀಡಿದೆ.

Similar News