ʼಪಠಾಣ್‌ʼ ಚಿತ್ರವನ್ನು ನಿಮ್ಮ ಪುತ್ರಿಯ ಜೊತೆಗೆ ವೀಕ್ಷಿಸಿ: ಶಾರುಖ್‌ ಗೆ ಹೇಳಿದ ಮಧ್ಯ ಪ್ರದೇಶ ವಿಧಾನಸಭಾ ಸ್ಪೀಕರ್‌

Update: 2022-12-19 11:24 GMT

ಭೋಪಾಲ್: ಶಾರುಖ್‌ ಖಾನ್‌, ದೀಪಿಕಾ ಪಡುಕೋಣೆ ಅಭಿನಯದ ʻಪಠಾಣ್ʼ (Pathaan) ಚಿತ್ರದ ಬಗ್ಗೆ  ಮಧ್ಯ ಪ್ರದೇಶ (Madhya Pradesh) ಗೃಹ ಸಚಿವ ನರೋತ್ತಮ್‌ ಮಿಶ್ರಾ ಅವರ ನಂತರ ರಾಜ್ಯ ವಿಧಾನಸಭಾ ಸ್ಪೀಕರ್‌ ಗಿರೀಶ್‌ ಗೌತಮ್‌ (Girish Gautam) ಅಪಸ್ವರ ಎತ್ತಿದ್ದಾರೆ.

"ಶಾರುಖ್‌ ಖಾನ್‌ ಈ ಚಲನಚಿತ್ರವನ್ನು ತಮ್ಮ ಪುತ್ರಿಯ ಜೊತೆಗೆ ವೀಕ್ಷಿಸಬೇಕು, ಆ ಚಿತ್ರವನ್ನು ಅಪ್‌ಲೋಡ್‌ ಮಾಡಬೇಕು ಮತ್ತು ತಾವು ತಮ್ಮ ಪುತ್ರಿಯ ಜೊತೆ ವೀಕ್ಷಿಸಿದ್ದನ್ನು ಜಗತ್ತಿಗೆ ಹೇಳಬೇಕು," ಎಂದು ಗಿರೀಶ್‌ ಗೌತಮ್‌ ಹೇಳಿದರು.

"ಇಂತಹ ಚಲನಚಿತ್ರವನ್ನು ಖಂಡಿತಾ ಅನುಮತಿಸಬಾರದು. ತೋಚಿದ ರೀತಿಯಲ್ಲಿ ಈ ರೀತಿ ಮಾಡಬಹುದೇ? ನಾನು ಬಹಿರಂಗವಾಗಿ ಹೇಳಬಯಸುತ್ತೇನೆ – ಪ್ರವಾದಿ ಮುಹಮ್ಮದ್‌ ಕುರಿತು ಇಂತಹ ಒಂದು ಚಿತ್ರ ಮಾಡಿ ನಂತರ ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಅದನ್ನು ಬಿಡುಗಡೆಗೊಳಿಸಿ. ಇಡೀ ಜಗತ್ತಿನಲ್ಲಿ ರಕ್ತಪಾತವಾಗುವುದು," ಎಂದು ಅವರು ಇಂದು ಆರಂಭಗೊಳ್ಳಲಿರುವ ವಿಧಾನಸಭೆಯ ಚಳಿಗಾಲದ ಅಧಿವೇಶನದ ಮುನ್ನ ಹೇಳಿದರು.

ರಾಜ್ಯದಲ್ಲಿ ಈ ಚಲನಚಿತ್ರಕ್ಕೆ ನಿಷೇಧ ಹೇರಬೇಕೆಂಬ ಬೇಡಿಕೆಯೂ ಇರುವುದರಿಂದ ಈ ವಿಚಾರ ವಿಧಾನಸಭೆಯಲ್ಲಿ ಚರ್ಚೆಗೆ ಬರುವ ಸಾಧ್ಯತೆಯಿದೆ.

ಈ ಚಲನಚಿತ್ರ ನಮ್ಮ ಸಂಸ್ಕೃತಿಗೆ ವಿರುದ್ಧವಾಗಿದೆ ಎಂದು ವಿಪಕ್ಷ ನಾಯಕ ಗೋವಿಂದ್‌ ಸಿಂಗ್‌ ಮತ್ತು ಮಾಜಿ ಕೇಂದ್ರ ಸಚಿವ ಸುರೇಶ್‌ ಪಚೌರಿ ಸೇರಿದಂತೆ ಕೆಲ ಕಾಂಗ್ರೆಸ್‌ ನಾಯಕರೂ ವಿರೋಧ ವ್ಯಕ್ತಪಡಿಸಿದ್ದಾರೆ. "ಇದು ಪಠಾಣ್‌ ಬಗ್ಗೆ ಇಲ್ಲ, ಬದಲು ಪರಿಧನ್‌ (ಬಟ್ಟೆಗಳ) ಬಗ್ಗೆ," ಎಂದು ಅವರು ಹೇಳಿದರಲ್ಲದೆ ಭಾರತೀಯ ಸಂಸ್ಕೃತಿಯಲ್ಲಿ, ಇಂತಹ ಬಟ್ಟೆ ಧರಿಸಿ ನಂತರ ಸಾರ್ವಜನಿಕವಾಗಿ ಅಂತಹ ದೃಶ್ಯಗಳಲ್ಲಿ ಕಾಣಿಸಿಕೊಳ್ಳುವುದು, ಇದಕ್ಕೆ ಯಾರೂ-ಹಿಂದುಗಳು, ಮುಸ್ಲಿಮರು ಅಥವಾ ಇತರ ಯಾವುದೇ ಧರ್ಮದ ಅನುಯಾಯಿಗಳು ಒಪ್ಪುವುದಿಲ್ಲ," ಎಂದು ಅವರು ಹೇಳಿಕೊಂಡರು.

Similar News