ಗಡಿ ವಿವಾದ : ಮಹಾರಾಷ್ಟ್ರ ನಾಯಕರ ಬೆಳಗಾವಿ ಪ್ರವೇಶಕ್ಕೆ ತಡೆ

Update: 2022-12-19 16:08 GMT

ಬೆಳಗಾವಿ,ಡಿ.19: ತಮಗೆ ಕರ್ನಾಟಕವನ್ನು ಪ್ರವೇಶಿಸಲು ಅವಕಾಶ ನೀಡದ್ದಕ್ಕಾಗಿ ಮಹಾರಾಷ್ಟ್ರ ಏಕೀಕರಣ ಸಮಿತಿ (MES) ಮತ್ತು ಎನ್‌ಸಿಪಿ ಸದಸ್ಯರು ಪ್ರತಿಭಟನೆಗಳನ್ನು ನಡೆಸಿದ್ದರಿಂದ ಬೆಳಗಾವಿ(Belgaum)ಜಿಲ್ಲೆಯ ಗಡಿ ಪ್ರದೇಶಗಳಲ್ಲಿ ಸೋಮವಾರ ಉದ್ವಿಗ್ನತೆ ಸೃಷ್ಟಿಯಾಗಿತ್ತು.

ಬೆಳಗಾವಿ ನಗರದ ಟಿಳಕವಾಡಿಯಲ್ಲಿ ಎಂಇಎಸ್ ಆಯೋಜಿಸಿದ್ದ ಮಹಾಮೇಳಾವಕ್ಕೆ ಪೊಲೀಸರು ಅನುಮತಿಯನ್ನು ನಿರಾಕರಿಸಿದ್ದು, ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದೆ.

ಬೆಳಗಾವಿಯನ್ನು ಪ್ರವೇಶಿಸಲು ಅನುಮತಿ ನಿರಾಕರಿಸಲ್ಪಟ್ಟ ಬಳಿಕ ಎಂಇಎಸ್ ಮತ್ತು ಎನ್‌ಸಿಪಿ ಕಾರ್ಯಕರ್ತರು ಕೊಗನೊಳ್ಳಿ ಟೋಲ್ ಪ್ಲಾಝಾದ ಬಳಿ ಪ್ರತಿಭಟನೆಗಳನ್ನು ನಡೆಸಿದರು.

ಮಹಾರಾಷ್ಟ್ರ ಸಚಿವರ ರಾಜ್ಯ ಪ್ರವೇಶವನ್ನು ಎಂಇಎಸ್ ಬಯಸಿತ್ತು,ಆದರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಅನುಮತಿಯನ್ನು ನಿರಾಕರಿಸಿದ್ದಾರೆ ಎಂದು ಎಡಿಜಿಪಿ ಅಲೋಕ ಕುಮಾರ ತಿಳಿಸಿದರು.

61ಕ್ಕೂ ಅಧಿಕ ಸಂಘಟನೆಗಳು ಬೆಳಗಾವಿಯಲ್ಲಿ ಪ್ರತಿಭಟನೆಗಳನ್ನು ನಡೆಸಲು ಅನುಮತಿ ಕೋರಿದ್ದ ಹಿನ್ನೆಲೆಯಲ್ಲಿ ಪೊಲೀಸರು ಬಿಗು ಬಂದೋಬಸ್ತ್ ಏರ್ಪಡಿಸಿದ್ದರು.

ಆರು ಎಸ್‌ಪಿಗಳು,11 ಹೆಚ್ಚುವರಿ ಎಸ್‌ಪಿಗಳು,43 ಡಿವೈಎಸ್‌ಪಿಗಳು,95 ಪೊಲೀಸ್ ಇನ್ಸ್‌ಪೆಕ್ಟರ್‌ಗಳು ಮತ್ತು 241 ಸಬ್-ಇನ್ಸ್‌ಪೆಕ್ಟರ್‌ಗಳು ಸೇರಿದಂತೆ 4,000ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಗಳನ್ನು ಬೆಳಗಾವಿಯಲ್ಲಿ ನಿಯೋಜಿಸಲಾಗಿದೆ.

ಕರ್ನಾಟಕ ಮತ್ತು ಮಹಾರಾಷ್ಟ್ರ ವಿಧಾನಸಭೆಗಳ ಚಳಿಗಾಲದ ಅಧಿವೇಶನದ ಆರಂಭದ ದಿನವೇ ಈ ಪ್ರತಿಭಟನೆಗಳು ನಡೆದಿವೆ. ಕರ್ನಾಟಕ ವಿಧಾನಸಭಾ ಅಧಿವೇಶನವು ಬೆಳಗಾವಿಯಲ್ಲಿ ನಡೆಯುತ್ತಿದೆ.

ಈ ನಡುವೆ ಸೋಮವಾರ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಗಡಿ ವಿವಾದವನ್ನು ಪ್ರಸ್ತಾಪಿಸಿದ ಪ್ರತಿಪಕ್ಷಗಳು ಶಿವಸೇನೆ ಸಂಸದ ಧೈರ್ಯಶೀಲ ಮಾನೆಯವರಿಗೆ ಬೆಳಗಾವಿ ಪ್ರವೇಶಿಸಲು ಅವಕಾಶ ನೀಡದಿರುವ ಕರ್ನಾಟಕದ ನಿರ್ಧಾರವನ್ನು ಖಂಡಿಸಿದವು.

ಮಾನೆಯವರಿಗೆ ಪ್ರವೇಶ ನಿರಾಕರಣೆಯ ಕುರಿತು ಸರಕಾರವು ಮಾಹಿತಿಗಳನ್ನು ಸಂಗ್ರಹಿಸಬೇಕು ಮತ್ತು ಆ ಬಗ್ಗೆ ಸದನಕ್ಕೆ ತಿಳಿಸಬೇಕು ಎಂದು ಪ್ರತಿಪಕ್ಷ ನಾಯಕ ಅಜಿತ ಪವಾರ್(Ajith Pawar) ಅವರು ಆಗ್ರಹಿಸಿದರು.

ಗಡಿ ವಿವಾದ ಕುರಿತು ರಚಿಸಲಾಗಿರುವ ತಜ್ಞರ ತಂಡದ ಮುಖ್ಯಸ್ಥರಾಗಿರುವ ಮಾನೆ,ನಗರಕ್ಕೆ ತನ್ನ ಭೇಟಿಗೆ ವ್ಯವಸ್ಥೆಗಳನ್ನು ಮಾಡುವಂತೆ ಬೆಳಗಾವಿ ಜಿಲ್ಲಾಡಳಿತವನ್ನು ಕೋರಿದ್ದರು,ಆದರೆ ಅದನ್ನು ನಿರಾಕರಿಸಲಾಗಿತ್ತು.

Similar News