ವಿಶ್ವವಿಖ್ಯಾತ ತಾಜ್‍ ಮಹಲ್‍ಗೂ ತೆರಿಗೆ ಬರೆ !

Update: 2022-12-20 02:11 GMT

ಆಗ್ರಾ: ಇದೇ ಮೊದಲ ಬಾರಿಗೆ ಆಗ್ರಾ ಮಹಾನಗರ ಪಾಲಿಕೆ ಭಾರತದ ಪ್ರಾಚ್ಯವಸ್ತು ಸರ್ವೇಕ್ಷಣಾಲಯಕ್ಕೆ ನೋಟಿಸ್ ನೀಡಿ, ಇದು ನಿರ್ವಹಿಸುತ್ತಿರುವ ವಿಶ್ವವಿಖ್ಯಾತ ತಾಜ್‍ಮಹಲ್‍ನ ಆಸ್ತಿ ತೆರಿಗೆಯಾಗಿ 1.9 ಕೋಟಿ ರೂಪಾಯಿ ಪಾವತಿಸುವಂತೆ ಮತ್ತು ನೀರಿನ ತೆರಿಗೆಯಾಗಿ 1.5 ಲಕ್ಷ ರೂಪಾಯಿ ಪಾವತಿಸುವಂತೆ ಸೂಚಿಸಿದೆ. ಈ ಬಿಲ್‍ಗಳು 2021-22 ಮತ್ತು 2022-23ನೇ ಹಣಕಾಸು ವರ್ಷದ್ದು ಎಂದು ಸ್ಪಷ್ಟಪಡಿಸಲಾಗಿದೆ.
15 ದಿನಗಳ ಒಳಗಾಗಿ ಬಾಕಿ ಪಾವತಿಸುವಂತೆ ಸೂಚಿಸಲಾಗಿದ್ದು, ನಿಗದಿತ ಅವಧಿಯೊಳಗೆ ಪಾವತಿಸದಿದ್ದರೆ ತಾಜ್‍ಮಹಲ್ ಅನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ನೋಟಿಸ್‍ನಲ್ಲಿ ಎಚ್ಚರಿಕೆ ನೀಡಲಾಗಿದೆ.

"ಸ್ಮಾರಕಗಳಿಗೆ ಆಸ್ತಿ ತೆರಿಗೆ ಅನ್ವಯಿಸುವುದಿಲ್ಲ. ನೀರಿನ ವಾಣಿಜ್ಯ ಬಳಕೆ ಮಾಡುತ್ತಿಲ್ಲವಾದ್ದರಿಂದ ನೀರಿನ ತೆರಿಗೆ ಪಾವತಿಸುವ ಹೊಣೆಗಾರಿಕೆ ನಮಗಿಲ್ಲ. ಈ ಆವರಣದಲ್ಲಿ ಹಸಿರು ನಿರ್ವಹಿಸುವ ಸಲುವಗಿ ನೀರು ಬಳಸಲಾಗುತ್ತದೆ. ಇದೇ ಮೊದಲ ಬಾರಿಗೆ ತಾಜ್‍ಮಹಲ್‍ಗೆ ನೀರಿನ ತೆರಿಗೆ ಮತ್ತು ಆಸ್ತಿ ತೆರಿಗೆ ವಿಧಿಸಿ ನೋಟಿಸ್ ನೀಡಲಾಗಿದೆ. ಬಹುಶಃ ಇದು ಪ್ರಮಾದವಶಾತ್ ಸಂಭವಿಸಿರಬಹುದು" ಎಂದು ಎಎಸ್‍ಐ ಅಧೀಕ್ಷಕ ಪ್ರಾಚ್ಯವಸ್ತುತಜ್ಞ ರಾಜ್‍ಕುಮಾರ್ ಪಟೇಲ್ ಅಭಿಪ್ರಾಯಪಟ್ಟಿದ್ದಾರೆ.

ತಾಜ್‍ಮಹಲ್‍ಗೆ ಸಂಬಂಧಿಸಿದಂತೆ ತೆರಿಗೆ ಸಂಬಂಧಿ ಪ್ರಕ್ರಿಯೆಗಳು ನನ್ನ ಗಮನಕ್ಕೆ ಬಂದಿಲ್ಲ. ತೆರಿಗೆ ಲೆಕ್ಕಾಚಾರಕ್ಕಾಗಿ ನಡೆಸಿದ ರಾಜ್ಯವ್ಯಾಪಿ ಭೌಗೋಳಿಕ ಮಾಹಿತಿ ವ್ಯವಸ್ಥೆಯ ಆಧಾರದಲ್ಲಿ ನೋಟಿಸ್ ನೀಡಲಾಗಿದೆ. ಸರ್ಕಾರಿ ಹಾಗೂ ಧಾರ್ಮಿಕ ಕಟ್ಟಡಗಳು ಸೇರಿದಂತೆ, ನಮಗೆ ಬಾಕಿ ಇರುವ ಎಲ್ಲ ಕಟ್ಟಡಗಳಿಗೆ ನೋಟಿಸ್ ನೀಡಿದ್ದೇವೆ. ಕಾನೂನಿನ ಅನ್ವಯ ರಿಯಾಯ್ತಿಗಳನ್ನು ನೀಡಲಾಗುತ್ತದೆ. ಎಎಸ್‍ಐಗೆ ಒಂದು ಪಕ್ಷ ನೋಟಿಸ್ ನೀಡಿದ್ದಲ್ಲಿ ಅವರಿಂದ ಪ್ರತಿಕ್ರಿಯೆ ಬಂದ ಬಳಿಕ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಪಾಲಿಕೆ ಆಯುಕ್ತ ನಿಖಿಲ್ ಟಿ ಫುಂಡೆ ಸ್ಪಷ್ಟಪಡಿಸಿದ್ದಾರೆ.

Similar News