ಚೀನಾದಲ್ಲಿ ಕೋವಿಡ್ ಪ್ರಕರಣಗಳ ಏರಿಕೆ: ರೂಪಾಂತರಗಳ ಪತ್ತೆ ಹಚ್ಚುವುದನ್ನು ಹೆಚ್ಚಿಸಲು ರಾಜ್ಯಗಳಿಗೆ ಕೇಂದ್ರ ಸೂಚನೆ

Update: 2022-12-20 17:04 GMT

ಹೊಸದಿಲ್ಲಿ, ಡಿ. 20: ಚೀನಾ ಹಾಗೂ ಇತರ ದೇಶಗಳಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ  ಸಚಿವಾಲಯದ ಕಾರ್ಯದರ್ಶಿ ರಾಜೇಶ್ ಭೂಷಣ್, ಪಾಸಿಟಿವ್ ಪ್ರಕರಣಗಳ ಮಾದರಿಯನ್ನು ಆದ್ಯತೆಯ ಆಧಾರದಲ್ಲಿ ಜಿನೋಮ್ ಅನುಕ್ರಮ ಪ್ರಯೋಗಾಲಯಗಳಿಗೆ ಸಲ್ಲಿಸುವಂತೆ ರಾಜ್ಯ ಸರಕಾರಕ್ಕೆ ಸೂಚಿಸಿದ್ದಾರೆ.

ಜಪಾನ್, ಅಮೆರಿಕ, ಚೀನಾ, ರಿಪಬ್ಲಿಕ್ ಆಫ್ ಕೊರಿಯಾ ಹಾಗೂ ಬ್ರೆಝಿಲ್‌ನಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಸಚಿವಾಲಯ ನ್ಯಾಷನಲ್ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ (ಎನ್‌ಸಿಡಿಸಿ) ಹಾಗೂ ಇಂಡಿಯನ್ ಕೌನ್ಸಿಲ್ ಫಾರ್ ಮೆಡಿಕಲ್ ರಿಸರ್ಚ್ (ಐಸಿಎಂಆರ್)ಗೆ ಪತ್ರ ಬರೆದಿದೆ.

ಆರೋಗ್ಯ ಸಚಿವಾಲಯದ ಹೇಳಿಕೆಯಲ್ಲಿ ರಾಜೇಶ್ ಭೂಷಣ್, ಇಂಡಿಯನ್ ಸಾರ್ಸ್-ಕೋವ್-2 ಜೆನೋಮಿಕ್ಸ್ ಕನ್ಸೋರ್ಟಿಯಂ (ಐಎನ್‌ಎಸ್‌ಎಸಿಒಜಿ) ಜಾಲದ ಮೂಲಕ ಕೋವಿಡ್ ರೂಪಾಂತರವನ್ನು ಪತ್ತೆ ಹಚ್ಚಲು ಪಾಸಿಟಿವ್ ಪ್ರಕರಣಗಳ ಜೆನೋಮ್ ಸೀಕ್ವೆನ್ಸಿಂಗ್ ನಡೆಸುವುದನ್ನು ಹೆಚ್ಚಿಸುವುದು ಅತ್ಯಗತ್ಯವಾಗಿದೆ ಎಂದಿದ್ದಾರೆ.

ಇದು ಹೊಸ ಕೋವಿಡ್ ರೂಪಾಂತರ ದೇಶದಲ್ಲಿ ಹರಡುವುದನ್ನು ಸಕಾಲದಲ್ಲಿ ಪತ್ತೆ ಹಚ್ಚಲು  ಹಾಗೂ ಸಾರ್ವಜನಿಕರಿಗೆ  ಹರಡದಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಅನುಕೂಲವಾಗುತ್ತದೆ ಎಂದು ಹೇಳಿಕೆ ತಿಳಿಸಿದೆ.

Similar News