ಬಿಡಾಡಿ ದನಗಳ ಹಾವಳಿ ಮಿತಿ ಮೀರಿದೆ, ಕ್ರಮ ಕೈಗೊಳ್ಳಿ : ಗುಜರಾತ್‌ ಸರ್ಕಾರಕ್ಕೆ ಹೈಕೋರ್ಟ್‌ ಸೂಚನೆ

Update: 2022-12-21 09:45 GMT

ಅಹ್ಮದಾಬಾದ್:‌ ರಾಜ್ಯದಲ್ಲಿ ಬಿಡಾಡಿ ದನಗಳ ಹಾವಳಿ (Stray Cattle Menace) ಮಿತಿಮೀರಿದ್ದು, ರಾಜ್ಯ ಸರ್ಕಾರ  ಈ ಸಮಸ್ಯೆಯನ್ನು ಪರಿಹರಿಸಲು ಕೆಲ ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದು ರಾಜ್ಯ ಸರ್ಕಾರಕ್ಕೆ ಗುಜರಾತ್‌ ಹೈಕೋರ್ಟ್‌ (Gujarat High Court) ಮಂಗಳವಾರ ಮೌಖಿಕ ಸೂಚನೆ ನೀಡಿದೆ ಎಂದು livelaw.in ವರದಿ ಮಾಡಿದೆ.

"ನಿನ್ನೆ ರಾಜಕೋಟ್‌ನಲ್ಲಿ ರಕ್ಷಣಾ ಸಿಬ್ಬಂದಿಯೊಬ್ಬರ ಮೇಲೆ ದಾಳಿ ನಡೆದು ಅವರು ಗಂಭೀರ ಸ್ಥಿತಿಯಲ್ಲಿದ್ದಾರೆ... ಟಿವಿಯಲ್ಲಿ ಇದರ ಬಗ್ಗೆ ತಿಳಿದುಕೊಂಡೆ. ದನಗಳ ಹಾವಳಿ ಮಿತಿಮೀರಿದೆ, ಏನಾದರೂ ಮಾಡಿ ಅಡ್ವಕೇಟ್‌ ಜನರಲ್‌," ಎಂದು  ಮುಖ್ಯ ನ್ಯಾಯಮೂರ್ತಿ ಅರವಿಂದ್‌ ಕುಮಾರ್‌ ಅವರ ನೇತೃತ್ವದ ಪೀಠ ಹೇಳಿದೆ.

ಇದಕ್ಕೆ ಉತ್ತರಿಸಿದ ಅಡ್ವಕೇಟ್‌ ಜನರಲ್‌ ಈ ಕುರಿತು ಸರ್ಕಾರ ಕ್ರಮಕೈಗೊಳ್ಳುವುದು ಎಂದರು.

ಅಹ್ಮದಾಬಾದ್‌ ಸಹಿತ ಗುಜರಾತ್‌ನ ಹಲವು ಪ್ರಮುಖ ನಗರಗಳಲ್ಲಿ ಬಿಡಾಡಿ ದನಗಳ ಹಾವಳಿ ಕುರಿತಂತೆ ಸಲ್ಲಿಸಲಾಗಿರುವ ಹಲವು ಅರ್ಜಿಗಳ ವಿಚಾರಣೆಯನ್ನು ಹೈಕೋರ್ಟ್‌ ನಡೆಸುತ್ತಿದೆ.

ಈ ಅರ್ಜಿಗಳು ಮಂಗಳವಾರ ವಿಚಾರಣೆಗೆ ಬಂದಾಗ ಈ ಪ್ರಕರಣದ ವಿಚಾರಣೆಯನ್ನು ಮುಂದೂಡುವಂತೆ ಸರ್ಕಾರ ಕೋರಿದೆ. ಅರ್ಜಿದಾರ ಅಮಿತ್‌ ಪಾಂಚಾಲ್‌ ಅವರ ಸಲಹೆಗಳನ್ನು ಪರಿಗಣಿಸುತ್ತಿರುವುದಾಗಿಯೂ ಸರ್ಕಾರ ಹೇಳಿತ್ತು.

ಬಿಡಾಡಿ ದನಗಳ ಹಾವಳಿಯನ್ನು ನಿಯಂತ್ರಿಸಲು ಗುಜರಾತ್‌ ಹೈಕೋರ್ಟ್‌ನ ಆದೇಶ ಪಾಲಿಸದೇ ಇರುವುದಕ್ಕೆ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಬೇಕೆಂದು ಪಾಂಚಾಲ್‌ ತಮ್ಮ ಅಪೀಲಿನಲ್ಲಿ ಕೋರಿದ್ದರು.

ಮುಂದಿನ ವಿಚಾರಣೆಯನ್ನು ಜನವರಿ 9ಕ್ಕೆ ನಿಗದಿಪಡಿಸಲಾಗಿದೆ.

ರಾಜ್ಯದ ನಗರ ಮತ್ತು ಗ್ರಾಮೀಣ ಭಾಗಗಳ ರಸ್ತೆಗಳಲ್ಲಿ ಬಿಡಾಡಿ ದನಗಳು ಇರದಂತೆ ನೋಡಿಕೊಳ್ಳುವಂತೆ ಆಡಳಿತಕ್ಕೆ ಈ ಹಿಂದಿನ ವಿಚಾರಣೆ ವೇಳೆ ಹೈಕೋರ್ಟ್‌ ಸೂಚಿಸಿತ್ತು.

Similar News