ಚೀನಾದೊಂದಿಗೆ ಗಡಿ ವಿವಾದ ಕುರಿತು ಚರ್ಚೆಗೆ ಪಟ್ಟು: ಲೋಕಸಭೆಯಲ್ಲಿ ಪ್ರತಿಪಕ್ಷಗಳ ಸಭಾತ್ಯಾಗ

Update: 2022-12-21 15:56 GMT

ಹೊಸದಿಲ್ಲಿ,ಡಿ.21: ಚೀನಾದೊಂದಿಗೆ ಗಡಿ ವಿವಾದ ಕುರಿತು ಚರ್ಚೆಗೆ ಪಟ್ಟುಹಿಡಿದಿರುವ ಪ್ರತಿಪಕ್ಷಗಳ ಸದಸ್ಯರು ಬುಧವಾರ ಲೋಕಸಭೆ(Lok Sabha)ಯಲ್ಲಿ ಸಭಾತ್ಯಾಗ ನಡೆಸಿದರು.

ಶೂನ್ಯವೇಳೆಗಾಗಿ ಸದನವು ಸಮಾವೇಶಗೊಳ್ಳುತ್ತಿದ್ದಂತೆ ಕಾಂಗ್ರೆಸ್(Congress) ಮತ್ತು ಡಿಎಂಕೆ(DMK) ಸದಸ್ಯರು ಸಭಾತ್ಯಾಗ ನಡೆಸಿದರು. ಟಿಎಂಸಿ ಮತ್ತು ಜೆಡಿಯು ಸದಸ್ಯರೂ ಅವರನ್ನು ಅನುಸರಿಸಿದರು. ಭಾರತ-ಚೀನಾ ವಿಷಯದಲ್ಲಿ ಸದನದಲ್ಲಿ ಚರ್ಚೆಗೆ ಅವಕಾಶ ನೀಡುವಂತೆ ಸ್ಪೀಕರ್ ಓಂ ಬಿರ್ಲಾರ(Om Birla)ನ್ನು ಆಗ್ರಹಿಸಿದ ಕಾಂಗ್ರೆಸ್‌ನ ಸದನ ನಾಯಕ ಆಧಿರ ರಂಜನ್ ಚೌಧುರಿ(Adhira Ranjan Chowdhury)ಯವರು,ಇದು ಪ್ರತಿಪಕ್ಷದ ಹಕ್ಕು ಆಗಿದೆ ಎಂದು ಪ್ರತಿಪಾದಿಸಿದರು.

‘ಬೆಳಿಗ್ಗೆಯಿಂದಲೇ ಚೀನಾ ಕುರಿತು ಚರ್ಚೆಗೆ ನಾವು ಆಗ್ರಹಿಸುತ್ತಿದ್ದೇವೆ. ಟವಿಯಲ್ಲಿ,ಸಂಸತ್ತಿನ ಹೊರಗೆ ಚರ್ಚೆಗಳು ನಡೆಯುತ್ತಿವೆ. ಅದನ್ನು ಚರ್ಚಿಸಲು ಪ್ರತಿಪಕ್ಷಕ್ಕೆ ಒಂದು ಅವಕಾಶವನ್ನು ನೀಡಿ,ಅದು ನಮ್ಮ ಹಕ್ಕು ಆಗಿದೆ ’ಎಂದರು.

ಟಿಎಂಸಿ ಸದಸ್ಯ ಸುದೀಪ ಬಂಡೋಪಾಧ್ಯಾಯ ಅವರೂ ಚರ್ಚೆಗೆ ಆಗ್ರಹಿಸಿದರು. ಪ್ರತಿಪಕ್ಷ ಸದಸ್ಯರ ಸಭಾತ್ಯಾಗದ ಬಳಿಕ ಸದನವು ಡ್ರಗ್ಸ್ ಹಾವಳಿ ಕುರಿತು ಚರ್ಚೆಯನ್ನು ಪುನರಾರಂಭಿಸಿತು.

Similar News