ವಾಯುಪಡೆಯ ನಿರ್ಣಾಯಕ ಕೊರತೆ ನೀಗಿಸಿ: ಏರ್‌ಚೀಫ್ ಮಾರ್ಷೆಲ್

Update: 2022-12-23 02:05 GMT

ಹೊಸದಿಲ್ಲಿ: ಭಾರತೀಯ ವಾಯುಪಡೆಯಲ್ಲಿ ಯುದ್ಧ ತಂಡಗಳ ಸಂಖ್ಯೆ ಮತ್ತು ಫೋರ್ಸ್ ಮಲ್ಟಿಪ್ಲಯರ್ ಕ್ಷೇತ್ರದಲ್ಲಿರುವ ನಿರ್ಣಾಯಕ ಕೊರತೆಗಳನ್ನು ನೀಗಿಸಿದಲ್ಲಿ ಮಾತ್ರ ಐಎಎಫ್ ತನ್ನ ದಾಳಿಯ ಮೊನಚು ಉಳಿಸಿಕೊಳ್ಳಲು ಸಾಧ್ಯ ಎಂದು ಏರ್ ಚೀಫ್ ಮಾರ್ಷಲ್ ವಿ.ಆರ್.ಚೌಧರಿ ಹೇಳಿದ್ದಾರೆ. ಚೀನಾ ತನ್ನ ಎಲ್ಲ ವಾಯುನೆಲೆಗಳನ್ನು ಮೇಲ್ದರ್ಜೆಗೇರಿಸುತ್ತಿರುವ ಹಿನ್ನೆಲೆಯಲ್ಲಿ ಭಾರತಕ್ಕೆ ಹೆಚ್ಚಿನ ಯುದ್ಧವಿಮಾನಗಳು, ಬಾಂಬರ್‌ಗಳು ಮತ್ತು ಡ್ರೋನ್‌ಗಳ ತುರ್ತು ಅಗತ್ಯತೆ ಉದ್ಭವಿಸಿದೆ.

ವಿಚಾರ ಸಂಕಿರಣವೊಂದರಲ್ಲಿ ಮಾತನಾಡಿದ ಐಎಎಫ್ ಮುಖ್ಯಸ್ಥರು, ಭಾರತ ತನ್ನ ಪ್ರಮುಖ ಸ್ವಾಯತ್ತತೆ ಉಳಿಸಿಕೊಂಡು ಸಮಾನ ಮನಸ್ಕ ದೇಶಗಳ ಜತೆ ತನ್ನ ಮೈತ್ರಿ ಹಾಗೂ ಪ್ರಮುಖ ಪಾಲುದಾರಿಕೆಯನ್ನು ಇನ್ನಷ್ಟು ವಿಸ್ತರಿಸುವ ಮೂಲಕ ಸಂಘಟಿತ ಶಂಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು ಎಂದೂ ಅವರು ಸಲಹೆ ಮಾಡಿದ್ದಾರೆ.

"ಭಾರತೀಯ ವಾಯುಪಡೆ ಬಾಹ್ಯಾಕಾಶ ಶಕ್ತಿಯಾಗಿ ವಿಕಾಸಗೊಳ್ಳುವ ಅಗತ್ಯವಿದೆ. ಹಾಗೆ ರೂಪುಗೊಳ್ಳಬೇಕಾದರೆ ಯುದ್ಧದ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬೇಖು ಮತ್ತು ನಾಳೆಯ ಯುದ್ಧಗಳನ್ನು ಗೆಲ್ಲಬೇಕಿದೆ. ಬಹು ಆಯಾಮಗಳ ಕಾರ್ಯಾಚರಣೆ ಮತ್ತು ಹೈಬ್ರೀಡ್ ಯುದ್ಧಸಾಮಗ್ರಿಗಳು ನಮ್ಮಲ್ಲಿ ಇರಬೇಕಾಗುತ್ತದೆ ಹಾಗೂ ಈ ನಿಟ್ಟಿನಲ್ಲಿ ನಾವು ಪ್ರಸ್ತುತವಾಗಿ ಉಳಿಯಬೇಕಾದರೆ ಮರು ಹೊಂದಾಣಿಕೆ ಮತ್ತು ತಂತ್ರಜ್ಞಾನ ಸುಧಾರಣೆಗಳ ಅಗತ್ಯವಿದೆ" ಎಂದು ಚೌಧರಿ ಪ್ರತಿಪಾದಿಸಿದರು.

ಭಾರತೀಯ ವಾಯುಪಡೆಯ ಫೈಟರ್ ಸ್ಕ್ವಾರ್ಡನ್ ಸಂಖ್ಯೆ ಇದೀಗ 30-1ಕ್ಕೆ ಇಳಿದಿದ್ದು, ಇದು ಪಾಕಿಸ್ತಾನ ಹಾಗೂ ಚೀನಾ ಜಂಟಿಯಾಗಿ ಹೊಂದಿರುವ 42.5ರ ಜತೆ ಹೋರಾಡಬೇಕಾದ ಸ್ಥಿತಿ ಇದೆ. ಭಾರತದ ನೆರೆ ರಾಷ್ಟçಗಳ ಚಂಚಲ ಮತ್ತು ಅನಿಶ್ಚಿತ ಸ್ಥಿತಿ ಬಗ್ಗೆ ಪ್ರಸ್ತಾಪಿಸಿ, ನಾವು ಸಮಾನ ನಂಬಿಕೆ ಮತ್ತು ಮೌಲ್ಯಗಳನ್ನು ಹೊಂದಿದ ದೇಶಗಳ ಜತೆ ಪಾಲುದಾರಿಕೆ ಮಾಡಿಕೊಳ್ಳುವ ಮೂಲಕ ನಮ್ಮ ಸಂಘಟಿತ ಶಕ್ತಿ ಹೆಚ್ಚಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.

Similar News